More

    ಖಾಸಗಿ ವರ್ತಕರಿಂದ ದರ ಇಳಿಕೆ ತಂತ್ರ, ಅಡಕೆ ಕಡಿಮೆ ಧಾರಣೆ ನಂಬಿಸಿ ಬೆಳೆಗಾರರಿಗೆ ಮೋಸ ಆರೋಪ

    ವಿಜಯವಾಣಿ ಸುದ್ದಿಜಾಲ ಪುತ್ತೂರು
    ದಿನದಿಂದ ದಿನಕ್ಕೆ ಅಡಕೆ ಧಾರಣೆ ಏರುಗತಿಯಲ್ಲಿದ್ದರೂ ಮಾರುಕಟ್ಟೆಯಲ್ಲಿ ಅಡಕೆ ಕೊರತೆ ಎದುರಾಗುತ್ತಿದೆ. ಅಡಕೆಗೆ ಮುಕ್ತ ಮಾರುಕಟ್ಟೆಯಲ್ಲಿ ಕ್ಯಾಂಪ್ಕೊ ಮಾರುಕಟ್ಟೆಗಿಂತ ಅಧಿಕ ಧಾರಣೆಯಿದ್ದು, ಕ್ಯಾಂಪ್ಕೊದಲ್ಲಿ ಬೆಲೆ ಹೆಚ್ಚಿದ್ದರೂ ಖಾಸಗಿ ವರ್ತಕರು ಬೆಲೆ ಇಳಿಕೆ ತಂತ್ರ ಅನುಸರಿಸಿ ಅಡಕೆ ಬೆಳೆಗಾರರಿಗೆ ಮೋಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
    ಕರಾವಳಿಯ ಬಹುತೇಕ ಗಾರ್ಬಲ್‌ಗಳು ಖಾಲಿಯಾಗಿವೆ. ಮಧ್ಯವರ್ತಿಗಳಿಗೆ ಹೆಚ್ಚುವರಿ ಹಣದ ಆಮಿಷ ನೀಡಿದರೂ ಅಡಕೆ ಸಿಗುತ್ತಿಲ್ಲ. ಅಡಕೆಯನ್ನೇ ನೆಚ್ಚಿರುವ ಗುಜರಾತ್-ರಾಜಸ್ಥಾನದ ವರ್ತಕರು ಇದರಿಂದ ಕಂಗಾಲಾಗಿದ್ದಾರೆ. ಈ ಮಧ್ಯೆ, ಕರಾವಳಿ ಮಾರುಕಟ್ಟೆಯಲ್ಲಿ ಅಡಕೆ ಧಾರಣೆ ಏರುಗತಿಯಲ್ಲಿ ಸಾಗುತ್ತಿದ್ದರೂ ಮುಕ್ತ ಮಾರುಕಟ್ಟೆಯ ಬಹುತೇಕ ವರ್ತಕರು ಬೆಲೆ ಇಳಿಕೆಯಾಗಿದೆ ಎಂಬ ಗುಮಾನಿ ಹಬ್ಬಿಸಿ ನಿಗದಿತ ಧಾರಣೆಗಿಂತ ಕಡಿಮೆ ಧಾರಣೆ ನಿಗದಿಪಡಿಸಿ ಬೆಳೆಗಾರರಿಗೆ ಮೋಸ ಮಾಡುತ್ತಿದ್ದಾರೆ.

    ರಜಾದಿನದ ಲಾಭ ಪಡೆದ ವರ್ತಕರು: ಫೆ. 13,14ರಂದು ಸರ್ಕಾರಿ ರಜೆಯಾಗಿದ್ದರಿಂದ ಕ್ಯಾಂಪ್ಕೋ ಮಾರುಕಟ್ಟೆ ವ್ಯವಹಾರ ನಡೆದಿಲ್ಲ. ಆದರೆ ಅಡಕೆ ಮಾರುಕಟ್ಟೆ ಮಾತ್ರ ಸ್ಥಿರವಾಗಿತ್ತು. ಇದರ ಲಾಭ ಪಡೆದ ಮುಕ್ತ ಮಾರುಕಟ್ಟೆ ವರ್ತಕರು, ಈ 2 ದಿನಗಳಲ್ಲಿ ಅಡಕೆ ಧಾರಣೆ ಇಳಿಕೆಯಾಗುತ್ತಿದೆ ಎಂಬ ಅಪಪ್ರಚಾರ ನಡೆಸಿ, ಬೆಳೆಗಾರರು ಶೇಖರಿರಿಸಿದ್ದ ಅಡಕೆ ದಾಸ್ತಾನನ್ನು ಹೊರಗಡೆ ತರುವ ತಂತ್ರ ಮಾಡಿದ್ದರು. ಕೈಗೆ ಸಿಕ್ಕಿದ್ದು ಸಿಗಲಿ ಎಂಬ ಆಸೆಯಿಂದ ಬಹುತೇಕ ಬೆಳೆಗಾರರು ಅಡಕೆ ಮಾರಾಟ ಮಾಡಿದ್ದು, ಇವರಿಂದ ಕಡಿಮೆ ಧಾರಣೆ ನೀಡಿ ವರ್ತಕರು ಖರೀದಿಸಿದ್ದು ಬೆಳಕಿಗೆ ಬಂದಿದೆ.

    ತಕ್ಷಣದ ಧಾರಣೆ ಇಳಿಕೆ ಎಂಬುದಾಗಿ ಮೋಸ: ಬರ್ಮ, ಇಂಡೋನೇಷ್ಯಾ, ಚೀನಾ ಮೂಲಕ ಅಡಕೆ ಆಮದು ನಿಯಂತ್ರಣಕ್ಕೆ ಸರ್ಕಾರ ಬಿಗಿ ಕ್ರಮ ಕೈಗೊಂಡಿದ್ದರಿಂದ ಗುಜರಾತ್- ರಾಜಸ್ಥಾನದ ವರ್ತಕರು ಕಂಗಾಲಾಗಿದ್ದು, ಕೆಜಿಗೆ ಗರಿಷ್ಟ 550 ರೂ. ನೀಡುವ ವಾಗ್ದಾನ ನೀಡಿದರೂ ದಾಸ್ತಾನು ಕೊರತೆಯಿಂದ ದೇಶೀಯ ಅಡಕೆ ಸಿಗುತ್ತಿಲ್ಲ. ಇದೇ ಕಾರಣದಿಂದ ಅಡಕೆ ಧಾರಣೆ ಗಗನಕ್ಕೇರುತ್ತಿದ್ದು, ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಕೆ(ಹೊಸ ಕೊಲು) 425 ರೂ, ಹಳೆ ಅಡಕೆ (ಸಿಂಗಲ್ ಚೋಲ್) 510 ರೂ, ಹಳೆ ಅಡಕೆ (ಡಬಲ್ ಚೋಲ್) 515 ರೂ.ನಲ್ಲಿ ಖರೀದಿಯಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಹೊಸ ಅಡಕೆ 430-435 ರೂ, ಹಳೆ ಅಡಕೆ(ಸಿಂಗಲ್ ಚೋಲ್) 510-520 ರೂ, ಹಳೇ ಅಡಕೆ (ಡಬಲ್ ಚೋಲ್) 520- 530 ರೂ. ಧಾರಣೆಯಿದ್ದರೂ ಬಹುತೇಕ ವರ್ತಕರು ತಕ್ಷಣದ ಇಳಿಕೆ ಎಂಬ ವದಂತಿಗೆ ಬೆಳೆಗಾರರನ್ನು ನಂಬಿಸಿ ಕಡಿಮೆ ಧಾರಣೆ ನಿಗದಿಪಡಿಸುತ್ತುರುವುದು ಬೆಳಕಿಗೆ ಬಂದಿದೆ.

    ಮಾರುಕಟ್ಟೆಯಲ್ಲಿ ಅಡಕೆ ಬೆಲೆ ಇಳಿಕೆ ಆಗಿಲ್ಲ, ಏರುಗತಿಯಲ್ಲೇ ಸಾಗಲಿದೆ. ಪ್ರಸ್ತುತ ಬೇಡಿಕೆ ಆಧಾರದಲ್ಲಿ ಹೇಳುವುದಾದರೆ ಈಗಿರುವ ಧಾರಣೆ ಧೀರ್ಘಾವಧಿಯವರೆಗೆ ಮುಂದುವರಿಯಬಹುದು. ಖಾಸಗಿ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವಾದರೂ ಕ್ಯಾಂಪ್ಕೋ ಸಂಸ್ಥೆ ಅಡಕೆ ಬೆಳೆಗಾರರಿಗೆ ತೊಂದರೆಯಾಗದಂತೆ ಧಾರಣೆ ನಿಗದಿಗೊಳಿಸುತ್ತಿದೆ.
    -ಕಿಶೋರ್ ಕೊಡ್ಗಿ, ಕ್ಯಾಂಪ್ಕೋ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts