More

    ತ್ಯಾಗವೀರ ಶಿರಸಂಗಿ ಲಿಂಗರಾಜರು; ನಾಳೆ ಜಯಂತಿ

    ತ್ಯಾಗವೀರ ಶಿರಸಂಗಿ ಲಿಂಗರಾಜರು; ನಾಳೆ ಜಯಂತಿ|ಶ್ರೀ ಜಗದ್ಗುರು ತೋಂಟದ ಡಾ.ಸಿದ್ಧರಾಮ ಮಹಾಸ್ವಾಮಿಗಳು

    ತೋಂಟದಾರ್ಯ ಮಠ, ಯಡೆಯೂರು, ಗದಗ

    ಕರ್ನಾಟಕವನ್ನು ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಬೆಳಗಿದ ಪುಣ್ಯಪುರುಷರಲ್ಲಿ ಶಿರಸಂಗಿ ಲಿಂಗರಾಜರು ಅಗ್ರಗಣ್ಯರು. ಶಿರಸಂಗಿ-ನವಲಗುಂದ ಸಂಸ್ಥಾನದ ಅಧಿಪತಿಯಾಗಿದ್ದ ಅವರು ಜನಕಲ್ಯಾಣದ ಕಾರ್ಯಗಳನ್ನು ಕೈಗೊಂಡು ಜನಾನುರಾಗಿಯಾಗಿದ್ದರು. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಅವರು ವಸಂತದ ಗಾಳಿಯಂತೆ ಸುಳಿದು ಅಜ್ಞಾನ-ದಾರಿದ್ರ್ಯದಲ್ಲಿ ಮೈಮರೆತು ಮಲಗಿದ್ದ ಸಮಾಜವನ್ನು ಎಚ್ಚರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಅರಟಾಲ ರುದ್ರಗೌಡರು, ಗಿಲಗಂಚಿ ಗುರುಸಿದ್ಧಪ್ಪ, ವಾರದ ಮಲ್ಲಪ್ಪ ಹಾಗೂ ಹಳಕಟ್ಟಿ ಗುರುಬಸಪ್ಪ ಮುಂತಾದ ಗಣ್ಯವ್ಯಕ್ತಿಗಳ ಹೆಗಲಿಗೆ ಹೆಗಲು ಕೊಟ್ಟು ಸಮಾಜವನ್ನು ಮುನ್ನಡೆಸಿದ ಕೀರ್ತಿಶಾಲಿಗಳು ತ್ಯಾಗವೀರ ಶಿರಸಂಗಿ ಲಿಂಗರಾಜರು.

    ಇಂದಿನ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಮಡ್ಲಿ ಗೂಳಪ್ಪ ಹಾಗೂ ಯಲ್ಲಮ್ಮ ದಂಪತಿ ಸುಪುತ್ರನಾಗಿ 1861ರ ಜನವರಿ 10ರಂದು ಜನಿಸಿದ ಲಿಂಗರಾಜರು ಶಿರಸಂಗಿ ಮತ್ತು ನವಲಗುಂದ ಸಂಸ್ಥಾನದ ದತ್ತುಪುತ್ರನಾದುದು ಯೋಗಾಯೋಗ. ಆಗ ಅವರಿಗೆ 11ರ ಹರೆಯ. ಕೊಲ್ಲಾಪುರದಲ್ಲಿದ್ದು ಪ್ರಾಥಮಿಕ ಇಂಗ್ಲಿಷ್ ಶಿಕ್ಷಣವನ್ನು ಪೂರ್ಣಗೊಳಿಸುವ ಪೂರ್ವದಲ್ಲಿಯೇ ದತ್ತುತಾಯಿ ಗಂಗಾಬಾಯಿ ಲಿಂಗೈಕ್ಯರಾದುದು ಲಿಂಗರಾಜರಿಗೆ ಬರಸಿಡಿಲೆರಗಿದಂತಾಯಿತು. ಆಗ ಶಿಕ್ಷಣ ಪೂರ್ಣಗೊಳಿಸುವುದೊತ್ತಟ್ಟಿಗಿರಲಿ ಇನ್ನೋರ್ವ ದತ್ತಕ ತಾಯಿ ಉಮಾಬಾಯಿ ಅವರಿಂದ ಅನೇಕ ತೊಂದರೆಗಳನ್ನು ಎದುರಿಸಬೇಕಾಗಿ ಬಂದಿತು. ಕೋರ್ಟ್, ಕಚೇರಿಗಳಿಗೆ ಸುತ್ತಿ ಬಸವಳಿದರು. ಲಿಂಗರಾಜರೇ ಶಿರಸಂಗಿ-ನವಲಗುಂದ ಸಂಸ್ಥಾನದ ನಿಜವಾರಸುದಾರರೆಂದು ಮುಂಬೈ ನ್ಯಾಯಾಲಯ 1881ರಲ್ಲಿ ತೀರ್ಪು ನೀಡಿದಾಗ ಅವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

    ಕೆರೆ, ಕಾಲುವೆಗಳ ನಿರ್ಮಾಣ: ಕೋರ್ಟ್-ಕಚೇರಿಗಳ ಗೊಂದಲದಲ್ಲಿ ಆರ್ಥಿಕವಾಗಿ ದಯನೀಯ ಸ್ಥಿತಿಗೆ ತಲುಪಿದ್ದ ಶಿರಸಂಗಿ ಸಂಸ್ಥಾನದ ಆದಾಯವನ್ನು ಹೆಚ್ಚಿಸುವಲ್ಲಿ ಲಿಂಗರಾಜರು ಬಹುವಾಗಿ ಶ್ರಮಿಸಿದರು. ಆ ಕಾಲದಲ್ಲಿ ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸುವ ಮೂಲಕ ಅವರು ಕೃಷಿ ಆದಾಯವನ್ನು ಹೆಚ್ಚಿಸಿದ್ದಲ್ಲದೆ ಇತರ ರೈತರಿಗೆ ಮಾದರಿಯಾದರು. ಹಾಗೆಯೇ ಇದೇ ರೀತಿಯ ಕೃಷಿ ಪದ್ಧತಿ ಅಳವಡಿಸಿಕೊಳ್ಳುವಲ್ಲಿ ಅವರು ರೈತರಿಗೆ ನೆರವಾದರು. 1896ರಲ್ಲಿ ಮಳೆಯಾಗದೆ ಜನ ಕಂಗಾಲಾಗಿರುವುದನ್ನು ಗಮನಿಸಿದ ಅವರು ಮುಂದೆಯೂ ಜನರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ಅಲ್ಲಲ್ಲಿ ಕೆರೆ, ಕಾಲುವೆಗಳನ್ನು ನಿರ್ವಿುಸಿ ಜನರಿಗೆಲ್ಲ ಅನುಕೂಲ ಕಲ್ಪಿಸಿದರು. ನವಲಗುಂದ ಭಾಗದಲ್ಲಿ ಅವರು ಕಟ್ಟಿದ ಕೆರೆ, ಕಾಲುವೆಗಳು ಇಂದಿಗೂ ಜನರ ಜೀವನಾಡಿಯಾಗಿವೆ.

    ಲಿಂಗರಾಜರ ಕೌಟುಂಬಿಕ ಜೀವನ ಸುಖಮಯವಾಗಿರಲಿಲ್ಲ. ಆದರೂ ಅದಕ್ಕಾಗಿ ಅವರೆಂದೂ ಚಿಂತಿಸಲಿಲ್ಲ. ಲಿಂ. ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಮಾರ್ಗದರ್ಶನ ಹಾಗೂ ಅರಟಾಳ ರುದ್ರಗೌಡರ ಸಹಕಾರದಿಂದ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಅವರ ಜನಪರ ಕಾಳಜಿ, ಸತ್ಯ, ನ್ಯಾಯ ಮತ್ತು ಪ್ರಾಮಾಣಿಕತೆಗಳು ಬ್ರಿಟಿಷ್ ಆಳರಸರ ಗಮನ ಸೆಳೆದವು. ಸರ್ಕಾರ ಅವರಿಗೆ ವಿಶೇಷ ಗೌರವ ನೀಡಿ ಸನ್ಮಾನಿಸಿತು. 1904ರಲ್ಲಿ ಎಡ್ವರ್ಡ್ ಚಕ್ರವರ್ತಿಯ ಸಿಂಹಾಸನಾರೋಹಣದ ನಿಮಿತ್ತ ಜರುಗಿದ ಸಮಾರಂಭಕ್ಕೆ ಸರ್ಕಾರದ ಪ್ರತಿನಿಧಿಯಾಗಿ ಲಿಂಗರಾಜರು ದೆಹಲಿಗೆ ಹೋಗಿ ಬಂದರು. ಹಾಗೆಯೇ ಸರ್ಕಾರದ ಹಲವು ಕಾರ್ಯಕ್ರಮಗಳಲ್ಲಿ ಸದಸ್ಯರಾಗಿ, ಅತಿಥಿಗಳಾಗಿ ಭಾಗವಹಿಸಿದ ಗೌರವಕ್ಕೆ ಅವರು ಪಾತ್ರರಾದರು.

    ಲಿಂಗಾಯತ ಸಮಾಜದ ಸಾಮಾಜಿಕ, ಧಾರ್ವಿುಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಆ ಕಾಲದ ಹಿರಿಯರ ನೆರವಿನಿಂದ 1904ರಲ್ಲಿ ಲಿಂ. ಹಾನಗಲ್ಲ ಕುಮಾರ ಮಹಾಸ್ವಾಮಿಗಳು ಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭೆಯ ಪ್ರಥಮ ಅಧಿವೇಶನದ ಅಧ್ಯಕ್ಷರಾಗಿ ಲಿಂಗರಾಜರು ಮಾಡಿದ ಭಾಷಣ ಇಡೀ ಸಮಾಜದ ಅಭಿವೃದ್ಧಿಯ ದಿಕ್ಸೂಚಿಯಾಗಿತ್ತು. ಬೆಂಗಳೂರಿನಲ್ಲಿ ಜರುಗಿದ ದ್ವಿತೀಯ ಅಧಿವೇಶನಕ್ಕೂ ಅವರೇ ಅಧ್ಯಕ್ಷರಾದರು. ಅವರು ತಮ್ಮ ಅಧ್ಯಕ್ಷೀಯ ಭಾಷಣಗಳಲ್ಲಿ ಶಿಕ್ಷಣ, ಕೃಷಿ, ಉದ್ಯೋಗ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಿದರು. ಹಾಗೆಯೇ ಬಾಲ್ಯವಿವಾಹ, ವರದಕ್ಷಿಣೆಯಂಥ ಸಾಮಾಜಿಕ ಅನಿಷ್ಟಗಳನ್ನು ನಿವಾರಿಸಲು ಕರೆ ನೀಡಿದರು. ಅದರ ಪರಿಣಾಮವಾಗಿ ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತು. ಅಲ್ಲಲ್ಲಿ ಶಾಲೆ-ಕಾಲೇಜುಗಳು, ಮಠ-ಮಂದಿರಗಳಲ್ಲಿ ಪ್ರಸಾದ ನಿಲಯಗಳು ಪ್ರಾರಂಭಗೊಳ್ಳುವುದಕ್ಕೆ ಅವರ ಮಾತುಗಳು ಪ್ರೇರಕಶಕ್ತಿಯಾದವು.

    1906ರಲ್ಲಿ ಲಿಂಗರಾಜರ ಆರೋಗ್ಯದಲ್ಲಿ ಏರುಪೇರಾಗುತ್ತಿರುವುದನ್ನು ಗಮನಿಸಿದ ಅವರ ಅಭಿಮಾನಿಗಳು ದತ್ತಕ ಪುತ್ರನನ್ನು ತೆಗೆದುಕೊಂಡು ಸಂಸ್ಥಾನ ಮುಂದುವರಿಸಬೇಕೆಂದು ಸಲಹೆ ನೀಡಿದರು. ಆದರೆ ಅದಾಗಲೇ ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಹಾಗೂ ಅರಟಾಳ ರುದ್ರಗೌಡರ ಮಾರ್ಗದರ್ಶನ ಪಡೆದ ಅವರು ಗುಪ್ತವಾಗಿ ಮೃತ್ಯುಪತ್ರವನ್ನು ಬರೆದು ಬೆಳಗಾವಿ ಜಿಲ್ಲಾಧಿಕಾರಿಗೆ ಸಲ್ಲಿಸಿ 1906ರ ಆಗಸ್ಟ್ 23ರಂದು ಗಣೇಶ ಚೌತಿಯಂದು ಲಿಂಗೈಕ್ಯರಾದರು.

    ಬಡಮಕ್ಕಳ ಬಗ್ಗೆ ಕಾಳಜಿ: ನವಲಗುಂದದಲ್ಲಿ ಅವರ ಸಮಾಧಿ ಕಾರ್ಯವನ್ನು ಪೂರೈಸಿದ 2 ದಿನಗಳ ನಂತರ ಜಿಲ್ಲಾಧಿಕಾರಿಗಳು ಮೃತ್ಯುಪತ್ರವನ್ನು ಹೊರತೆಗೆದು ಓದಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಲಿಂಗರಾಜರು ತಮ್ಮ ಸಂಸ್ಥಾನದ ಸಮಸ್ತ ಸ್ಥಾವರ ಮತ್ತು ಜಂಗಮ ಆಸ್ತಿಯನ್ನು ಸಮಾಜದ ಬಡಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಬಳಸಬೇಕೆಂದೂ, ಬೆಳಗಾವಿ ಜಿಲ್ಲಾಧಿಕಾರಿ(ಕಲೆಕ್ಟರ್)ಯ ಅಧ್ಯಕ್ಷತೆಯಲ್ಲಿ ಟ್ರಸ್ಟ್ ಮಾಡಿ ಸಮಸ್ತ ಆಸ್ತಿಯನ್ನು ಅದರ ಅಧೀನಕ್ಕೆ ಒಳಪಡಿಸಬೇಕೆಂದೂ ಮೃತ್ಯುಪತ್ರದಲ್ಲಿ ಬರೆದಿದ್ದರು.

    ಈ ಮೃತ್ಯುಪತ್ರವನ್ನು ಪ್ರಶ್ನಿಸಿ, ಲಿಂಗರಾಜರ ಧರ್ಮಪತ್ನಿ ಸುಂದರಾಬಾಯಿ ಹಾನಗಲ್ಲ ಕುಮಾರಸ್ವಾಮಿಗಳನ್ನು, ಅರಟಾಳ ರುದ್ರಗೌಡರನ್ನು ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳನ್ನು ಎದುರು ಪಕ್ಷಗಾರರನ್ನಾಗಿಸಿ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದರು. 13 ವರ್ಷಗಳವರೆಗೆ ನಡೆದ ಈ ವ್ಯಾಜ್ಯವು 1919ರಲ್ಲಿ ಕೊನೆಗೊಂಡು, ಲಿಂಗರಾಜರು ಬರೆದ ಮೃತ್ಯುಪತ್ರ ನ್ಯಾಯಸಮ್ಮತವಾಗಿದೆ ಎಂಬ ನಿರ್ಣಯ ಹೊರಬಂತು. ಅಂದಿನಿಂದ ಇಂದಿನವರೆಗೆ ಸಹಸ್ರ ಸಹಸ್ರ ಸಂಖ್ಯೆಯ ಬಡಮಕ್ಕಳು ಶಿರಸಂಗಿ ಟ್ರಸ್ಟ್ ನೆರವಿನಿಂದ ಉನ್ನತ ಶಿಕ್ಷಣ ಪಡೆದಿದ್ದಾರೆ; ಪಡೆಯುತ್ತಿದ್ದಾರೆ. ಡಾ.ಡಿ.ಸಿ.ಪಾವಟೆ, ಪ್ರೊ.ಶಿ.ಶಿ.ಬಸವನಾಳ, ಪ್ರೊ.ಎಂ.ಆರ್.ಸಾಖರೆ, ಡಾ.ಎಸ್.ಸಿ.ನಂದಿಮಠ, ಡಾ.ಎಂ.ಸಿ.ಮೋದಿ ಅವರಂಥ ಗಣ್ಯಾತಿತಗಣ್ಯರು ಉನ್ನತ ಶಿಕ್ಷಣ ಪಡೆಯುವಲ್ಲಿ ಶಿರಸಂಗಿ ಟ್ರಸ್ಟ್​ನ ಪಾತ್ರ ಗಮನಾರ್ಹ.

    ಇತ್ತೀಚೆಗೆ ಶತಮಾನೋತ್ಸವವನ್ನು ಆಚರಿಸಿಕೊಂಡ ಬೆಳಗಾವಿಯ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯಾದಿಯಾಗಿ ಅನೇಕ ಶಿಕ್ಷಣ ಸಂಸ್ಥೆಗಳು ತ್ಯಾಗವೀರ ಲಿಂಗರಾಜರ ಹಾಗೂ ಯುಗಪುರುಷ ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ಸಹಾಯ-ಸಹಕಾರ, ಪ್ರೇರಣೆ-ಪ್ರೋತ್ಸಾಹಗಳಿಂದ ಸ್ಥಾಪನೆಯಾಗಿರುವಲ್ಲಿ ಎರಡು ಮಾತಿಲ್ಲ. ಅವರು ಸಮಾಜದಲ್ಲಿ ಚಳವಳಿಯೋಪಾದಿಯಲ್ಲಿ ನಡೆಸಿದ ವಿದ್ಯಾಭಿವೃದ್ಧಿಯ ಚಿಂತನ-ಮಂಥನಗಳ ಪರಿಣಾಮವೇ ಅವುಗಳ ಸ್ಥಾಪನೆಗೆ ಬಲ ನೀಡಿತು. ಹೀಗೆ ಸಮಾಜಕ್ಕಾಗಿ, ವಿದ್ಯೆಯ ಅಭಿವೃದ್ಧಿಗಾಗಿ ಸರ್ವಸ್ವವನ್ನು ತ್ಯಾಗಮಾಡಿದ ಶಿರಸಂಗಿಯ ಲಿಂಗರಾಜರು ಸದಾ ಸ್ಮರಣಿಯರಾಗಿದ್ದಾರೆ. ‘ನಿಮ್ಮ ನೆನಹಾದಾಗಲೇ ಉದಯ, ಮರೆದಾಗಲೇ ಅಸ್ತಮಾನ’ ಎನ್ನುವಂತೆ ಇಂಥ ಪುಣ್ಯಪುರುಷರನ್ನು ಸದಾ ಸ್ಮರಿಸುವುದೇ ಸಮಾಜದ ಭಾಗ್ಯೋದಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts