More

    ಜೀವದ ಗೆಳೆಯ ಭಾವದ ಒಡೆಯ; ಸಿ.ಅಶ್ವಥ್ ಜಯಂತಿ ಸ್ಮರಣೆ ಇಂದು

    ಜೀವದ ಗೆಳೆಯ ಭಾವದ ಒಡೆಯ; ಸಿ.ಅಶ್ವಥ್ ಜಯಂತಿ ಸ್ಮರಣೆ ಇಂದು| ವೈ.ಕೆ.ಮುದ್ದುಕೃಷ್ಣ

    ಎಪ್ಪತ್ತರ ದಶಕದಲ್ಲಿ ಸಿ.ಅಶ್ವಥ್ ಐಟಿಐನಲ್ಲಿ ಉದ್ಯೋಗಿಯಾಗಿದ್ದರು, ನಾನು ಅಬ್ಕಾರಿ ಇಲಾಖೆಯಲ್ಲಿದ್ದೆ. ನಾವು ಗೆಳೆಯರು ಸೇರಿ ಕೈಗಾರಿಕೆಗಳ ಕಲಾಸಂಸ್ಥೆಗಳನ್ನು ಒಗ್ಗೂಡಿಸಿ ಯುವರಂಗ ಸ್ಥಾಪನೆ ಮಾಡಿದ್ದೇವು. ಅಶ್ವಥ್, ಟಿ.ಎನ್.ಸೀತಾರಾಂ, ಸಿ.ಆರ್.ಸಿಂಹ, ಶ್ರೀನಿವಾಸ್ ಜಿ. ಕಪ್ಪಣ್ಣ ಅವರು ನಟರಂಗ ಸ್ಥಾಪನೆ ಮಾಡಿಕೊಂಡು ನಾಟಕಗಳನ್ನಾಡುತ್ತಿದ್ದರು. ಅಶ್ವಥ್ ಅವುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದರು. ರವೀಂದ ಕಲಾಕ್ಷೇತ್ರದ ಬಳಿಯ ಕ್ಯಾಂಟೀನ್ ಎದುರು ನಾವು ಪರಸ್ಪರ ಎದುರಿಗೆ ಸಿಕ್ಕರು ಮಾತನಾಡುತ್ತಿರಲಿಲ್ಲ. ಎರಡು ಸಂಘಟನೆಗಳು ಬದ್ಧ ವೈರಿಗಳ ರೀತಿ ಪೈಪೋಟಿ ಮೇಲೆ ಕಾರ್ಯಕ್ರಮ ನೀಡುತ್ತಿದ್ದೇವು. ‘ಅಶ್ವಥ್​ಗೆ ಧಿಮಾಕು ಅವರನ್ನೇನು ಮಾತನಾಡಿಸುವುದು’ ಎಂಬ ಭಾವನೆ ನನಗಿದ್ದರೆ, ’ನಾನು ಅಬ್ಕಾರಿ ಇಲಾಖೆಯವ, ಆತನಿಗೇನು ಗೊತ್ತು’ ಎಂಬ ಭಾವನೆ ಅವರಿಗೆ ಇತ್ತು.

    ಎಂಬತ್ತರ ದಶಕದಲ್ಲಿ ಸುಗಮ ಸಂಗೀತದ ಧ್ವನಿಸುರಳಿಗಳ ಯುಗ ಆರಂಭವಾಯಿತು. ಮೈಸೂರು ಮಲ್ಲಿಗೆ, ನಿತ್ಯೋತ್ಸವ ಮೊದಲಾದವು ಹೊರಬಂದವು. ನನ್ನದು ಮೊದಲ ಧ್ವನಿ ಸುರಳಿ ಬಂತು. 1988ರಲ್ಲಿ ಅಶ್ವಥ್ ಮತ್ತು ನಾನು ಎದುರಿಗೆ ಸಿಕ್ಕರೆ ಪರಸ್ಪರ ನಗುವ ಮತ್ತು ಹಲೋ ಹೇಳುವ ಮಟ್ಟಿಗೆ ನಮ್ಮ ಸಂಬಂಧವಿತ್ತು. ಅದೇ ಸಂದರ್ಭದಲ್ಲಿ ಇಂಗ್ಲೆಂಡ್​ನ ಮ್ಯಾಂಚೆಸ್ಟರ್​ನ ಕನ್ನಡ ಸಮ್ಮೇಳನದಲ್ಲಿ ಇಬ್ಬರ ಗಾಯನವೂ ಇತ್ತು. ಪೈಪೋಟಿ ಮೇಲೆ ತಯಾರಿ ಮಾಡಿಕೊಂಡಿದ್ದೇವು. ಆದರೆ ಅಶ್ವಥ್ ಅವರಿಗೆ ಸರಿಯಾದ ಕಾರ್ಯಕ್ರಮ ನೀಡಲಾಗಲಿಲ್ಲ. ನನ್ನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಅಲ್ಲಿಂದ ವಾಪಸ್ ಬೆಂಗಳೂರಿಗೆ ಬಂದ ನಂತರ ನಾಗತಿಹಳ್ಳಿ ಚಂದ್ರಶೇಖರ್ ಅವರ ರೆಕಾರ್ಡಿಂಗ್ ಒಂದಕ್ಕೆ ಸ್ಟುಡಿಯೋದಲ್ಲಿದ್ದಾಗ ಅಲ್ಲಿಗೆ ಬಂದ ಅಶ್ವಥ್ ವಾಪಸ್ ಹೋದರು. ಅದೇ ಸಂದರ್ಭಕ್ಕೆ ಬಂದ ಎ.ಎಸ್.ಮೂರ್ತಿ ಅವರ ಅಳಿಯ ಗೌರಿಸುಂದರ್ ನನ್ನನ್ನು ಮೂರ್ತಿ ಅವರ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ಅಶ್ವಥ್, ರಿದಂ ಬಾಲಿ ಹಾಗೂ ಇತರರು ಇದ್ದರು. ರಾತ್ರಿ 2 ಗಂಟೆಯ ತನಕ ನಮ್ಮ ಚರ್ಚೆ ಬಿಸಿಬಿಸಿಯಾಗಿ ನಡೆಯಿತು. ರಾತ್ರಿ ನನ್ನ ಕಾರಿನಲ್ಲಿ ಅಶ್ವಥ್ ಅವರನ್ನು ಕರೆದುಕೊಂಡು ಅವರ ಎನ್.ಆರ್.ಕಾಲನಿ ಮನೆಗೆ ಬಿಟ್ಟೆ. ಕಾರಿನಿಂದ ಇಳಿದವರೇ ನನ್ನನ್ನು ತಬ್ಬಿ ಅಳುತ್ತ ‘ಗುರುವೇ ನಾವಿಬ್ಬರು ಇನ್ನು ಮುಂದೆ ದೇಹ ಎರಡು ಜೀವ ಒಂದು ಎಂಬಂತೆ ಇರಬೇಕು’ ಎಂದರು. ಅಲ್ಲಿಂದ ನಮ್ಮ ಸ್ನೇಹ 30 ವರ್ಷಗಳಷ್ಟು ಕಾಲ ಇತ್ತು. ಸುಗಮ ಸಂಗೀತ ಕ್ಷೇತ್ರಕ್ಕೆ ಇಬ್ಬರು ಒಟ್ಟಿಗೆ ದುಡಿದೆವು. ತೊಂಬತ್ತರ ದಶಕದ ಆರಂಭದಲ್ಲಿ ಡಾ.ಜಿ.ಎಸ್. ಶಿವರುದ್ರಪ್ಪ ಅವರ ನೇತೃತ್ವದಲ್ಲಿ ಧ್ವನಿ ಸುಗಮ ಸಂಗೀತ ಕೇಂದ್ರ ಆರಂಭ ಮಾಡಿದೆವು. ಇದು ಸುಗಮ ಸಂಗೀತ ಕ್ಷೇತ್ರದ ಮೊದಲ ಸಂಘಟನೆ. ಮೈಸೂರು ಅನಂತಸ್ವಾಮಿ, ಲೀಲಾವತಿ, ಕಾಳಿಂಗರಾಯರು ಅವರ ಪಾಡಿಗೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಆದರೆ ಗಟ್ಟಿಯಾದ ನೆಲೆ ಬಂದಿದ್ದು ನೆಲೆ ಸಂಸ್ಥೆಯಿಂದ. ಜಿಎಸ್​ಎಸ್ ಅವರ ಜತೆಗೆ ಬಿ.ಆರ್. ಲಕ್ಷ್ಮಣರಾವ್, ಕಪ್ಪಣ್ಣ, ಮೈಸೂರು ಅನಂತಸ್ವಾಮಿ, ನ್ಯಾ. ಎ.ಜೆ. ಸದಾಶಿವ, ಎಸ್.ಜಿ. ವಾಸುದೇವ್ ಇನ್ನೂ ಹಲವರು ನಮ್ಮೊಂದಿಗೆ ಇದ್ದರು. ಅದರ ಮೂಲಕ ನಾವು 14 ಜಿಲ್ಲೆಗಳಲ್ಲಿ ಸುಗಮ ಸಂಗೀತ ಯಾನ ಮಾಡಿದೆವು. ಇದರಿಂದ 1993ರ ವೇಳೆಗೆ ನಮ್ಮ ಬಾಂಧವ್ಯ ಇನ್ನಷ್ಟು ಗಟ್ಟಿಯಾಯಿತು. ಅದೇ ಸಂದರ್ಭದಲ್ಲಿ ಕೊಪ್ಪಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುಗಮ ಸಂಗೀತ ಕುರಿತ ಗೋಷ್ಠಿಗೆ ನಮ್ಮ ಹೋರಾಟ ನಡೆಯಿತು. ಅದರಲ್ಲಿ ಯಶಸ್ವಿಯಾದೆವು. 1994ರ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿಯೂ ಸುಗಮ ಸಂಗೀತ ಗೋಷ್ಠಿ ಇತ್ತು. 1993ರ ದಸರಾದಲ್ಲಿ ಅರಮನೆ ಆವರಣದ ಕಾರ್ಯಕ್ರಮದಲ್ಲಿ ಸುಗಮ ಸಂಗೀತಕ್ಕೂ ಅವಕಾಶಕ್ಕೆ ದೊಡ್ಡ ಚಳವಳಿಯನ್ನೇ ನಡೆಸಿದೆವು.

    ಜಿಎಸ್​ಎಸ್ ಅವರು 1998ರಲ್ಲಿ ನಮ್ಮನ್ನು ಕರೆದು ಕುವೆಂಪು ಅವರ ವೈಚಾರಿಕ ಗೀತೆಗಳ ಪರಿಚಯ ಮಾಡುವಂತೆ ಸಲಹೆ ನೀಡಿದರು. ದೊಡ್ಡ ಚಳವಳಿಯನ್ನೇ ನಡೆಸಿದೆವು. 1999ರ ಡಿಸೆಂಬರ್ 29ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಒಂದು ಸಾವಿರ ಕಂಠದ ಗಾಯನ ನಡೆಯಿತು. ನಾನು ಸಂಘಟನೆ ಮಾಡಿದರೆ, ಅಶ್ವಥ್ ಗಾಯಕರನ್ನು ತಯಾರು ಮಾಡಿದರು. ಕನ್ನಡವೇ ಸತ್ಯ ಕಾರ್ಯಕ್ರಮ ಸಹ ಇದೇ ರೀತಿ ನಡೆಯಿತು. ನಾವು ಸಂಘಟನೆ ಆರಂಭಿಸಿದ ಕಾಲದಲ್ಲಿ ಸುಗಮ ಸಂಗೀತದಲ್ಲಿ ಬೆರಳೆಣಿಕೆಯಷ್ಟು ಗಾಯಕರಿದ್ದರು. ಇವತ್ತು ಆ ಸಂಖ್ಯೆ ನೂರಾರು ಆಗಿವೆ. ಶಾಸ್ತ್ರೀಯ ಸಂಗೀತದ ಭದ್ರ ಬುನಾದಿ ಇಲ್ಲದಿದ್ದರು ಅದ್ಭುತವಾದ ಸಂಯೋಜನೆ ಮಾಡುತ್ತಿದ್ದರು. ಸಂಗೀತದ ಮೂಲಕ ಜೀವಿಸುತ್ತಿದ್ದರು. ಅವರ ಸಂಯೋಜನೆಯ ಗೀತೆಗಳೆಲ್ಲವೂ ಅಜರಾಮರ. ಅವರ ಸಂಯೋಜನೆಯಲ್ಲಿ ರತ್ನಮಾಲಾ ಪ್ರಕಾಶ್, ಮಾಲತಿ ಶರ್ವ, ಬಿ.ಆರ್. ಛಾಯಾ, ಎಂ.ಡಿ. ಪಲ್ಲವಿ ಸೇರಿದಂತೆ ಹಲವರು ಬೆಳೆದು ಬಂದಿದ್ದಾರೆ. ಸುಗಮ ಸಂಗೀತ ಪರಿಷತ್ ಕಟ್ಟುವಲ್ಲಿಯೂ ಅಶ್ವಥ್ ಅವರ ಶ್ರಮ ಅಪಾರವಾಗಿದೆ. ಸಿಟ್ಟು, ಕೋಪ, ತಾಪ ಎಲ್ಲವನ್ನೂ ಮೀರಿದ ವ್ಯಕ್ತಿತ್ವ ಅವರದು. ಕಾವ್ಯದಲ್ಲಿ ಚಿತ್ತ ಕಾಣುತ್ತಿದ್ದರು. ಅದೇ ನಮಗೆ ಪ್ರೇರಣೆ ಎಂದು ಸದಾ ಹೇಳುತ್ತಿದ್ದರು.

    ಸುಗಮ ಸಂಗೀತ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಅನನ್ಯ. ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕ ನಾನು ಧನ್ಯ. ಅಶ್ವಥ್ ನನ್ನ ಜೀವದ ಗೆಳೆಯ.

    (ಲೇಖಕರು ಗಾಯಕರು, ನಿವೃತ್ತ ಅಧಿಕಾರಿ)

    ಕುವೆಂಪು ಸಾಹಿತ್ಯದಲ್ಲಿ ಪೂರ್ಣತ್ವದ ದರ್ಶನ; ನುಡಿದಂತೆ ಬದುಕಿದ ರಸಋಷಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts