ಮೈಸೂರು: ಎಲ್ಲಿಯವರೆಗೆ ಚಿಂತನೆಗಳು ಅಸ್ತಿತ್ವದಲ್ಲಿರುತ್ತವೋ ಅಲ್ಲಿಯವರೆಗೆ ಪುಸ್ತಕಗಳಿಗೆ ಅಳಿವಿಲ್ಲ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅಭಿಪ್ರಾಯಪಟ್ಟರು.
ಅಖಿಲ ಕರ್ನಾಟಕ ಲೇಖಕರ ಮತ್ತು ಪ್ರಕಾಶಕರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಂವಹನ ಪ್ರಕಾಶನದಿಂದ ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಪುಸ್ತಕ ದಿನಾಚರಣೆ ಉದ್ಘಾಟಿಸಿದ ಬಳಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗಿದೆ. ಹಾಗಾಗಿ ಪುಸ್ತಕಗಳು ಉಳಿಯುವುದಿಲ್ಲ ಎನ್ನುವ ಭಾವನೆ ಬಹಳಷ್ಟು ಜನರಲ್ಲಿದೆ. ಆದರೆ ಎಲ್ಲಿಯವರೆಗೆ ಚಿಂತನೆಗಳು ಅಸ್ತಿತ್ವದಲ್ಲಿರುತ್ತವೋ ಅಲ್ಲಿಯವರೆಗೆ ಪುಸ್ತಕಗಳಿಗೆ ಅಳಿವಿಲ್ಲ. ಆದರೆ ಅವು ರೂಪಾಂತರಗೊಳ್ಳಬಹುದು ಅಷ್ಟೇ. ಈಗ ಪುಸ್ತಕ ಮುದ್ರಣ ಉದ್ಯಮವಾಗಿದೆ. ಮಾಧ್ಯಮ ಉದ್ಯಮವಾದಾಗ ಪುಸ್ತಕ ಡಿಜಿಟಲ್ ರೂಪಾಂತರ ಇವೆಲ್ಲ ಸಹಜ ಎಂದರು.
ಮೊದಲೆಲ್ಲ ಶಿಲಾಶಾಸನ, ತಾಳೆಗರಿಯಲ್ಲಿ ದಾಖಲಾಗುತ್ತಿದ್ದ ಜ್ಞಾನ ನಂತರ ಪುಸ್ತಕ ರೂಪದಲ್ಲಿ ಬಂದವು. ವೇದ, ಉಪನಿಷತ್ತುಗಳ ಕಾಲದಿಂದಲೂ ಜ್ಞಾನ ಕೃತಿ ರೂಪದಲ್ಲಿ ದಾಖಲಾಗಿದೆ. ರವೀಂದ್ರನಾಥ್ ಟ್ಯಾಗೋರ್ ಅವರು ಹೇಳಿರುವಂತೆ ಸೂರ್ಯಕಿರಣಗಳು ಬದುಕಿಗೆ ಆಸರೆಯಾದರೆ ಜ್ಞಾನಕ್ಕೆ ಪುಸ್ತಕಗಳೇ ಬುನಾದಿ. ಪುಸ್ತಕಗಳು ಜ್ಞಾನದ ಸಂಕೇತವಾಗಿದ್ದು, ಪುಸ್ತಕಕ್ಕೆ ಪುಸ್ತಕಗಳು ಬೇಕು ಎಂದು ಹೇಳಿದರು.
ರಾಷ್ಟ್ರಕವಿ ಕುವೆಂಪು ಅವರು ಸಯ್ಯಜಿರಾವ್ ರಸ್ತೆಯ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ ಓದುತ್ತಿದ್ದರು. ಅವರು ಕೂರುತ್ತಿದ್ದ ಕುರ್ಚಿಗೆ ‘ಕುವೆಂಪು ಅವರು ಬಳಸುತ್ತಿದ್ದ ಕುರ್ಚಿ’ ಎಂದು ಫಲಕ ಹಾಕಿ ಇಡಲಾಗಿದೆ. ಅದನ್ನು ಕಂಡಾಗ ಗೌರವ ಭಾವದಿಂದ ಮುಟ್ಟಿ ನಮಸ್ಕರಿಸುತ್ತೇನೆ. ಅಂತಹ ಮಹಾನ್ ಕವಿಯ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಬೇರೆ ಭಾಷೆಗಳಿಗೆ ಅನುವಾದವಾಗಿದ್ದರೆ ನಮ್ಮ ಸಾಹಿತ್ಯಕ್ಕೆ ಯಾವತ್ತೋ ನೊಬೆಲ್ ಪುರಸ್ಕಾರ ಸಿಗುತ್ತಿತ್ತು ಎಂದರು.
ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಮಾತನಾಡಿ, ಪುಸ್ತಕ ಓದುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಖರೀದಿಸಿ, ಇಲ್ಲವೇ ಸಾಲ ಪಡೆಯಿರಿ. ಅದು ಸಾಧ್ಯವಿಲ್ಲದಿದ್ದರೆ ಕದ್ದಾದರೂ ಸರಿಯೇ ಪುಸ್ತಕ ಓದಿ. ಚಿಕ್ಕಂದಿನಲ್ಲಿ ನಾನೂ ಪುಸ್ತಕಗಳನ್ನು ಕದಿಯುತ್ತಿದ್ದೆ. ಈಗ ನನ್ನ ಮನೆಯಲ್ಲಿರುವ ಪುಸ್ತಕವನ್ನು ಯಾರಾದರೂ ಕದಿಯಲಿ ಎಂದು ಕಾಯುತ್ತಿದ್ದೇನೆ ಎನ್ನುವ ಮೂಲಕ ಪುಸ್ತಕ ಸಂಸ್ಕೃತಿ ಬೆಳೆಸಿ ಎಂದು ಸಲಹೆ ನೀಡಿದರು.
ಸಂವಹನ ಪ್ರಕಾಶನ ಪ್ರಕಟಿಸಿರುವ ಡಾ.ಸಿಪಿಕೆ ಅವರ ‘ಪುಸ್ತಕ ಸಂಸ್ಕೃತಿಃ ಭುವನದ ಭಾಗ್ಯ’ ಕೃತಿ ಬಿಡುಗೆ ಮಾಡಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಸಿಪಿಕೆ ಅವರು ಈ ಕೃತಿಯನ್ನು ರಚಿಸುವ ಮೂಲಕ ವಿಶ್ವರೂಪ ದಿಗ್ಧರ್ಶನಕ್ಕೆ ಯತ್ನಿಸಿದ್ದಾರೆ. ಸದಾ ಅಪಾಯದಲ್ಲಿರುವ ವಾಚನ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕು ಎಂದು ಕಳಕಳಿ ತೋರಿಸಿದ್ದಾರೆ. ಆ ಮೂಲಕ ಪುಸ್ತಕ ಪ್ರೀತಿ ಪ್ರಚೋದಿಸಿದ್ದಾರೆ ಎಂದು ಬಣ್ಣಿಸಿದರು.
ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಗ್ರಂಥಪಾಲಕ ಡಾ.ಸಿ.ಪಿ.ರಾಮಶೇಷ ಮಾತನಾಡಿ, ಇತ್ತೀಚಿನ ವಿದ್ಯಮಾನಗಳನ್ನು ತಿಳಿಯಲು ಇ-ಪುಸ್ತಕಗಳು, ವೆಬ್‌ಸೈಟ್‌ಗಳಲ್ಲಿರುವ ಮಾಹಿತಿ ಬೇಕು. ಆದರೆ ತಲಸ್ಪರ್ಶಿ ಅಧ್ಯಯನಕ್ಕೆ ಮುದ್ರಿತ ಪುಸ್ತಕಗಳು ಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕುವೆಂಪು ಭಾಷಾ ಭಾರತಿ ರಚಿಸಿದರು. ಹೀಗಾಗಿ ಇವತ್ತು ಕುವೆಂಪು ಸೇರಿದಂತೆ ಕನ್ನಡದ ಹಲವು ಲೇಖಕರ ಕೃತಿಗಳು ಬೇರೆ ಬೇರೆ ಭಾಷೆಗಳಿಗೆ ಅನುವಾದವಾಗಿ ಕನ್ನಡ ಸಾಹಿತ್ಯ ಇತರೆಡೆಗೂ ವಿಸ್ತರಿಸಿದೆ ಎಂದರು.
ಪ್ರಕಾಶಕರ ಸಂಘದ ಅಧ್ಯಕ್ಷ ಡಿ.ಎನ್.ಲೋಕಪ್ಪ ಮಾತನಾಡಿ, ಪ್ರಸ್ತುತ ಪುಸ್ತಕ ಸಂಸ್ಕೃತಿಗೆ ಗ್ರಹಣ ಹಿಡಿದಿದ್ದು, ಅದು ಸರಿಯಾಗಬೇಕು. ಜತೆಗೆ ಸರ್ಕಾರ ಕೂಡಾ ಪುಸ್ತಕ ಸಂಸ್ಕೃತಿ ಉತ್ತೇಜಿಸಲು ಯೋಜನೆ ರೂಪಿಸಬೇಕು. 2020ನೇ ಸಾಲಿನಲ್ಲಿ ಖರೀದಿಸಿದ ಸಗಟು ಪುಸ್ತಕಗಳಿಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ. ಈಗಾಗಲೇ 2024 ಬಂದಿದೆ. ಈ ಬಗ್ಗೆ ಕೂಡ ಸರ್ಕಾರ ಗಮನ ಹರಿಸಬೇಕು ಎಂದು ಕೋರಿದರು.
ಪ್ರಕಾಶಕರ ಸಂಘದ ಕಾರ್ಯದರ್ಶಿ ಯು.ಎಸ್.ಮಹೇಶ್, ಸದಸ್ಯ ನಾಗೇಂದ್ರ, ಕಸಾಪ ಕಾರ್ಯದರ್ಶಿ ಮ.ನ.ಲತಾ ಮೋಹನ್, ಪ್ರಕಾಶಕ ಜೀನಹಳ್ಳಿ ಸಿದ್ದಲಿಂಗಪ್ಪ, ಮೈನಾ ಲೋಕೇಶ್, ತ್ಯಾಗರಾಜು ಇತರರು ಇದ್ದರು.
ಚಿಂತನೆ ಅಸ್ತಿತ್ವ ಇರುವ ತನಕ ಪುಸ್ತಕಗಳಿಗೆ ಅಳಿವಿಲ್ಲ: ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ
You Might Also Like
ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits
fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…
ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign
Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…
ಪೇನ್ ಕಿಲ್ಲರ್ ಮಾತ್ರೆ vs ಜೆಲ್… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel
Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…