More

    ಮನುಕುಲಕ್ಕೆ ಹೊಸಭಾಷ್ಯ ಬರೆದ ಸತ್ಯಾತ್ಮತೀರ್ಥರು; ಇಂದು ಜನ್ಮ ಸುವರ್ಣೋತ್ಸವ

    ಧರ್ಮಕ್ಕೂ ಗ್ರಹಣ ಕವಿಯುತ್ತಿರುವ ಇಂದಿನ ದಿನಗಳಲ್ಲಿ ಧರ್ಮದ ಹೊಸಯುಗವನ್ನು ನಿರ್ವಿುಸುತ್ತಿರುವವರು ಶ್ರೀ ಸತ್ಯಾತ್ಮತೀರ್ಥರು. ಸನಾತನ ವೈದಿಕ ಸಿದ್ಧಾಂತದ ಪರಂಪರೆ ಯನ್ನು ಗಂಗೆಯಂತೆ ಹರಿಸುತ್ತಿರುವ ಭಗೀರಥರು. ಇಂದು ಇಂತಹ ಜ್ಞಾನಸೂರ್ಯರ ಜನ್ಮ ಸುವರ್ಣೋತ್ಸವ.

    | ಮೇಧ ಪ್ರಹ್ಲಾದಾಚಾರ್ಯ ಜೋಶಿ

    ಎರಡು ದಶಕಗಳ ಹಿಂದೆ ಬೆಂಗಳೂರಿನ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ರಾಷ್ಟ್ರೀಯ ಸಂಸ್ಕೃತ ಶಾಸ್ತ್ರೀಯ ಸಮ್ಮೇಳನ ನಡೆಯಿತು. ಉತ್ತರ ಹಾಗೂ ದಕ್ಷಿಣ ಭಾರತದ ಎಲ್ಲ ಮತೀಯ ವಿದ್ವಾಂಸರು ಅಲ್ಲಿ ತಮ್ಮ ವಿಷಯಗಳ ಮಂಡನೆ ಮಾಡಿದರು. ನಂತರ 22 ವರುಷದ ತರುಣ ವಿದ್ವಾಂಸರೊಬ್ಬರು ಎದ್ದು ನಿಂತು ವೇದಿಕೆಯತ್ತ ನಡೆದರು. ಬಂಗಾರದ ಬಣ್ಣ. ಬಿಳಿಯ ಧೋತರ ಉಟ್ಟು ಹೊತ್ತದ್ದು. ಅಗ್ನಿಯ ಪ್ರಖರತೆಯಂತೆ ಮುಖದ ತೇಜಸ್ಸು, ಗಂಭೀರ ನಿಲುವು, ಮಂದಸ್ಮಿತರಾಗಿ ವೇದಿಕೆ ಮೇಲೆ ಬಂದು ತಮ್ಮ ವಿಷಯ ಪ್ರಸ್ತಾಪ ಮಾಡಿದರು. ಉಚ್ಛ ಧ್ವನಿಯಲ್ಲಿ ಸಂಸ್ಕೃತದಲ್ಲಿ ವಿಷಯಮಂಡನೆ. ಸ್ಪಷ್ಟಮಾತುಗಳು. ಪ್ರೌಢಭಾಷೆ. ಗಂಭೀರವಾಕ್ಯಗಳು. ಪ್ರಮಾಣ-ಪ್ರಮೇಯಗಳಿಂದ ಕೂಡಿದ ಸಿದ್ಧಾಂತ ಮಂಡನೆ ಕೇಳುಗರಿಗೆ ಮಿಂಚಿನ ಗೊಂಚಲಿನಂತೆ ಕಂಡವು. ಆ ಶಬ್ದಗಳ ಸುರಿಮಳೆಗೆ ನೆರೆದ ವಿದ್ವಾಂಸರೆಲ್ಲ ಬೆರಗಾದರು. ಆ ತರುಣ ವಿದ್ವಾಂಸರು ಮಂಡಿಸುವ ಕ್ರಮ, ಮಾತಿನ ಧಾಟಿ, ಸೌಜನ್ಯ ಶೈಲಿ, ಯುಕ್ತಿಬದ್ಧತೆಯಿಂದ ಕೂಡಿದ ವಿನೂತನ ಮಾತುಗಳು, ಶ್ರೀ ಮಧ್ವರ ಸಿದ್ಧಾಂತದ ಹಿರಿಮೆ ಗರಿಮೆಗಳನ್ನು ತಿಳಿಸಿದ ಆ ಗಂಭೀರ ಭಾಷೆಯನ್ನು ಕಂಡು ನೆರೆದ ಸಮಸ್ತ ವಿದ್ವಾಂಸರು ಬೆರಗಾದರು. ಅವರನ್ನು ಕೊಂಡಾಡಿದರು. ಆ ಸಭೆಯನ್ನು ಮಂತ್ರಮುಗ್ಧಗೊಳಿಸಿದ ಆ ಮಹಾ ವಿದ್ವಾಂಸರೆ ಅಂದಿನ ಸರ್ವಜ್ಞಾಚಾರ್ಯರು ಇಂದಿನ ಶ್ರೀ ಸತ್ಯಾತ್ಮತೀರ್ಥರು.

    ಆ ಸಭೆಯ ಘಟನೆ ನಡೆದು ಕೆಲವು ತಿಂಗಳುಗಳಾಗಿದ್ದವು. ಆ ಸಮ್ಮೇಳನವನ್ನು ಆಯೋಜಿಸಿದ್ದ ಕೆ.ಟಿ.ಪಾಂಡುರಂಗಿಯವರಿಗೆ ಉತ್ತರ ಭಾರತದ ಮಹಾನ್ ವಿದ್ವಾಂಸರೊಬ್ಬರಿಂದ ಒಂದು ಕರೆ ಬರುತ್ತದೆ. ‘‘ಅಂದು ಅಲ್ಲಿ ಮಾತಾಡಿದ ಆ ತರುಣವಿದ್ವಾಂಸರಿಗೆ ಅವರ ವಿದ್ವತ್ತನ್ನು ಮೆಚ್ಚಿ ವಿದ್ಯಾರ್ಥಿ ವೇತನ ಕೊಡುವುದಾಗಿ ನಾವು ನಿರ್ಧರಿಸಿದ್ದೇವೆ. ಅವರಿಗೆ ಈ ವಿಷಯವನ್ನು ತಿಳಿಸಿ ಮಾತನಾಡಬೇಕು’’ ಎಂದು ಹೇಳುತ್ತಾರೆ. ಇದಕ್ಕೆ ಪಾಂಡುರಂಗಿಯವರು ‘‘ನಿಮ್ಮ ಈ ಅಭಿಮಾನಕ್ಕೆ, ವಿದ್ಯಾಪಕ್ಷಪಾತಕ್ಕೆ ನಮ್ಮ ಅನೇಕ ಧನ್ಯವಾದಗಳು. ಆದರೆ ಈಗ ಆ ತರುಣ ವಿದ್ವಾಂಸರು ಮತ್ತೊಂದು ಬೇರೆ ವೇದಿಕೆಯನ್ನು ಅಲಂಕರಿಸಿದ್ದಾರೆ’’ ಎಂದರು. ಎದುರಿಗಿನ ವ್ಯಕ್ತಿಗೆ ಅರ್ಥವಾಗಲಿಲ್ಲ, ಅದಕ್ಕೆ ಪಾಂಡುರಂಗಿಯವರು ‘‘ಅಂದಿನ ಆ ಸರ್ವಜ್ಞಾಚಾರ್ಯರು ಇಂದು ಹಂಸನಾಮಕ ಶ್ರೀಹರಿಯ ಮೂಲಪೀಠ, ಚತುಮುಖಬ್ರಹ್ಮಕುಳಿತ ಮಹಾಪೀಠ, ಶ್ರೀಮನ್ಮಧ್ವಾಚಾರ್ಯರ ಸರ್ವಜ್ಞಪೀಠವನ್ನೇರಿ ಶ್ರೀಮದುತ್ತರಾದಿಮಠಾಧೀಶರಾಗಿ ಶ್ರೀಸತ್ಯಾತ್ಮತೀರ್ಥರಾಗಿದ್ದಾರೆ. ಅವರೇ ಇಂದು ಸಹಸ್ರಾರು ವಿದ್ಯಾರ್ಥಿ-ವಿದ್ವಾಂಸರಿಗೆ ಅನ್ನವಸ್ತ್ರವಿದ್ಯೆವೇತನವನ್ನು ಕೊಡುವವರಾಗಿದ್ದಾರೆ’’ ಎಂದು ತಿಳಿಸಿದರು.

    1973ರ ಮಾ. 8 ಪರಿಧಾವಿ ಸಂವತ್ಸರದ ಫಾಲ್ಗುಣ ಶುದ್ಧ ಚತುರ್ಥಿಯಂದು ವಿದ್ಯಾಚಕ್ರವರ್ತಿಗಳೆನಿಸಿದ ಗುತ್ತಲ ರಂಗಾಚಾರ್ಯ ಹಾಗೂ ರುಕ್ಮಿಣಿಬಾಯಿ ದಂಪತಿಗಳಲ್ಲಿ ಸರ್ವಜ್ಞಾಚಾರ್ಯರ ಜನನವಾಯಿತು. 8ನೇ ವಯಸ್ಸಿಗೆ ಉಪನೀತರಾಗಿ ವಿದ್ಯಾರ್ಜನೆಗಾಗಿ ಮಾತಾಮಹರಾದ ಮಹಾಮಹೋಪಾಧ್ಯಾಯ ಮಾಹುಲಿ ಗೋಪಾಲಾಚಾರ್ಯರಲ್ಲಿಗೆ ತೆರಳಿದರು. ಅಲ್ಲಿ ಪೂಜ್ಯ ಮಹುಲಿ ವಿದ್ಯಾಸಿಂಹಾಚಾರ್ಯರಲ್ಲಿ ಸಕಲ ಶಾಸ್ತ್ರಗಳ ಅದ್ಯಯನ ಮಾಡಿ ಮಂಗಳ ಮಾಡಿದರು. ಧಾತೃನಾಮಸಂವತ್ಸರದ ವೈಶಾಖ ಶುದ್ಧ ಷಷ್ಠೀ ಬುಧವಾರ 1996ರ ಏಪ್ರಿಲ್ 24ರಂದು ಸರ್ವಜ್ಞಾಚಾರ್ಯರು ಶ್ರೀ ಸತ್ಯಪ್ರಮೋದತೀರ್ಥ ಕರಕಮಲಸಂಜಾತರಾಗಿ ಕೌಪೀನ ತೊಟ್ಟು ಕಾವಿಯನ್ನುಟ್ಟು ದಂಡಧಾರಿಗಳಾಗಿ ಶ್ರೀ ಸತ್ಯಾತ್ಮತೀರ್ಥರಾಗಿ ಶ್ರೀಮದುತ್ತ್ತಾದಿಮಠದ ಪೀಠವನ್ನು ಅಲಂಕರಿಸಿದರು. ಆಧ್ಯಾತ್ಮಿಕ ಪ್ರಪಂಚದಲ್ಲಿ ಹೊಸ ಸನ್ಯಾಸಿ ವಾಮನರ ಆಗಮನವಾಯಿತು. ಮಧ್ವಮತವ ಬೆಳಗುವ ನವ ಭಾನೂದಯವಾಯಿತು. ಕಲಿಯುಗವನ್ನು ಕೃತಯುಗವನ್ನಾಗಿಸಲು ಅವತರಿಸಿದ ಯುಗಪುರುಷರು. ಇಂದು ಆ ಮಹಾಸಂತರ ಜನ್ಮಸುವಣೋತ್ಸವ.

    ಇದನ್ನೂ ಓದಿ: ಮುಂದಿನ ಮುಖ್ಯಮಂತ್ರಿ ಯಾರು?; ಇದೊಂದೇ ಪ್ರಶ್ನೆಗೆ ಯುವಕರ ಮಧ್ಯ ಮಾರಾಮಾರಿ, ಕೊಲೆ ಬೆದರಿಕೆ

    ಸಮಾಜಪ್ರೇಮ

    ಶ್ರೀಗಳವರ ಆಜ್ಞೆಯಂತೆ ಶ್ರೀಮಠದಿಂದ ಅನೇಕ ಊರುಗಳ ಶಾಖೆಗಳಲ್ಲಿ ನಿತ್ಯ ನಿರಂತರ ಅನ್ನದಾನ ನಡೆಯುತ್ತಿದೆ. ಬರಗಾಲ ಪ್ರದೇಶಗಳಲ್ಲಿ ಶ್ರೀಮಠದಿಂದ ಸಹಾಯಹಸ್ತ ಸದಾ ಸಿದ್ಧ. ಜಯಸತ್ಯಪ್ರಮೋದನಿಧಿ ಶಾಖೆಯಿಂದ ಶ್ರೀಗಳವರ ಪ್ರೇರಣೆಯಿಂದ ಇಂದಿಗೆ ಸಾವಿರಾರು ಸ್ವಯಂ ಸೇವಕರು ರೂಪುಗೊಂಡಿದ್ದಾರೆ. ಕರೊನಾ ಸಮಯದಲ್ಲಿ ನಿತ್ಯ 2 ಸಾವಿರಕ್ಕೂ ಹೆಚ್ಚು ಬಡಜನರಿಗೆ ಶ್ರೀಮಠದಿಂದ ಭೋಜನ ಕಳುಹಿಸುತ್ತಿದ್ದರು. ಜೆಎಸ್​ಪಿಎನ್​ನಿಂದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಬಡವರಿಗೆ ಚಿಕಿತ್ಸೆ ಮೊದಲಾದವುಗಳ ಎಲ್ಲ ವೆಚ್ಚವನ್ನು ಕಲ್ಪಿಸಲಾಗುತ್ತಿದೆ. ಶ್ರೀಗಳವರ ಉಪದೇಶದಿಂದ ಅನೇಕ ಯುವಕ ಯುವತಿಯರು ದುಶ್ಚಟಗಳಿಂದ ದೂರವಾಗಿದ್ದಾರೆ. ಧರ್ಮ ಉಳಿಯಬೇಕೆಂದು ಶ್ರೀಮಠದಿಂದ ವಧುವರ ಉಚಿತ ಸಮಾವೇಶ ಮಾಡಿಸುತ್ತಾರೆ. ಪ್ರತಿ ವರ್ಷವೂ ಎಲ್ಲ ಊರುಗಳಲ್ಲಿ ಶಿಬಿರಗಳನ್ನು ಮಾಡಿ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಮಠದಿಂದ ಒದಗಿಸುತ್ತಾರೆ. ಸತ್ಯಾತ್ಮತೀರ್ಥರು ಸಿಂಪಿನಲ್ಲಡಗಿದ ಮುತ್ತಿನಂತೆ. ಅಂತಮುಖಿಯಾಗಿಯೇ ಸಮಾಜಸೇವೆ ಮಾಡುತ್ತಾರೆ. ಪತ್ರಿಕೆಗಳ ಮೂಲಕ ಪ್ರಚಾರ ಅವರಿಗೆ ರ್ವ್ಯಜ. ಹೀಗಾಗಿಯೇ ಅವರ ಅನೇಕ ಸಮಾಜಮುಖಿಕಾರ್ಯಗಳು ಇಂದಿಗೂ ಬಹಿರಂಗವಾಗಿ ಪ್ರಸಿದ್ಧಿಗೇ ಬಂದಿಲ್ಲ. ಅವರೊಬ್ಬ ಪ್ರಸಿದ್ಧಿಪರಾಂಗ್ಮುಖಿ.

    ವಿದ್ಯಾಬೃಹಸ್ಪತಿ…

    ಸನ್ಯಾಸಾಶ್ರಮ ತೆಗೆದುಕೊಂಡ ಮರುದಿನವೇ ಶ್ರೀಮನ್ಮಧ್ವಾಚಾರ್ಯರ ಗ್ರಂಥಗಳ ಹಾಗೂ ಶ್ರೀ ಜಯತೀರ್ಥರ ಮೇರುಗ್ರಂಥ ಶ್ರೀಮನ್ನಾ್ಯಯಸುಧೆಯ ಪಾಠ ಪ್ರಾರಂಭಿಸಿದರು. ಗೀತೆಯ ಪಾಠವನ್ನು ಹೇಳಿ ಮಂಗಳ ಮಾಡಿ ಗುರುಗಳಿಗೆ ಸಮರ್ಪಣೆಗೈದರು. ಅದನ್ನು ಕಂಡ ಶ್ರೀ ಸತ್ಯಪ್ರಮೋದತೀರ್ಥರಿಗೆ ಅಂದು ಹಿಡಿಸಲಾರದಷ್ಟು ತೃಪ್ತಿ, ಆನಂದಾಶ್ರು. ಅಂದು ಗುರುಗಳು ತಪಸ್ಸು ತುಂಬಿದ ತಮ್ಮ ಕೈಗಳಿಂದ ಶ್ರೀ ಸತ್ಯಾತ್ಮತೀರ್ಥರನ್ನು ಆಶೀರ್ವದಿಸಿದರು. ಇಂದಿಗೂ ಒಂದು ದಿನವೂ ಸುಧಾಗ್ರಂಥದ ಪಾಠವನ್ನು ಬಿಡದವರು. ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಅನೇಕ ಗ್ರಂಥಗಳು ಇವರ ಜ್ಞಾನಗರ್ಭದಿಂದ ಹೊರಬರುವುದಕ್ಕೆ ಸಿದ್ಧವಾಗಿವೆ. ದೇಶದ ಮೂಲೆ ಮೂಲೆಯಲ್ಲಿರುವ ಎಲ್ಲ ವಿದ್ವಾಂಸರು ಇವರ ಪಾಂಡಿತ್ಯಕ್ಕೆ ತಲೆದೂಗಿದ್ದಾರೆ. ಶ್ರೀಗಳವರಲ್ಲಿಯೇ ಓದಿದ ಸಾವಿರಾರು ವಿದ್ವಾಂಸರ ಪಡೆಯೇ ನಿರ್ವಣವಾಗಿದೆ. ದಕ್ಷಿಣ ಮತ್ತು ಉತ್ತರಭಾರತದ ಅನೇಕವಿದ್ಯಾಕ್ಷೇತ್ರಗಳಲ್ಲಿ ತಮ್ಮ ವಾಕ್ಯಾರ್ಥ, ಪ್ರಖರವಾದ ಪಾಂಡಿತ್ಯದಿಂದ ಧರ್ಮದಿಗ್ವಿಜಯ ಮಾಡುತ್ತಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಗ್ರಂಥಗಳ ಸಂರಕ್ಷಣೆ, ಪ್ರಕಾಶನ ಶ್ರೀಮಠದಲ್ಲಿ ಇಂದಿಗೂ ನಿಲ್ಲದ ಕಾರ್ಯ. ಪ್ರಸ್ತುತ ಸಮಯದಲ್ಲಿ ಎಲ್ಲಿಯೇ ಶಾಸ್ತ್ರವಾಕ್ಯಾರ್ಥವಿರಲಿ, ಸುಧಾಮಂಗಳಗಳಿರಲಿ, ಅಲ್ಲಿ ಇವರ ಉಪಸ್ಥಿತಿ ಅನಿವಾರ್ಯ. ಇದು ಅವರ ವಿದ್ವತ್ತು. ಮುಖದಲ್ಲಿ ಮಂದಹಾಸ. ಸ್ನೇಹಪರ ಸ್ವಭಾವ, ಸಂಘಟನೆಯ ಮನೋಭಾವ, ಧರ್ಮದ ಉಳಿವಿಗಾಗಿ ಮಿಡಿಯುವ ಹೃದಯ, ಇದೆಲ್ಲದಕ್ಕೂ ಶಿಖರಪ್ರಾಯವಾದ ಮೇರುವಿನಂತಹ ವಿದ್ವತ್ತು ಇವೆಲ್ಲವೂ ಇಂದು ಅವರ ಸಮಕಾಲೀನ ಮಾಧ್ವ ಪೀಠಾಧಿಪತಿಗಳ ಹೃದಯ ಗೆದ್ದಿದೆ. ಅವರ ಅಭಿಮಾನ ಗೌರವಕ್ಕೆ ಸದಾ ಪಾತ್ರರಾಗಿದ್ದಾರೆ.

    ಇದನ್ನೂ ಓದಿ: ಭಾರತದಲ್ಲೂ ಶೀಘ್ರದಲ್ಲೇ ಭಾರಿ ಭೂಕಂಪ ಸಾಧ್ಯತೆ!; ತಜ್ಞರ ಎಚ್ಚರಿಕೆ

    ವಿದ್ಯಾರ್ಥಿವಾತ್ಸಲ್ಯ

    ಸತ್ಯಪ್ರಮೋದತೀರ್ಥರ ಆಸೆಯ ಕೂಸಾದ ಜಯತೀರ್ಥ ವಿದ್ಯಾಪೀಠವನ್ನು ಉತ್ತುಂಗಕ್ಕೇರಿಸಿದ ಸವ್ಯಸಾಚಿಗಳು. ಇವರ ಪ್ರೀತಿ ಅಂತಃಕರಣಕ್ಕೆ ವಿದ್ಯಾರ್ಥಿಗಳು ತಮ್ಮ ಹುಟ್ಟು ಮನೆಯನ್ನೂ ಮರೆಯುತ್ತಾರೆ. ವಿದ್ಯಾರ್ಥಿಗಳ ಸಣ್ಣ ಸಣ್ಣಸಮಸ್ಯೆಗಳಿಗೂ ತಾವೇ ಸ್ಪಂದಿಸುವುದು ಅಪರೂಪದ ಕರುಣಾಮಯಿತ್ವ. ಓದು ಮುಗಿಸಿ ಮನೆಗೆ ತೆರಳುವ ಕ್ಷಣ ವಿದ್ಯಾರ್ಥಿಗಳಿಗೆ ಒಂದು ರೀತಿಯ ಬಿಸಿತುಪ್ಪದಂತೆ. ಕರಳು ಕಿತ್ತುವಂತಹ ಸಂಕಟ. ಆನಂದದಲ್ಲಿಯೂ ಏನೋ ಅಸಮಾಧಾನ. ತಂದೆ ತಾಯಿ ಬಂಧು ಗುರು ಸರ್ವಸ್ವವೂ ಆದ ಗುರು ಸತ್ಯಾತ್ಮರನ್ನು ಬಿಟ್ಟು ಮನೆಗೆ ತೆರಳಲು ವಿದ್ಯಾರ್ಥಿಗಳಿಂದ ಹೆಜ್ಜೆ ಇಡಲಾಗುವದಿಲ್ಲ. ಏನೋ ಬಾಂಧವ್ಯದ ಬೆಸುಗೆ. ಎಲ್ಲವನ್ನೂ ಬಿಟ್ಟು ಕಾವಿ ತೊಟ್ಟ ಶ್ರೀಗಳಿಗೆ ವಿದ್ಯಾರ್ಥಿಗಳೇ ಮಕ್ಕಳು, ಅವರೇ ಬಾಂಧವರು, ಅವರೇ ಸರ್ವಸ್ವ. ಇಂತಹ ಮಾತೃಹೃದಯಿಗಳು ಸತ್ಯಾತ್ಮತೀರ್ಥರು. ಇಂದು ಸತ್ಯಾತ್ಮತೀರ್ಥರು ಕೋಟ್ಯಂತರ ಶಿಷ್ಯರ ಹೃದಯದಲ್ಲಿ ವಿರಾಜಿಸುತ್ತಿದ್ದಾರೆ.

    ವಿಜ್ಞಾನಿಗಳಿಂದಷ್ಟೇ ಅಲ್ಲ, ಕಾಲಜ್ಞಾನದಲ್ಲೂ ಭೂಕಂಪದ ಎಚ್ಚರಿಕೆ; ದೇಶಕ್ಕೆ ಕಾದಿದ್ಯಾ ಭಾರಿ ಗಂಡಾಂತರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts