More

    ಹರಿ ಸ್ಮರಣೆಯಿಂದ ಜೀವನ ಧನ್ಯ; ಇಂದು ವೈಕುಂಠ ಏಕಾದಶಿ

    ಏಕಾದಶಿ ದಿನ ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ. ಏಕಾದಶಿಯನ್ನು ಹರಿವಾಸ ಎಂದೂ ಕರೆಯಲಾಗುತ್ತದೆ. ಉಪವಾಸ ಎಂದರೆ ಭಗವಂತನನ್ನು ಸ್ಮರಿಸುತ್ತ ಅವನ ಸಾನ್ನಿಧ್ಯದಲ್ಲಿ ವ್ರತನಿಷ್ಠವಾಗಿ ಕಳೆಯುವುದು. ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಮನಸ್ಸಿನ ನಿಗ್ರಹ ಮುಖ್ಯ. ಈ ಮನೋನಿಗ್ರಹದ ಮೊದಲ ಮೆಟ್ಟಿಲೇ ಆಹಾರದ ನಿಯಂತ್ರಣ. ಅಂದರೆ ದೇಹಕ್ಕೆ ತಿಂಗಳಿಗೊಮ್ಮೆಯಾದರೂ ಆಹಾರದ ನಿಯಂತ್ರಣದಲ್ಲಿಟ್ಟುಕೊಂಡು ಮುಕ್ತಿಯ ಪಥದೆಡೆ ಮುಂದುವರಿಯುವ ಸ್ಥಿತಿ, ವ್ರತ ಎನ್ನಬಹುದು. ವೈಕುಂಠ ಏಕಾದಶಿಯ ವಿಚಾರಕ್ಕೆ ಬಂದರೆ ಏಕಾದಶಿ ದಿನದ ಅಭಿಮಾನಿ ದೇವತೆ ಶ್ರೀವಿಷ್ಣು. ವೈಕುಂಠದ್ವಾರ ಈ ಮಹಾಸುದಿನವೇ ತೆರೆಯುತ್ತದೆ ಎಂಬ ಅಚಲವಾದ ನಂಬಿಕೆಯಿಂದಲೇ ಭಕ್ತರು ಈ ಪವಿತ್ರದಿನದಂದು ಶ್ರೀ ಹರಿಯ ಅಂದರೆ ವಿಷ್ಣುವಿನ ದೇವಾಲಯಗಳಿಗೆ ಭೇಟಿ ನೀಡಿ ಶ್ರದ್ಧಾಭಕ್ತಿಯಿಂದ ಭಗವಂತನ ದರ್ಶನ ಪಡೆಯುತ್ತಾರೆ. ಹೀಗೆ ಪ್ರವೇಶಿಸಿದ್ದಲ್ಲಿ ವೈಕುಂಠದ ದ್ವಾರವನ್ನೇ ಪ್ರವೇಶಿಸಿದಂತೆ ಎಂಬ ದೃಢತೆಯಿಂದ ಸರದಿಯಲ್ಲಿ ಕಾದು ದ್ವಾರ ಪ್ರವೇಶ ಮಾಡುತ್ತಾರೆ.

    ಶ್ರೀ ವಿಷ್ಣು ಎಂಬುದಕ್ಕೆ ವಿಶೇಷ ಅರ್ಥವಿದೆ. ಹೀಗೆಂದರೆ ಎಲ್ಲವನ್ನೂ ವ್ಯಾಪಿಸಿಕೊಂಡಿರುವವನು ಮತ್ತು ಎಲ್ಲ ವಸ್ತುವಿನಲ್ಲೂ ಅಂತರ್ಗತನಾಗಿರುವವನು ಎಂದರ್ಥ. ಶ್ರೀಮನ್ನಾರಾಯಣನು ಮುಕ್ಕೋಟಿ ದೇವತೆಗಳಿಗೆ ದರ್ಶನ ಕೊಡುವ ದಿನವೂ ಆಗಿರುವುದರಿಂದ ಇದನ್ನು ‘ಮುಕ್ಕೋಟಿ ಏಕಾದಶಿ’ ಎಂದೂ ಕರೆಯುತ್ತಾರೆ. ಈ ನಾರಾಯಣನ ಜಪವನ್ನು ನಿರಂತರ ಮಾಡುತ್ತಿದ್ದರೆ ಅಂತ್ಯದಲ್ಲಿ ವೈಕುಂಠ ಸೇರಬಹುದು ಎಂದು ವಿಷ್ಣು ಪುರಾಣದಲ್ಲಿದೆ. ವಿಷ್ಣುವಿಗೆ 4 ಕೈಗಳಿವೆ. ಈ ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮ ಇರುವುವು. ಶಂಖವು ಪಂಚಭೂತಗಳನ್ನು, ಚಕ್ರವು ಸಮಸ್ತ ಚಿತ್ತ ಗಳನ್ನೂ, ಗದೆಯು ಬುದ್ಧಿಯನ್ನೂ ಸೂಚಿಸಿದರೆ, ಪದ್ಮವು ಸೃಷ್ಟಿಸಲ್ಪಡುವ ಪ್ರಪಂಚದ ಸಂಕೇತ. ವಿಷ್ಣುವು ಸೃಷ್ಟಿಕರ್ತನೂ ಆಗಿರುವನು. ಧರ್ಮವು ಇಳಿಮುಖವಾಗಿ ಅಧರ್ಮವು ತಾಂಡವವಾಡುತ್ತಿರುವಾಗ ಧರ್ಮವನ್ನು ಉದ್ಧರಿಸಲು ವಿಷ್ಣುವು ದೇಹಧಾರಿಯಾಗಿ ಅವತರಿಸುತ್ತಾನೆ. ಈತನದು 10 ಅವತಾರಗಳು. ಮತ್ಸ್ಯ ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಶ್ರೀರಾಮ, ಶ್ರೀಕೃಷ್ಣ, ಬುದ್ಧ ಮತ್ತು ಕಲ್ಕಿ. ಭಗವದ್ಗೀತೆಯನ್ನು ಬೋಧಿಸಿದ ಮಹಾನ್ ದಿವಸವೂ ವೈಕುಂಠ ಏಕಾದಶಿ. ಏಕಾದಶಿ ಎಂದರೆ ಹನ್ನೊಂದು ಎಂದರ್ಥ. 5 ಕಮೇಂದ್ರಿಯ, 5 ಜ್ಞಾನೇಂದ್ರಿಯ ಮತ್ತು ಮನಸ್ಸಿನಿಂದ ಅಂದರೆ, ಧರ್ಮ, ಕರ್ಮ, ಜ್ಞಾನಸಾಧನ ಕರಣಗಳಿಂದ ಭಗವತ್​ಚಿಂತನೆಯಲ್ಲಿ ತೊಡಗಿಕೊಳ್ಳುವ ಕ್ರಿಯೆಯೇ ‘ಏಕಾದಶಿ’. ಏಕಾದಶಿ ಎನ್ನುವ ದೇವಿ ವಿಷ್ಣುವಿನಿಂದ ಉದ್ಭವಳಾಗಿ, ‘ಮುರ’ ಎನ್ನುವ ರಾಕ್ಷಸನನ್ನು ಸಂಹರಿಸಲು ವಿಷ್ಣುವಿಗೆ ಸಹಾಯಮಾಡುತ್ತಾಳೆ. ಇದರಿಂದ ಸಂಪ್ರೀತನಾದ ವಿಷ್ಣು ಏನಾದರೂ ವರ ಕೇಳು ಎಂದಾಗ, ‘ವೈಕುಂಠ ಏಕಾದಶಿ ದಿನ ಯಾರು ನಿನ್ನನ್ನು ಪೂಜಿಸುತ್ತಾರೋ ಹಾಗೂ ಉಪವಾಸ ವ್ರತ ಮಾಡುತ್ತಾರೋ ಅವರುಗಳ ಪಾಪ ಪರಿಹರಿಸಿ ಮೋಕ್ಷವನ್ನು ಕರುಣಿಸು’ ಎಂದು ಏಕಾದಶಿ ದೇವಿ ವರವನ್ನು ಕೇಳುತ್ತಾಳೆ. ಇದಕ್ಕೆ ವಿಷ್ಣುವು ‘ಅದರಂತೆ ಆಗಲಿ’ ಎಂದು ವರವನ್ನು ನೀಡುತ್ತಾನೆ. ಉಪವಾಸದ ಸಮಯದಲ್ಲಿ ಕೆಟ್ಟ ಯೋಚನೆ, ಕೆಟ್ಟ ಕೆಲಸ ಮಾಡಬಾರದು ಹಾಗೂ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಟ್ಟಿರಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts