More

    ಸಾಮಾಜಿಕ ಕ್ರಾಂತಿಯ ಸಂತ; ಇಂದು ರಾಮಾನುಜ ಜಯಂತಿ

    ಸಾಮಾಜಿಕ ಕ್ರಾಂತಿಯ ಸಂತ; ಇಂದು ರಾಮಾನುಜ ಜಯಂತಿ| ಯಶುಪ್ರಸಾದ್, ಮೈಸೂರು

    ರಾಮಾನುಜರು ತಮಿಳುನಾಡಿನ ಶ್ರೀಪೆರಂಬದೂರು ಕ್ಷೇತ್ರದಲ್ಲಿ ಕ್ರಿಸ್ತಶಕ 1017 ಚಂದ್ರಮಾನ ರೀತಿಯ ಚೈತ್ರಮಾಸದ ಶುಕ್ಲಪಕ್ಷದ ಆರಿದ್ರಾ ನಕ್ಷತ್ರದಲ್ಲಿ ಜನಿಸಿದರು. ಸೋಮಯಾಜಿ ಮತ್ತು ಕಾಂತಿಮತಿ ಇವರ ಮಾತಾಪಿತೃಗಳು. ಈ ದಂಪತಿಗೆ ಮಕ್ಕಳಾಗದಿದ್ದಾಗ, ತಿರುವಲ್ಲಿಕೇನಿಯ ಪಾರ್ಥಸಾರಥಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು, ಪುತ್ರಕಾಮೇಷ್ಠಿ ಯಾಗವನ್ನು ಮಾಡಿದಾಗ, ರಾತ್ರಿ ಕನಸಿನಲ್ಲಿ ಸ್ವತಃ ಪಾರ್ಥಸಾರಥಿ ಭಗವಂತನೇ ಬಂದು ಪುತ್ರಪ್ರಾಪ್ತಿಯಾಗುತ್ತದೆ ಎಂದು ಮಾತು ಕೊಡುತ್ತಾನೆ.

    ಅದಾದ ಸ್ವಲ್ಪ ದಿನಗಳಲ್ಲಿಯೇ ಆಚಾರ್ಯರ ಜನನವಾಗುತ್ತದೆ. ಹುಟ್ಟಿದಾಗ ಅವರಿಗೆ ಇಟ್ಟ ಹೆಸರು ಇಳೆಯ ಪೆರುಮಾಳ್. ಸಂಸ್ಕೃತದಲ್ಲಿ ಅದಕ್ಕೆ ‘ಲಕ್ಷ್ಮಣ’ ಎಂದು ಹೆಸರು. ರಾಮನಿಗೆ ಅನುಜನಾದವನು ಲಕ್ಷ್ಮಣ. ಹಾಗೆಯೇ ಇವರಿಗೆ ರಾಮಾನುಜ ಎಂದು ನಾಮಕರಣ ಮಾಡುತ್ತಾರೆ.

    ಮಗುವಿನ ಲಕ್ಷಣಗಳೆಲ್ಲವೂ ಸಾಕ್ಷಾತ್ ಆದಿಶೇಷನ ಅವತಾರವೆಂಬಂತೆಯೇ ಇರುವುದನ್ನು ಅಲ್ಲಿನ ಪಂಡಿತರೆಲ್ಲರೂ ಅರಿತುಕೊಳ್ಳುತ್ತಾರೆ. ಅಂದಿನ ಕಾಲಘಟ್ಟದಲ್ಲಿ ಭಾರತದಲ್ಲಿದ್ದಂತಹ ಧರ್ಮ ಜಿಜ್ಞಾಸೆಗಳು, ಧರ್ಮಭೇದಗಳು, ಸನಾತನ ಧರ್ಮದ ಅಳಿವು ತಲೆದೋರಿದ್ದ ಸಂದರ್ಭ. ಆಧ್ಯಾತ್ಮಿಕ ಪ್ರಪಂಚದ ಮೋಕ್ಷ ಸಾಮ್ರಾಜ್ಯಕ್ಕೆ ಎಲ್ಲರನ್ನೂ ಕರೆದೊಯ್ಯುವ ಮಹಾನ್ ವ್ಯಕ್ತಿ ಅಲ್ಲಿ ಜನ್ಮ ತಾಳುತ್ತಾರೆ. ರಾಮಾನುಜರು ವೇದ-ವೇದಾಂಗಗಳನ್ನು ಕಲಿತುಕೊಂಡು ಕೇವಲ 16ನೇ ವರ್ಷಕ್ಕೆ ಕರತಲಾಮಲಕ ಮಾಡಿಕೊಂಡಿರುತ್ತಾರೆ.

    ಶ್ರೀರಂಗದ ಯಮುನಾಚಾರ್ಯರು ತಮ್ಮ ಉತ್ತರಾಧಿಕಾರಿಯಾಗಿ ಶ್ರೀವೈಷ್ಣವ ಸಿದ್ಧಾಂತವನ್ನು ಪ್ರತಿನಿಧಿಸಲು ಮತ್ತು ಬೆಳೆಸಲು ರಾಮಾನುಜರೇ ಸರಿಯಾದ ವ್ಯಕ್ತಿ ಎಂದು ಅವರನ್ನು ಭೇಟಿಯಾಗಬೇಕೆಂದು ಕಾಯುತ್ತಿರುತ್ತಾರೆ. ಆದರೆ ಆಚಾರ್ಯರು ಭೇಟಿಯಾಗುವ ಮೊದಲೇ ಅವರಿಗೆ ಮೋಕ್ಷಪ್ರಾಪ್ತಿಯಾಗಿರುತ್ತದೆ. ರಾಮಾನುಜರಿಗೆ ಅತೀವ ದುಃಖ ಉಂಟಾಗಿ ಅವರ ದರ್ಶನಕ್ಕೆಂದು ಶ್ರೀರಂಗಕ್ಕೆ ಹೊರಡುತ್ತಾರೆ. ರಾಮಾನುಜರಿಗೆ ಅವರಿನ್ನೂ ಬದುಕಿರುವಂತೆಯೇ ಅನಿಸುತ್ತಿತ್ತು. ಯಮುನಾಚಾರ್ಯರ ಬಲಗೈಯ ಮೂರು ಬೆರಳುಗಳು ಮುಚ್ಚಿದ್ದು, ಆಚಾರ್ಯರಿಗೆ ಇದರಲ್ಲಿ ಏನೋ ವಿಶೇಷವಿದೆ ಎನಿಸಿ, ಅವರು ಮರಣವನ್ನಪ್ಪುವಾಗ ಏನಾದರೂ ಹೇಳುತ್ತಿದ್ದರೆ ಎಂದು ಶಿಷ್ಯರನ್ನು ಕೇಳುತ್ತಾರೆ. ಅದು ಅವರ ಮೂರು ಕೋರಿಕೆಗಳಾಗಿರುತ್ತದೆ.

    1. ಶ್ರೀ ವೈಷ್ಣವ ಮತದಲ್ಲಿ ಇದ್ದು, ಅಜ್ಞಾನದಿಂದ ಕೂಡಿದ ಜನರಿಗೆ ದ್ರಾವಿಡ ವೇದಗಳನ್ನು ಬೋಧಿಸಬೇಕು, ಪಂಚ ಸಂಸ್ಕಾರ ನೀಡಬೇಕು, ಜ್ಞಾನ ನೀಡಬೇಕು, ಶರಣಾಗತಿ ತತ್ವವನ್ನು ಬೋಧಿಸಬೇಕು.

    2. ಸಮಸ್ತ ವೇದದ ನಿಜವಾದ ಅರ್ಥವನ್ನು ಬ್ರಹ್ಮಸೂತ್ರಗಳ ಮೂಲಕ ಭಾಷ್ಯವನ್ನು ರಚಿಸಬೇಕು.

    3. ಪುರಾಣಗಳನ್ನು ರಚಿಸಿ ಉಪಕರಿಸಿದ ವ್ಯಾಸ ಮತ್ತು ಪರಾಶರರ ಹೆಸರನ್ನು ವೈಷ್ಣವರಿಗೆ ಇಡಬೇಕು.

    ಈ ಮೂರು ವಿಷಯಗಳನ್ನು ನೆರವೇರಿಸುತ್ತೇನೆ ಎಂದು ರಾಮಾನುಜರು ಹೇಳಿದ ತಕ್ಷಣ ಆ ಮೂರು ಬೆರಳುಗಳು ಒಂದೊಂದಾಗಿ ನೆಟ್ಟಗಾಗುತ್ತವೆ.

    ರಾಮಾನುಜರು ಪಂಚ ಸಂಸ್ಕಾರ ಮತ್ತು ಶ್ರೀವೈಷ್ಣವ ದೀಕ್ಷೆ ಸನ್ಯಾಸ ದೀಕ್ಷೆಯನ್ನು ಕಂಚಿಯ ವರದರಾಜಸ್ವಾಮಿಯ ಬಳಿ ಸ್ವೀಕರಿಸುತ್ತಾರೆ. ನಂತರ ಶ್ರೀರಂಗದೆಡೆಗೆ ಪ್ರಯಾಣ ಬೆಳೆಸುತ್ತಾರೆ. ಶ್ರೀರಂಗನಾಥನ ಕೈಂಕರ್ಯ ಮಾಡುತ್ತಾ ಅಲ್ಲಿಯೇ ನೆಲೆಸುತ್ತಾರೆ. ಆಗ ಅವರಿಗೆ 24 ವರ್ಷ. ಗೋಷ್ಠಿಪೂರ್ಣರ ಬಳಿ ಮಂತ್ರ ರಹಸ್ಯಗಳನ್ನು ತಿಳಿದುಕೊಳ್ಳಲು ರಾಮಾನುಜರು ಹೋಗುತ್ತಾರೆ. 17 ಬಾರಿ ಹೋದರೂ ಅವರು ಭೇಟಿಯಾಗದೆ ಕಳಿಸಿದಾಗ ದುಃಖವಾಗುತ್ತದೆ. ಕೊನೆಗೆ, ‘ಸಾಮಾನ್ಯ ಜನಗಳಿಗೆ, ಬೇರೆಯವರಿಗೆ ಈ ಮಂತ್ರವನ್ನು ಉಪದೇಶಿಸಿದರೆ ನೀನು ನರಕಕ್ಕೆ ಹೋಗುತ್ತಿ’ ಎಂದು ಎಚ್ಚರಿಸಿ, ‘ಓಂ ನಮೋ ನಾರಾಯಣಾಯ’ ಎಂಬ ಪ್ರಣವಮಂತ್ರವನ್ನು ಉಪದೇಶಿಸುತ್ತಾರೆ. ಮಂತ್ರರಾಜ ಎಂದು ಕೂಡ ಕರೆಯಲ್ಪಡುವ ದ್ವಯ ಮಂತ್ರವನ್ನು, ಮಂತ್ರಗಳಿಗೆ ಅರ್ಥವನ್ನು ಸಹ ಉಪದೇಶಿಸುತ್ತಾರೆ.

    ತಾನು ನರಕಕ್ಕೆ ಹೋದರೂ ಪರವಾಗಿಲ್ಲ, ಎಲ್ಲ ಜನರು ಒಳಿತನ್ನು ಪಡೆಯಲಿ ಎಂಬ ಉದ್ದೇಶದಿಂದ ರಾಮಾನುಜರು ದೇವಸ್ಥಾನದ ಮೇಲ್ಭಾಗಕ್ಕೆ ಹೋಗಿ ಎಲ್ಲರಿಗೂ ಕೇಳುವಂತೆ ಮಂತ್ರವನ್ನು ಹೇಳುತ್ತಾರೆ.

    ರಾಮಾನುಜರು ಶ್ರೀರಂಗಂ ದೇವಸ್ಥಾನದ ಆಡಳಿತದಲ್ಲಿ ಸುಧಾರಣೆ ತರುತ್ತಾರೆ. ದೇವಾಲಯಕ್ಕೆ ಸರ್ವ ಮತದವರು ಪ್ರವೇಶ ಮಾಡುವಂತೆ ಮಾಡುತ್ತಾರೆ. ಆಚಾರ್ಯರ ವಿರುದ್ಧ ದೇವಸ್ಥಾನದ ಆಡಳಿತ ಅಧಿಕಾರಿಗಳು ಸಂಚನ್ನು ಹೂಡುತ್ತಾರೆ. ಭಿಕ್ಷೆಯಲ್ಲಿ ವಿಷ ನೀಡಿ ಅವರನ್ನು ಕೊಲ್ಲಲು ಪ್ರಯತ್ನಿಸುತ್ತಾರೆ.

    ಅಲ್ಲಿ ಆಳ್ವಿಕೆ ನಡೆಸುತ್ತಿದ್ದ ಚೋಳರಾಜ ಕ್ರಿಮಿಕಂಠ ಚೋಳ ಮತ್ತು ಆದಿ ರಾಜೇಂದ್ರ ಚೋಳ ಶೈವ ಅನುಯಾಯಿಗಳಾಗಿದ್ದು, ಶೈವಪಂಥ ಪ್ರಾಧಾನ್ಯತೆಯನ್ನು ಕಳೆದುಕೊಳ್ಳುವ ಹಂತದಲ್ಲಿತ್ತು. ಆಚಾರ್ಯ ರಾಮಾನುಜರು ಶ್ರೀ ವೈಷ್ಣವ ಸಿದ್ಧಾಂತವನ್ನು ಪ್ರವರ್ತಿಸುತ್ತಿದ್ದರಿಂದ ಶೈವ ಪರವಾಗಿರಬೇಕು ಎಂದು ಅವರನ್ನು ಸಂಕಟಕ್ಕೀಡು ಮಾಡುತ್ತಾರೆ. ಶ್ರೀವೈಷ್ಣವರನ್ನು ಹಿಂಸೆ ಮಾಡಲು ತೊಡಗುತ್ತಾರೆ. ಆಗ ವಿಧಿಯಿಲ್ಲದೆ ರಾಮಾನುಜರು ಕರ್ನಾಟಕದ ಹೊಯ್ಸಳ ಸಾಮ್ರಾಜ್ಯಕ್ಕೆ ಬರುತ್ತಾರೆ. ಅವರನ್ನು ರಕ್ಷಿಸಿದಂತಹ ಕುಟುಂಬಗಳು, ಶಿಷ್ಯರನ್ನು ಇಂದಿಗೂ ಮೇಲುಕೋಟೆಯಲ್ಲಿ ‘ಸ್ಥಾನಿಕರು’ ಎಂದೇ ಕರೆಯಲಾಗುತ್ತದೆ.

    ರಾಮಾನುಜರು ಭಕ್ತಿ ಸಿದ್ಧಾಂತದ ಪ್ರತಿನಿಧಿಯಾಗಿ, ದೇಶದಲ್ಲಿ ಇದ್ದಂತಹ ಗೊಂದಲಗಳನ್ನು ಪರಿಹರಿಸಿ, ಮಹಿಳೆಯರಿಗೂ ಸಮಾನ ಸ್ಥಾನ ನೀಡಿ, ಎಲ್ಲರಿಗೂ ಭಗವಂತ ಒಬ್ಬನೇ ಅವನು ಎಲ್ಲರಿಗೂ ಒಲಿಯುತ್ತಾನೆ ಎಂಬ ಆತ್ಮಸ್ಥೈರ್ಯ ತುಂಬಿದರು. ದಲಿತರಿಗೆ ದೇಗುಲ ಪ್ರವೇಶ ನೀಡಿ ಅಸ್ಪೃ್ಯತೆ ನಿವಾರಿಸಿ, ಅವರಿಗೂ ಮಂತ್ರೋಪದೇಶ-ದೀಕ್ಷೆ ನೀಡಿ, ಸಾಮಾಜಿಕ ಕ್ರಾಂತಿ ಮಾಡಿದರು.

    ಭಾರತದಾದ್ಯಂತ ಸಂಚರಿಸಿ ಸಿದ್ಧಾಂತವನ್ನು ಪಸರಿಸಿ ಎಲ್ಲ ರಾಜ್ಯಗಳಲ್ಲಿಯೂ ದೇವಾಲಯಗಳನ್ನು ನಿರ್ವಿುಸಿ, ಕೆರೆಕಟ್ಟೆಗಳು, ಗೋಶಾಲೆಗಳನ್ನು ನಿರ್ವಿುಸಿ ಯತಿಸಾರ್ವಭೌಮರೆನಿಸಿಕೊಂಡರು. ಕಲೆ, ವಾಸ್ತುಶಿಲ್ಪ, ಸಂಗೀತ, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ ಮುಂತಾದ ರಾಜ್ಯಗಳಿಗೆ ಅವರ ತತ್ವ ಪ್ರೇರಿತವಾಗಿದೆ. ರಾಮಾನುಜರು 120 ವರ್ಷಗಳ ತುಂಬುಜೀವನವನ್ನು ಜೀವಿಸಿ 1137ರಲ್ಲಿ ಭಗವಂತನಲ್ಲಿ ಲೀನವಾದರು.

    (ಲೇಖಕರು, ಹವ್ಯಾಸಿ ಬರಹಗಾರರು)

    ನನ್ನ ಕಣ್ಣೀರಿಗೆ ಕಾರಣರಾದವರನ್ನೇ ಕಣ್ಣೀರು ಹಾಕಿಸುವಂತೆ ಮಾಡಿದ್ರೆ ಮಾತ್ರ ನನ್ನ ಆತ್ಮಕ್ಕೆ ಶಾಂತಿ: ಎಚ್​.ಡಿ.ದೇವೇಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts