More

    ಕಾಪುವಿನಲ್ಲಿ ಕೃತಕ ನೆರೆ ಹಾವಳಿ

    ಪಡುಬಿದ್ರಿ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಆರ್ದ್ರಾ ಮಳೆ ಅಬ್ಬರದಿಂದ ಕಾಪು ತಾಲೂಕಿನ ಹಲವೆಡೆ ನೆರೆ ಹಾಗೂ ಸಮುದ್ರ ತೀರದಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದೆ.

    ಭಾರಿ ಮಳೆಯಿಂದಾಗಿ ಕಾಪು ಪುರಸಭಾ ವ್ಯಾಪ್ತಿಯ ಮೂಳೂರು, ಬೆಳಪು -ಮಲ್ಲಾರು ರಸ್ತೆಯಲ್ಲಿ ಕೃತಕ ನೆರೆಯಿಂದಾಗಿ ರಸ್ತೆ ಮತ್ತು ಸುತ್ತಲಿನ ಪರಿಸರ ಸಂಪೂರ್ಣ ಜಲಾವೃತಗೊಂಡಿದೆ. ಬೆಳಪು ಪರಿಸರದ 40ಕ್ಕೂ ಹೆಚ್ಚಿನ ಮನೆಗಳು ಜಲಾವೃತಗೊಂಡಿದ್ದು, ಇಲ್ಲಿನ ವಾಸಿಗಳು ಸಂಪರ್ಕ ಕಡಿತದ ಭೀತಿಗೆ ಒಳಗಾಗಿದ್ದಾರೆ. ಸೇತುವೆ ಮಟ್ಟದಿಂದ ತಗ್ಗಿನಲ್ಲಿರುವ ಪರಿಣಾಮ ಪ್ರತಿ ಮಳೆಗಾಲದಲ್ಲೂ ನೆರೆ ಬಂದಾಗ ರಸ್ತೆಯಲ್ಲೇ ನೀರು ಹರಿದು ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

    ಹೆದ್ದಾರಿ ಅವ್ಯವಸ್ಥೆ: ಉಚ್ಚಿಲದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲಗಳಲ್ಲಿ ಚರಂಡಿಯಿಲ್ಲದೆ ಕೃತಕ ನೆರೆ ಉಂಟಾಗಿ ಕೆಲ ಅಂಗಡಿಗಳಿಗೆ ನೀರು ನುಗ್ಗಿದೆ. ಹೆದ್ದಾರಿ ಅಸಮರ್ಪಕ ಕಾಮಗಾರಿಯಿಂದ ಜನ ನೆರೆ ನೀರಿನಲ್ಲಿಯೇ ಸಂಚರಿಸಬೇಕಾಗಿದೆ. ಪಡುಬಿದ್ರಿಯಲ್ಲಿ ಒಳಚರಂಡಿ ಅರೆಬರೆ ಕಾಮಗಾರಿಯಿಂದ ಪಡುಬಿದ್ರಿ ಪೇಟೆ ಹಾಗೂ ಹೆದ್ದಾರಿಯ ಪೂರ್ವ ಭಾಗಗಳಿಂದ ಮಳೆ ನೀರು ಸಹಿತ ಕೊಳಚೆ ನೀರು ಕೆಳಗಿನ ಪೇಟೆ ಹಳೇ ಎಂಬಿಸಿ ರಸ್ತೆಯತ್ತ ನುಗ್ಗಿ ಮೂರ್ನಾಲ್ಕು ಮನೆಗಳು, ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ವ್ಯವಹಾರ ಸಂಕೀರ್ಣ, ಅದರಲ್ಲಿನ ರಾಷ್ಟ್ರೀಕೃತ ಬ್ಯಾಂಕ್‌ಗೆ ತೊಂದರೆಯಾಗಿದೆ.

    ಹೆದ್ದಾರಿ ಪೂರ್ವ ಭಾಗದಲ್ಲೂ ಕೊಂಬೆಟ್ಟು ಸುದರ್ಶನ ಆಚಾರ್ಯ ಮತ್ತಿತರರ ಮನೆಗಳಿಗೂ ಮಳೆಯ ನೀರು ಸೇರಿಕೊಳ್ಳುತ್ತಿದೆ. ದೇವಳದ ಮುಂಭಾಗದ ಗದ್ದೆ, ಹಳೇ ಎಂಬಿಸಿ ರಸ್ತೆಗಳಲ್ಲಿ ಮಳೆ ನೀರು ತುಂಬಿ ಸಂಚಾರಕ್ಕೆ ತೊಡಕಾಗಿದೆ. ಕೆಳಗಿನ ಪೇಟೆಯಲ್ಲಿ ಶೋಭಾ ರಾವ್, ನಾತು ಪೂಜಾರಿ, ಶ್ರೀಕಾಂತ ಶೆಣೈ ಮತ್ತಿತರರ ಮನೆಗಳು ಕೃತಕ ನೆರೆಗೆ ತುತ್ತಾಗಿದೆ. ಪಲಿಮಾರಿನ ಮಠದ ಬೈಲು, ಪದೆಬೆಟ್ಟು ಹೊಯಿಗೆ ತೋಟದಲ್ಲಿಯೂ ನೆರೆ ಉಂಟಾಗಿದೆ. ಬೆಳಪು ಮಲ್ಲಾರಿನ ಎರಡು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

    ನಡಿಪಟ್ಣ, ತೆಂಕದಲ್ಲಿ ಕಡಲ್ಕೊರೆತ: ಪಡುಬಿದ್ರಿ ನಡಿಪಟ್ಣ ಮಹೇಶ್ವರೀ ಫಂಡ್ ಚಪ್ಪರದ ಬಳಿ ಕಡಲ್ಕೊರೆತ ಕಾಣಿಸಿಕೊಂಡಿದ್ದು, ಸಮುದ್ರ ತಡೆಗೋಡೆ ಹಾಗೂ ಕೆಲವು ಮರಗಳು ಸಮುದ್ರ ಪಾಲಾಗಿವೆ. ನಡಿಪಟ್ಣ ಹರೀಶ್ ಪುತ್ರನ್ ಮನೆ ಬಳಿ ಸಮುದ್ರ ಅಲೆಗಳು ಉಕ್ಕೇರಿ ಸಮುದ್ರ ತಡೆಗೋಡೆಗಳ ಅಡಿಭಾಗವನ್ನು ಸೆಳೆದಿದ್ದು, ತಡೆಗೋಡೆಗಳಿಗೆ ಹಾನಿಯಾಗಿದೆ. ಇದೇ ವೇಳೆ ಹಲವು ಮರಗಿಡಗಳು ಸಮುದ್ರಪಾಲಾಗಿದೆ. ತೆಂಕ ಎರ್ಮಾಳಿನಲ್ಲಿಯೂ ಕಡಲ್ಕೊರೆತ ಕಾಣಿಸಿಕೊಂಡಿದ್ದು, ಹಿಂದೆ ಹಾಕಿದ್ದ ಬಂಡೆ ಕಲ್ಲುಗಳು ಸಮುದ್ರದ ಒಡಲು ಸೇರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts