More

    ಕೂಳೂರು ಫಲ್ಗುಣಿ ನದಿ ಒತ್ತುವರಿ, ಮಳೆಗಾಲದಲ್ಲಿ ನೆರೆಯ ಭಯ

    ಹರೀಶ್ ಮೋಟುಕಾನ ಮಂಗಳೂರು

    ಕೂಳೂರು ಬಳಿಯಲ್ಲಿ ಫಲ್ಗುಣಿ ನದಿಗೆ ಲಾರಿಗಳಲ್ಲಿ ಲೋಡ್‌ಗಟ್ಟಲೆ ಕಟ್ಟಡ ತ್ಯಾಜ್ಯ, ಮಣ್ಣು ಹಾಕಿ ಒತ್ತುವರಿ ಮಾಡುವ ಕೆಲಸ ಮುಂದುವರಿದಿದ್ದು, ಇದರ ಮೇಲೆ ನಿಗಾ ಇಡಬೇಕಾದ ಸರ್ಕಾರಿ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ.

    ಕೂಳೂರಿನಿಂದ ದಂಬೇಲ್‌ಗೆ ಹೋಗುವ ರಸ್ತೆ ಬದಿಯಲ್ಲಿ ಫಲ್ಗುಣಿ ನದಿ ಹರಿಯುತ್ತಿದೆ. ಹಲವು ವರ್ಷಗಳಿಂದ ಇಲ್ಲಿ ನದಿಗೆ ಮಣ್ಣು ಹಾಕಿ ನದಿಯನ್ನು ಒತ್ತುವರಿ ಮಾಡುವ ಕೆಲಸ ನಿರಂತರವಾಗಿ ಮುಂದುವರಿದಿದೆ. ರಾತ್ರಿ ವೇಳೆ ಇಲ್ಲಿಗೆ ಕಟ್ಟಡ ತ್ಯಾಜ್ಯ, ಮಣ್ಣು ತಂದು ಸುರಿಯುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

    ಇಲ್ಲಿ ಸಾವಿರಾರು ಲೋಡ್ ಮಣ್ಣು ನದಿ ಬದಿಗೆ ಸುರಿದಿದ್ದು, ನದಿಯ ಜಾಗವನ್ನು ಕಬಳಿಸಲಾಗಿದೆ. ನದಿಯ ಗಾತ್ರ ಕಿರಿದಾಗುವುದರಿಂದ ಇದರಿಂದಾಗಿ ಮಳೆಗಾಲದಲ್ಲಿ ನೆರೆ ಕಾಣಿಸಿಕೊಳ್ಳುತ್ತಿದೆ. ನದಿ ಬದಿಗಳಲ್ಲಿ ವಾಸ ಮಾಡುವ ಮಂದಿ ಮಳೆಗಾಲದಲ್ಲಿ ಆತಂಕದಿಂದ ಬದುಕುವಂತಾಗಿದೆ.

    ನದಿಗೆ ಮಲಿನ ನೀರು: ನಗರದಿಂದ ಕಟ್ಟಡ ತ್ಯಾಜ್ಯ, ಮನೆಯ ತ್ಯಾಜ್ಯವನ್ನು ತಂದು ನದಿಗೆ ಸುರಿಯುವವರ ಸಂಖ್ಯೆಯೂ ಹೆಚ್ಚಿದೆ. ನದಿಯ ಬದಿಗಳಲ್ಲಿ ಪ್ಲಾಸ್ಟಿಕ್ ಚೀಲಗಳು, ಬಟ್ಟೆಗಳು ತೇಲುತ್ತಿರುವುದು ಕಂಡು ಬಂದಿದೆ. ಕೆಲವು ಕಡೆ ಕಾರ್ಖಾನೆಗಳಿಂದ ಮಲಿನ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ಜಲಚರಗಳ ನಾಶಕ್ಕೆ ಕಾರಣವಾಗುತ್ತಿದೆ.
    ಫಲ್ಗುಣಿ ನದಿಯ ಸುಮಾರು ಮೂರು ಕಿ.ಮೀ ದೂರಕ್ಕೆ ಮಣ್ಣು ಸುರಿಯಲಾಗಿದೆ. ನದಿ ಒತ್ತುವರಿ ಬಗ್ಗೆ ಪರಿಸರವಾದಿಗಳು ಹಾಗೂ ಸ್ಥಳೀಯರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಹೀಗೇ ಮುಂದುವರಿದರೆ ಪೂರ್ಣ ಪ್ರಮಾಣದಲ್ಲಿ ನದಿಯನ್ನೇ ಒತ್ತುವರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಪರಿಸರವಾದಿಗಳು ದೂರಿದ್ದಾರೆ.
    ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರಾ, ಫಲ್ಗುಣಿ ಸೇರಿದಂತೆ ಎಲ್ಲ ನದಿಗಳ ಬದಿಗೆ ಅಲ್ಲಲ್ಲಿ ಮಣ್ಣು ಹಾಕಿ ಒತ್ತುವರಿ ಮಾಡುವ ಪ್ರಕ್ರಿಯೆ ಹಲವು ವರ್ಷಗಳಿಂದ ನಡೆಯುತ್ತಿದೆ. ಕೆಲವು ಕಡೆ ಈಗಾಗಲೇ ಕಟ್ಟಡಗಳನ್ನು ಕಟ್ಟಿದ್ದಾರೆ. ನಿಗಾ ಇಡಬೇಕಾದ ಪರಿಸರ ಇಲಾಖೆ ಇದೆ. ಕಠಿಣ ಕಾನೂನುಗಳಿವೆ. ಆದರೆ ನದಿ ಒತ್ತುವರಿ ಮಾಡುವವರಿಗೆ ಅನ್ವಯ ಆಗದೆ ಇರುವುದು ದುರಾದೃಷ್ಟಕರ.

    ನದಿಗಳಿಗೆ ತ್ಯಾಜ್ಯ ಎಸೆತ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನದಿಗಳಿಗೆ ತ್ಯಾಜ್ಯ ಎಸೆಯುವುದು ದೊಡ್ಡ ಸಮಸ್ಯೆಯಾಗಿದೆ. ನಗರ ಪ್ರದೇಶಗಳಲ್ಲಿ ಇಂತಹ ಪ್ರಕರಣ ಹೆಚ್ಚು. ವಾಹನದಲ್ಲಿ ಹೋಗುವಾಗ ಮನೆಯ ತ್ಯಾಜ್ಯ ತುಂಬಿಸಿಕೊಂಡು ಹೋಗಿ ನದಿ ಸಿಗುವಲ್ಲಿ ಎಸೆದು ಹೋಗುವ ಕೆಟ್ಟ ಮನಸ್ಥಿತಿ ಇಲ್ಲಿದೆ. ಜಪ್ಪಿನಮೊಗರು ಬಳಿ ನೇತ್ರಾವತಿ ನದಿ ಇಕ್ಕೆಲದಲ್ಲಿ ಎರಡು ತಿಂಗಳ ಹಿಂದೆ ಯುವಕರ ತಂಡ ಸುಮಾರು ಏಳೆಂಟು ಲೋಡು ಪ್ಲಾಸ್ಟಿಕ್, ಬಾಟಲಿ, ಬಟ್ಟೆ ತ್ಯಾಜ್ಯವನ್ನು ಹೆಕ್ಕಿ ವಿಲೇವಾರಿ ಮಾಡಿರುವುದು ಇದಕ್ಕೆ ಸಾಕ್ಷಿ.

    ನದಿಗಳಿಗೆ ಮಣ್ಣು ಹಾಕಿ ಒತ್ತುವರಿ ಮಾಡುವುದರಿಂದ ನದಿ ಕ್ರಮೇಣ ಜೀವಂತಿಗೆ ಕಳೆದುಕೊಳ್ಳುತ್ತದೆ. ಸಹಜ ಒರತೆ ಕ್ಷೀಣಿಸುತ್ತದೆ. ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುವಾಗ ಜನರು ವಾಸ ಮಾಡುವಲ್ಲಿಗೆ ನುಗ್ಗಿ ಹಾನಿಗೆ ಕಾರಣವಾಗುತ್ತದೆ. ಇದರ ಬಗ್ಗೆ ಕೇಳುವವರೇ ಇಲ್ಲದಂತಾಗಿದೆ. ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರೂ ಕೆಲವೊಂದು ರಾಜಕೀಯ ಒತ್ತಡಗಳಿಂದ ಅವರೂ ಸುಮ್ಮನೆ ಕುಳಿತುಕೊಳ್ಳುವ ಸ್ಥಿತಿ ಇದೆ. ನದಿ ಒತ್ತುವರಿ ಗಂಭೀರ ಮತ್ತು ಕ್ರಮೇಣ ಪರಿಸರದ ಮೇಲೆ ದೊಡ್ಡ ಮಟ್ಟದಲ್ಲಿ ದುಷ್ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ.

    ದಿನೇಶ್ ಹೊಳ್ಳ, ಪರಿಸರವಾದಿ

    ನದಿಗಳಿಗೆ ಮಣ್ಣು ಹಾಕಿ ಒತ್ತುವರಿ ಮಾಡಿಕೊಳ್ಳುವುದು ಕಾನೂನು ಬಾಹಿರ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.

    ಡಾ.ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts