More

    ಮೆಲಾನಿಯಾ ಟ್ರಂಪ್​ ದೆಹಲಿ ಸರ್ಕಾರಿ ಶಾಲೆಗಳ ಭೇಟಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ಗೆ ಇಲ್ಲ ಆಮಂತ್ರಣ; ಕೇಂದ್ರದ ವಿರುದ್ಧ ಆಪ್​ ಅಸಮಾಧಾನ

    ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ರೊಂದಿಗೆ ಭಾರತಕ್ಕೆ ಬರಲಿರುವ ಅವರ ಪತ್ನಿ ಮೆಲಾನಿಯಾ ಟ್ರಂಪ್​ ದೆಹಲಿಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಲಿದ್ದಾರೆ. ದೆಹಲಿ ಶಾಲೆಗಳಲ್ಲಿ ಅರವಿಂದ್ ಕೇಜ್ರಿವಾಲ್​ ಪ್ರಾರಂಭಿಸಿರುವ ಹ್ಯಾಪಿನೆಸ್​ ಕ್ಲಾಸ್​ನ್ನು ವೀಕ್ಷಿಸಲಿದ್ದಾರೆ.

    ಆದರೆ ಮೆಲಾನಿಯಾ ಟ್ರಂಪ್​ ಅವರು ದೆಹಲಿ ಸರ್ಕಾರಿ ಶಾಲೆಗಳಿಗೆ ತೆರಳಿ ಹ್ಯಾಪಿನೆಸ್ ಕ್ಲಾಸ್​ನಲ್ಲಿ ಪಾಲ್ಗೊಳ್ಳಲಿರುವ ಕಾರ್ಯಕ್ರಮದಿಂದ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರನ್ನೇ ಹೊರಗಿಡಲಾಗಿದೆ ಎಂದು ದೆಹಲಿ ಸರ್ಕಾರದ ಮೂಲಗಳು ತಿಳಿಸಿವೆ.

    ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಹಾಗೂ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಅವರಿಗೆ ಯಾವುದೇ ಆಮಂತ್ರಣವನ್ನೂ ನೀಡಿಲ್ಲ. ಈ ವಿಚಾರವಾಗಿ ಆಮ್​ ಆದ್ಮಿ ಪಕ್ಷ ಬಿಜೆಪಿ ವಿರುದ್ಧ ಕಿಡಿಕಾರಿದೆ. ಮೆಲಾನಿಯಾ ಅವರ ಸಮಾರಂಭಕ್ಕೆ ದೆಹಲಿ ಮುಖ್ಯಮಂತ್ರಿಯನ್ನು ಆಹ್ವಾನಿಸದೆ ಇರುವುದು ಬಿಜೆಪಿಯ ತಂತ್ರ ಎಂದು ಹೇಳಿದೆ.

    ಆಪ್​ ನಾಯಕಿ ಪ್ರೀತಿ ಶರ್ಮಾ ಮೆನನ್​ ಈ ಬಗ್ಗೆ ಟ್ವೀಟ್ ಮಾಡಿದ್ದು, ಇದು ನರೇಂದ್ರ ಮೋದಿಯವರ ಸಣ್ಣತನವನ್ನು ತೋರುತ್ತದೆ. ನೀವು ಅರವಿಂದ್​ ಕೇಜ್ರಿವಾಲ್​ ಹಾಗೂ ಸಿಸೋಡಿಯಾ ಅವರನ್ನು ಆಹ್ವಾನ ಮಾಡದೆ ಇರಬಹುದು. ಆದರೆ ಅವರ ಕೆಲಸವೇ ಅವರ ಪರವಾಗಿ ಮಾತನಾಡುತ್ತದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ದೆಹಲಿಯಲ್ಲಿನ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದಾರೆ ಮೆಲಾನಿಯಾ ಟ್ರಂಪ್​: ಕೇಜ್ರಿವಾಲ್​ರ ಹ್ಯಾಪಿನೆಸ್​ ಕ್ಲಾಸ್​ನಲ್ಲೂ ಭಾಗವಹಿಸ್ತಾರೆ!

    ಈ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ ಸಂಬಿತ್​ ಪಾತ್ರಾ, ಕೆಲವು ವಿಚಾರಗಳಲ್ಲಿ ಕೀಳುಮಟ್ಟದ ರಾಜಕೀಯ ಮಾಡಬಾರದು. ನಾವೇ ಪರಸ್ಪರ ಕಾಲೆಳೆದುಕೊಳ್ಳಲು ಶುರುಮಾಡಿದರೆ ಇನ್ನೊಂದು ದೇಶದೆದುರು ಭಾರತ ಅಪಖ್ಯಾತಿಗೆ ಒಳಗಾಗುತ್ತದೆ ಎಂದಿದ್ದಾರೆ.

    ಇದಕ್ಕೂ ಮೊದಲು, ಮೆಲಾನಿಯಾ ಟ್ರಂಪ್​ ಅವರ ಸರ್ಕಾರಿ ಶಾಲೆ ಸಮಾರಂಭದಲ್ಲಿ ಅರವಿಂದ್ ಕೇಜ್ರಿವಾಲ್​ ಮತ್ತು ಉಪಮುಖ್ಯಮಂತ್ರಿ ಸಿಸೋಡಿಯಾ ಪಾಲ್ಗೊಳ್ಳುತ್ತಾರೆ. ಅಲ್ಲದೆ, ತಮ್ಮ ಸರ್ಕಾರ ಕೈಗೊಂಡ ಸಾರ್ವಜನಿಕ ಶಿಕ್ಷಣ ಪ್ರಯೋಗಗಳ ಬಗ್ಗೆ ಮೆಲಾನಿಯಾ ಅವರಿಗೆ ವಿವರಿಸುತ್ತಾರೆ. ಹ್ಯಾಪಿನೆಸ್ ಕ್ಲಾಸ್​ ಬಗ್ಗೆಯೂ ಮಾಹಿತಿ ನೀಡುತ್ತಾರೆ ಎಂದು ಹೇಳಲಾಗಿತ್ತು.

    ಈಗ ಮೆಲಾನಿಯಾ ಟ್ರಂಪ್​ ಕಾರ್ಯಕ್ರಮದಲ್ಲಿ ಇವರಿಬ್ಬರು ಪಾಲ್ಗೊಳ್ಳುತ್ತಾರೋ, ಇಲ್ಲವೋ ಎಂಬುದು ಖಚಿತವಾಗಿಲ್ಲ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts