More

    ಬಡವರಾಗಿ ಬದುಕಬೇಡಿ, ಶ್ರೀಮಂತರಾಗಿ..: ಸೆಲೆಬ್ರಿಟಿ ಕಾರ್ನರ್​ನಲ್ಲಿ ನೆನಪಿರಲಿ ಪ್ರೇಮ್​…

    ಬಡವರಾಗಿ ಬದುಕಬೇಡಿ, ಶ್ರೀಮಂತರಾಗಿ..: ಸೆಲೆಬ್ರಿಟಿ ಕಾರ್ನರ್​ನಲ್ಲಿ ನೆನಪಿರಲಿ ಪ್ರೇಮ್​...ಶ್ರೀಮಂತಿಕೆ ಎಂದರೆ ಏನು?

    ಇದು ಎಲ್ಲರಲ್ಲೂ ಇರುವ ಸಾಮಾನ್ಯ ಪ್ರಶ್ನೆ. ಶ್ರೀಮಂತಿಕೆ ಎಂದರೆ ಬಹಳಷ್ಟು ಜನರ ಪಾಲಿಗೆ ದೊಡ್ಡ ಮನೆ, ಕಾರ್, ಒಡವೆಗಳು ಇತ್ಯಾದಿ ಇತ್ಯಾದಿ. ಇಷ್ಟು ಇದ್ದರೆ ನಾವು ಶ್ರೀಮಂತರಾಗಿ ಬಿಡುವುದಕ್ಕೆ ಸಾಧ್ಯವಾ? ಖಂಡಿತಾ ಇಲ್ಲ. ಸಿರಿವಂತಿಕೆಯನ್ನು ಬರೀ ಹಣದಲ್ಲಿ ಅಳಿಯುವುದಕ್ಕೆ ಸಾಧ್ಯವಿಲ್ಲ. ಅಷ್ಟೇ ಅಲ್ಲ, ಐಶ್ವರ್ಯ ಎಂದರೆ ಮಕ್ಕಳಿಗೆ, ಮೊಮ್ಮಕ್ಕಳಿಗೆ ಅಥವಾ ಏಳು ತಲೆಮಾರಿನವರಿಗೆ ಆಸ್ತಿ ಮಾಡಿಡುವುದಲ್ಲ. ನಿಜವಾದ ಶ್ರೀಮಂತಿಕೆ ಎಂದರೆ, ನಮ್ಮ ಬಳಿ ಇರುವುದನ್ನು ನಾಲ್ಕು ಜನರ ಜತೆಗೆ ಹಂಚಿಕೊಂಡು ಬಾಳುವುದು. ಕೊಡುವ ತಾಕತ್ತು ಇರುವ ಯಾರೇ ಆದರೂ ಶ್ರೀಮಂತರೇ.

    ಹಾಗಂತ ಅದಕ್ಕೆ ಹೇರಳವಾಗಿ ಹಣಬೇಕು ಎಂದರ್ಥವಲ್ಲ. ಹಣವಿಲ್ಲದಿದ್ದರೂ ಪರವಾಗಿಲ್ಲ, ಇನ್ನೊಬ್ಬರ ನೋವು ಅರ್ಥಮಾಡಿಕೊಂಡು, ಅವರ ಕಷ್ಟದಲ್ಲಿ ಸ್ಪಂದಿಸುವುದು, ಯಾವುದೇ ಫಲಾಪೇಕ್ಷೆ ಇಲ್ಲದೆ ಇನ್ನೊಬ್ಬರಿಗೆ ಸಹಾಯ ಮಾಡುವುದಕ್ಕೆ ನಿಲ್ಲುವವನೇ ನಿಜವಾದ ಶ್ರೀಮಂತ. ನಾವೊಂದು ಬಸ್ಸಿನಲ್ಲಿ ಹೋಗುತ್ತಿರುತ್ತೇವೆ. ಈ ಸಂದರ್ಭದಲ್ಲಿ ಯಾರೋ ಹಿರಿಯರಿಗೆ ಅಥವಾ ಗರ್ಭಿಣಿಗೆ ನಮ್ಮ ಸೀಟು ಬಿಟ್ಟು ಕೊಡುವುದು ಸಹ ಸಹಾಯವೇ. ರಸ್ತೆಯಲ್ಲಿ ಹೋಗುವಾಗ, ನಮ್ಮ ಕಣ್ಣಮುಂದೆಯೇ ಒಂದು ಅಪಘಾತವಾಗುತ್ತದೆ. ಆಗ ಗಾಡಿ ನಿಲ್ಲಿಸಿ, ಬಿದ್ದಿರುವವರಿಗೆ ನೀರು ಕುಡಿಸಿ, ಆಂಬುಲೆನ್ಸ್​ನವರಿಗೆ ಫೋನ್ ಮಾಡಿ, ಅದು ಬಂದ ಮೇಲೆ ನಾವು ನಮ್ಮ ಕೆಲಸಕ್ಕೆ ತೆರಳಬೇಕು. ಏಕೆಂದರೆ, ರಸ್ತೆ ಅಪಘಾತಗಳಲ್ಲಿ ಅನೇಕರು ರಕ್ತಸ್ರಾವದಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂಥ ಸಂದರ್ಭದಲ್ಲಿ ನಾವು ಸಹಾಯ ಮಾಡಿದರೆ, ಒಂದು ಕುಟುಂಬವನ್ನು ಉಳಿಸಿದ ಪುಣ್ಯ ಬರುತ್ತದೆ. ಅದು ನಿಜವಾದ ಶ್ರೀಮಂತಿಕೆ. ಈಗ ಉಪಚರಿಸುತ್ತಾ ಕೂತರೆ ಕೆಲಸಕ್ಕೆ ಲೇಟ್ ಆಗುತ್ತದೆ, ಬಾಸ್ ಏನೆನ್ನುತ್ತಾರೋ ಎಂದು ತೊಂದರೆಯಲ್ಲಿರುವವರನ್ನು ಕೈಬಿಟ್ಟು ಹೋಗುವುದು ಸರಿಯಲ್ಲ.

    ಮನೆ ಕಟ್ಟುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಅದಕ್ಕಾಗಿ ಸಾಲ-ಸೋಲ ಮಾಡಿ ದುಡ್ಡು ತರುತ್ತಾರೆ. ತಮ್ಮ ಬಜೆಟ್​ಗೆ ಮತ್ತು ಅಭಿರುಚಿಗೆ ತಕ್ಕಂತೆ ಮನೆ ಕಟ್ಟಿಸುತ್ತಾರೆ. ಸಾಲಮಾಡಿ ಗೃಹಪ್ರವೇಶವನ್ನೂ ಅದ್ಧೂರಿಯಾಗಿ ಮಾಡುತ್ತಾರೆ. ಬಂಧು-ಬಳಗವನ್ನು ಕರೆದು ಊಟ ಹಾಕಿಸುತ್ತಾರೆ. ಇಲ್ಲಿ ನಿಜವಾದ ಉದ್ದೇಶ, ಪೂಜೆಗಿಂತ ನಾನಿಂತಹ ಒಂದು ಮನೆಯನ್ನು ಕಟ್ಟಿಸಿದ್ದೀನಿ, ಬಂದು ನೋಡಿ ಎಂಬುದಾಗಿರುತ್ತದೆ. ಹಾಗಂತ ಸಂಭ್ರಮದಿಂದ ಗೃಹಪ್ರವೇಶ ಮಾಡುವುದು ತಪು್ಪ ಅಂತ ನಾನು ಹೇಳುವುದಿಲ್ಲ. ಆದರೆ ಅಲ್ಲಿ ವೃಥಾ ಪೋಲು ಮಾಡದೆ ಆ ಹಣವನ್ನು ಅಗತ್ಯವಿರುವವರಿಗೆ ಕೊಟ್ಟರೆ ಎಷ್ಟೋ ಅನುಕೂಲವಾಗುತ್ತದೆ ಎಂಬುದು ನನ್ನ ಮಾತಿನ ಅರ್ಥ. ನಮ್ಮಲ್ಲಿ ಎಷ್ಟೋ ಜನರಿಗೆ ಕಣ್ಣಿನ ಅಥವಾ ಹೃದಯದ ಆಪರೇಷನ್ ಆಗಿರಬೇಕಾಗಿರುತ್ತದೆ. ಅವರನ್ನು ನಿಮ್ಮ ಸಂಬಂಧಿಕರೆಂದು ಭಾವಿಸಿ ಅವರ ಆಪರೇಷನ್​ಗೆ ನೆರವಾಗಿ. ಆ ಕುಟುಂಬ ಉಳಿಯಿತು ಎಂದರೆ, ಅವರ ಆಶೀರ್ವಾದ ಸಾಕು ನಿಮ್ಮ ಮನೆ ಬೃಂದಾವನವಾಗೋಕೆ, ನಂದಗೋಕುಲವಾಗೋಕೆ. ಅದು ಬಿಟ್ಟು, ಎಲ್ಲರನ್ನೂ ಕರೆದು ಊಟ ಹಾಕಿಸಿ, ಮೂರು ತರಹ ಸ್ವೀಟು ಮಾಡಿಸಿ, ತಿನ್ನಿ ಎಂದು ಬಲವಂತ ಮಾಡಿದರೆ ಎಷ್ಟೋ ಜನರಿಗೆ ತಿನ್ನಲೂ ಆಗುವುದಿಲ್ಲ. ಕೊನೆಗೆ ಅವರು ಹೊರಗೆ ಹೋಗಿ ಒಳ್ಳೆಯ ಮಾತಾಡಿದರೆ ಓಕೆ. ಇಲ್ಲವಾದರೆ, ನೀವು ಸಾಲ ಮಾಡಿ ಮನೆಕಟ್ಟಿ, ಸಾಲ ಮಾಡಿ ಗೃಹಪ್ರವೇಶ ಮಾಡಿ, ಕೊನೆಗೂ ಬಡವರಾಗಿಯೇ ಉಳಿಯುತ್ತೀರಾ. ಹೊಟ್ಟೆ ತುಂಬಿರುವವರಿಗೆ ಊಟ ಹಾಕಿ ಬಡವರಾಗಬೇಡಿ. ಬಡವರಿಗೆ ಸಹಾಯ ಮಾಡಿ ಶ್ರೀಮಂತರಾಗಿ.

    ಯಾರಿಗೋ ಸಹಾಯ ಮಾಡಬೇಕೆಂದರೆ, ಪ್ರತಿಬಾರಿ ಹಣವನ್ನೇ ಕೊಡಬೇಕು ಅಂತಿಲ್ಲ. ಪ್ರಭಾವವನ್ನು ಬಳಸಿಕೊಂಡು ಅನುಕೂಲ ಮಾಡಿಕೊಡಬಹುದು. ಇಲ್ಲಿ ಹಣ ಕೊಡದಿದ್ದರೂ ನಿಮ್ಮ ಸಮಯ ಮತ್ತು ಒಳ್ಳೆಯತನವನ್ನು ಕೊಟ್ಟಿರುತ್ತೀರಿ. ಯಾರಾದರೂ ಸಹಾಯ ಕೇಳಿದಾಗ ಆಗುವುದಿಲ್ಲ ಎಂದು ಹೇಳುವುದು ಸುಲಭ. ಆದರೆ, ಏನಾದರೂ ಪ್ರಾಮಾಣಿಕವಾಗಿ ಮಾಡಲೇಬೇಕು ಎಂದು ಮನಸ್ಸು ಮಾಡಿದರೆ, ಏನು ಬೇಕಾದರೂ ಮಾಡಬಹುದು. ಪರಿಶುದ್ಧವಾದ ಪ್ರೀತಿಯನ್ನು ಕೊಡಬಹುದು, ಸ್ನೇಹ, ಸಹಾಯಹಸ್ತ ಚಾಚಬಹುದು. ಇದಕ್ಕೇ ಹೃದಯಶ್ರೀಮಂತಿಕೆ ಎನ್ನುವುದು. ಇದಕ್ಕೆ ಹಣ ಖರ್ಚು ಮಾಡಬೇಕಿಲ್ಲ.

    ಶ್ರೀಮಂತಿಕೆ ಎಂದರೆ ಬರೀ ಹಣವಲ್ಲ ಎಂದು ಹೇಳಿದೆ. ಹಾಗಾದರೆ, ನಿಜವಾದ ಶ್ರೀಮಂತಿಕೆ ಎಂದರೆ ಏನು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ನಿಮ್ಮ ಬಳಿ ಹೇರಳ ಹಣವಿದ್ದು, ಸಂತೋಷ, ನೆಮ್ಮದಿ, ಆರೋಗ್ಯ ಇಲ್ಲದಿದ್ದರೆ ಏನು ಪ್ರಯೋಜನ? ಹಾಗಾಗಿ, ಜೀವನದಲ್ಲಿ ಈ ವಿಷಯಗಳು ಸಹ ಬಹಳ ಮುಖ್ಯ ಮತ್ತು ಪ್ರತಿಯೊಬ್ಬರೂ ಆ ಬಗ್ಗೆ ಗಮನ ಕೊಡಲೇಬೇಕು. ಏಕೆಂದರೆ, ಹೊರಗಡೆ ಕಾಣುವುದಷ್ಟೇ ಅಲ್ಲ, ಒಳಗಡೆ ನಿಮ್ಮಲ್ಲಿ ಏನಾಗುತ್ತಿದೆ ಎಂಬುದು ಸಹ ಬಹಳ ಮುಖ್ಯವಾಗುತ್ತದೆ. ಹೊರಗೆ ಎಲ್ಲವೂ ಚೆನ್ನಾಗಿರುವಂತೆ ನಟಿಸಿ, ಒಳಗೆ ಆತಂಕ, ನೋವು, ಒತ್ತಡ ಮತ್ತು ಹಿಂಸೆ ಇದ್ದರೆ, ಅದು ಸಹ ನಿಮ್ಮ ಮಾತು ಮತ್ತು ನಗುವಿನ ಮೇಲೆ ಪರಿಣಾಮ ಬೀರುತ್ತದೆ. ಇವೆಲ್ಲವನ್ನೂ ಎಷ್ಟೇ ಹಣ ಕೊಟ್ಟರೂ ಕೊಂಡುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಒಳಗಡೆಯೂ ಖುಷಿಯಾಗಿರುವುದು ಮುಖ್ಯವಾಗುತ್ತದೆ. ನಾನು ಒಂದು ವಿಷಯ ಗಮನಿಸಿರುವಂತೆ, ಭವಿಷ್ಯದ ದಿನಗಳು ಸುಖಕರವಾಗಿರಲೆಂದು ಬಹಳಷ್ಟು ಜನ ಯೌವನದಲ್ಲಿ ಶ್ರಮ ಹಾಕುತ್ತಾರೆ. ಊಟ-ನಿದ್ದೆ ಬಿಟ್ಟು ಶ್ರಮಿಸುತ್ತಾರೆ. ಆದರೆ, ಒಂದು ಹಂತದಲ್ಲಿ ಅವರ ಬಳಿ ಎಲ್ಲವೂ ಇದೆ ಎನ್ನುವಾಗ, ಬಹಳ ಅಮೂಲ್ಯವಾಗಿರುವುದೇ ಇರುವುದಿಲ್ಲ. ಅದೇ ಆರೋಗ್ಯ. ಹಾಗಾಗಿ ಯಾವುದೇ ಕಾರಣಕ್ಕೂ ಆರೋಗ್ಯವನ್ನು ಕಡೆಗಣಿಸಬಾರದು. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯ ಸಹ ಬಹಳ ಮುಖ್ಯ.

    ಇವತ್ತಿನ ಒತ್ತಡದ ಬದುಕಿನಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟದ ವಿಷಯವೇ. ಎಲ್ಲರಿಗೂ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ, ಮಿಕ್ಕೆಲ್ಲ ವಿಷಯಗಳಿಗೆ ನೀವೆಷ್ಟು ಪ್ರಾಮುಖ್ಯತೆ ಕೊಡುತ್ತೀರೋ, ಆರೋಗ್ಯದ ಬಗ್ಗೆಯೂ ಅಷ್ಟೇ ಗಮನಕೊಡಬೇಕು. ಪ್ರತಿನಿತ್ಯ ನಿಮಗಾಗಿ ಒಂದಿಷ್ಟು ಸಮಯವನ್ನು ಕೊಡಿ. ಪ್ರತಿದಿನ ನಿಮ್ಮ ಜತೆಗೆ ಸ್ವಲ್ಪ ಹೊತ್ತಾದರೂ ಮಾತನಾಡಿ. ನೀವು ಹೇಗಿದ್ದೀರಿ? ಏನು ಮಾಡುತ್ತಿದ್ದೀರಿ? ಏನು ಮಾಡಬೇಕು? ಮುಂತಾದ ವಿಷಯಗಳ ಬಗ್ಗೆ ಸ್ವಲ್ಪ ಗಮನಹರಿಸಿ. ಏಕೆಂದರೆ, ಶ್ರೀಮಂತಿಕೆ ಎನ್ನುವುದು ನೀವೆಷ್ಟು ಸಂಪಾದಿಸಿದಿರಿ, ಎಷ್ಟು ಬಿಟ್ಟುಹೋದಿರಿ ಎಂಬುದರ ಬದಲು ನೀವು ಹೇಗಿದ್ದೀರಿ? ಏನು ಮಾಡಿದಿರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ, ಬಡವರಾಗಬೇಡಿ, ‘ಆ’ ಶ್ರೀಮಂತರಾಗಿ…

    (ಲೇಖಕರು ಖ್ಯಾತ ನಟ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts