More

    ‘ಕರೊನಾ.. ನನ್ನ ತಂಟೆಗೆ ಬರಬೇಡ..’ ಎಂದು ಎಚ್ಚರಿಸಿದ್ದ ಕಲಾವಿದ ಕರೊನಾಕ್ಕೇ ಬಲಿ!

    ಭದ್ರಾವತಿ: ವರನಟ ಡಾ. ರಾಜ್‌ಕುಮಾರ್ ಅವರ ಮನೆಯ ವಾಸ್ತುಶಿಲ್ಪಿ, ಹಿರಿಯ ರಂಗಭೂಮಿ ನಟ, ಭದ್ರಾವತಿಯ ಎಸ್.ಜಿ. ಶಂಕರಮೂರ್ತಿ (68) ಶುಕ್ರವಾರ ಕರೊನಾದಿಂದ ನಿಧನರಾದರು.

    ‘ಕರೊನಾ ಎಂಬ ಪ್ರಿಯೆ ಇತ್ತೀಚೆಗೆ ನನ್ನನ್ನು ಬಿಗಿದಪ್ಪಿಕೊಂಡಿದ್ದಾಳೆ, ನಾನು ಏಕಪತ್ನೀವ್ರತಸ್ಥ, ನನ್ನ ಅರ್ಧಾಂಗಿಯೇ ನನಗೆ ಜೀವದ ಜೀವ. ನನ್ನ ತಂಟೆಗೆ ಬರಬೇಡ ಎಂದು ಸರ್ಕಸ್ ಕೂಡ ಮಾಡಿದ್ದೆ. ಆದರೆ ಈಗ ಬಂದುಬಿಟ್ಟಿದೆ. ಹಾಗಾಗಿ ವನವಾಸಕ್ಕೆ ಹೊರಟಿದ್ದೇನೆ, ಬೇಗನೆ ಗುಣಮುಖರಾಗಿ ಬಂದು ಎಲ್ಲರೊಂದಿಗೆ ಸೇರಿಕೊಳ್ಳುತ್ತೇನೆ’ ಎಂದು ಅವರು ತಮ್ಮ ಸಾವಿಗೂ ಮುನ್ನ ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಅವರ ಕೊನೆಯ ನುಡಿಗಳನ್ನು ಕಲಾವಿದರೊಬ್ಬರು ವಾಟ್ಸ್‌ಆ್ಯಪ್ ಮಾಡಿದ್ದು ಓದಿದವರಿಗೆ ಹೃದಯ ಮಿಡಿಯುವಂತಿದೆ. ಕರೊನಾ ಸೋಂಕಿಗೆ ತುತ್ತಾಗಿರುವ ಅವರ ಪತ್ನಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಒಬ್ಬ ಪುತ್ರನಿದ್ದಾನೆ.

    ಶಾಂತಲಾ ಕಲಾ ವೇದಿಕೆ ಹಾಗೂ ಶಾಂತಲಾ ಆರ್ಟ್ಸ್‌ ಸಂಸ್ಥಾಪಕ, ನಿರ್ದೇಶಕ, ನಾಟಕ ಕರ್ತೃ ಆಗಿದ್ದ ಶಂಕರಮೂರ್ತಿ ನೂರಾರು ಕಲಾವಿದರನ್ನು ಬೆಳೆಸಿದ್ದಾರೆ. ಎಂಪಿಎಂ ಕಾರ್ಖಾನೆ ಉದ್ಯೋಗಿಯಾಗಿದ್ದ ಅವರು ನಾಟಕ, ಶಿಲ್ಪಕಲಾ ಚಟುವಟಿಕೆ ಮೈಗೂಡಿಸಿಕೊಂಡು ಕಾರ್ಖಾನೆ ಕಾರ್ಮಿಕರು ಹಾಗೂ ಅವರ ಕುಟುಂಬ ವರ್ಗವನ್ನು ಬಳಸಿಕೊಂಡು ಸಾವಿರಾರು ನಾಟಕಗಳನ್ನು ರಚಿಸಿ, ಅವರಿಗೆ ಬಣ್ಣ ಹಚ್ಚುವ ಮೂಲಕ ಮುಖ್ಯವಾಹಿನಿಗೆ ತಂದಿದ್ದಾರೆ.

    ವರನಟ ಡಾ. ರಾಜ್‌ಕುಮಾರ್ ಕುಟುಂಬದೊಂದಿಗೆ ಒಡನಾಟ ಹೊಂದಿದ್ದ ಶಂಕರಮೂರ್ತಿ ಬೆಂಗಳೂರಿನಲ್ಲಿ ನಿರ್ಮಿಸಿರುವ ಅವರ ಮನೆಯ ವಾಸ್ತುಶಿಲ್ಪದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಡಾ. ರಾಜ್‌ಕುಮಾರ್ ಅವರ ಹಲವು ಪ್ರತಿಮೆಗಳನ್ನು ಅವರು ನಿರ್ಮಿಸಿಕೊಟ್ಟಿದ್ದರು. ನಗರದ ತರೀಕೆರೆ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ, ರೈಲ್ವೆ ನಿಲ್ದಾಣದ ಮುಂಭಾಗ ಪ್ರತಿಷ್ಠಾಪಿಸಲಾಗಿರುವ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಮೆಗಳು ಇವರ ಕೊಡುಗೆ. ನಗರಸಭೆ ಮುಂಭಾಗದ ಉದ್ಯಾನದಲ್ಲಿ ಪ್ರತಿಷ್ಠಾಪಿಸಬೇಕೆಂದು ನಿರ್ಮಿಸುತ್ತಿದ್ದ ಭದ್ರೆಯ ಮೂರ್ತಿ ಈಗಷ್ಟೆ ಪೂರ್ಣಗೊಂಡಿತ್ತು.

    ಶಂಕರಮೂರ್ತಿ ನಿರ್ದೇಶನದಲ್ಲಿ ಹಲವೆಡೆ ಪ್ರದರ್ಶನಗೊಂಡ ‘ಈಸಕ್ಕಿ ಆಸೆ ನಮಗೇಕೆ?’, ‘ಮೌಲ್ಯ’, ‘ವೆಂಕಿಪುರ-ಬೆಂಕಿಪುರ’, ‘ಈಸೂರಿನ ಆ ಶೂರರು’ ಸೇರಿ ಹಲವಾರು ಪೌರಾಣಿಕ, ಸಾಮಾಜಿಕ ನಾಟಕಗಳು ನೋಡುಗರ ಕಣ್ಮನ ಸೆಳೆಯುವಂತಿದ್ದವು. ಹೆಣ್ಣಿನ ಪಾತ್ರದಲ್ಲಿಯೂ ಕೂಡ ಅವರು ಸೈ ಎನಿಸಿಕೊಂಡಿದ್ದರು. ನಾಟಕ ಮೂಲಕ ಸಾಮಾಜಿಕ ಕಳಕಳಿ, ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಅವರದ್ದಾಗಿತ್ತು.

    ನಿಧನರಾಗಿದ್ದ ತಮ್ಮ ತಂದೆಯವರನ್ನು ಮೂರ್ತಿ ರೂಪದಲ್ಲಿ ಸಿದ್ಧಪಡಿಸಿ ಜೀವಂತವಾಗಿ ಕಾಣುವಂತೆ ಮಾಡುವ ಮೂಲಕ ಪ್ರತಿಮೆಗೆ ನಿತ್ಯ ಪೂಜೆ ಸಲ್ಲಿಸುತ್ತಿದ್ದರು. ತಮ್ಮ ಬದುಕಿನ ಚಿತ್ರಣವನ್ನು ‘ರಂಗಗೊಂಚಲು’ ಎಂಬ ಪುಸ್ತಕದ ಮೂಲಕ ಹಂಚಿಕೊಂಡಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೇರಿ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.

    ಪತ್ನಿಯೇ ಸಾರಥಿ: ಸಿದ್ದಾರೂಢನಗರದಲ್ಲಿ ವಾಸವಿದ್ದ ಎಸ್.ಜಿ. ಶಂಕರಮೂರ್ತಿ ಅವರ ಎಲ್ಲ ಕಾರ್ಯಗಳಿಗೂ ಅವರ ಧರ್ಮಪತ್ನಿ ಅನ್ನಪೂರ್ಣಾ ಸಾರಥಿಯಾಗಿ ನಿಂತಿದ್ದರು. ಅವರಿಬ್ಬರ ಒಡನಾಟ, ಹೊಂದಾಣಿಕೆಯ ಗುಣಗಳು ಶಂಕರಮೂರ್ತಿಯವರ ಬೆಳವಣಿಗೆಗೆ ಪೂರಕವಾಗಿತ್ತು. ಅನಾರೋಗ್ಯಕ್ಕೀಡಾಗಿದ್ದ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ಸಂದರ್ಭದಲ್ಲಿ ವೈದ್ಯರ ಶಿಫಾರಸ್ಸಿನಂತೆ ಇವರೂ ಚಿಕಿತ್ಸೆಗೆ ದಾಖಲಾಗುವಂತಹ ಪ್ರಸಂಗ ಎದುರಾಗಿದ್ದು ಶಿವಮೊಗ್ಗ ಆಸ್ಪತ್ರೆಯಲ್ಲಿ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts