More

    ಉಪ್ಪಿನಂಗಡಿ ಹಿಂಸಾಚಾರ: ಹೆಚ್ಚುವರಿ ಪೊಲೀಸ್ ಬಂದೋಬಸ್ತ್

    ಮಂಗಳೂರು: ಉಪ್ಪಿನಂಗಡಿ ಪೊಲೀಸ್ ಠಾಣೆ ಎದುರು ಮಂಗಳವಾರ ರಾತ್ರಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಪುತ್ತೂರು ಉಪವಿಭಾಗವಾದ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕುಗಳಲ್ಲಿ ಡಿ.17ರ ಮಧ್ಯರಾತ್ರಿ 12ರ ತನಕ ಸೆಕ್ಷನ್ 144ರಡಿ ನಿಷೇಧಾಜ್ಞೆ ವಿಧಿಸಿ ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್ ಆದೇಶ ಹೊರಡಿಸಿದ್ದಾರೆ.

    ಪುತ್ತೂರು, ಕಡಬ, ಬೆಳ್ಳಾರೆ, ಸವಣೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ಕಡೆಯಿಂದ ಪಿಎಫ್‌ಐ ಸಂಘಟನೆ ಕಾರ್ಯಕರ್ತರು ಉಪ್ಪಿನಂಗಡಿಗೆ ಆಗಮಿಸಿ ಕಾನೂನು ಕೈಗೆತ್ತಿಕೊಳ್ಳುವ ಸನ್ನಿವೇಶ ನಿರ್ಮಾಣ ಮಾಡಿದ್ದು, ಮುಂದುವರಿದು ಉಪವಿಭಾಗ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆಯ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕ ಸಭೆ, ಸಮಾರಂಭ, ಮೆರವಣಿಗೆ ನಡೆಸುವಂತಿಲ್ಲ, ಗುಂಪು ಸೇರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಆರೋಪಿಗಳ ವಿಚಾರಣೆ: ಪೊಲೀಸ್ ವಶದಲ್ಲಿದ್ದ ಪಿಎಫ್‌ಐನ ಝಕಾರಿಯಾ ಕೊಡಿಪ್ಪಾಡಿ, ಮುಸ್ತಾಫ ಲತೀಫಿ ಹಾಗೂ ತಲವಾರು ದಾಳಿ ಕೃತ್ಯದ ಪ್ರಮುಖ ಆರೋಪಿ ಸಿನಾನ್ ಕೊಯಿಲ ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಇಬ್ಬರಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಸಿನಾನ್ ಕೊಯಿಲನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

     ಬೆದರಿಕೆ ವಿರುದ್ಧ ದೂರು: ಉಪ್ಪಿನಂಗಡಿ ಘಟನೆಗಳಿಗೆ ಸಂಬಂಧಿಸಿ ಪೊಲೀಸ್ ಸಿಬ್ಬಂದಿಗೆ ವಾಟ್ಸಾಪ್ ಗ್ರೂಪ್‌ನಲ್ಲಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಕದ್ರಿ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರ ಹತ್ಯೆಗೆ ಸಂಬಂಧಿಸಿ ಪ್ರಚೋದನಾಕಾರಿ ಹೇಳಿಕೆ ನೀಡಿ ಭಯದ ವಾತಾವರಣ ಸೃಷ್ಟಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರದೀಪ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

    ಬಿಗು ಭದ್ರತೆ: ಹಿಂಸಾಚಾರ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ರಾಜ್ಯ ಮೀಸಲು ಪೊಲೀಸ್ ಪಡೆಯ 3 ಪ್ಲಟೂನ್‌ಗಳನ್ನು ಪೇಟೆಯ ಆಯಕಟ್ಟಿನ ಜಾಗದಲ್ಲಿ ನಿಯೋಜಿಸಲಾಗಿದೆ. ಜಿಲ್ಲೆಯ ಇತರ ಪೊಲೀಸ್ ಠಾಣೆಗಳ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಮಂಗಳೂರು, ಸುಳ್ಯ, ಕಡಬ, ಬಂಟ್ವಾಳದ ಪೊಲೀಸರನ್ನೂ ಉಪ್ಪಿನಂಗಡಿ ಸುತ್ತಮುತ್ತ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

    ಅಗತ್ಯವಿದ್ದರೆ ಮಧ್ಯಪ್ರವೇಶ: ಗಲಭೆಗೆ ಸಂಬಂಧಿಸಿ ಸಹಾಯಕ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿ ಜತೆ ಮಾತನಾಡಿದ್ದೇನೆ. ಅಗತ್ಯವಿದ್ದರೆ ಸ್ಥಳಕ್ಕೆ ನೀಡಿ, ಶಾಂತಿ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ. ಪೊಲೀಸರ ವಿಚಾರಣೆಗೆ ಅಡ್ಡಿಪಡಿಸಲು ಸಾರ್ವಜನಿಕರಿಗೆ ಅವಕಾಶವಿಲ್ಲ. ಪೊಲೀಸರು ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದಾದರೆ, ಜಿಲ್ಲಾಧಿಕಾರಿ ಅಧ್ಯಕ್ಷತೆಯ ಪೊಲೀಸ್ ಕಂಪ್ಲೇಂಟ್ ಗ್ರಿವೆನ್ಸ್ ಅಥಾರಿಟಿಗೆ ದೂರು ನೀಡಬಹುದು. ಪ್ರತಿಭಟನೆ ಬದಲು ಕಾನೂನು ಪ್ರಕಾರ ಮುಂದುವರಿಯಲು ಅವಕಾಶವಿದೆ ಎಂದರು.

    ಮುಗ್ಧರಿಗೆ ಅನ್ಯಾಯವಾಗಲ್ಲ: ಪಶ್ವಿಮ ವಲಯ ಐಜಿಪಿ ದೇವಜ್ಯೋತಿ ರೇ, ಎಸ್.ಪಿ ಹೃಷಿಕೇಶ್ ಸೋನಾವಣೆ, ಅಡಿಷನಲ್ ಎಸ್ಪಿ. ಶಿವಕುಮಾರ್ ಗುನಾರೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಹೃಷಿಕೇಶ್ ಸೋನಾವಣೆ, ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡೂ ತಲವಾರು ದಾಳಿಯ ತನಿಖೆ ನಡೆಯುತ್ತಿದೆ. ನೈಜ ಆರೋಪಿಗಳನ್ನು ಪತ್ತೆ ಹಚ್ಚಲು ಇಲಾಖೆ ಶ್ರಮಿಸುತ್ತಿದೆ. ಖಚಿತ ಮಾಹಿತಿ ಆಧಾರದಲ್ಲಿ ಮೂವರು ಪಿಎಫ್‌ಐ ಕಾರ್ಯಕರ್ತರನ್ನು ವಿಚಾರಣೆಗಾಗಿ ಕರೆಸಲಾಗಿತ್ತು. ಅದನ್ನು ಆಕ್ಷೇಪಿಸಿ ಪ್ರತಿಭಟನೆ ನಡೆಸಿದ ಗುಂಪೊಂದು ಠಾಣೆಗೆ ನುಗ್ಗಲೆತ್ನಿಸಿ ಹಿಂಸಾತ್ಮಕವಾಗಿ ವರ್ತಿಸಿದಾಗ ಪೊಲೀಸ್ ಲಾಠಿಚಾರ್ಜ್ ಮಾಡಬೇಕಾಯಿತು. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು. ಬೆದರಿಕೆಯಿಂದ ಇಲಾಖೆಯನ್ನು ಮಣಿಸುವ ಭ್ರಮೆ ಯಾರಿಗೂ ಬೇಡ. ಪ್ರಕರಣದಲ್ಲಿ ಅಮಾಯಕರು ಸಿಲುಕದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.

    7 ಪೊಲೀಸರಿಗೆ ಗಾಯ, ವಾಹನಗಳಿಗೆ ಹಾನಿ: ಪಿಎಫ್‌ಐ ಕಾರ್ಯಕರ್ತರು ಮಂಗಳವಾರ ರಾತ್ರಿ ನಡೆಸಿದ ಪ್ರತಿಭಟನೆ ಹಿಂಸಾರೂಪ ತಾಳಿ ಲಾಠಿಚಾರ್ಜ್ ನಡೆದು ಏಳು ಮಂದಿ ಪೊಲೀಸರ ಸಹಿತ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಹಳೆಗೇಟ್‌ನ ಸುಬ್ರಹ್ಮಣ್ಯ ಕ್ರಾಸ್ ಬಳಿಯ ಮೀನಿನ ಅಂಗಡಿಯೊಂದಕ್ಕೆ ತಲವಾರು ದಾಳಿ ನಡೆಸಿ ಮೂವರನ್ನು ಕಡಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಮೂವರು ಪಿಎಫ್‌ಐ ಮುಖಂಡರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದನ್ನು ಖಂಡಿಸಿ ಬೆಳಗ್ಗಿನಿಂದ ರಾತ್ರಿವರೆಗೆ ನಡೆದ ಪ್ರತಿಭಟನೆ ನಂತರ ಹಿಂಸಾರೂಪ ಪಡೆದಿತ್ತು.

    ನಮ್ಮ ನಾಯಕರನ್ನು ಬಿಡುಗಡೆಗೊಳಿಸದೆ ನಿರ್ಗಮಿಸುವುದಿಲ್ಲ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಪೊಲೀಸ್ ಜೀಪು ಹಾಗೂ ಪೊಲೀಸ್ ಕೌಂಟರಿನ ಗಾಜುಗಳಿಗೆ ಕಲ್ಲೆಸೆದು ಹಾನಿಗೊಳಿಸಿದ್ದು, ಅಧಿಕಾರಿಗಳ ಮೇಲೂ ಮುಗಿಬಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಪೊಲೀಸರು ಲಾಠಿಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು.

    ಈ ವೇಳೆ ಡಿವೈಎಸ್ಪಿ ಗಾನಾ ಪಿ. ಕುಮಾರ್, ಎಸ್‌ಐ ಪ್ರಸನ್ನ, ಮಹಿಳಾ ಎಸ್‌ಐ ಓಮನಾ, ಸಿಬ್ಬಂದಿ ರೇಣುಕಾ, ಶರೀಫ್ ನದಾಪ್, ಶೇಷಾದ್ರಿ, ಹರೀಶ್ ಹಾಗೂ ಕಿರಣ್ ಕುಮಾರ್ ಗಾಯಗೊಂಡರು. 144 ಸೆಕ್ಷನ್ ಉಲ್ಲಂಘನೆ ಹಾಗೂ ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಆರೋಪದನ್ವಯ ಮೂರು ಪ್ರಕರಣಗಳು ದಾಖಲಾಗಿವೆ. ಸ್ಥಳದಲ್ಲಿ ಭಾರಿ ಸಂಖ್ಯೆಯ ಚಪ್ಪಲಿಗಳು, ಜಲ್ಲಿ ಕಲ್ಲುಗಳು ಕಂಡುಬಂದಿವೆ.
    ಲಾಠಿಚಾರ್ಜ್‌ಗೂ ಮುನ್ನ ಉಪ್ಪಿನಂಗಡಿಯ ಕಾಳಿಕಾಂಬಾ ಭಜನಾ ಮಂಡಳಿಯ ಏಕಾದಶಿ ಭಜನಾ ಪ್ರಯುಕ್ತ ನಡೆದ ಉಲ್ಪೆ ಮೆರವಣಿಗೆ ಸುಸೂತ್ರವಾಗಿ ಇದೇ ಬೀದಿಯಲ್ಲಿ ಹಾದು ಹೋಗಿತ್ತು.

    ಗೇಟು ಹಾಕಿದ ಮಸೀದಿ: ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗುತ್ತ ನಡೆಸಿದ ಪ್ರತಿಭಟನೆಯಲ್ಲಿ ಸ್ಥಳೀಯರಿಗಿಂತ ಹೆಚ್ಚಾಗಿ ಹೊರಗಿನ ಯುವಕರೇ ಹೆಚ್ಚು ಕಾಣಿಸಿಕೊಂಡಿದ್ದರು. ಹಿರಿಯರ ಮಾತನ್ನೂ ಕೇಳದೆ ಪ್ರತಿಭಟನೆ ಮುಂದುವರಿಸಿದಾಗ ಸಮೀಪದ ಮಸೀದಿ ಪ್ರಾಂಗಣ ಪ್ರವೇಶಿಸದಂತೆ ಪ್ರಧಾನ ಗೇಟು ಹಾಕಲಾಗಿತ್ತು. ಲಾಠಿ ಚಾರ್ಜ್ ನಡೆದಾಗ ಪ್ರತಿಭಟನಾಕಾರರು ಮಸೀದಿಯ ಆವರಣಗೋಡೆ ಜಿಗಿದು ಬಂದಿದ್ದು, ಬೆನ್ನಟ್ಟಿ ಬಂದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು.

    ಗಾಯಾಳುಗಳ ಮುಗ್ಧತೆ ಬಯಲು: ನಾವು ಅಮಾಯಕರು. ದೂರದ ಊರಿನಿಂದ ಸಂಬಂಧಿಕರ ಮನೆಗೆ ಹೋಗಲೆಂದು ಉಪ್ಪಿನಂಗಡಿಗೆ ಬಂದು ನಮಾಜು ಸಲ್ಲಿಸಲು ಮಸೀದಿಗೆ ಹೋಗಿ ಹಿಂತಿರುಗುವಾಗ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಲಾಠಿಯೇಟು ತಿಂದು ಗಾಯಗೊಂಡವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಆದರೆ ಇವರು ಪ್ರತಿಭಟನೆ ಸ್ಥಳದಲ್ಲಿ ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಿರುವ ವಿಡಿಯೋ ಕ್ಲಿಪಿಂಗ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

    ಗೃಹಸಚಿವರ ಭೇಟಿಯಾದ ಶಾಸಕರು:   ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕುರಿತು ದ.ಕ. ಜಿಲ್ಲಾ ಶಾಸಕರ ನಿಯೋಗ ಬುಧವಾರ ಬೆಳಗಾವಿ ಸುವರ್ಣಸೌಧದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಚರ್ಚಿಸಿತು. ಪೊಲೀಸರ ಮೇಲೆ ಹಲ್ಲೆ ನಡೆಸಿ ಠಾಣೆಯೊಳಗೆ ಪ್ರವೇಶಿಸಿ ಸಿಬ್ಬಂದಿಯ ಮೇಲೆ ದುರ್ವರ್ತನೆ ತೋರಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂತಹ ಘಟನೆಗಳನ್ನು ಹತ್ತಿಕ್ಕುವ ಕೆಲಸಕ್ಕಾಗಿ ಗೃಹ ಇಲಾಖೆಯಿಂದ ಸೂಕ್ತ ನಿರ್ದೇಶನ ಹೊರಬೀಳಬೇಕು ಎಂದು ಒತ್ತಾಯಿಸಿದರು. ನಿಯೋಗದಲ್ಲಿ ಸಚಿವ ಎಸ್.ಅಂಗಾರ, ಶಾಸಕರಾದ ಡಾ.ಭರತ್ ಶೆಟ್ಟಿ, ಸಂಜೀವ ಮಠಂದೂರು, ರಾಜೇಶ್ ನಾಯ್ಕ, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.

    ನಾಳೆ ಪಿಎಫ್‌ಐ ಎಸ್ಪಿ ಆಫೀಸ್ ಮಾರ್ಚ್: ಮಂಗಳೂರು: ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ವಿನಾ ಕಾರಣ ಲಾಠಿ ಚಾರ್ಜ್ ನಡೆಸಿದ ಪೊಲೀಸರ ವಿರುದ್ಧ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಒತ್ತಾಯಿಸಿ ಡಿ.17ರಂದು ಮಂಗಳೂರಿನಲ್ಲಿ ‘ಎಸ್ಪಿ ಆಫೀಸ್ ಮಾರ್ಚ್’ ಕೈಗೊಳ್ಳುವುದಾಗಿ ಪಿಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಹೇಳಿದ್ದಾರೆ. ಮೂವರ ಪೈಕಿ ಒಬ್ಬರನ್ನು ಬಿಡುಗಡೆಗೊಳಿಸಿದ ನಂತರ ಇನ್ನಿಬ್ಬರ ಬಿಡುಗಡೆ ಮಾಡುವುದಾಗಿ ಪೊಲೀಸರು ತಿಳಿಸಿದ್ದರು. ಬಿಡುಗಡೆ ಮಾಡದಿದ್ದಾಗ ಶಾಂತಿಯುತ ಪ್ರತಿಭಟನೆ ನಡೆಸಿದಾಗ ಪೊಲೀಸರು ಏಕಾಏಕಿ ಲಾಠಿ ಬೀಸಿದ್ದಾರೆ. ಇದರಿಂದಾಗಿ ಧರ್ಮಗುರು ಸೈಯ್ಯದ್ ಆತೂರ್ ತಂಗಳ್ ತಲೆಗೆ ಗಂಭೀರ ಗಾಯವಾಗಿದೆ. ಓರ್ವ ಯುವಕ ಪ್ರಜ್ಞಾಹೀನನಾಗಿ ರಸ್ತೆಯಲ್ಲಿ ಬಿದ್ದಿದ್ದ. 40ರಷ್ಟು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆಂಬುಲೆನ್ಸ್ ಮೇಲೆಯೂ ಲಾಠಿ ಬೀಸಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು, ಸುಳ್ಳು ಕೇಸು ಹಿಂಪಡೆಯಬೇಕು, ಪ್ರತಿಭಟನಕಾರರನ್ನೂ ಬೇಷರತ್ ಬಿಡುಗಡೆಗೊಳಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts