More

    ಸಂವಿಧಾನ ತಿದ್ದುಪಡಿ ಅಗತ್ಯ; ಇಂದು ಮಾತೃಭಾಷಾ ದಿನ

    | ನರಹಳ್ಳಿ ಬಾಲಸುಬ್ರಹ್ಮಣ್ಯ

    ‘ಕನ್ನಡದ ನೆಲದ ಪುಲ್ಲೆನಗೆ ಪಾವನ ತುಳಸಿ/ಕನ್ನಡದ ನೆಲದ ನೀರ್ವೆನಲೆನಗೆ ದೇವನದಿ/ಕನ್ನಡದ ನೆಲದ ಕಲ್ಲೆನಗೆ ಶಾಲಗ್ರಾಮ ಶಿಲೆ, ಕನ್ನಡವೆ ದೈವಮೈ/ಕನ್ನಡ ಶಬ್ದಮೆನಗೋಂಕಾರಮೀಯನ್ನ/ ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ/ಮಿನ್ನಾವುದೈ ಪೆರತು ಕನ್ನಡದ ಸೇವೆಯಿಂದಧಿಕಮೀ ಜಗದೊಳೆನಗೆ’ – ಸಾಲಿ ರಾಮಚಂದ್ರರಾಯ

    ‘ತಾಯ್ನುಡಿಯ ಬಗೆಗಿನ ಉತ್ಸಾಹವೆಂದರೆ ಅದು ಭಾವಾತಿರೇಕದ ಉದ್ಗಾರವಲ್ಲ; ಅದು ವಿಚಾರಪೂರ್ವಕವಾದ ತತ್ವಸಿದ್ಧಾಂತ, ಪ್ರಯೋಜನ ದೃಷ್ಟಿಯ ಲೌಕಿಕ ನೀತಿ. ಇಂತಹ ಗಟ್ಟಿಯಾದ ವೈಚಾರಿಕ ನಿಲವಿನಿಂದ ನಾವು ನಮ್ಮ ಭಾಷೆಯನ್ನು ಪೋಷಿಸಬೇಕೇ ಹೊರತು ಅವಿಚಾರ ವ್ಯಾಮೋಹದಿಂದಲ್ಲ- ಇದು ಡಿವಿಜಿ ಅವರು ಎಚ್ಚರದಿಂದ ಆಡಿದ ಮಾತು.

    ಮನುಷ್ಯನ ಬಹುಮುಖ್ಯ ಸಂಶೋಧನೆ ಭಾಷೆಯೆಂಬುದು ಪರಿಚಿತ ಮಾತು. ಭಾಷೆ ಸಂವಹನದ ಸಾಧನ ಮಾತ್ರವಲ್ಲ, ಮನಸ್ಸಿನ ಭಾವನೆಗಳನ್ನು ವಿಚಾರಗಳನ್ನು ಅಭಿವ್ಯಕ್ತಿಸಲು ಭಾಷೆ ಅತ್ಯಗತ್ಯ. ಜಗತ್ತಿನಲ್ಲಿ ಸುಮಾರು ಮೂರುಸಾವಿರಕ್ಕಿಂತ ಹೆಚ್ಚು ಭಾಷೆಗಳನ್ನು ಜನರು ಈಗ ಬಳಸುತ್ತಿದ್ದಾರೆ. ಭಾಷಾವಿಜ್ಞಾನಿಯ ದೃಷ್ಟಿಯಲ್ಲಿ ಎಲ್ಲ ಭಾಷೆಗಳೂ ಸಮಾನವೇ! ಆದರೆ ಆಳುವ ವರ್ಗ ತನ್ನ ಅನುಕೂಲಕ್ಕಾಗಿ ತನ್ನ ಭಾಷೆಯನ್ನು ಇತರರ ಮೇಲೆ ಹೇರುತ್ತದೆ. ಭಾಷೆಗೂ ರಾಜಕೀಯಕ್ಕೂ ನಂಟಿದೆ. ಹೀಗಾಗಿ ಅಧೀನಕ್ಕೊಳಗಾದ ಭಾಷೆಗಳು ಕ್ರಮೇಣ ಪ್ರಾಬಲ್ಯ ಕಳೆದುಕೊಂಡು ನಿಧಾನವಾಗಿ ಕಣ್ಮರೆ ಯಾಗಿಬಿಡುತ್ತವೆ. ‘ಒಂದು ಜನಾಂಗವನ್ನು ನಾಶಮಾಡಬೇಕೆಂದರೆ ಅವರಾಡುವ ಭಾಷೆಯನ್ನು ಕೊಂದುಬಿಡು, ಕ್ರಮೇಣ ಆ ಜನಾಂಗ ತನಗೆ ತಾನೇ ನಾಶವಾಗುತ್ತದೆ’ ಎಂಬುದು ಪ್ರಸಿದ್ಧವಾದ ಮಾತು.

    ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಪ್ರತಿಬಿಂಬಿಸಲು ಮತ್ತು ಪೋ›ತ್ಸಾಹಿಸಿ ಉಳಿಸಲು ಫೆ. 21 ನ್ನು ವಿಶ್ವ ಮಾತೃ ಭಾಷಾ ದಿನವಾಗಿ ಆಚರಿಸಲಾಗುತ್ತದೆ. 1999ರಲ್ಲಿ ಯುನೆಸ್ಕೋ ಇದನ್ನು ಘೊಷಿಸಿತು. ಇದರ ಮುಂದುವರಿದ ಭಾಗವಾಗಿ ವಿಶ್ವಸಂಸ್ಥೆಯು 2008ನ್ನು ‘ವಿಶ್ವ ಭಾಷೆಗಳ ವರ್ಷ’ ಎಂದು ಆಚರಿಸಿತು. 2000ನೆಯ ಇಸವಿಯಿಂದ ಪ್ರತಿ ವರ್ಷ ವಿಶ್ವ ಮಾತೃಭಾಷಾ ದಿವಸವನ್ನು ಆಚರಿಸಲಾಗುತ್ತಿದೆ. 1952ರಲ್ಲಿ ಅಂದಿನ ಪಾಕಿಸ್ತಾನದ ಭಾಗವಾಗಿದ್ದ ಇಂದಿನ ಬಾಂಗ್ಲಾದೇಶದಲ್ಲಿ ಬಾಂಗ್ಲಾ ಭಾಷೆಯನ್ನು ಅಧಿಕೃತ ಭಾಷೆಯಾಗಿ ಗುರುತಿಸಿ ಘೊಷಿಸಬೇಕು ಎಂದು ವಿದ್ಯಾರ್ಥಿಗಳು ಹೋರಾಟ ನಡೆಸಿದ್ದರು. 1952 ರ ಫೆ. 21ರಂದು ಢಾಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ತೀವ್ರ ಸ್ವರೂಪ ಪಡೆಯಿತು. ಪೊಲೀಸ್ ಗೋಲಿಬಾರಿನಲ್ಲಿ ಕೆಲವು ವಿದ್ಯಾರ್ಥಿಗಳು ಅಸುನೀಗಿದರು. ಆ ನೆನಪಿಗಾಗಿ ವಿಶ್ವ ಮಾತೃಭಾಷಾ ದಿನ ಆಚರಣೆ ರೂಢಿಗೆ ಬಂತು.

    ಭಾಷೆಯ ಅಧ್ಯಯನವೆಂದರೆ ಅದು ಮನುಷ್ಯನ ಅಧ್ಯಯನವೇ ಆಗಿದೆ. ಸಾಹಿತ್ಯ ಮಾತ್ರವಲ್ಲ, ಇತಿಹಾಸ, ಸಮಾಜಶಾಸ್ತ್ರ, ಮಾನವಶಾಸ್ತ್ರ ಮತ್ತು ಜಾನಪದ ಅಧ್ಯಯನಗಳಿಗೂ ಭಾಷೆಗೂ ಸಂಬಂಧವಿದೆ. ಕನ್ನಡ ಭಾಷೆಯೆಂದರೆ ಕನ್ನಡ ಜನತೆ ಪ್ರತಿಪಾದಿಸಿಕೊಂಡುಬಂದ ಮೌಲ್ಯಗಳು, ಆಧ್ಯಾತ್ಮಿಕ ಆಕಾಂಕ್ಷೆಗಳು, ಬದುಕಿನ ಅಪೇಕ್ಷೆಗಳು ಹಾಗೂ ಎಲ್ಲೂ ಪ್ರಕಟವಾಗಿ ದಾಖಲಾಗದ ಚರಿತ್ರೆಯೂ ಹೌದು. ಹೀಗಾಗಿ ಆಯಾ ಜನಾಂಗದ ಮಾತೃಭಾಷೆಯೆಂದರೆ ಅವರ ಸಂಸ್ಕೃತಿ ಕಥನವೇ ಆಗಿರುತ್ತದೆ. ತಾಯಿನುಡಿಯಲ್ಲಿ ಶಿಕ್ಷಣ ಕೊಡಬೇಕೆಂಬುದು ಜಗತ್ತಿನ ಎಲ್ಲ ಶಿಕ್ಷಣತಜ್ಞರ ಒಮ್ಮತದ ಅಭಿಪ್ರಾಯ. ಅನ್ಯಭಾಷೆಯ ಶಿಕ್ಷಣ ನಮ್ಮ ಮಕ್ಕಳನ್ನು ಬಾಯಿಪಾಠ ಮಾಡುವ ಗಿಳಿಗಳನ್ನಾಗಿ ಮಾಡುತ್ತದೆಯೇ ಹೊರತು ಸೃಜನಶೀಲರನ್ನಾಗಿ ಮಾಡುವುದಿಲ್ಲ. ವಿದ್ವಜ್ಜನರು, ಭಾಷಾತಜ್ಞರು ಯಾರೇ ಹೇಳಿದರೂ ಪಟ್ಟಭದ್ರ ಹಿತಾಸಕ್ತಿಗಳು ತಾಯ್ನುಡಿಗೆ ದ್ರೋಹ ಬಗೆಯುತ್ತಲೇ ಬಂದಿವೆ. ಒಟ್ಟು ಜನಸಂಖ್ಯೆಯ ಶೇ.90 ಜನರಿಗೆ ಅರ್ಥವಾಗದ ಭಾಷೆಯಲ್ಲಿ ಆಡಳಿತ ನಡೆಸುತ್ತಿರುವ, ಶಿಕ್ಷಣ ನೀಡುತ್ತಿರುವ ಜಗತ್ತಿನ ಏಕೈಕ ನಾಗರಿಕ ದೇಶವೆಂದರೆ ಭಾರತವೇ! ಈಗಲಾದರೂ ನಮ್ಮ ಪ್ರಜಾಪ್ರತಿನಿಧಿಗಳಿಗೆ ಮಾತೃಭಾಷೆಯ ಮಹತ್ವದ ಅರಿವಾಗುವುದೇ? ಸಂವಿಧಾನಕ್ಕೆ ತಿದ್ದುಪಡಿ ತರುವುದರ ಮೂಲಕ ವಿವಿಧ ನೆಲೆಗಳಲ್ಲಿ ತಾಯ್ನುಡಿಯ ಬಳಕೆಗೆ ಅಡ್ಡಿಯಾಗುತ್ತಿರುವ ಆತಂಕವನ್ನು ಪರಿಹರಿಸುವರೇ? ದೇಶಭಾಷೆಯನ್ನಾಡುವ ಜನರ ಸೃಜನಶೀಲ ಶಕ್ತಿ ನಾಶವಾಗಿ ಬರಡಾಗದಂತೆ ಕಾಪಾಡುವರೇ?

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts