More

    ವಾಸ ಸ್ಥಾನ ಬಿಟ್ಟು ಕದಲದ ಜಲಚರಗಳು

    ಸುನಿಲ್ ಪೊನ್ನೇಟಿ ಮಡಿಕೇರಿ:

    ಭೀಕರ ಬರಕ್ಕೆ ಕೊಡಗಿನಲ್ಲೂ ವಿವಿಧ ರೀತಿಯ ಪರಿಣಾಮಗಳು ಆಗುತ್ತಿದೆ. ಕಾವೇರಿ, ಲಕ್ಷ್ಮಣತೀರ್ಥ, ಹೇಮಾವತಿ, ಹಾರಂಗಿ ಸೇರಿದಂತೆ ಪ್ರಮುಖನ ನದಿಗಳಲ್ಲಿ ನೀರಿನ ಹರಿವು ಕ್ಷೀಣಿಸಿದೆ. ಕಾವೇರಿ ನದಿಯಲ್ಲಂತೂ ವಾಲ್ನೂರಿನಿಂದ ಮುಂದಕ್ಕೆ ನೀರಿನ ಹರಿವು ಸಂಪೂರ್ಣ ಸ್ಥಗಿತವಾಗಿದ್ದು, ಅಲ್ಲಲ್ಲಿ ಗುಂಡಿಗಳಲ್ಲಿ ಮಾತ್ರ ನೀರು ಕಾಣಬಹುದಾಗಿದೆ. ಜಲಚರಗಳು ಇಂಥ ಗುಂಡಿಗಳಲ್ಲಿ ಆಶ್ರಯ ಪಡೆದುಕೊಂಡಿದ್ದು, ವಿಕೋಪದ ಅರಿವು ಇವುಗಳಿಗೆ ಮುಂಚಿತವಾಗಿ ಇತ್ತೇ ಎನ್ನುವ ವಿಷಯ ಕುತೂಹಲಕ್ಕೆ ಕಾರಣವಾಗಿದೆ.

    ೨೦೧೮ರಲ್ಲಿ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ್ದ ವೇಳೆ ಅಲ್ಲಲ್ಲಿ ಗುಡ್ಡ ಕುಸಿದು ದೊಡ್ಡ ಪ್ರಮಾಣದಲ್ಲಿ ಕೆಸರು ನೀರು ಹಾರಂಗಿ ಮತ್ತು ಕಾವೇರಿ ನದಿಗೆ ಹರಿದುಬಂದಿತ್ತು. ಆ ವರ್ಷ ಆಗಸ್ಟ್ ೧೪ರ ಮಧ್ಯರಾತ್ರಿ ನಂತರ ಹಾರಂಗಿ ಅಣೆಕಟ್ಟೆಯಿಂದ ೧ ಲಕ್ಷ ಕ್ಯೂಸೆಕ್‌ಗೂ ಅಧಿಕ ದಾಖಲೆ ಪ್ರಮಾಣದಲ್ಲಿ ನದಿಗೆ ನೀರು ಹರಿಸಲಾಗಿತ್ತು. ಇದರಿಂದಾಗಿ ಕುಶಾಲನಗರ ತಾಲೂಕು ಕೂಡಿಗೆಯಿಂದ ಆಚೆಗೆ ಕಾವೇರಿ ನದಿ ಉಕ್ಕಿ ಹರಿದಿತ್ತು. ಆದರೂ ಪಶ್ಚಿಮಘಟ್ಟದ ಕಾವೇರಿ ನದಿ ಪಾತ್ರದಲ್ಲಿ ಮಾತ್ರ ಕಂಡುಬರುವ ಅಪರೂಪದ ಮಹಶೀರ್ ಮೀನುಗಳು ಸೇರಿದಂತೆ ಜಲಚರಗಳು ಮಾತ್ರ ತಮ್ಮ ಆವಾಸ ಸ್ಥಾನ ಬಿಟ್ಟು ಕದಲದಿರುವುದು ಬೆಳಕಿಗೆ ಬಂದಿತ್ತು.

    ಪ್ರಾಣಿಗಳಂತೆ ಮೀನುಗಳು ಕೂಡ ಪ್ರಾಕೃತಿಕ ಅಪಾಯವನ್ನು ಮೊದಲೇ ಗ್ರಹಿಸುವ ಶಕ್ತಿ ಹೊಂದಿದ್ದು, ಹಾರಂಗಿ ವ್ಯಾಪ್ತಿಯಲ್ಲಿ ನೆಲೆ ಕಂಡುಕೊಂಡಿರುವ ಮೀನುಗಾರರು ಈ ವಿಷಯ ಹಂಚಿಕೊಂಡಿದ್ದರು. ೨೦೧೮ರಲ್ಲಿ ಮಹಾಮಳೆ ಶುರುವಾಗುವುದಕ್ಕಿಂತಲೂ ಮೊದಲು ದೊಡ್ಡ ದೊಡ್ಡ ಮೀನುಗಳು ಅವುಗಳಿಗೆ ಸುರಕ್ಷಿತ ಎಂದು ಕಂಡುಬರುವ ಸ್ಥಳಗಳಿಗೆ ಗುಂಪುಗುಂಪಾಗಿ ಹೋಗಿ ಸೇರಿಕೊಳ್ಳುತ್ತವೆ. ಚಿಕ್ಕ ಮೀನುಗಳಿಗೆ ಅಷ್ಟಾಗಿ ಗೊತ್ತಾಗುವುದಿಲ್ಲ. ಹಾಗಾಗಿ ದೊಡ್ಡ ಮೀನುಗಳು ಹೆಚ್ಚಿನ ಸಂಖ್ಯೆಯಲ್ಲಿ ಸತ್ತಿರಲಿಲ್ಲ. ಅದರಲ್ಲೂ ಮಹಶೀರ್ ಮೀನುಗಳು ತುಂಬಾ ಸೂಕ್ಷ್ಮ ಜೀವಿಗಳಾಗಿದ್ದು, ಅಪಾಯದ ಚಿಕ್ಕ ಸೂಚನೆ ಸಿಕ್ಕರೂ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಜಾಣ್ಮೆ ಹೊಂದಿವೆ ಎನ್ನುತ್ತಾರೆ ಮೀನುಗಾರರು. ಮೀನುಗಾರಿಕಾ ಇಲಾಖೆ ಅಧಿಕಾರಿಗಳೂ ಇದನ್ನು ಒಪ್ಪಿಕೊಳ್ಳುತ್ತಾರೆ. ನೀರು ಬತ್ತುವ ವೇಳೆ ಅಥವಾ ಪ್ರವಾಹದ ಸಂದರ್ಭದಲ್ಲಿ ಈ ಮೀನುಗಳು ತಮ್ಮ ಸೂಕ್ಷ್ಮ ಜ್ಞಾನದಿಂದಲೇ ಪಾರಾಗಿಬಿಡುತ್ತವೆ ಎನ್ನುವುದು ಅವರ ಅಭಿಪ್ರಾಯ.

    ಇದು ಈಗಿನ ಬರದ ಸಂದರ್ಭದಲ್ಲೂ ಬಹುತೇಕ ನಿಜವಾಗಿದೆ. ಕುಶಾಲನಗರ ಅಯ್ಯಪ್ಪ ದೇವಾಲಯದಿಂದ ಕೆಳಭಾಗದಲ್ಲಿ ದಂಡಿನಪೇಟೆ ವ್ಯಾಪ್ತಿಯಲ್ಲಿ ನದಿಯಲ್ಲಿ ಮೀನುಗಳು ಸತ್ತಿರುವ ಘಟನೆಗಳು ವರದಿಯಾಗಿರುವುದು ಹೊರತುಪಡಿಸಿದರೆ ನದಿ ಪಾತ್ರದಲ್ಲಿ ಎಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಜಲಚರಗಳು ಸಾವನ್ನಪ್ಪಿರುವುದು ಕಂಡುಬಂದಿಲ್ಲ. ದಂಡಿನಪೇಟೆ ಬಳಿ ನೀರು ಸಂಗ್ರಹವಾಗಿದ್ದ ಗುಂಡಿಗಳಲ್ಲೇ ಮೀನುಗಳು ಮೃತಪಟ್ಟಿವೆ. ಆದರೆ ಇಲ್ಲಿ ಪಟ್ಟಣದ ಕೊಳಚೆ ನೀರು ಸಂಗ್ರಹವಾಗಿತ್ತು. ಉಸಿರಾಟದ ಸಮಸ್ಯೆ ಕಾರಣದಿಂದ ಜಲಚರಗಳು ಬಲಿಯಾಗಿವೆ ಎನ್ನುತ್ತಾರೆ ಅಧಿಕಾರಿಗಳು. ಆದರೆ ಉಳಿದೆಡೆಗಳಲ್ಲಿ ಅಲ್ಲಲ್ಲಿ ಚಿಕ್ಕ ಪುಟ್ಟ ಮೀನುಗಳು ಸತ್ತಿರುವುದು ಕಂಡುಬಂದಿದ್ದು, ಬಹುತೇಕ ದೊಡ್ಡ ಮೀನುಗಳು ಇಲ್ಲಿಯ ತನಕ ನೀರು ತುಂಬಿರುವ ಗುಂಡಿಗಳನ್ನೇ ಆಶ್ರಯ ತಾಣಗಳನ್ನಾಗಿ ಮಾಡಿಕೊಂಡಿವೆ.

    ಕಾವೇರಿ ನಿಸರ್ಗಧಾಮದಲ್ಲಿ ತೂಗು ಸೇತುವೆ ಕೆಳಭಾಗದ ಗುಂಡಿಯಲ್ಲಿ ನೀರು ಕಡಿಮೆ ಆದ ಕಾರಣ ಇಲ್ಲಿದ ಮೀನುಗಳನ್ನು ಕಳೆದ ವಾರ ರಕ್ಷಿಸಿ ಹಾರಂಗಿ ಜಲಾಶಯದ ಕೆಳಭಾಗದ ನದಿಗೆ ಬಿಡಲಾಗಿತ್ತು. ಆದರೆ ಈ ಸಂದರ್ಭ ಹೆಚ್ಚು ದೊಡ್ಡ ಗಾತ್ರದ ಮೀನುಗಳು ಸಿಕ್ಕಿರಲಿಲ್ಲ. ಕಾವೇರಿ ನದಿ ತುಂಬಿಕೊಂಡಿರುತ್ತಿದ್ದ ಸಮಯದಲ್ಲಿ ನಿಸರ್ಗಧಾಮ ತೂಗು ಸೇತುವೆ ಕೆಳಗೆ ದೊಡ್ಡ ದೊಡ್ಡ ಮಹಶೀರ್ ಮೀನುಗಳೂ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗುತ್ತಿದ್ದವು. ಈ ಗುಂಡಿಯಲ್ಲಿ ನೀರು ಕಡಿಮೆಯಾಗುವ ಸೂಚನೆ ಸಿಗುತ್ತಿದ್ದಂತೆಯೆ ದೊಡ್ಡ ಮೀನುಗಳು ನದಿಯಲ್ಲಿ ಮೇಲ್ಮುಖವಾಗಿ ಸಂಚರಿಸಿ ಗುಡ್ಡೆಹೊಸೂರು, ತೆಪ್ಪದ ಕಂಡಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿರುವ ಗುಂಡಿಗಳಲ್ಲಿ ಆಶ್ರಯ ಪಡೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

    ನದಿಪಾತ್ರದಲ್ಲಿ ಕಳ್ಳ ಬೇಟೆಗಾರರ ಚಟುವಟಿಕೆ ಚುರುಕಾಗಿರುವುದು ಕೂಡ ಈ ವಿಷಯವನ್ನು ಪುಷ್ಠೀಕರಿಸುತ್ತದೆ. ದೊಡ್ಡ ದೊಡ್ಡ ಗುಂಡಿಗಳಲ್ಲಿ ಗಾಳ ಹಾಕುವುದು, ಬಲೆ ಬಿಡುವುದು ಮಾತ್ರವಲ್ಲದೆ ಡೈನಮೈಟ್ ಸಿಡಿಸುವುದು, ನೀರಿಗೆ ವಿಷ ಬೆರೆಸುವುದು, ಬಂದೂಕಿನಿಂದ ಗುಂಡು ಹಾರಿಸುವುದು ಮತ್ತಿತರ ನಿಷೇಧಿತ ವಿಧಾನಗಳ ಮೂಲಕವೂ ಮೀನು ಹಿಡಿಯುವುದು ಸಾಮಾನ್ಯವಾಗಿದೆ.

    ಮಹಶೀರ್ ಮೀನು ಬೇಟೆಗೆ ನಿರ್ಬಂಧ ಇದ್ದರೂ ಹಾರಂಗಿ ಮತ್ತು ಕಾವೇರಿ ನದಿಯಲ್ಲಿ ಇಲಾಖೆಗಳ ಕಣ್ಣು ತಪ್ಪಿಸಿ ಅಪರೂಪದ ದೊಡ್ಡ ಗಾತ್ರದ ಮಹಶೀರ್ ಮೀನುಗಳನ್ನು ಬೇಟೆಯಾಡವುದೂ ಕಂಡು ಬರುತ್ತಿದೆ ಎನ್ನುತ್ತಾರೆ ಸ್ಥಳೀಯರು.

    ಪಶ್ಚಿಮಘಟ್ಟದ ಜಲಚರಗಳಲ್ಲಿ ವಿಶೇಷ ಅನ್ನಿಸಿರುವ ಮಹಶೀರ್ ಸಂರಕ್ಷಣೆಗೋಸ್ಕರ ಕೊಡಗಿನಲ್ಲಿ ನೆಲ್ಯಹುದಿಕೇರಿಯಿಂದ ಗಡಿಗ್ರಾಮ ಶಿರಂಗಾಲ ತನಕದ ೩೫ ಕಿಲೋಮೀಟರ್ ಕಾವೇರಿ ನದಿಯನ್ನು ಮೀನು ಬೇಟೆ ನಿಷೇಧಿತ ಪ್ರದೇಶವನ್ನಾಗಿ ಘೋಷಿಸಲಾಗಿದೆ. ಹಾರಂಗಿ ಅಣೆಕಟ್ಟೆಯಿಂದ ಕೂಡಿಗೆ ಸಂಗಮದ ತನಕದ ಪ್ರದೇಶವೂ ಮಹಶೀರ್ ಸಂರಕ್ಷಿತ ಸ್ಥಳವಾಗಿದೆ. ೨೦೧೮ರ ಮಹಾಮಳೆ ಸಂದರ್ಭದಲ್ಲಿ ಈ ಭಾಗದಲ್ಲೂ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಕಾಣಿಸಿಕೊಂಡಿತ್ತು. ಆದರೆ ದೊಡ್ಡ ಗಾತ್ರದ ಮಹಶೀರ್ ಮೀನುಗಳು ಆವಾಸ ಸ್ಥಾನ ಬಿಟ್ಟು ಕದಲಿರಲಿಲ್ಲ. ಮಹಶೀರ್ ಮೀನು ಎಂಥಹದ್ದೇ ಸನ್ನಿವೇಶದಲ್ಲೂ ತನ್ನ ವಾಸ ಸ್ಥಾನ ಬದಲಿಸುವುದಿಲ್ಲ. ಕೆನಡಾದ ಸಂಶೋಧಕರು ವಾಲ್ನೂರಿನಲ್ಲಿ ವಿವಿಧ ಗಾತ್ರದ ೨೯ ಮೀನುಗಳಿಗೆ ಅಳವಡಿಸಿರುವ ರೇಡಿಯೋ ಕಾಲರ್ ಮೂಲಕ ಈ ವಿಷಯ ಕಂಡುಕೊಳ್ಳಲಾಗಿತ್ತು. ಅತ್ಯಂತ ಚಟುವಟಿಕೆಯಿಂದ ಕೂಡಿರುವ ಚಿಕ್ಕ ಮೀನುಗಳು ಸುಮಾರು ೧೦ ಕಿ.ಮೀ. ತನಕ ಹೋಗಿ ವಾಪಸ್ ಬಂದಿರುವುದು ದಾಖಲಾಗಿದೆ. ಆದರೆ ದೊಡ್ಡಮೀನುಗಳು ಮಾತ್ರ ಬಹುತೇಕ ಒಂದೇ ಸ್ಥಳದಲ್ಲಿ ಇರುತ್ತವೆ. ಇದೀಗ ಕಾವೇರಿಯಲ್ಲಿ ನೀರಿನ ಹರಿಯುವಿಕೆಯೇ ನಿಂತುಹೋಗಿದೆ. ಆಳದ ಗುಂಡಿಗಳಲ್ಲಷ್ಟೇ ನೀರು ಇದೆ. ಇಂತಹ ಪರಿಸ್ಥಿತಿಯಲ್ಲೂ ಮಹಶೀರ್ ಮೀನುಗಳು ಸುರಕ್ಷಿತ ಸ್ಥಳ ಸೇರಿಕೊಂಡಿರಬಹುದು ಎನ್ನಲಾಗುತ್ತಿದೆ.

    ಮಹಶೀರ್ ತುಂಬಾ ಸಂವೇದನಾಶೀಲ ಮೀನು. ತನ್ನ ವಾತಾವರಣದಲ್ಲಿ ಚಿಕ್ಕ ಬದಲಾವಣೆ ಕಂಡುಬಂದರೂ ಸುರಕ್ಷಿತ ತಾಣ ಸೇರಿಕೊಂಡು ಬಿಡುತ್ತವೆ. ಹಾಗಾಗಿ ಕಾವೇರಿ ನದಿಯಲ್ಲಿ ಈ ಜಾತಿಯ ದೊಡ್ಡ ದೊಡ್ಡ ಮೀನುಗಳಿಗೆ ಸದ್ಯದ ಮಟ್ಟಿಗೆ ಯಾವುದೇ ತೊಂದರೆ ಆಗಿರಲಿಕ್ಕಿಲ್ಲ. ಅವುಗಳು ಸುರಕ್ಷಿತ ಸ್ಥಳ ಸೇರಿಕೊಂಡಿರಬಹುದು. ನಿಸರ್ಗಧಾಮದಲ್ಲಿ ಮೀನುಗಳ ರಕ್ಷಣೆ ವೇಳೆ ದೊಡ್ಡ ಗಾತ್ರದ ಮೀನುಗಳು ಸಿಕ್ಕಿರಲಿಲ್ಲ.

    • ಸಚಿನ್, ಸಹಾಯಕ ನಿರ್ದೇಶಕ, ಮೀನು ಮರಿ ಉತ್ಪಾದನಾ ಕೇಂದ್ರ, ಹಾರಂಗಿ

    ನಿಸರ್ಗಧಾಮ ತೂಗು ಸೇತುವೆ ಕೆಳಭಾಗದಲ್ಲಿ ಆಶ್ರಯ ಪಡೆದಿದ್ದ ಜಲಚರಗಳ ರಕ್ಷಣೆಗೆ ನಾವು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೆವು. ನೀರು ಉಳಿಸಿಕೊಳ್ಳಲು ಕಟ್ಟೆಯನ್ನೂ ಕಟ್ಟಲಾಗಿತ್ತು. ಆದರೂ ಗುಂಡಿಯಲ್ಲಿ ನೀರಿನ ಸಂಗ್ರಹ ಕಡಿಮೆ ಆಗುತ್ತಾ ಬಂತು. ಕೊನೆಗೆ ಜಲಚರಗಳನ್ನು ಉಳಿಸಿಕೊಳ್ಳಲು ನೀರಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಮಾಡಲಾಯಿತು. ಇದು ವ್ಯರ್ಥ ಪ್ರಯತ್ನ ಎಂದು ಗೊತ್ತಾದಾಗ ರಕ್ಷಿಸಿ ಬೇರೆ ಕಡೆಗೆ ಬಿಡಲಾಗಿದೆ.
    ವಿಲಾಸ್ ಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ, ನಿಸರ್ಗಧಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts