More

    ಕೀಟ ಚಿಕ್ಕದಾದರೂ ಭೀತಿ ದೊಡ್ಡದು!; ವಿಶ್ವ ಸೊಳ್ಳೆ ದಿನ ಇಂದು

    ಕೀಟ ಚಿಕ್ಕದಾದರೂ ಭೀತಿ ದೊಡ್ಡದು!; ವಿಶ್ವ ಸೊಳ್ಳೆ ದಿನ ಇಂದು| ಶೇಷಾದ್ರಿ ಡಿ.ಎನ್.
    ಜೀವಶಾಸ್ತ್ರದ ಸಂಶೋಧಕರ ಪ್ರಕಾರ ಸೊಳ್ಳೆಯು ತನ್ನದೇ ಆದ ವಿಶಿಷ್ಟ್ಯ ದೈಹಿಕ ರಚನೆಯಿಂದ ಮಾನವ ಕುಲಕ್ಕೆ ಉಪಕಾರಿಯಾಗಿ ಮತ್ತು ಅಪಾಯಕಾರಿಯಾಗಿ ಅದ್ಭುತವಾದ ಜೀವನ ಸಾಗಿಸುತ್ತಿದೆ. ಪರಾಗಸ್ಪರ್ಶ ಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ವಿಶ್ವದಾದ್ಯಂತ ಇತಿಹಾಸದಲ್ಲಿ ನಡೆದಿರುವ ಯುದ್ಧಗಳಲ್ಲಿ ಮಾನವ ಕುಲಕ್ಕೆ ಉಂಟಾಗಿರುವ ಸಾವುಗಳಿಗಿಂತ ಸೊಳ್ಳೆಗಳಿಂದ ಹರಡುತ್ತಿರುವ ಕಾಯಿಲೆಗಳಿಂದ ಉಂಟಾಗಿರುವ ಸಾವುಗಳೇ ಜಾಸ್ತಿ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳು ತಿಳಿಸುತ್ತಿವೆ. ರೋಗವಾಹಕ ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಎಂದರೆ ಮಲೇರಿಯಾ ಜ್ವರ, ಡೆಂಘ, ಚಿಕೂನ್​ಗುನ್ಯ, ಯಲ್ಲೋ ಫೇವರ್ (ಹಳದಿ ಜ್ವರ), ಜೀಕಾ ವೈರಲ್ ಜ್ವರ, ಫೀಲೇರಿಯಾಸಿಸ್ (ಅನೆಕಾಲು ರೋಗ), ವೆಸ್ಟ್ ನೈಲ್ ವೈರಸ್ ಜ್ವರ ಮುಂತಾದವುಗಳು. ಆದ್ದರಿಂದ ಕೀಟ ಚಿಕ್ಕದಾದರೂ ಭೀತಿ ದೊಡ್ಡದು ಎನ್ನುವ ಆರೋಗ್ಯ ಇಲಾಖೆ ಘೊಷವಾಕ್ಯ ಅಕ್ಷರಶಃ ಸತ್ಯವಾದದ್ದು.

    ವಿಶ್ವದಾದ್ಯಂತ ವಿಸ್ತರಣೆಯಾಗಿರುವ ಎಲ್ಲ ಕುಲದ ಸೊಳ್ಳೆಗಳನ್ನು ಕ್ಯೂಲಿಸಿಡೆ ಕುಟುಂಬಕ್ಕೆ ಸೇರಿಸಲಾಗಿದೆ. ಅನಾಫಿಲಿಸ್, ಈಡೀಸ್, ಕ್ಯೂಲೆಕ್ಸ್, ಮಾನ್​ಸೋನಿಯಾ, ಹೆಮಗೋಗಸ್, ಸೋರೋಪೊರಾ ಕುಲದ ಸೊಳ್ಳೆಗಳು ರೋಗವಾಹಕಗಳಾಗಿ ಮಾನವನಿಗೆ ಸವಾಲಾಗಿ ಮಾರ್ಪಟ್ಟಿವೆ. ರೋಗವಾಹಕಗಳು ಮಾತ್ರವಲ್ಲದೆ ಇನ್ನಿತರೆ ಕುಲದ ಸೊಳ್ಳೆಗಳು ಸಂತಾನೋತ್ಪತ್ತಿಗಾಗಿ ಅವಶ್ಯಕವಿರುವ ಪ್ರೋಟಿನ್​ಗೋಸ್ಕರ ಮನುಷ್ಯ ಮತ್ತು ಪ್ರಾಣಿಗಳನ್ನು ಆಕ್ರಮಣಕಾರಿ ಕಚ್ಚುವಿಕೆಯಿಂದ ಉಪದ್ರವಗಳಾಗಿವೆ. ಜೀವವೈವಿಧ್ಯತೆಯಲ್ಲಿ ಸೊಳ್ಳೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಸೊಳ್ಳೆಗಳ ಸಂಪೂರ್ಣ ನಿಮೂಲನೆಯಿಂದ ಪರಿಸರದ ಜೀವವೈವಿಧ್ಯತೆಯಲ್ಲಿ ತೊಂದರೆಯಾಗಬಹುದು. ಕೆಲವೇ ಕುಲದ ಸೊಳ್ಳೆಗಳು ರೋಗವಾಹಕಗಳಾಗಿ ಮಾನವ ಕುಲಕ್ಕೆ ಸಮಸ್ಯಾತ್ಮಕವಾಗಿರುವುದರಿಂದ ಅತಿ ಬುದ್ಧಿವಂತ ಜೀವಿಯಾದ ಮನುಷ್ಯನಿಗೆ ರೋಗವಾಹಕಗಳಿಂದ ಬರುವ ರೋಗಗಳನ್ನು ಮತ್ತು ಅಕ್ರಮಣಕಾರಿ ಕಚ್ಚುವಿಕೆಯಿಂದ ತಪ್ಪಿಸಿಕೊಳ್ಳಲು ರೋಗವಾಹಕ ಸೊಳ್ಳೆಗಳ ನಿಯಂತ್ರಣ, ನಿಮೂಲನೆಗಾಗಿ ಕೆಲವೊಂದು ವಿಧಾನಗಳನ್ನು ಪರಿಸ್ಥಿತಿಗೆ ಅನುಗುಣವಾಗಿ ಬಳಕೆ ಮಾಡುವುದು ಅವಶ್ಯಕ ಎನ್ನಬಹುದಾಗಿದೆ.

    ರೋಗವಾಹಕಗಳನ್ನು ನಿಯಂತ್ರಣ, ನಿಮೂಲನೆ ಮಾಡಲು ಮುಖ್ಯವಾಗಿ ಮಾಹಿತಿ ಅತ್ಯಗತ್ಯ. ಸೊಳ್ಳೆಗಳಲ್ಲಿ ಗಂಡುಸೊಳ್ಳೆ ಮತ್ತು ಹೆಣ್ಣುಸೊಳ್ಳೆಗಳಿರುತ್ತವೆ. ದೈಹಿಕ ರಚನೆಯ ಸ್ವರ್ಶತಂತುಗಳನ್ನು (ಆಂಟೆನಾ) ಸೂಕ್ಷ್ಮದರ್ಶಕದಲ್ಲಿ ನೋಡಿ ಸುಲಭವಾಗಿ ಲಿಂಗವನ್ನು ಕಂಡುಹಿಡಿಯಬಹುದು. ಸೊಳ್ಳೆಗಳ ಜೀವನಚಕ್ರ, ಬೆಳವಣಿಗೆ, ಆಹಾರ ಪದ್ಧತಿ, ಸಂತಾನೋತ್ಪತ್ತಿ ಮತ್ತು ಜೀವಿತಾವಧಿ ಕುತೂಹಲಕಾರಿಯಾಗಿದೆ. ಸಮುದ್ರ ಮಟ್ಟಕ್ಕಿಂತ 3500 ಮೀಟರ್ ಎತ್ತರ ಮತ್ತು 1250 ಮೀಟರ್ ಆಳದಲ್ಲಿ ಸೊಳ್ಳೆಗಳು ಜೀವನ ಸಾಗಿಸುತ್ತಿವೆ. ಅಂಟಾರ್ಕ್ಟಿಕಾ ಹಾಗೂ ಕೆಲವು ದ್ವೀಪಗಳಲ್ಲಿ ಸೊಳ್ಳೆಗಳು ಕಾಣಸಿಗುವುದಿಲ್ಲ ಎಂಬುದು ಸಂಶೋಧಕರ ಅಭಿಪ್ರಾಯ. ವಿಶ್ವದಾದ್ಯಂತ 3600 ಕುಲದ ಸೊಳ್ಳೆಗಳನ್ನು ಕಂಡುಹಿಡಿಯಲಾಗಿದ್ದು, ಎಲ್ಲ ಕುಲದ ಜಾತಿಯ ಸೊಳ್ಳೆಗಳು ಅಂದಾಜು 42-56 ದಿನಗಳು ಜೀವಿತಾವಧಿ ಹೊಂದಿರುತ್ತವೆ. ಜೀವಿತಾವಧಿ ನಾಲ್ಕು ಹಂತಗಳಲ್ಲಿ ಪೊರೈಸುತ್ತವೆ. ಮೊಟ್ಟೆ. ಲಾರ್ವಾ, ಪೋ›ಫ, ಪ್ರೌಢಾವಸ್ಥೆ ಈ ನಾಲ್ಕು ಹಂತಗಳಾಗಿವೆ.

    (ಲೇಖಕರು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ, ಸ್ವಾಸ್ಥ್ಯ ಬರಹಗಾರರು)

    ನಿಯಂತ್ರಣಕ್ಕೆ ಹಲವು ಕ್ರಮ

    ರೋಗವಾಹಕಗಳ ನಿಯಂತ್ರಣ ಮತ್ತು ಸಂಶೋಧನಾ ಕೇಂದ್ರ (ಐ.ಸಿ.ಎಂ.ಆರ್-ವಿ.ಸಿ.ಆರ್.ಸಿ) ಪುದುಚೇರಿಯಲ್ಲಿನ ವಿಜ್ಞಾನಿಗಳು ತಾಂತ್ರಿಕತೆಗಳನ್ನು ಬಳಸಿಕೊಂಡು ರೋಗವಾಹಕಗಳನ್ನು ಮತ್ತು ರೋಗವಾಹಕಗಳಿಂದ ಹರಡುವ ಕಾಯಿಲೆಗಳನ್ನು ನಿಯಂತ್ರಣ ಮಾಡಲು ಹೊಸ ಹೊಸ ವಿಧಾನಗಳನ್ನು ಪತ್ತೆ ಹಚ್ಚುತ್ತಿದ್ದಾರೆ. ಬೆಳವಣಿಗೆಯ ಹಂತಗಳಾದ ಮೊಟ್ಟೆ, ಲಾರ್ವಾ, ಪೋ›ಪಗಳ ನಿಮೂಲನೆಗಾಗಿ ಗಪ್ಪಿ ಗ್ಯಾಂಬ್ಯೂಸಿಯಾ ಮೀನುಗಳು, ಟಾಕ್ಸೊರಿಂಚೈಟ್ಸ್ ಕುಲದ ಸೊಳ್ಳೆಯ ಲಾರ್ವಾಗಳನ್ನು ಬಳಕೆ ಮಾಡಲಾಗುತ್ತದೆ. ಸೊಳ್ಳೆಯ ಲಾರ್ವಾಗಳನ್ನು ನಾಶಮಾಡಲು ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಇಸ್ರೇಲೆನ್ಸಿಸ್ ಮತ್ತು ಬ್ಯಾಸಿಲಸ್ ಸ್ಪರಿಕಸ್ ಬ್ಯಾಕ್ಟೀರಿಯಾ, ಟೆಮೆಪೋಸ್ ಬಳಕೆ ಮಾಡಲಾಗುತ್ತದೆ. ರೋಗವಾಹಕ ಕುಲದ ಸೊಳ್ಳೆಗಳ ಸಂತಾನೋತ್ಪತ್ತಿ ಕಡಿಮೆ ಮಾಡಲು ಸ್ಥಳೀಯವಾಗಿ ಮಾರ್ಪಾಡಿಸಲಾದ ಸೊಳ್ಳೆಗಳನ್ನು ಬಳಕೆ ಮಾಡಲಾಗುತ್ತದೆ. ರೋಗವಾಹಕದಲ್ಲಿ ರೋಗಕಾರಕ ವೃದ್ಧಿಯಾಗುವುದನ್ನು ಮತ್ತು ರೋಗವಾಹಕಗಳಿಂದ ರೋಗಕಾರಕ ಮನುಷ್ಯನಿಗೆ ಹರಡುವುದನ್ನು ತಡೆಗಟ್ಟಲು ವೋಲ್ಬಾಚಿಯಾ ಬ್ಯಾಕ್ಟೀರಿಯಾ ಹೊಂದಿರುವ ಸೊಳ್ಳೆಗಳನ್ನು ಬಳಕೆ ಮಾಡಲಾಗುತ್ತದೆ. ಲಾರ್ವಾ ಹಂತದಿಂದ ಪೋ›ಪ, ಪೋ›ಪ ಹಂತದಿಂದ ಪ್ರೌಢಾವಸ್ಥೆ ಹಂತ ಬೆಳವಣಿಗೆಯಾಗದಂತೆ ತಡೆಯಲು ಇನ್ಸೆಕ್ಟ್ ಗ್ರೋಥ್ ರೇಗುಲೇಟರ್ (ಐ.ಜಿ.ಆರ್) ಬಳಕೆ ಮಾಡಲಾಗುತ್ತದೆ. ಲಾರ್ವಾ ಮತ್ತು ಪ್ರೋಪಗಳ ಉಸಿರಾಟಕ್ಕೆ ತೊಂದರೆ ಮಾಡಲು ನೀರಿನ ಮೇಲೆ ತೈಲ ಸಿಂಪಡಣೆ ಮಾಡಲಾಗುತ್ತದೆ. ಪ್ರೌಢಾವಸ್ಥೆ ಸೊಳ್ಳೆಗಳಿಂದ ಅಕ್ರಮಣಕಾರಿ ಕಚ್ಚುವಿಕೆಯಿಂದ ತಪ್ಪಿಸಿಕೊಳ್ಳಲು ವಿದ್ಯುತ್ ಚಾಲಿತ ಬ್ಯಾಟ್​ಗಳು, ರಾಸಾಯನಿಕ ಸಂಯೋಜನೆಯಿಂದ ತಯಾರಿಸಲ್ಪಟ್ಟಿರುವ ದ್ರವಲೇಪನಗಳು, ಸೊಳ್ಳೆ ಬತ್ತಿಗಳು, ಅವಿಕಾರಕಗಳು, ಸೊಳ್ಳೆಗಳ ನಿವಾರಕ ನಿರೋಧಕಗಳು, ಕೀಟನಾಶಕ ಲೇಪಿತ ಸೊಳ್ಳೆಪರದೆಗಳನ್ನು (ಐ.ಟಿ.ಎನ್) ಮತ್ತು (ಎಲ್.ಎಲ್.ಐ.ಎನ್) ಬಳಕೆ ಮಾಡಲಾಗುತ್ತದೆ. ಒಳಾಂಗಣ ಕೀಟನಾಶಕ ಸಿಂಪಡಣೆ, ಹೊರಾಂಗಣ ಕೀಟನಾಶಕ ಸಿಂಪಡಣೆ, ಸ್ಪೇಸ್ ಸ್ಪ್ರೇ ಬಳಕೆ ಮಾಡಲಾಗುತ್ತದೆ. ಹಗಲು ವೇಳೆಯಲ್ಲಿ ಮಕ್ಕಳು, ಬಾಣಂತಿಯರು, ವಯಸ್ಕರು, ವಿಶ್ರಾಂತಿ ಪಡೆಯುವ ವೇಳೆ ಹಾಗೂ ರಾತ್ರಿ ವೇಳೆಯಲ್ಲಿ ಸೊಳ್ಳೆಪರದೆ ಉಪಯೋಗಿಸುವುದು, ಮೈ ತುಂಬಾ ಬಟ್ಟೆಗಳನ್ನು ಧರಿಸಿಕೊಳ್ಳುವುದು ಒಂದು ಉತ್ತಮ ಕ್ರಮವಾಗಿದೆ.

    ರಕ್ತ ಕುಡಿಯುವ ಹೆಣ್ಣು ಸೊಳ್ಳೆಗಳು

    ಪ್ರೌಢಾವಸ್ಥೆಯ ಗಂಡು ಸೊಳ್ಳೆ ಮತ್ತು ಹೆಣ್ಣು ಸೊಳ್ಳೆಗಳು (ಮಿಲನ ಹೊಂದುತ್ತವೆ) ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತವೆ. ಹೆಣ್ಣು ಸೊಳ್ಳೆಗಳು ಮೊಟ್ಟೆಗಳ ಉತ್ಪಾದನೆ ಬೆಳವಣಿಗಾಗಿ ಪ್ರೋಟಿನ್ ಅವಶ್ಯಕತೆ ಇದ್ದು, ಇದಕ್ಕಾಗಿ ಮನುಷ್ಯ ಆಥವಾ ಪ್ರಾಣಿಗಳ ರಕ್ತ ಹೀರಿಕೊಳ್ಳುತ್ತವೆ. ಪ್ರೌಢಾವಸ್ಥೆ ಹೆಣ್ಣು ಸೊಳ್ಳೆ ಮೊಟ್ಟೆಗಳನ್ನು ಮನೆಯ ಒಳಾಂಗಣ, ಹೊರಾಂಗಣ ಪರಿಕರಗಳಲ್ಲಿ ಸಂಗ್ರಹವಾಗಿರುವ ನೀರಿನ ತೇವಾಂಶದ ಮೇಲ್ಮೈ ಸ್ಥಳದಲ್ಲಿ ಇಡುತ್ತವೆ. ಕೆಲವು ಜಾತಿಯ ಸೊಳ್ಳೆಗಳು ನೀರಿನ ಮೇಲ್ಭಾಗದಲ್ಲಿಯೂ, ಪರಿಸರದಲ್ಲಿ ನಿಂತಿರುವ ನೀರಿನಲ್ಲೂ ಇಡುತ್ತವೆ. ಮೊಟ್ಟೆಗಳು ಒಡೆದು ಲಾರ್ವಾಗಳಾಗುತ್ತವೆ. ಲಾರ್ವಾಗಳು ನೀರಿನಲ್ಲಿರುವ ಸೂಕ್ಷ್ಮ ಜೀವಿಗಳನ್ನು ತಿಂದು ಬೆಳವಣಿಗೆಯಾಗಿ ಪ್ರೋಪಗಳು ಆಗುತ್ತವೆ. ಪ್ರೋಪಗಳು ಕೆಲವು ದಿನಗಳ ಸಮಯ ನೀರಿನಲ್ಲಿ ವಿಶ್ರಾಂತಿ ಪಡೆಯುತ್ತಾ ದೈಹಿಕ ಬೆಳವಣಿಗೆಯಾಗಿ ಪ್ರೌಢಾವಸ್ಥೆಯ ಸೊಳ್ಳೆಗಳಾಗಿ ನೀರಿನಿಂದ ಹೊರಬಂದು ವಾತಾವರಣದಲ್ಲಿ ಜೀವನ ನಡೆಸುತ್ತವೆ. ಗಂಡು ಪ್ರೌಢಾವಸ್ಥೆಯ ಸೊಳ್ಳೆಯು ಮನುಷ್ಯ ಮತ್ತು ಪ್ರಾಣಿಗಳ ದೇಹವನ್ನು ಕಡಿದು ರಕ್ತ ಹೀರಿಕೊಳ್ಳುವಷ್ಟು ಬಾಯಿಯ ಅಂಗಗಳು ಬೆಳವಣಿಗೆ ಹೊಂದಿರುವುದಿಲ್ಲ. ಹಸಿರು ಎಲೆಯ ರಸವನ್ನು, ಹೂವಿನ ಮಕರಂದವನ್ನು ಹೀರಿಕೊಂಡು ಜೀವನ ಸಾಗಿಸುತ್ತವೆ. ಹೆಣ್ಣು ಪ್ರೌಢಾವಸ್ಥೆ ಸೊಳ್ಳೆಯ ಬಾಯಿಯ ಅಂಗಗಳು ಪ್ರಬಲವಾಗಿ ಬೆಳವಣಿಗೆ ಹೊಂದಿರುತ್ತವೆ. ಹಸಿರು ಎಲೆಯ ರಸವನ್ನು, ಹೂವಿನ ಮಕರಂದವನ್ನು, ಮನುಷ್ಯ / ಪ್ರಾಣಿಗಳನ್ನು ಕಡಿದು ರಕ್ತವನ್ನು ಹೀರಿಕೊಂಡು, ಜೀವಿತಾವಧಿ ಪೂರ್ಣಗೊಳಿಸುತ್ತವೆ. ಸೊಳ್ಳೆಗಳು ಮನುಷ್ಯನನ್ನು ದೇಹದಲ್ಲಿ ಉತ್ಪತ್ತಿಯಾಗುವ ರಾಸಾಯನಿಕಗಳ ಬೆವರಿನಿಂದ ಬರುವ ವಾಸನೆಯಿಂದ ಗುರುತಿಸಿಕೊಂಡು ಕಡಿದು ರಕ್ತವನ್ನು ಹೀರಿಕೊಳ್ಳುವ ಸಂದರ್ಭದಲ್ಲಿ ಸಾಂಕ್ರಾಮಿಕ ಕಾಯಿಲೆಯ ರೋಗಕಾರಕಗಳು (ಪ್ಯಾಥೋಜೀನ್/ಪರಾವಲಂಬಿಗಳು) ಸೊಳ್ಳೆಯ ದೇಹವನ್ನು ಪ್ರವೇಶ ಪಡೆದುಕೊಂಡು, ವೃದ್ಧಿಯಾಗಿ ಲಾಲಾರಸದಲ್ಲಿ ಬಂದು ಸೇರಿಕೊಳ್ಳುತ್ತವೆ. ಇಂತಹ ಸೊಳ್ಳೆಗಳನ್ನು ಸೋಂಕಿತ ಪ್ರೌಢಾವಸ್ಥೆಯ ಸೊಳ್ಳೆಗಳು ಎಂದು ಕರೆಯಲಾಗುತ್ತದೆ.

    ನೀರು ನಿಲ್ಲದಂತೆ ಎಚ್ಚರಿಕೆ ಅಗತ್ಯ

    ಮನುಷ್ಯ ವಾಸ ಮಾಡುವ ಪರಿಸರದಲ್ಲಿ ನೀರಿನ ತಾಣಗಳಲ್ಲಿ ಸಂತಾನೋತ್ಪತ್ತಿಯನ್ನು ನಿಯಂತ್ರಣ ಆಥವಾ ನಿಮೂಲನೆ ಮಾಡಬೇಕು. ಮನೆಯ ಸುತ್ತಲೂ ನೀರು ನಿಲ್ಲದ ಹಾಗೆ ಸರಾಗವಾಗಿ ಮುಂದಕ್ಕೆ ಹೋಗಲು ವ್ಯವಸ್ಥೆ ಮಾಡಬೇಕು. ಜೀವನ ಚಕ್ರದ ಮೂರು ಹಂತಗಳಾದ ಮೊಟ್ಟೆ, ಲಾರ್ವಾ, ಪೋ›ಪಗಳು ನೀರಿನಲ್ಲಿ ಮಾತ್ರ ಜೀವಂತವಾಗಿದ್ದು, ಪೂರ್ಣಗೊಳಿಸಲು ಅಂದಾಜು 7 ರಿಂದ 10 ದಿನಗಳು ಬೇಕಾಗುತ್ತದೆ. ಆದ್ದರಿಂದ ಪ್ರತಿ ವಾರಕ್ಕೊಮ್ಮೆ ಪ್ರತಿ ಮನೆಯಲ್ಲೂ ಒಳಾಂಗಣ ಮತ್ತು ಹೊರಾಂಗಣಗಳಲ್ಲಿ ಸಂಗ್ರಹವಾಗಿರುವ ನೀರು ಪರಿಶೀಲಿಸಿ, ಖಾಲಿ ಮಾಡಿ, ಸ್ವಚ್ಚಗೊಳಿಸಿ, ಒಣಗಿಸಿ, ಪುನಃ ಅವಶ್ಯಕತೆ ಇರುವ ನೀರನ್ನು ಶೇಖರಿಸಬೇಕು. ಮನೆಯ ಸುತ್ತಮುತ್ತ ಶೇಖರಣೆಯಾಗಿರುವ ನೀರಿನ ತಾಣದಲ್ಲಿ ಮೊಟ್ಟೆಗಳನ್ನು ಇಡದಂತೆ ಮುಚ್ಚಿರಬೇಕು.

    ವಿವಿ ಕ್ಯಾಂಪಸ್​ನಲ್ಲಿ ಮದ್ಯಪಾನ-ಧೂಮಪಾನ ನಮ್ಮ ಹಕ್ಕು ಎಂದ ವಿದ್ಯಾರ್ಥಿನಿ!

    ಅಲ್ಪಸಂಖ್ಯಾತ ವಿದ್ಯಾರ್ಥಿವೇತನದಲ್ಲಿ ಭಾರಿ ಹಗರಣ; ಅರ್ಧಕ್ಕರ್ಧ ಫಲಾನುಭವಿಗಳು ನಕಲಿ!; ಸಿಬಿಐ ತನಿಖೆಗೆ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts