More

    ಅಡಕೆಗೆ ವರವಾದ ಮಳೆ

    ಶ್ರವಣ್ ಕುಮಾರ್ ನಾಳ, ಪುತ್ತೂರು
    ಸಿರಿವಂತ ಗರಿ ಹಾಗೂ ಹಿಂಗಾರ ಬೆಳವಣಿಗೆ ಆಧಾರದಲ್ಲಿ ಗಮನಿಸಿದರೆ, ಈ ಬಾರಿ ಉತ್ತಮ ಅಡಕೆ ಇಳುವರಿ ಸಾಧ್ಯತೆ ಹೆಚ್ಚಿದೆ.

    ಕಳೆದ ಬಾರಿ ಅತಿವೃಷ್ಟಿ ಹಾಗೂ ವ್ಯತಿರಿಕ್ತ ವಾತಾವರಣದಿಂದ ಅಡಕೆ ಇಳುವರಿ ಶೇ.40ರಷ್ಟು ಕುಸಿತ ಕಂಡಿತ್ತು. ಅದೇ ಭಯದಲ್ಲಿದ್ದ ಬೆಳೆಗಾರರಿಗೆ ಮಳೆ ವರವಾಗಿದೆ. ಬೇಸಿಗೆಯಲ್ಲಿ ಉತ್ತಮ ಮಳೆಯಾಗುತ್ತಿರುವುದು ಪೂರಕವಾಗಿದ್ದು, ಬಹುತೇಕ ಅಡಕೆ ತೋಟಗಳಲ್ಲಿ ನಿಗದಿತ ಸಮಯಕ್ಕೂ ಮುಂಚೆ ಹಿಂಗಾರ ಬೆಳವಣಿಗೆ ಕಂಡುಬರುತ್ತಿದೆ.

    ಜನವರಿ ಆರಂಭದಲ್ಲಿ ಬಹುತೇಕ ಅಡಕೆ ಗಿಡಗಳು ಹಿಂಗಾರ ಬಿಟ್ಟಿದ್ದು, ಏಪ್ರಿಲ್, ಮೇ ತಿಂಗಳ ಮಧ್ಯ ಭಾಗದಲ್ಲಿ ಹಿಂಗಾರ ಒಡೆದು ಹೂ ಬರುತ್ತದೆ. ಈ ಸಂದರ್ಭ ಅಡಕೆ ಗಿಡದ ಬುಡಕ್ಕೆ ನೀರು ಅಗತ್ಯ. ಈ ಬಾರಿ ಏಪ್ರಿಲ್- ಮೇ ತಿಂಗಳಲ್ಲಿ ಮಳೆಯಾಗಿದ್ದರಿಂದ ಸಿರಿವಂತ ಗರಿ ಹಾಗೂ ಹಿಂಗಾರ ಬೆಳವಣಿಗೆ ಪ್ರಮಾಣ ಹೆಚ್ಚಾಗಿದೆ. ಮಳೆ ಜಾಸ್ತಿಯಾಗುವ ಸಂಭವವಿರುವುದರಿಂದ ಈಗಾಗಲೇ ಕೃಷಿಕರು ಮೇ ತಿಂಗಳಲ್ಲಿ ಒಂದು ಸುತ್ತಿನ ಬೋರ್ಡೊ ದ್ರಾವಣ ಸಿಂಪಡಣೆಗೂ ಮುಂದಾಗಿದ್ದಾರೆ.

    ಕಂಬಳಿಹುಳ ಬಾಧೆ ಸಾಧ್ಯತೆ: ತೋಟಗಳಲ್ಲಿ ಮಳೆ, ನೀರಿನ ಪ್ರಮಾಣ ತುಸು ಜಾಸ್ತಿಯಿದ್ದರೆ ಸಾಕು ಟಿರತಬ ಮುಂಡೆಲ್ಲ ಪ್ರಬೇಧಕ್ಕೆ ಸೇರಿದ ಪತಂಗ ಮೊಟ್ಟೆ ಇಡಲು ಆರಂಭಿಸುತ್ತದೆ. ಈ ಪತಂಗಗಳು ಆಹಾರಕ್ಕಾಗಿ ಬೆಳವಣಿಗೆಯ ಹಂತದಲ್ಲಿರುವ ಅಡಕೆಯನ್ನೇ ಅವಲಂಬಿಸುವುದರಿಂದ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. 2018ರಲ್ಲಿ ದ.ಕ ಜಿಲ್ಲೆಯಲ್ಲಿ ವಾರ್ಷಿಕ 56077 ಟನ್, ಉಡುಪಿಯಲ್ಲಿ 13801 ಟನ್ ಅಡಕೆ ಉತ್ಪಾದನೆಯಾಗುತ್ತದೆ. ಕಂಬಳಿಹುಳ ಬಾಧೆಯಿಂದ ಹೆಚ್ಚಿನ ಅಡಕೆ ಸಮರ್ಪಕ ಬೆಳವಣಿಗೆಯಾಗದೆ ಬೆಳೆ ನಷ್ಟ ಸಂಭವಿಸಿದೆ. ಟಿರತಬ ಮುಂಡೆಲ್ಲ ಪತಂಗ ಬಾಧೆ ತಡೆಯಲು ಬೋರ್ಡೊ ದ್ರಾವಣ ಸಿಂಪಡಣೆ ಅನಿವಾರ್ಯ.

    ಈ ಬಾರಿ ಸಿರಿವಂತ ಗರಿಗಳೇ ಅಧಿಕ
    10-14 ಸಿರಿವಂತ ಗರಿಗಳಿರುವ ಅಡಕೆ ಮರದಲ್ಲಿ ಇಳುವರಿ ಅಧಿಕ. ಈ ಬಾರಿ ಸಿರಿವಂತ ಗರಿ, 3ರಿಂದ 5 ಅಧಿಕ ಹಿಂಗಾರಗಳು ಬಹುತೇಕ ಅಡಕೆ ತೋಟದಲ್ಲಿ ಕಂಡುಬಂದಿದೆ. ಪ್ರತೀ 2 ವರ್ಷಗಳಿಗೊಮ್ಮೆ ಅಡಕೆ ತೋಟದಲ್ಲಿ ಉತ್ತಮ ಇಳುವರಿ ಕಂಡುಬರುವುದು ವಾಡಿಕೆ. ಕಳೆದ 2-3 ವರ್ಷಗಳಿಂದ ಇಳುವರಿ ಕೊರತೆ, ಕೊಳೆರೋಗದಿಂದ ಕರಾವಳಿಯ ಅಡಕೆ ಬೆಳೆಗಾರರು ಹೈರಾಣಾಗುತ್ತಿದ್ದು, ಈ ಬಾರಿ ಬೆಳೆಗಾರರಿಗೆ ತೋಟ ನಿರ್ವಹಣಾ ಜವಾಬ್ದಾರಿ ಹೆಚ್ಚಾಗಿದೆ.

    ಈ ಬಾರಿ ಅಡಕೆ ಬೆಳೆಗೆ ಪೂರಕ ವಾತಾವರಣ ಇದೆ ಎಂದು ಬೆಳೆಗಾರರು ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ. ಈಗಲೇ ಸಣ್ಣ ಪ್ರಮಾಣದಲ್ಲಿ ಬೋರ್ಡೊ ದ್ರಾವಣ ಸಿಂಪಡಣೆಗೆ ವ್ಯವಸ್ಥೆ ಮಾಡುವುದು ಉತ್ತಮ. ಮಾರುಕಟ್ಟೆಯಲ್ಲಿ ಬೋರ್ಡೊ ದ್ರಾವಣದ ವಸ್ತುಗಳು ಕೊರತೆಯಾಗುವ ಸಾಧ್ಯತೆ ಇರುವುದರಿಂದ ಅದನ್ನು ಶೇಖರಿಸಿಡುವುದು ಒಳ್ಳೆಯದು.
    ಮಹೇಶ್ ಪುಚ್ಚಪ್ಪಾಡಿ, ಕಾರ್ಯದರ್ಶಿ, ಅಖಿಲ ಭಾರತ ಅಡಕೆ ಬೆಳೆಗಾರರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts