More

    ಇದು ರಿಟರ್ನ್ಸ್ ಸಲ್ಲಿಕೆಯ ಕಾಲ, ತೆರಿಗೆ ಉಳಿತಾಯಕ್ಕೂ ಸಕಾಲ

    ಇದು ಮಾರ್ಚ್ ತಿಂಗಳು. ಆರ್ಥಿಕ ವರ್ಷದ ಕೊನೆಯ ಮಾಸ. ಇಡೀ ವಿಶ್ವವೇ ಕರೊನಾದಿಂದ ನಲುಗಿ ಆರ್ಥಿಕ ಚಟುವಟಿಕೆಗಳು ಬುಡಮೇಲಾದಂಥ ವರ್ಷವಿದು. ಇದರ ನಡುವೆಯೂ ಬದುಕು ನಡೆದೇ ನಡೆಯುತ್ತದೆಯಲ್ಲವೇ? ಹಾಗಾಗಿ ಪ್ರತಿಯೊಬ್ಬರೂ ತಮ್ಮ ಬದುಕಿನ ಆರ್ಥಿಕ ಯೋಜನೆ ರೂಪಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ ಮತ್ತು ಅನಿವಾರ್ಯ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮತ್ತು ಅದರಲ್ಲಿ ಮಾಡಬಹುದಾದ ನ್ಯಾಯಯುತ ಉಳಿತಾಯ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ.

    | ಎಚ್.ಆರ್. ಪ್ರಭಾಕರ್

    ಭಾರತದಲ್ಲಿ ದುಡಿಯುವ ಅದರಲ್ಲೂ ತೆರಿಗೆ ವಿನಾಯಿತಿ ಮಿತಿಗಿಂತ ಹೆಚ್ಚು ವೇತನ ಪಡೆಯುವ, ವ್ಯವಹಾರದಿಂದ ಗಳಿಸುವ, ಮತ್ತು ಬೇರಾವುದೇ ಮೂಲದಿಂದ ಆದಾಯ ಹೊಂದಿರುವವರು ಆದಾಯ ತೆರಿಗೆ ಪಾವತಿ ಮಾಡುವುದು ಅವಶ್ಯ. ಇದರ ನಡುವೆ ಪ್ರತಿ ಆರ್ಥಿಕ ವರ್ಷ ಏಪ್ರಿಲ್ ಒಂದರಿಂದ ಮಾರ್ಚ್ 31ರವರೆಗಿನ ವರಮಾನವನ್ನು ನಾವು ಆಯಾ ಆರ್ಥಿಕ ವರ್ಷಕ್ಕೆ ಲೆಕ್ಕ ಮಾಡಿಕೊಂಡು ಅದಕ್ಕೆ ಸಂಬಂಧಿಸಿದ ತೆರಿಗೆ ವಿವರ ಆದಾಯ ತೆರಿಗೆ ಇಲಾಖೆ ಸಹಜವಾಗಿ ಜುಲೈ 31ರ ಗಡುವನ್ನು ವಿಧಿಸುವುದು ಕಳೆದ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ಕೆಲವೊಮ್ಮೆ ಒಂದೆರಡು ತಿಂಗಳು ಗಡುವು ವಿಸ್ತರಿಸುವುದೂ ಉಂಟು.

    ಕಳೆದ ವರ್ಷ ಕೋವಿಡ್ ಸಂಕಷ್ಟವಿದ್ದುದರಿಂದ ಜುಲೈ 31ರೊಳಗೆ ಫೈಲ್ ಮಾಡಬೇಕಾದ ಆದಾಯ ತೆರಿಗೆ ರಿಟರ್ನ್ಸ್ ಜನವರಿ ತನಕ ವಿಸ್ತರಿಸಿದ್ದು ತದನಂತರ ಫೈಲ್ ಮಾಡುವವರು ರೂ. 10,000ದ ವರೆಗೆ ಲೇಟ್ ಫೀ ಕಟ್ಟಬೇಕಾಗಿರುವುದು ಕೂಡ ಅನಿವಾರ್ಯ. ಈಗಾಗಲೇ 2021ರ ಜನವರಿ 10ರೊಳಗೆ ತಮ್ಮ ಆದಾಯ ತೆರಿಗೆ ವಿವರ ಸಲ್ಲಿಸದ ಮಂದಿಯ ಆದಾಯ 5 ಲಕ್ಷದ ಒಳಗೆ ಇದ್ದರೆ 1000 ರೂ. ಮತ್ತು ಐದು ಲಕ್ಷಕ್ಕಿಂತಲೂ ಹೆಚ್ಚಿದ್ದರೆ 10 ಸಾವಿರ ರೂ. ದಂಡ ಕಟ್ಟುತ್ತಿರುವುದು ಕೂಡ ಸತ್ಯ.

    ವೇತನದಾರರು, ಪಿಂಚಣಿದಾರರು, ಬಾಡಿಗೆ ವರಮಾನ ಇರುವಂತಹವರು ಮತ್ತು ವೈಯಕ್ತಿಕ ತೆರಿಗೆ ಪಾವತಿದಾರರು ಮಾ.31ರೊಳಗೆ ಉಳಿತಾಯ ಮಾಡಲು ಪರ್ವಕಾಲ. ಸಾಮಾನ್ಯವಾಗಿ ವೇತನದಾರರಿಗೆ ಸಂಸ್ಥೆಗಳಲ್ಲಿ ಫೆಬ್ರವರಿಯಲಿ್ಲ ತೆರಿಗೆ ಕಡಿತಕ್ಕೆ ಬೇಕಾದ ವಿನಾಯಿತಿ ಒಳಗೊಂಡ ಬಾಡಿಗೆ ಭತ್ಯೆ, ವಿಮಾ ಕಂತು, ಮೆಡಿಕ್ಲೈಮ್ ಪಿಎಫ್, ಜಿಪಿಎಫ್, ಮ್ಯೂಚುವಲ್ ಫಂಡ್, ಮಕ್ಕಳ ಸ್ಕೂಲಿನ ಟ್ಯೂಶನ್ ಫೀ, ಪೋಸ್ಟ್ ಆಫೀಸ್ ಉಳಿತಾಯ, ಮನೆ ಸಾಲದ ಮರುಪಾವತಿ, ಶೈಕ್ಷಣಿಕ ಸಾಲದ ಬಡ್ಡಿ ಹೀಗೆ ಸೆಕ್ಷನ್ 6ಎ ಅಡಿಯ ತೆರಿಗೆ ಉಳಿತಾಯ ಮಾಗೋಪಾಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಗಡುವು ಕೊಟ್ಟಿರುತ್ತಾರೆ. ಇನ್ನೂ ನೀವು ನಿಮ್ಮ ಕಂಪನಿಗೆ ಈ ವಿವರಗಳನ್ನು ಸಲ್ಲಿಸಿಲ್ಲವಾದರೆ ಕೂಡಲೇ ನಿಮ್ಮ ಕಾನೂನು ಬದ್ಧ ಉಳಿತಾಯದ ವಿವರಗಳ ದಾಖಲಾತಿಗಳನ್ನು ಸಲ್ಲಿಸುವುದು ಈ ಕ್ಷಣದ ತುರ್ತ. ಇತರ ಯಾವುದೇ ತರಹದ ತೆರಿಗೆ ಪಾವತಿದಾರರು ಮಾರ್ಚ್ 31ರೊಳಗೆ ಚಾಪ್ಟರ್ 6ಎ ಅಡಿಯಲ್ಲಿ ನಿಮ್ಮ ಉಳಿತಾಯಕ್ಕೆ ಸಂಬಂಧಿಸಿದ ಹಣವನ್ನು ಮಾರ್ಚ್ 31ರೊಳಗೆ ಪಾವತಿಸಿ ಅದರ ರಸೀತಿ ಇಟ್ಟುಕೊಂಡು ನಂತರ ಐಟಿ ರಿಟರ್ನ್ಸ್ ಸಲ್ಲಿಸುವ ಸಂದರ್ಭದಲ್ಲಿ ಅದನ್ನು ಬಳಸಬೇಕು. ನೆನಪಿರಲಿ ಮಾರ್ಚ್ 31ರೊಳಗೆ ನೀವು ಇನ್​ವೆಸ್ಟ್ ಮಾಡಿದರೆ ಮಾತ್ರ ತೆರಿಗೆ ವಿನಾಯಿತಿ ಸಿಗಲು ಸಾಧ್ಯ.

    ತೆರಿಗೆ ಉಳಿತಾಯದ ಮಾರ್ಗ: ವಾರ್ಷಿಕ ವರಮಾನವು ತೆರಿಗೆ ವ್ಯಾಪ್ತಿಯನ್ನು ಮೀರಿದ ನಂತರ ತೆರಿಗೆ ವಿನಾಯಿತಿ ಪಡೆಯುವ ಅವಕಾಶವಿದ್ದು ಇದರ ನಡುವೆ ಸರ್ಕಾರವೇ ತೆರಿಗೆ ಉಳಿಸುವ ಮಾಗೋಪಾಯ ಗಳನ್ನು ಸೂಚಿಸಿರುವುದರಿಂದ ಕಾನೂನಿನ ಅಡಿಯಲ್ಲಿ ಅದರ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳಬಹುದು.

    ಐಟಿ ರಿಟರ್ನ್ಸ್ ಸಲ್ಲಿಕೆಗೂ ಗಡುವು: 2019-20ಕ್ಕೆ ರಿಟರ್ನ್ಸ್ ಸಲ್ಲಿಸದವರು ಈಗ ದಂಡದ ಸಮೇತ ಮಾ.31ರವರೆಗೆ ಸಲ್ಲಿಸಬಹುದು. ಅದಾದ ನಂತರ ದಂಡದ ಸಮೇತವೂ ಸಲ್ಲಿಸಲು ಸಾಧ್ಯವಿಲ್ಲ. ಮಾ.31ರ ನಂತರ ಗಡುವು ವಿಸ್ತರಿಸುವುದರ ಬಗ್ಗೆ ಅಧಿಸೂಚನೆ ಹೊರಡಿಸಿಲ್ಲ.

    ಕೋವಿಡ್ ಸಂಕಷ್ಟದಲ್ಲೂ ಐಟಿ ಫೈಲ್ ಮಾಡಲೇಬೇಕಾ?: ಕೆಲವರು ಕಳೆದ ವರ್ಷದ ರಿಟರ್ನ್ಸ್ ಡಿಸೆಂಬರ್​ನಲ್ಲಿ ಫೈಲ್ ಮಾಡುವಾಗ ಕೋವಿಡ್ ನೆಪವೊಡ್ಡುತ್ತಿದ್ದರು. ಆದರೆ ಲಾಕ್​ಡೌನ್ ಆರಂಭವಾಗುವ ಹೊತ್ತಿಗೆ ನಾವು ಆರ್ಥಿಕ ವರ್ಷದ ಕೊನೆಯ ವಾರದಲ್ಲಿ ಇದ್ದೆವು. ಈ ವರ್ಷ ರಿಟರ್ನ್ಸ್ ಸಲ್ಲಿಸುವಾಗ ಕೋವಿಡ್ ಕಾರಣ ಕೊಟ್ಟರೂ ನಿಮ್ಮ ಆದಾಯ, ತೆರಿಗೆ ವಿನಾಯಿತಿ ವ್ಯಾಪ್ತಿಯನ್ನು ಮೀರಿದ್ದರೆ ನೀವು ಐಟಿ ರಿಟರ್ನ್ಸ್ ಸಲ್ಲಿಸಲೇಬೇಕು.

    ಟಿಡಿಎಸ್: ಭಾರತದಲ್ಲಿ ಆದಾಯ ತೆರಿಗೆ ಇಲಾಖೆಯ ಸಿಪಿಸಿ (ಸೆಂಟ್ರಲೈಜ್ಡ್ ಪೊ›ಸೆಸಿಂಗ್ ಸೆಂಟರ್) ಮೂಲಕ ಆದಾಯ ತೆರಿಗೆ ರಿಟರ್ನ್ಸ್ ಪೊ›ಸೆಸ್ ಮಾಡಲಾಗುತ್ತದೆ. ಅನೇಕ ಮಂದಿ ತಮ್ಮ ಐಟಿ ರಿಟರ್ನ್ಸ್ ಸಲ್ಲಿಸುವಾಗ ಆದಾಯ ತೆರಿಗೆ 26ಎಎಸ್ ಫಾಮ್ರ್ ಮೂಲಕ ಬಂದಿರುವ ತೆರಿಗೆ ಕಡಿತವನ್ನು ಸರಿಯಾಗಿ ಲೆಕ್ಕಕ್ಕೆ ತೆಗೆದುಕೊಳ್ಳದೆ ಫೈಲ್ ಮಾಡುವುದರಿಂದಾಗಿ ಅನೇಕ ರಿಟರ್ನ್ಸ್ ಇನ್​ವ್ಯಾಲಿಡ್ ಆಗುತ್ತಿರುವುದು ಕೂಡ ಗಮನಿಸ ಬೇಕಾದ ಅಂಶ. ನೀವು ವೈಯಕ್ತಿಕವಾಗಿ ಫೈಲ್ ಮಾಡ ಬಹುದು ಅಥವಾ ತೆರಿಗೆ ವೃತ್ತಿಪರರ ಮೂಲಕ ಸಲ್ಲಿಸ ಬಹುದು ಆದರೆ ನಿಮ್ಮ ಖಾತೆಯಲ್ಲಿ ಕಡಿತವಾಗಿರುವ ಟಿಡಿಎಸ್ ಬಗ್ಗೆ ನಿಮಗೆ ತಿಳಿದಿರುವುದು ಒಳ್ಳೆಯದು.

    ಯಾವ ಸೆಕ್ಷನ್ ಏನು ಹೇಳುತ್ತದೆ?: ಆದಾಯ ತೆರಿಗೆ ಕಾಯ್ದೆಯ 80ಸಿ, 80ಸಿಸಿಸಿ, 80ಸಿಸಿಡಿಯ ಸೆಕ್ಷನ್ ತೆರಿಗೆ ಉಳಿತಾಯಕ್ಕೆ ಸಂಬಂಧಿಸಿದಂಥವು. ಇವುಗಳ ಅಡಿಯಲ್ಲಿ ನೀವು ಪಿಎಫ್, ಜೀವ ವಿಮೆ, ಸ್ಕೂಲ್ ಫೀ, ಪಿಪಿಎಫ್, ಜಿಪಿಎಫ್, ಪಿಂಚಣಿ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಮನೆ ಸಾಲದ ಮೇಲಿನ ಪ್ರಿನ್ಸಿಪಲ್ ಮೊತ್ತ, ಅಂಚೆ ಕಚೇರಿ ಉಳಿತಾಯ, ಎನ್​ಪಿಎಸ್, ಟೈಮ್ ಡೆಪಾಸಿಟ್ ಮುಂತಾದ ಒಂದೂವರೆ ಲಕ್ಷ ರೂ.ವರೆಗಿನ ಹಲವು ಉಳಿತಾಯಗಳ ಮೂಲಕ ಮಾಡಬಹುದು.

    ಚಾಪ್ಟರ್ 6ಎ: ಮೆಡಿಕಲ್ ವಿಮೆಯ ಮೊತ್ತ, ಅಂಗವಿಕಲರ ವೈದ್ಯಕೀಯ ವೆಚ್ಚ, ಅನುಸೂಚಿತ ಕಾಯಿಲೆಗಳಿಗೆ ವೈದ್ಯಕೀಯ ವೆಚ್ಚ, ಶೈಕ್ಷಣಿಕ ಸಾಲದ ಮೇಲಿನ ಬಡ್ಡಿ, ಎಲೆಕ್ಟ್ರಿಕ್ ವಾಹನದ ಮೇಲಿನ ಸಾಲದ ಬಡ್ಡಿ, ಮನೆ ಬಾಡಿಗೆ, ಡೊನೇಷನ್, ರಾಜಕೀಯ ಪಕ್ಷಗಳಿಗೆ ನೀಡಿದ ದೇಣಿಗೆ ಮುಂತಾದ ಮೊತ್ತಗಳಿಗೆ ಸಂಬಂಧಿಸಿದ ದಾಖಲೆಗಳು ನಿಮ್ಮತೆರಿಗೆಯನ್ನು ಉಳಿಸುತ್ತವೆ.

    (ಲೇಖಕರು ತೆರಿಗೆ ಮತ್ತು ಆರ್ಥಿಕ ತಜ್ಞರು. ಸಂಪರ್ಕಕ್ಕೆ 9845228316, [email protected])

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts