More

    ಕೃತಕ ಬುದ್ಧಿಮತ್ತೆಯಿಂದ ಉದ್ಯೋಗ ಅಭದ್ರತೆ

    ಬಳ್ಳಾರಿ: ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ ಉದ್ಯೋಗದ ಅಭದ್ರತೆಯನ್ನು ಸೃಷ್ಟಿಸುತ್ತಿದೆ ಎಂದು ಹಿರಿಯ ಪತ್ರಕರ್ತ ಗೌರೀಶ್ ಅಕ್ಕಿ ಆತಂಕ ವ್ಯಕ್ತಪಡಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಪತ್ರಿಕಾ ಭವನದಲ್ಲಿ ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಮಾಧ್ಯಮ ಕಾರ್ಯಾಗಾರದಲ್ಲಿ ಮಾತನಾಡಿದರು.

    ಡಿಜಿಟಲ್ ತಂತ್ರಜ್ಞಾನ ನಿಂತ ನೀರಲ್ಲ. ತಲೆಮಾರುಗಳಿಂದ ತಲೆಮಾರುಗಳಿಗೆ ತಂತ್ರಜ್ಞಾನ ಬದಲಾವಣೆಯಾಗುತ್ತದೆ. ಎಲ್ಲ ವೃತ್ತಿಗಳ ಅಸ್ತಿತ್ವಕ್ಕೆ ಕೃತಕ ಬುದ್ಧಿಮತ್ತೆ ಸವಾಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಉದ್ಯೋಗ ಕಸಿದುಕೊಳ್ಳುವ ನಿಟ್ಟಿನಲ್ಲಿ ಇಂದು ತಂತ್ರಜ್ಞಾನ ಮುಂದುವರಿದಿದೆ. ಆದರೂ ಮಾಧ್ಯಮ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಪತ್ರಕರ್ತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

    ಇದನ್ನೂ ಓದಿ:ಕೃತಕ ಬುದ್ಧಿಮತ್ತೆ ಉದ್ಯೋಗಕ್ಕೆ ಕುತ್ತೇ?: ಉತ್ತಮ ವೃತ್ತಿ ಬದುಕಿಗೆ ಕಾಲರ್ ಬದಲಿಸಿ

    ಇಂದು ತಂತ್ರಜ್ಞಾನದ ಪ್ರಭುತ್ವ ಮುಂದುವರಿದಿದ್ದು, ಡಿಜಿಟಲ್ ಮಾಧ್ಯಮದಲ್ಲಿ ಸಕ್ರಿಯರಾಗಿರಬೇಕಾದ ಅನಿವಾರ್ಯತೆ ಇದೆ. ಕ್ರಿಯಾಶೀಲರಾಗಿರಬೇಕು. ಕಾಲಕ್ಕೆ ತಕ್ಕಂತೆ ಬದಲಾಗುವ ತಂತ್ರಜ್ಞಾನಗಳಿಗೆ ಒಗ್ಗಿಕೊಳ್ಳಬೇಕು ಎಂದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಇಂದು ಮಾಧ್ಯಮ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು, ನೈಪುಣ್ಯತೆ, ಡಿಜಿಟಲ್ ವ್ಯವಸ್ಥೆಯಲ್ಲಿನ ಬದಲಾವಣೆಗಳ ಬಗ್ಗೆ ಚರ್ಚೆ ಆಗಬೇಕಿದೆ. ಜೊಳ್ಳು ಪತ್ರಕರ್ತರ ಹಾವಳಿ ಹೆಚ್ಚಳವಾಗುತ್ತಿದೆ. ಇದರಿಂದ ನೈಜ ಪತ್ರಕರ್ತರನ್ನು ಸುದ್ದಿಮನೆಯಲ್ಲಿ ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎಂದರು.

    ಪತ್ರಕರ್ತರು ಸಮಾಜದಲ್ಲಿ ಜನರ ನಂಬಿಕೆ, ವಿಶ್ವಾಸವನ್ನು ಗಳಿಸಿಕೊಳ್ಳಬೇಕು. ವೃತ್ತಿ ಬದುಕಿನಲ್ಲಿ ಲಕ್ಷ್ಮಣ ರೇಖೆ ಹಾಕಿಕೊಳ್ಳಬೇಕು. ಘನತೆ, ಗೌರವ ಕಾಪಾಡಿಕೊಳ್ಳಬೇಕು. ಉತ್ತಮ ಪತ್ರಕರ್ತನಾದವನಿಗೆ ಕೇಳುವ ಮನಸ್ಥಿತಿ ಇರಬೇಕು. ಎಂದಿಗೂ ಕ್ರಿಯಾಶೀಲರಾಗಿರಬೇಕು ಎಂದು ಸಲಹೆ ನೀಡಿದರು.
    ಒಬ್ಬ ಉತ್ತಮ ಪತ್ರಕರ್ತನಾಗಲು ಬ್ಲ್ಯಾಕ್ ಮೇಲ್, ಆರ್‌ಟಿಐನಿಂದ ಶಕ್ತಿ ಪಡೆಯಲು ಸಾಧ್ಯವಿಲ್ಲ. ಗಟ್ಟಿಕಾಳನ್ನು ಉಳಿಸಿಕೊಳ್ಳಬೇಕಾದರೆ ಜೊಳ್ಳು ಕಾಳುಗಳನ್ನು ಸ್ವಚ್ಛಗೊಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಹಿರಿಯ ಪತ್ರಕರ್ತ ಕಂ.ಕ.ಮೂರ್ತಿ ಮಾತನಾಡಿ, ಪತ್ರಕರ್ತ ಪರಿಶ್ರಮ ಜೀವಿ, ಸರಳ ಸಜ್ಜನಿಕೆಯನ್ನು ಹೊಂದಿರಬೇಕು. ಕಷ್ಟ-ಸುಖದ ನಡುವೆ ಸವಾಲುಗಳನ್ನು ಎದುರಿಸಬೇಕು. ಎಲ್ಲವೂ ಗೊತ್ತಿದೆ ಎನ್ನುವ ಭ್ರಮೆಯಲ್ಲಿ ಇರಬಾರದು. ಎಲ್ಲ ವಿಷಯಗಳ ಬಗ್ಗೆ ಪ್ರಾಥಮಿಕ ಜ್ಞಾನ ಇರಬೇಕು. ಪುಸ್ತಕಗಳನ್ನು ಹೆಚ್ಚಾಗಿ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಆ ಮೂಲಕ ಭಾಷೆ ಸಂಪತ್ತು ವೃದ್ಧಿಸಿಕೊಳ್ಳಬೇಕು. ಶಬ್ದ ಭಂಡಾರ ಹೆಚ್ಚಿಸಿಕೊಳ್ಳಬೇಕು. ಪತ್ರಕರ್ತರಲ್ಲಿ ಅಧ್ಯಯನಶೀಲತೆ ಮುಖ್ಯ. ಯಾವುದೇ ವ್ಯಕ್ತಿಯ ಬಗ್ಗೆ ಚಾರಿತ್ರ್ಯಹರಣ, ಟೀಕೆ ಮಾಡಬಾರದು. ಜನಪರ ಕಾಳಜಿ ಇರಬೇಕು ಎಂದರು.

    ಜಿಲ್ಲಾ ಖನಿಜ ನಿಧಿ ವಿಶೇಷ ಅಧಿಕಾರಿ ಪಿ.ಎಸ್.ಮಂಜುನಾಥ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ ಕುಟ್ಟಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಎಚ್‌ಒ ಡಾ.ಜನಾರ್ದನ್ ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts