More

    ಕಲಾವಿದರು ನೆರವು ಬೇಡುವ ಸ್ಥಿತಿ ಬಂದಿದೆ

    ಮೈಸೂರು: ಹಿರಿಯ ಕಲಾವಿದರು ಆರ್ಥಿಕ ನೆರವು ಬೇಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹಿರಿಯ ನಟಿ ಗಿರಿಜಾ ಲೋಕೇಶ್ ಕಳವಳ ವ್ಯಕ್ತಪಡಿಸಿದರು.

    ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಲಲಿತಾ ಕಲಾ ಸಂಘದ 20ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

    ಸಹಾಯ ಹಸ್ತ ಚಾಚುವ ಮೊದಲೇ ನಾವು ಕಷ್ಟದಲ್ಲಿರುವ ಕಲಾವಿದರಿಗೆ ಸಹಾಯ ಮಾಡಬೇಕು. ನಾನು 10 ಕಲಾವಿದರ ವೈದ್ಯಕೀಯ ವೆಚ್ಚ ಭರಿಸುತ್ತಿದ್ದೇನೆ. ಇದೇ ರೀತಿ ಕಲಾವಿದರನ್ನು ಕಾಪಾಡಿ. ಆದರೆ ಅವರಿಗೆ ಅವಮಾನ ಮಾಡಬೇಡಿ ಎಂದರು.

    ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವನ್ನು ಯಾರೂ ಮಾಡುತ್ತಿಲ್ಲ. ಒಂದು ಬಾರಿ ಅವಕಾಶ ಸಿಕ್ಕರೆ, ಮತ್ತೆ ಅವಕಾಶ ಸಿಗುವುದಿಲ್ಲ. ಇದರಿಂದ ಕಲಾವಿದರ ಮುಂದಿನ ಜೀವನ ಪ್ರಶ್ನೆಯಾಗಿ ಉಳಿಯಲಿದೆ. ಶಿಕ್ಷಣವಿದ್ದರೆ ಪರ್ಯಾಯ ದಾರಿ ಹುಡುಕಬಹುದು. ಆದ್ದರಿಂದ ವಿದ್ಯಾರ್ಥಿಗಳು ಮೊದಲು ಶಿಕ್ಷಣವನ್ನು ಪೂರೈಸಿ ಉತ್ತಮ ಕೆಲಸಕ್ಕೆ ಸೇರಿಕೊಳ್ಳಬೇಕು. ಬಳಿಕ ಹವ್ಯಾಸಕ್ಕಾಗಿ ಕಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ನಾನು ಕಲಿತ ಅಭಿನಯ ನನ್ನ ಕೈಹಿಡಿಯಿತು. ನಾನು ಚಿಕ್ಕ ವಯಸ್ಸಿನಲ್ಲಿ ಶಿಕ್ಷಣ ಕಲಿಯಲಿಲ್ಲ. ನಮ್ಮ ತಾಯಿ ನನಗೆ ಸಂಗೀತ ಶಾಲೆ, ನಟನಾ ಶಾಲೆ ಹಾಗೂ ನೃತ್ಯ ತರಬೇತಿಗೆ ಸೇರಿಸಿದ್ದರು. ಆದರೆ ನಾನು ಈ ಯಾವುದನ್ನೂ ಪೂರ್ಣವಾಗಿ ಕಲಿಯಲಿಲ್ಲ. ಆದರೆ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಈ ಎಲ್ಲ ಕಲೆಗಳು ನನ್ನ ಕೈಹಿಡಿದವು. ನಂತರ ಹಲವಾರು ನಾಟಕಗಳಲ್ಲಿ ಅಭಿನಯಿಸಿದೆ. ಒಂದು ನಾಟಕದಲ್ಲಿ ನಟಿಸಿದರೆ ಅಂದು 5 ರೂ. ಸಂಭಾವನೆ ಸಿಗುತ್ತಿತ್ತು ಎಂದು ಸ್ಮರಿಸಿದರು.

    ವಿವಾಹವಾದ ದಿನವೇ ಲೋಕೇಶ್‌ಗೆ ನಾನು ಮಗಳಾಗಿದ್ದೆ. ನಾನು ಅವರನ್ನು ಮದುವೆ ಆದ ದಿನವೇ ಕಾಕನಕೋಟೆ ನಾಟಕ ಪ್ರದರ್ಶನವಿತ್ತು. ಆಗ ತಾನೆ ನಾವು ಗಂಡ, ಹೆಂಡತಿ ಆಗಿದ್ದವು. ಆದರೂ, ನಾವು ಆ ನಾಟಕದಲ್ಲಿ ಅಪ್ಪ, ಮಗಳಾಗಿ ಅಭಿನಯಿಸಬೇಕಿತ್ತು. ‘ಅಪ್ಪನಾಗಿ ಅಭಿನಯಿಸಿ ಹೆಂಡತಿ ಎಂದು ಮೈಮರೆಯಬೇಡಿ’ ಎಂದು ಆಗ ಎಲ್ಲರೂ ಲೋಕೇಶ್ ಅವರನ್ನು ರೇಗಿಸುತ್ತಿದ್ದರು ಎಂದು ಹಳೇ ನೆನಪುಗಳನ್ನು ಮೆಲುಕು ಹಾಕಿದರು.

    ಯಾವುದೇ ಅಭಿನಯ ಮಾಡಿದರೂ ಅದು ಪ್ರೇಕ್ಷಕರನ್ನು ತಲುಪಬೇಕು. ಪ್ರೇಕ್ಷಕ ಆ ಪಾತ್ರವನ್ನು ಅನುಭವಿಸಬೇಕು. ಹಾಗಾದರೆ ಮಾತ್ರ ಆ ಅಭಿನಯಕ್ಕೆ ಒಂದು ಮೌಲ್ಯ ಬರಲಿದೆ. ಇದನ್ನು ನಮ್ಮ ಮಾವ ಸುಬ್ಬಯ್ಯ ನಾಯ್ಡು ಹೇಳುತ್ತಿದ್ದರು. ಇದನ್ನು ಲೋಕೇಶ್ ತಮ್ಮ ಅಭಿನಯಕ್ಕೆ ಅಳವಡಿಸಿಕೊಂಡಿದ್ದರು ಎಂದರು.

    ಪ್ರಾಂಶುಪಾಲ ಪ್ರೊ.ಎಸ್.ಬಿ.ಶಾಂತಪ್ಪನವರ್, ಕಾರ್ಯಕ್ರಮದ ಸಂಚಾಲಕಿ ಡಿ.ಶೀಲಾಕುಮಾರಿ, ಲಲಿತಕಲಾ ಸಂಘದ ಸ್ಥಾಪಕ ಪ್ರೊ.ವೇಣುಗೋಪಾಲ್ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts