More

    ಜಗದಲ್ಲಿ ಸಿಂಹಪಾಲು, ಜನಸಂಖ್ಯೆಯ ಸವಾಲು: ಪ್ರಪಂಚದ ಪ್ರತಿ ನೂರು ಜನರಲ್ಲಿ 17 ಭಾರತೀಯರು

    ಈ ಸಾಲಿನ ವಿಶ್ವ ಜನಸಂಖ್ಯಾ ದಿನವು ಭಾರತಕ್ಕೆ ವಿಶಿಷ್ಟವಾದುದು, ಮಹತ್ವವಾದುದು. ಜನಸಂಖ್ಯೆಯಲ್ಲಿ ಜಾಗತಿಕವಾಗಿ ಮೊದಲ ಸ್ಥಾನವನ್ನು ಭಾರತ ಈ ವರ್ಷ ಅಲಂಕರಿಸಿದ್ದು, ವಿಶ್ವದ ಒಟ್ಟು ಜನರಲ್ಲಿ ಶೇ. 17.7ರಷ್ಟು ಭಾರತೀಯರೇ ಇದ್ದಾರೆ. ದೇಶದ ಸೀಮಿತ ಸಂಪನ್ಮೂಲಗಳ ಹಿನ್ನೆಲೆಯಲ್ಲಿ ಜನಸಂಖ್ಯಾ ಸ್ಪೋಟವು ಒಂದು ಸಮಸ್ಯೆ ಎಂದು ಭಾವಿಸಲಾಗುತ್ತಿದ್ದ ಕಾಲವು ಈಗ ಮಾಯವಾಗಿದೆ. ದುಡಿಯುವ ಶಕ್ತಿಯಾಗಿ, ಅರ್ಥಿಕ ಪ್ರಗತಿಯ ಪರಿಕರಗಳಾಗಿ ಈಗ ಜನ ಸಂಪನ್ಮೂಲವು ಪರಿವರ್ತಿತವಾಗುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

    | ಜಗದೀಶ ಬುರ್ಲಬಡ್ಡಿ

    ಈ ವರ್ಷದ ಏಪ್ರಿಲ್​ನಲ್ಲಿ ಭಾರತವು ಜಗತ್ತಿನಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಚೀನಾದ ಜನಸಂಖ್ಯೆಯನ್ನು ಮೀರಿ ಭಾರತದ ಜನಸಂಖ್ಯೆಯು 142,57,75,850ಕ್ಕೆ ತಲುಪಿದೆ. ವಿಶ್ವ ಸಂಸ್ಥೆಯ ಜನಸಂಖ್ಯಾ ನಿಧಿಯು ಕಳೆದ ಏಪ್ರಿಲ್​ನಲ್ಲಿ ಬಿಡುಗಡೆ ಮಾಡಿರುವ ವರದಿ ಈ ಸಂಗತಿಯನ್ನು ಬಹಿರಂಗಪಡಿಸಿದೆ.

    ಈ ವರದಿಯ ಪ್ರಕಾರ, ಭಾರತದ ಒಟ್ಟು ಜನಸಂಖ್ಯೆಯ 68 ಪ್ರತಿಶತದಷ್ಟು ಜನರು 15 ರಿಂದ 64 ವರ್ಷ ವಯಸ್ಸಿನವರಾಗಿರುವುದು ವಿಶೇಷವಾಗಿದೆ. ಇದನ್ನು ದೇಶದ ದುಡಿಯುವ ಜನಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. 14 ವರ್ಷದವರೆಗಿನ ವಯಸ್ಸಿನವರು 25 ಪ್ರತಿಶತ; 10ರಿಂದ 19 ವರ್ಷಗಳ ನಡುವಿನವರು 18 ಪ್ರತಿಶತ; 10 ಮತ್ತು 24 ವರ್ಷಗಳ ನಡುವಿನವರು 26 ಪ್ರತಿಶತ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರು 7 ಪ್ರತಿಶತ ಇದ್ದಾರೆ.

    ಸ್ವಾತಂತ್ರ್ಯದ ಸಂದರ್ಭದಲ್ಲಿ ಭಾರತದ ಜನಸಂಖ್ಯೆ 34 ಕೋಟಿ ಇತ್ತು. ನಂತರ 1951ರಲ್ಲಿ ನಡೆದ ಮೊಟ್ಟಮೊದಲ ಅಧಿಕೃತ ಜನಗಣತಿಯ ಪ್ರಕಾರ ಇದು 36,10,88,090 ತಲುಪಿತು. ಏಳು ದಶಕಗಳಲ್ಲಿ ಜನಸಂಖ್ಯೆಯು ಅಂದಾಜು 4 ಪಟ್ಟು ಹೆಚ್ಚಾಗಿದೆ. ಕಳೆದ ವರ್ಷ ಜುಲೈನಲ್ಲಿ ಬಿಡುಗಡೆಯಾದ ವಿಶ್ವ ಜನಸಂಖ್ಯೆಯ ನಿರೀಕ್ಷೆಗಳು 2022ರ ವರದಿಯ ಪ್ರಕಾರ 2050ರ ವೇಳೆಗೆ ಭಾರತದ ಜನಸಂಖ್ಯೆಯು 166.8 ಕೋಟಿಗೆ ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಈ ವೇಳೆಗೆ ಚೀನಾದ ಜನಸಂಖ್ಯೆಯು 131.7 ಕೋಟಿ ಇರಲಿದೆ ಎನ್ನಲಾಗಿದೆ. ವಿಶ್ವ ಸಂಸ್ಥೆ ಅಂದಾಜಿನ ಪ್ರಕಾರ, ಮುಂದಿನ ಮೂರು ದಶಕಗಳವರೆಗೆ ಭಾರತದ ಜನಸಂಖ್ಯೆಯು ಹೆಚ್ಚಾಗುವ ನಿರೀಕ್ಷೆ ಇದ್ದು, ನಂತರ ಇಳಿಮುಖವಾಗುತ್ತ ಸಾಗಲಿದೆ. ಜನಂಖ್ಯೆಯ ವಿಷಯದಲ್ಲಿ ಭಾರತವು ವಿಶಿಷ್ಟ ಸ್ಥಾನದಲ್ಲಿದೆ. ಇದರಲ್ಲಿ ಯುವ ಮತ್ತು ದುಡಿಯುವ ಜನಸಂಖ್ಯೆಯು ಆರೈಕೆಯ ಅಗತ್ಯವಿರುವ, ಅಂದರೆ ಮಕ್ಕಳು ಮತ್ತು ಹಿರಿಯರ ಜನಸಂಖ್ಯೆಗಿಂತ ಅಧಿಕವಿದೆ. ಜಪಾನ್​ನಂತಹ ದೇಶಗಳಲ್ಲಿ ಜನಸಂಖ್ಯೆಕಡಿಮೆಯಾಗುತ್ತಿದ್ದು, ಹಿರಿಯರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ದೇಶಗಳಿಗೆ ನುರಿತ ಕಾರ್ವಿುಕರ ತೀವ್ರ ಅವಶ್ಯಕತೆ ತಲೆದೋರಲಿದೆ. ಯುವ ಜನಸಂಖ್ಯೆ ಅಧಿಕವಾಗಿರುವುದನ್ನು ಲಾಭದಾಯಕವಾಗಿ ಪರಿವರ್ತಿಸಿಕೊಳ್ಳಲು ಭಾರತಕ್ಕೆ ಸದಾವಕಾಶವಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

    ಜೀವಿತಾವಧಿ ಹೆಚ್ಚಳ ಕಾರಣ: ವಿಶ್ವದ ಜನಸಂಖ್ಯೆಯ ಬೆಳವಣಿಗೆಗೆ ಪ್ರಮುಖ ಕಾರಣವೆಂದರೆ ಜೀವಿತಾವಧಿಯಲ್ಲಿ ಹೆಚ್ಚಳವಾಗಿರುವುದು. ಫಲವತ್ತತೆಯ ದರಗಳು, ಅಂದರೆ ಸಂತಾನೋತ್ಪತ್ತಿ ಪ್ರಮಾಣವು ಪ್ರಪಂಚದ ವಿವಿಧ ಭಾಗಗಳಲ್ಲಿ ಇಳಿಮುಖವಾಗಿದೆ. ಅದೇ ರೀತಿ ಮರಣ ಪ್ರಮಾಣ ಕೂಡ ಇಳಿಮುಖವಾಗಿದೆ. ಆರೋಗ್ಯ ಸೇವೆಯ ಲಭ್ಯತೆಯಲ್ಲಿ ಹೆಚ್ಚಳ ಹಾಗೂ ಜೀವನಮಟ್ಟದಲ್ಲಿ ಸುಧಾರಣೆ ಆಗಿದೆ. ಹೀಗಾಗಿ, ಪ್ರಪಂಚದ ಅನೇಕ ಭಾಗಗಳಲ್ಲಿ ವಯಸ್ಸಾದವರ ಜನಸಂಖ್ಯೆ ವೇಗವಾಗಿ ಹೆಚ್ಚಳ ಕಂಡಿದೆ. ಜಾಗತಿಕವಾಗಿ ಜನರ ಸರಾಸರಿ ಜೀವಿತಾವಧಿ 73 ವರ್ಷ. ಭಾರತದಲ್ಲಿ ಕೂಡ ಜೀವಿತಾವಧಿ ಹೆಚ್ಚಳ ಕಂಡಿದ್ದು, ಸರಾಸರಿ ಜೀವಿತಾವಧಿ 71 ವರ್ಷಗಳಿಗೆ ಏರಿಕೆಯಾಗಿದೆ. ಭಾರತದ ಒಟ್ಟು ಫಲವತ್ತತೆ ದರ 2.0 ಎಂದು ಅಂದಾಜಿಸಲಾಗಿದೆ. ಅಂದರೆ, ಪ್ರತಿ ಮಹಿಳೆ ಸರಾಸರಿ ಇಬ್ಬರಿಗೆ ಜನ್ಮ ನೀಡುತ್ತಾಳೆ.

    ತಲಾ ಆದಾಯವೂ ಹೆಚ್ಚಳ: ಭಾರತವು 2019ರಲ್ಲಿಯೇ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಜಿಡಿಪಿ (ಒಟ್ಟು ದೇಶಿಯ ಉತ್ಪನ್ನ) ಬೆಳವಣಿಗೆ ದರವು ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಜಿಡಿಪಿ ಹೆಚ್ಚಳಕ್ಕೆ ಅನುಗುಣವಾಗಿ ಭಾರತೀಯರ ಸರಾಸರಿ ತಲಾ ಆದಾಯ ಹೆಚ್ಚುತ್ತಲೇ ಸಾಗಿದೆ. ಜನಸಂಖ್ಯೆ ಏರುತ್ತಿದ್ದರೂ ಭಾರತೀಯರ ತಲಾ ಆದಾಯ ಮಾತ್ರ ಕಡಿಮೆಯಾಗದೆ ಹೆಚ್ಚುತ್ತಲೇ ಇರುವುದು ಗಮನಾರ್ಹ ಸಂಗತಿಯಾಗಿದೆ. ಸ್ವತಂತ್ರಗೊಂಡಾಗ ಭಾರತದ ಜಿಡಿಪಿಯು -ಠಿ; 2.7 ಲಕ್ಷ ಕೋಟಿ ಇದ್ದುದು ಈಗ -ಠಿ; 310 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ತಲಾದಾಯವು -ಠಿ; 225ರಿಂದ -ಠಿ; 1,72,000ಕ್ಕೆ ಹೆಚ್ಚಳ ಕಂಡಿದೆ. ಸ್ವಾತಂತ್ರ್ಯದ ಸಂದರ್ಭದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಒಂದು ಕೋಟಿ ಟನ್ ಇದ್ದುದು ಈಗ ಆರು ಪಟ್ಟು ಹೆಚ್ಚಾಗಿದೆ. ಜನಸಂಖ್ಯೆ ಅಗಾಧವಾಗಿ ಹೆಚ್ಚಿದ್ದರೂ ಆಹಾರ ಸ್ವಾವಲಂಬನೆಯನ್ನು ದೇಶ ಸಾಧಿಸಿರುವುದು ಮಹತ್ವದ ಸಂಗತಿಯಾಗಿದೆ. ಭಾರತ ಇದೇ ರೀತಿಯ ಪ್ರಗತಿಯನ್ನು ಮುಂದುವರಿಸಿದರೆ ಜನಸಂಖ್ಯೆ ಹೆಚ್ಚಳವು ಸಮಸ್ಯೆಯಾಗದೆ ಅಭಿವೃದ್ಧಿಗೆ ಪೂರಕ ಶಕ್ತಿಯೇ ಆಗಲಿದೆ ಎಂಬುದು ತಜ್ಞರ ಅಭಿಮತವಾಗಿದೆ.

    ಜಗದಲ್ಲಿ ಸಿಂಹಪಾಲು, ಜನಸಂಖ್ಯೆಯ ಸವಾಲು: ಪ್ರಪಂಚದ ಪ್ರತಿ ನೂರು ಜನರಲ್ಲಿ 17 ಭಾರತೀಯರುವಿಶ್ವದ ಜನಸಂಖ್ಯೆ 804 ಕೋಟಿ

    ಕಳೆದ ನವೆಂಬರ್​ನಲ್ಲಿ ಜಾಗತಿಕ ಜನಸಂಖ್ಯೆಯು 804 ಕೋಟಿ ತಲುಪಿದೆ. ವಿಶ್ವ ಜನಸಂಖ್ಯೆಯು 1950ರಿಂದ ನಿಧಾನಗತಿಯ ದರದಲ್ಲಿ ಬೆಳೆಯುತ್ತಿದೆ. ಬೆಳವಣಿಗೆ ದರವು 2020 ರಲ್ಲಿ ಶೇಕಡಾ 1ಕ್ಕಿಂತ ಕಡಿಮೆಯಾಗಿದೆ. ಜಾಗತಿಕ ಜನಸಂಖ್ಯೆಯಲ್ಲಿ 15-64 ವರ್ಷಗಳ ನಡುವಿನವರು ಶೇಕಡಾ 65; 10-24 ವರ್ಷಗಳ ನಡುವಿನವರು ಶೇಕಡಾ 24 ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರು ಶೇಕಡಾ 10 ಇದ್ದಾರೆ. ಪೂರ್ವ ಮತ್ತು ಆಗ್ನೇಯ ಏಷ್ಯಾ ಪ್ರದೇಶವು 230 ಕೋಟಿ ಜನರೊಂದಿಗೆ ಜಾಗತಿಕ ಜನಸಂಖ್ಯೆಯ 29 ಪ್ರತಿಶತವನ್ನು ಪ್ರತಿನಿಧಿಸುತ್ತದೆ. ಮಧ್ಯ ಮತ್ತು ದಕ್ಷಿಣ ಏಷ್ಯಾವು 210 ಕೋಟಿ (26 ಪ್ರತಿಶತ) ಜನಸಂಖ್ಯೆ ಹೊಂದಿದೆ. ಇವೆರಡು ವಿಶ್ವದ ಅತಿಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಾಗಿವೆ. ಮಧ್ಯ ಮತ್ತು ದಕ್ಷಿಣ ಏಷ್ಯಾವು 2037ರ ವೇಳೆಗೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶವಾಗಲಿದೆ. ಜಾಗತಿಕ ಜನಸಂಖ್ಯೆಯು 2030ರಲ್ಲಿ 850 ಕೋಟಿ, 2050ರಲ್ಲಿ 970 ಕೋಟಿ ಮತ್ತು 2100 ರಲ್ಲಿ 1040 ಕೋಟಿಗೆ ಬೆಳೆಯಬಹುದು ಎಂದು ವಿಶ್ವ ಸಂಸ್ಥೆ ಅಂದಾಜಿಸಿದೆ.

    ಜನಸಂಖ್ಯೆ ನಿಯಂತ್ರಣಕ್ಕೆ ಮಸೂದೆ ಬೇಕೆ?

    ಜನಸಂಖ್ಯೆ ಬೆಳವಣಿಗೆ ದರ ಕಡಿಮೆ ಮಾಡುವ ಉದ್ದೇಶದಿಂದ ಜನನ ನಿಯಂತ್ರಣದ ಅಧಿಕೃತ ಕಾರ್ಯಕ್ರಮವನ್ನು ಪರಿಚಯಿಸಿದ ಮೊದಲ ದೇಶಗಳಲ್ಲಿ ಭಾರತ ಒಂದಾಗಿದೆ. ಪ್ರತಿ ದಂಪತಿಗೆ ಗರಿಷ್ಠ ಎರಡು ಮಕ್ಕಳ ನೀತಿಯ ಪ್ರಸ್ತಾಪವಿದ್ದ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಬಿಜೆಪಿ ಸಂಸದ ರಾಕೇಶ್ ಸಿನ್ಹಾ ಅವರು ರಾಜ್ಯಸಭೆಯಲ್ಲಿ 2019ರ ಜುಲೈನಲ್ಲಿ ಮಂಡಿಸಿದ್ದರು. ಆದರೆ ಆಗ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಮಧ್ಯಪ್ರವೇಶಿಸಿದ ನಂತರ ಮಸೂದೆಯನ್ನು ಹಿಂಪಡೆಯಲಾಯಿತು. ಬಲವಂತದ ಜನಸಂಖ್ಯೆ ಕಡಿವಾಣದ ಬದಲಿಗೆ ಸರ್ಕಾರದ ನೇತೃತ್ವದ ಜಾಗೃತಿ ಅಭಿಯಾನಗಳು ಹೆಚ್ಚು ಸಕಾರಾತ್ಮಕ ಪರಿಣಾಮವನ್ನು ತೋರಿವೆ ಎಂಬ ವಾದವನ್ನು ಸಚಿವರು ಮುಂದಿಟ್ಟರು. ಜನಸಂಖ್ಯೆ ನಿಯಂತ್ರಣ ಮಸೂದೆ ಅಥವಾ ದಂಪತಿಗಳು ಹೊಂದಬಹುದಾದ ಗರಿಷ್ಠ ಸಂಖ್ಯೆಯ ಮಕ್ಕಳ ಕುರಿತಂತೆ ಯಾವುದೇ ನೀತಿಯ ಅಗತ್ಯವಿಲ್ಲ ಎಂದು ಅನೇಕ ತಜ್ಞರು ಕೂಡ ಹೇಳುತ್ತಾರೆ. ಇತ್ತೀಚಿನ ಜನಸಂಖ್ಯಾ ನೀತಿ (ಎನ್​ಪಿಪಿ) 2000ರಲ್ಲಿ ನಿಗದಿಪಡಿಸಿದ ಗುರಿಗಳನ್ನು ಸಾಧಿಸಲಾಗಿದ್ದು, ಎಲ್ಲೆಡೆ ಫಲವತ್ತತೆಯ ಮಟ್ಟವು (ಜನನ ಪ್ರಮಾಣವು) ಕಡಿಮೆಯಾಗುತ್ತಿದೆ ಎಂದು ತಜ್ಞರು ವಿವರಿಸುತ್ತಾರೆ.

    ಬದಲಾದ ಲೆಕ್ಕಾಚಾರ

    ಜನಸಂಖ್ಯೆಯನ್ನು ಒಂದು ಸಮಸ್ಯೆ ಎಂದು ಪರಿಗಣಿಸಿದ್ದ ಚೀನಾ ಈ ಹಿಂದೆ ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ ಜಾರಿಗೊಳಿಸಿತ್ತು. ತದನಂತರ ಜನಸಂಖ್ಯೆಯನ್ನೇ ಸಂಪನ್ಮೂಲ ಎಂದು ಪರಿಗಣಿಸಿ ಹಲವಾರು ಯೋಜನೆಗಳನ್ನು ರೂಪಿಸಿತು. ಯುವಜನತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಚೀನಾ ದೇಶವು 1980ರ ದಶಕದ 2015ರವರೆಗೆ ತನ್ನ ಜನಸಂಖ್ಯೆಯ ಲಾಭಾಂಶವನ್ನು ಕೊಯ್ಲು ಮಾಡಿತು. ಹೀಗಾಗಿ, ಚೀನಾ ಈಗ ಅಮೆರಿಕದ ನಂತರ ವಿಶ್ವದಲ್ಲಿಯೇ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ. ಅಚ್ಚರಿಯ ಸಂಗತಿ ಎಂದರೆ, ಜನಸಂಖ್ಯೆ ಹೆಚ್ಚಳಕ್ಕೆ ಅನೇಕ ಪ್ರೋತ್ಸಾಹಕ ಯೋಜನೆಗಳನ್ನು ಚೀನಾ ಈಗ ಜಾರಿಗೊಳಿಸಿರುವುದು. ಚೀನಿಯರ ಸರಾಸರಿ ತಲಾದಾಯವು ಈಗ 10 ಲಕ್ಷ ರೂಪಾಯಿ ಮೀರಿದೆ. ಅಂದರೆ, ಭಾರತೀಯರ ಐದಾರು ಪಟ್ಟು. ಭಾರತ ಕೂಡ ಸೂಕ್ತ ನೀತಿ, ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದರೆ ಹೆಚ್ಚಿನ ಜನಸಂಖ್ಯೆಯು ಹೊರೆಯಾಗದೆ ದೇಶದ ಪ್ರಗತಿಗೆ ಕಾರಣವಾಗುವ ಜನಸಂಪನ್ಮೂಲವಾಗಬಹುದು ಎಂದು ತಜ್ಞರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಇದೆಲ್ಲ ಕಾರ್ಯಗತಗೊಳ್ಳಬೇಕಾದರೆ, ಕೃಷಿ ಕ್ಷೇತ್ರ ಮಾತ್ರವಲ್ಲದೆ, ಇತರ ವಲಯಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಉತ್ಪಾದನೆ, ಮೌಲ್ಯವರ್ಧನೆ ಮತ್ತು ಸರಾಸರಿ ಆದಾಯ ಹೆಚ್ಚು ಇರುವ ಆಧುನಿಕ ಉದ್ಯಮ ಮತ್ತು ಆಧುನಿಕ ಸೇವೆಗಳಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಇಂತಹ ರಚನಾತ್ಮಕ ರೂಪಾಂತರದಿಂದ ಜನಸಂಖ್ಯೆಯ ಲಾಭಾಂಶ ಪಡೆಯಲು ಸಾಧ್ಯ. ಇಲ್ಲದಿದ್ದರೆ ಬೃಹತ್ ಜನಸಂಖ್ಯೆಯು ದೇಶಕ್ಕೆ ವರವಾಗದೆ ಶಾಪವಾಗುವ ಅಪಾಯ ಇದ್ದೇಇರುತ್ತದೆ.

    ನ್ಯಾಯಾಲಯದ ಮೊರೆ ಹೋಗಿದ್ದೇಕೆ ಎಂದು ಕಾರಣ ಕೊಟ್ಟ ಕಿಚ್ಚ; ನ್ಯಾಯಾಲಯದಲ್ಲೇ ಬಗೆಹರಿಯಲು ಬಿಡಿ ಎಂದು ಸುದೀಪ್ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts