More

    ಆಧುನಿಕ ತಂತ್ರಜ್ಞಾನ ಹೊಸ ಆವಿಷ್ಕಾರಕ್ಕೆ ಮುನ್ನುಡಿ: ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್

    ಮೈಸೂರು: ಇಂದಿನ ತಂತ್ರಜ್ಞಾನ ಹೊಸ ಆವಿಷ್ಕಾರಕ್ಕೆ ಮುನ್ನುಡಿ ಬರೆಯುತ್ತಿದ್ದು, ಆಕಾಶ ಮುಟ್ಟುವುದು ಸುಲಭ ಎಂಬಂತಾಗಿದೆ. ಅದನ್ನು ಸಮರ್ಥವಾಗಿ ಮನುಕುಲದ ಒಳಿತಿಗೆ ಬಳಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ತಿಳಿಸಿದರು.
    ನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ (ವಿವಿಸಿಇ) ಮೂರು ದಿನಗಳ ವಾರ್ಷಿಕ ಸಾಂಸ್ಕೃತಿಕ ಉತ್ಸವ ವಿದ್ಯುತ್-2024 ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
    ಆವಿಷ್ಕಾರವು ಮಾನವ ಚತುರತೆಯ ಒಂದು ಮಾಪಕವಾಗಿದೆ. ಇಂದು ತಂತ್ರಜ್ಞಾನ ನಮ್ಮ ಬದುಕನ್ನು ಸರಳಗೊಳಿಸಿದೆ. ಬಾಹ್ಯಾಕಾಶವನ್ನು ಅನ್ವೇಷಣೆ ಮಾಡುವಷ್ಟು ನಮ್ಮ ತಂತ್ರಜ್ಞಾನ ಸದೃಢಗೊಂಡಿದೆ. ಇದೇ ತಂತ್ರಜ್ಞಾನದಿಂದ ನಾವು ಚಂದ್ರನನ್ನು ತಲುಪಲು ಸಾಧ್ಯವಾಗಿದೆ ಎಂದು ವಿಶ್ಲೇಷಿಸಿದರು.
    ಭಾರತದಿಂದ ಸ್ಫೂರ್ತಿ ಪಡೆದ ಅನೇಕ ದೇಶಗಳು ಈಗ ಚಂದ್ರಯಾನ ಮಿಷನ್ ಕೈಗೊಳ್ಳುತ್ತಿವೆ. ನಮ್ಮ ನೆರೆಹೊರೆ ದೇಶಗಳ ನಡುವೆ ಸ್ಪರ್ಧಾತ್ಮಕ ಮನೋಭಾವ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಕಾರ್ಯಕ್ರಮ ನೂರಾರು ಹೊಸ ಆವಿಷ್ಕಾರಕ್ಕೆ ದಾರಿಯಾಗಲಿ ಎಂದು ಆಶಿಸಿದರು.
    ವಿದ್ಯುತ್ ಒಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತಾರೆ. ಸಾಮಾನ್ಯವಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳೆಂದರೆ ಸೃಜನಶೀಲತೆಗೆ ಹೆಸರುವಾಸಿಯಾಗಿರುತ್ತಾರೆ. ನಾನಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೇ ಕೆಲವು ಸಾಧನಗಳನ್ನು ಅಥವಾ ಯಂತ್ರಗಳನ್ನು ಆವಿಷ್ಕರಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಉತ್ತಮವಾದ ಸ್ನೇಹವಲಯ ಲಭಿಸುತ್ತದೆ. ನಾನಾ ವ್ಯಕ್ತಿತ್ವಗಳ ಪರಿಚಯವಾಗಿ ಸೌಹಾರ್ದ ಸಂಬಂಧ ಬೆಸೆಯುತ್ತದೆ. ನೂರಾರು ನೆನಪುಗಳನ್ನು ವಿದ್ಯಾರ್ಥಿಗಳು ಕೊಂಡೊಯ್ಯಬಹುದಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಇದೊಂದು ಮರೆಯಲಾಗದ ನೆನಪಿನ ಬುತ್ತಿ ಆಗುವುದರಲ್ಲಿ ಎರಡು ಮಾತಿಲ್ಲ ಎಂದರು.
    ಜೀವನದಲ್ಲಿ ಸಂತೋಷವನ್ನು ಮನಪೂರ್ವಕವಾಗಿ ಆಸ್ವಾದಿಸಿ. ತಪ್ಪುದಾರಿಗಳಲ್ಲಿ ಪಯಣಿಸಬೇಡಿ. ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುವ ಮೂಲಕ ಒಳ್ಳೆಯ ನಾಗರಿಕರಾಗಿ ಬಾಳ್ವೆ ನಡೆಸಿ. ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿ ನಿಮ್ಮ ಸ್ಥಾನಮಾನದ ಘನತೆ ಮತ್ತು ಗೌರವವನ್ನು ಸದಾ ಪ್ರಜ್ವಲಿಸುವಂತೆ ಮಾಡಿ ಎಂದು ಸಲಹೆ ನೀಡಿದರು.
    ವಿದ್ಯುತ್- 2024ರ ಸಾಂಸ್ಕೃತಿಕ ಕಾರ್ಯದರ್ಶಿ ಡಾ.ಬಿ.ಜಗದೀಶ್ ಮಾತನಾಡಿ, ವಿದ್ಯುತ್ ಎಂಬುದು ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಪ್ರತಿವರ್ಷ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ವಾರ್ಷಿಕ ಸಂಭ್ರಮವಾಗಿದೆ. ಇಲ್ಲಿ ಸಾಂಸ್ಕೃತಿಕ ಮತ್ತು ಕಲಾತ್ಮಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳುತ್ತವೆೆ. ಬಹು ನಿರೀಕ್ಷಿತ ಉತ್ಸವವಾದ ಇದರಲ್ಲಿ ವಿವಿಧ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಆರೋಗ್ಯಕರ ಸ್ಪರ್ಧೆ ಮತ್ತು ಸೌಹಾರ್ದ ಮನೋಭಾವ ಬೆಳೆಸುತ್ತದೆ. ಈ ವರ್ಷ ವಿದ್ಯುತ್ ಎಲ್ಲರನ್ನೂ ರಂಜಿಸುವ ಜತೆಗೆ ಹೊಸ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ಒಂದುಗೂಡಿಸಲಿದೆ ಎಂದು ಆಶಿಸಿದರು.
    ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮ್ಮಣ್ಣನವರ್, ಪ್ರಾಂಶುಪಾಲ ಡಾ.ಬಿ.ಸದಾಶಿವೇಗೌಡ ಇತರರು ಇದ್ದರು.
    ಇದೇ ವೇಳೆ ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. ಮೊದಲ ದಿನದ ಸಂಜೆ ಸ್ಯಾಂಡಲ್‌ವುಡ್ ನೈಟ್ ಮತ್ತು ಲಗೋರಿ ಬ್ಯಾಂಡ್ ವಿದ್ಯಾರ್ಥಿಗಳನ್ನು ರಂಜಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts