More

    ಮನೆಮಂದಿಯ ಮನಸ್ಸುಗಳ ಸಾಮರಸ್ಯದ ಚೈತ್ರದ ಗೌರಿ ಹಬ್ಬ

    (ಅಖಂಡ ಒಂದು ತಿಂಗಳು ನಡೆಯುವ ಚೈತ್ರ ಮಾಸದ ಗೌರೀಪೂಜೆ ವರುಷಪೂರ್ತಿ ಮನೆಮಂದಿಯ ಮನಸ್ಸುಗಳ ಸಾಮರಸ್ಯಕ್ಕೆ ಕಾರಣವಾಗುವ ಹಬ್ಬ. ಸಾಂಪ್ರದಾಯಿಕ ರೀತಿಯಲ್ಲಿ ಗೌರೀ-ಶಂಕರರನ್ನು ಆರಾಧಿಸುವ ಈ ಹಬ್ಬ ಹೆಣ್ಣುಮಕ್ಕಳಿಗೆ ಅಕ್ಷಯವಾದ ಸೌಭಾಗ್ಯದ ಫಲ ನೀಡುತ್ತದೆ ಎಂಬ ಪ್ರತೀತಿ ಇದೆ. ಈ ವರುಷ ಏಪ್ರಿಲ್ 15 ಚೈತ್ರ ಶುಕ್ಲ ತೃತೀಯಾದಿಂದ ಗೌರೀ ಹಬ್ಬದ ಸಂಭ್ರಮ ಪ್ರಾರಂಭವಾಗಿದ್ದು ಮೇ 14ರ ವೈಶಾಖ ಮಾಸದ ಅಕ್ಷಯ ತೃತೀಯಾ ದಿನದಂದು ಸಂಪನ್ನವಾಗಲಿದೆ)

    • ಮನೋಹರ ಜೊಶಿ

    ಯುಗಾದಿಯಂದು ಹೊಸ ವರುಷ ಪ್ರಾರಂಭವಾದ ನಂತರ ಮೂರನೇ ದಿನವನ್ನು ಗೌರೀತೃತೀಯ ಅಥವಾ ಗೌರೀ ತದಿಗೆಯೆಂದು ಕರೆಯುತ್ತಾರೆ. ಈಗಾಗಲೇ ಪ್ರಾರಂಭವಾಗಿರುವ ಈ ವ್ರತವು ಒಂದು ತಿಂಗಳ ಕಾಲ, ಅಂದರೆ ಅಕ್ಷಯ ತೃತೀಯದವರೆಗೂ ಆಚರಿಸಲ್ಪಡುತ್ತದೆ.

    ಚೈತ್ರ ಮಾಸದ ಶುಕ್ಲ ತೃತೀಯಾ, ಕೃಷ್ಣ ತೃತೀಯಾ ಮತ್ತು ವೈಶಾಖ ಮಾಸದ ಅಕ್ಷಯ ತೃತೀಯಾ ಈ ಮೂರೂ ತೃತೀಯಗಳಿಗೆ ಗೌರೀ ತೃತೀಯಾ ಅಥವಾ ಗೌರೀತದಿಗೆ ಎಂತಲೂ ಹೇಳುತ್ತಾರೆ. ಇದು ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾದ ಮತ್ತು ಸಂಪ್ರದಾಯ ಬದ್ಧವಾದ ವ್ರತ. ಹೆಣ್ಣುಮಕ್ಕಳ, ಮುತೆôದೆಯರ ಗೌರೀ ಹಬ್ಬವೆಂದೇ ಪ್ರಸಿದ್ಧ. ಚೈತ್ರದ ಗೌರಿಯನ್ನು ಪ್ರತಿಷ್ಠಾಪಿಸಿ ಒಂದು ತಿಂಗಳು ಪೂಜಿಸುವ ಸಂಭ್ರಮ ಎಲ್ಲೆಡೆ ಕಂಡುಬರುತ್ತದೆ. ಮೊದಲ ದಿನ ಮನೆಯ ಒಂದು ಮಾಡು (ಗೂಡು) ಸ್ವಚ್ಛಗೊಳಿಸಿ, ತಳಿರು-ತೋರಣಗಳಿಂದ ಶೃಂಗರಿಸುತ್ತಾರೆ. ರಂಗೋಲಿ ಚಿತ್ತಾರಗಳನ್ನು ಬಿಡಿಸುತ್ತಾರೆ. ಅಲ್ಲಿ ಚೈತ್ರದ ಗೌರಿಯ ಮೂರ್ತಿಯನ್ನು ಕಟ್ಟಿಗೆಯ ತೊಟ್ಟಿಲಿನಲ್ಲಿ ಇಟ್ಟು ಪ್ರತಿಷ್ಠಾಪಿಸುತ್ತಾರೆ. ಜತೆಗೆ ತಾಮ್ರದ ಗಂಗಾನೀರಿನ ಗಿಂಡಿಯನ್ನು ಇಟ್ಟು ಅದರಲ್ಲಿ ಭಾಗೀರಥಿದೇವಿಯನ್ನು ಆವಾಹನೆ ಮಾಡುತ್ತಾರೆ. ಮೊದಲು ಗಣೇಶನನ್ನು ಪೂಜಿಸಿ ನಂತರ ಶಿವನನ್ನು ಮತ್ತು ಗೌರಿ ರೂಪದಲ್ಲಿರುವ ಪಾರ್ವತಿದೇವಿಯನ್ನು ಗಂಧ, ಪುಷ್ಪ, ಗರಿಕೆ, ವಸ್ತ್ರ, ಆಭರಣಗಳಿಂದ ಅಲಂಕರಿಸುತ್ತಾರೆ.

    ಗೌರಿಗೆ ಅರಿಶಿನ, ಕುಂಕುಮ, ಮಾಂಗಲ್ಯ, ಕಾಲುಂಗುರ ಅರ್ಪಿಸುತ್ತಾರೆ. ಅಕ್ಕಿ, ಅಡಿಕೆ, ತಾಂಬೂಲದ ಜತೆಗೆ ಹಸಿರು ಕುಪ್ಪಸವನ್ನೂ ಸೇರಿಸಿ ಉಡಿ ತುಂಬಿ ಭಕ್ತಿಯಿಂದ ಪೂಜಿಸುತ್ತಾರೆ. ಗೌರಿಯ ಸ್ತೋತ್ರಗಳನ್ನು ಪಠಿಸುತ್ತಾರೆ. ತಮ್ಮ ಸೌಭಾಗ್ಯ ವೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ತವರುಮನೆ ಹಾಗು ಗಂಡನ ಮನೆ ಸದಾ ಕಾಲ ಸುಖ, ಶಾಂತಿ ಮತ್ತು ಸಮೃದ್ಧಿಯಿಂದ ಕೂಡಿರಲಿ ಎಂದು ಬೇಡಿಕೊಳ್ಳುತ್ತಾರೆ. ಉತ್ತಮ ಸಂಸಾರ, ಜ್ಞಾನಕ್ಕಾಗಿ ಕೋರಿಕೆ ಸಲ್ಲಿಸುತ್ತಾರೆ. ಗೌರಿಯ ಮುಂದೆ ಒಂದು ತಾಮ್ರದ ಪಾತ್ರೆಯಲ್ಲಿ ಸೋಸಿದ ಮಣ್ಣು ತುಂಬಿ ಅದಕ್ಕೆ ನೀರು ಸಿಂಪಡಿಸಿ ಭತ್ತ ಅಥವಾ ಗೋದಿಯ ಕಾಳುಗಳನ್ನು ಹಾಕಿ ಬೆಳೆಸುತ್ತಾರೆ. ಸಸ್ಯಗಳು ಎರಡು ವಾರಗಳಲ್ಲಿ ಚೆನ್ನಾಗಿ ಬೆಳೆದು ನಿಂತರೆ ಆ ವರುಷ ಮಳೆ ಬೆಳೆ ಚೆನ್ನಾಗಿದ್ದು ಫಸಲು ಉತ್ತಮ ವಾಗಿ ಬಂದು ರೈತಾಪಿ ಜನರ ಬದುಕು ಹಸನಾಗುತ್ತದೆ ಎಂಬ ನಂಬಿಕೆ ಇದೆ.

    ಕೋಸಂಬರಿ-ಪಾನಕದ ಪ್ರಸಾದ

    ಪೂಜೆಯ ಸಮಯದಲ್ಲಿ ಸುಮಂಗಲಿ ಯರನ್ನು ಆಹ್ವಾನಿಸಿ ಹೆಸರು ಬೇಳೆ, ಕಡಲೆ ಬೇಳೆಯಿಂದ ತಯಾರಿಸಿದ ವಿಧವಿಧವಾದ ಕೋಸಂಬರಿಗಳು ಮತ್ತು ಮಾವಿನಕಾಯಿ, ನಿಂಬೆ ಹಣ್ಣುಗಳ ತಂಪಾದ ಪಾನಕ ತಯಾರಿಸಿ ಭಕ್ತಿ ಭಾವದಿಂದ ಅರ್ಪಿಸಿ ಆರತಿ ಬೆಳಗುತ್ತಾರೆ. ಮುತೆôದೆಯರಿಗೆ ಮರದ ಬಾಗಿನ ಕೊಟ್ಟು ಕೋಸಂಬರಿ, ಪಾನಕಗಳ ಪ್ರಸಾದ ವಿತರಿಸಿ ದೀರ್ಘ ಸೌಭಾಗ್ಯಕ್ಕಾಗಿ ಅವರ ಆಶೀರ್ವಾದ ಪಡೆಯುತ್ತಾರೆ. ಬೇಸಿಗೆ ಕಾಲವಾದ್ದರಿಂದ ಕೋಸಂಬರಿ- ಪಾನಕ ದೇಹಕ್ಕೆ ತಂಪು ನೀಡುವುದರ ಜತೆಗೆ ಆರೋಗ್ಯಕ್ಕೂ ಪೂರಕವಾಗಿರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts