More

    ದೇವರ ಅನುಸಂಧಾನಕ್ಕೆ ಭಕ್ತಿ ಮಾರ್ಗ ಉತ್ತಮ

    ಶೃಂಗೇರಿ: ದೇವರ ಜತೆಗೆ ಅನುಸಂಧಾನಕ್ಕೆ ಭಕ್ತಿ ಮಾರ್ಗ ಉನ್ನತ ದಾರಿಯಾಗಿದ್ದು, ಈ ಮಾರ್ಗದ ಹೆಗ್ಗಳಿಕೆಯು ದಾಸವರೇಣ್ಯರು ರಚಿಸಿದ ಹಾಡುಗಳಲ್ಲಿವೆ ಎಂದು ಕಲಾವಿದ ಹರೀಶ್ ಡೋಂಗ್ರೆ ತಿಳಿಸಿದರು.

    ಶೃಂಗೇರಿ ಶ್ರೀ ಭಾರತೀ ತೀರ್ಥ ಸಾಂಸ್ಕೃತಿಕ ಕೇಂದ್ರ ಟ್ರಸ್ಟ್ ಇತ್ತೀಚೆಗೆ ನೆಮ್ಮಾರು, ಹೊಸೂರು ಗ್ರಾಮದ ಅಬ್ಬಿಗುಂಡಿ ಎಂಬಲ್ಲಿ ಏರ್ಪಡಿಸಿದ್ದ ‘ಬನದಲ್ಲಿ ದಾಸ ಗಾಯನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ದಾಸ ಪಂಥದ ಗೀತ ರಚನೆಗಳು ಭಕ್ತಿಯ ಪರಾಕಾಷ್ಠೆ ಜತೆಗೆ ಬದುಕಿನ ಲೌಕಿಕತೆಗೂ ಕನ್ನಡಿಯಾಗಿದೆ. ಹೀಗೆ ಆಧ್ಯಾತ್ಮ ಮತ್ತು ಲೌಕಿಕತೆ ಸಮ್ಮಿಲನದ ಅಪರೂಪದ ಸಾಹಿತ್ಯ ಪ್ರಕಾರವಾಗಿದೆ. ಇದನ್ನು ಪೂರ್ಣವಾಗಿ ಹಾಡಿದಾಗ ಭಕ್ತಿ ಮತ್ತು ಸಂಗೀತದ ವಾತಾವರಣ ಯುಕ್ತವಾಗಿ ಒಡಮೂಡಿ ಹೊಸದೊಂದು ಲೋಕವನ್ನು ಅನಾವರಣಗೊಳಿಸುತ್ತದೆ ಎಂದರು.

    ಅಬ್ಬಿಗುಂಡಿಯಲ್ಲಿ ಈ ರೀತಿಯ ಕಾರ್ಯಕ್ರಮ ಏರ್ಪಡಿಸುವ ಮೂಲಕ ಭಾರತೀ ತೀರ್ಥ ಸಾಂಸ್ಕೃತಿಕ ಸಂಸ್ಥೆ ಮೇಲ್ಪಂಕ್ತಿಯಾಗಿದೆ. ಈ ಸಂಸ್ಥೆ ಬಹುತೇಕ ಕಾರ್ಯಕ್ರಮಗಳನ್ನು ಹಳ್ಳಿ ಅಥವಾ ಕಾಡಿನ ಪ್ರದೇಶದಲ್ಲಿ ನಡೆಸುತ್ತ ಕಲಾ ಸಂಘಟನೆಗೆ ಹೊಸ ಭಾಷ್ಯ ಬರೆಯುತ್ತಿದೆ. ಸಂಸ್ಥೆಯ ಈ ರೀತಿಯ ಯಶಸ್ವಿ ಪರಿಕಲ್ಪನೆ ಹಿಂದೆ ಸಾಂಸ್ಕೃತಿಕ ಸಂಘಟಕ ರಮೇಶ್ ಬೇಗಾರ್ ಕನಸಿರುವುದು ಸ್ಪಷ್ಟ ಎಂದು ಶ್ಲಾಘಿಸಿದರು.

    ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಮೇಶ್ ಬೇಗಾರ್ ಮಾತನಾಡಿ, ಶ್ರೀ ಭಾರತೀ ತೀರ್ಥ ಸಾಂಸ್ಕೃತಿಕ ಕೇಂದ್ರ ಟ್ರಸ್ಟ್ ವಿವಿಧೆಡೆ ಕಾರ್ಯಕ್ರಮ ಏರ್ಪಡಿಸಿ ಸಮಾಜದ ಎಲ್ಲ ಸ್ತರದ ಜನರನ್ನು ತಲುಪುತ್ತಿದೆ. ಕಾಲ್ನಡಿಗೆಯಲ್ಲೇ ತೆರಳುವಂಥ ಕುಗ್ರಾಮಗಳಲ್ಲಿಯೂ ಕಾರ್ಯಕ್ರಮ ಏರ್ಪಡಿಸಿದ ಹೆಗ್ಗಳಿಕೆ ನಮ್ಮ ಸಂಸ್ಥೆಯದು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts