More

    ಬಾಲ್ಯ ವಿವಾಹ ತಡೆಗೆ ಸಹಕರಿಸಲು ಮನವಿ

    ಕೋಲಾರ: ತಾಲೂಕಿನ ಪೊಲೀಸ್ ಠಾಣೆಗಳಲ್ಲಿ ಕಳೆದ ವಾರ 3 ದಿನಗಳಲ್ಲಿ 38 ಬಾಲ್ಯವಿವಾಹ ಪ್ರಕರಣ ದಾಖಲಾಗಿದ್ದು, ಈ ಸಾಮಾಜಿಕ ಪಿಡುಗು ತಡೆಗೆ ವಿದ್ಯಾರ್ಥಿಗಳು ಸಂಕಲ್ಪ ಮಾಡಿ 1098 ಮಕ್ಕಳ ದೂರವಾಣಿಗೆ ಸಂಖ್ಯೆಗೆ ಮಾಹಿತಿ ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ ತಿಳಿಸಿದರು.

    ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘದ ಆಶ್ರಯದಲ್ಲಿ ಮಕ್ಕಳಿಗೆ ಬಾಲ್ಯವಿವಾಹ ನಿಷೇಧ ಹಾಗೂ ಪೋಕ್ಸೋ ಕಾಯಿದೆಗಳ ಕುರಿತು ಅರಿವು ನೀಡುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
    ಮಕ್ಕಳ ಹಕ್ಕುಗಳಿಗೆ ಚ್ಯುತಿಯಾದರೆ 1098 ಅಲ್ಲದೇ 14499 ಸಹಾಯವಾಣಿಗೂ ದೂರು ಸಲ್ಲಿಸಬಹುದಾಗಿದೆ. ಕಾಯಿದೆಯಡಿ ಮದುವೆಯಾಗಲು ಹೆಣ್ಣಿಗೆ 18 ಹಾಗೂ ಗಂಡಿಗೆ 21 ವರ್ಷ ಕಡ್ಡಾಯವಾಗಿದೆ, ಅದಕ್ಕೂ ಮೊದಲು ಮದುವೆ ಮಾಡಿದರೆ ಬಾಲ್ಯವಿವಾಹ ಕಾಯಿದೆಯಡಿ ಅಪರಾಧವಾಗಿದ್ದು, ಜೈಲು ಹಾಗೂ 1 ಲಕ್ಷ ದಂಡವಿದೆ ಮತ್ತು ಹೆಣ್ಣು ಅಪ್ರಾಪ್ತೆಯಾಗಿದ್ದಾಗಲೇ ಗರ್ಭಿಣಿಯಾದರೆ ಪೋಕ್ಸೋ ಕಾಯಿದೆಯಡಿ ಶಿಕ್ಷೆ ಖಚಿತ ಎಂದರು.
    ಆಟವಾಡೋ ಮಕ್ಕಳಿಗೆ ಮಕ್ಕಳಾದರೆ ಅವರು ನಿಭಾಯಿಸಲು ಸಾಧ್ಯವೇ, ದೈಹಿಕ ಹಾಗೂ ಮಾನಸಿಕವಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿ, ಮಕ್ಕಳನ್ನು ಶಿಕ್ಷಣದಿಂದ ವಂಚಿಸಬಾರದು, ಮಕ್ಕಳು ಬಾಲ್ಯವಿವಾಹ ಕಾಯಿದೆ ಕುರಿತು ಅರಿವು ಪಡೆದು ಪಾಲಕರಿಗೂ, ನೆರೆಹೊರೆಯವರಿಗೆ ಮಾಹಿತಿ ನೀಡುವ ಮೂಲಕ ಈ ಪಿಡುಗನನ್ನು ತಡೆಯಲು ಸಹಕರಿಸಿ ಎಂದರು.
    ವಕೀಲ ಬಿ.ವಿ.ವೆಂಕಟೇಶ್ ಮಾತನಾಡಿ, ಬಾಲ್ಯವಿವಾಹ ಕಾಯ್ದೆ ಕುರಿತು ಮಕ್ಕಳಿಗೆ ಮಾರ್ಗದರ್ಶನ ನೀಡಿ, ಮಕ್ಕಳ ಹಕ್ಕುಗಳ ರಕ್ಷಣೆಗೆ ಸರ್ಕಾರ ಅನೇಕ ಕಾನೂನು ತಂದಿದೆ, ಶಿಕ್ಷಣವೂ ಒಂದು ಹಕ್ಕಾಗಿದೆ, ಮಕ್ಕಳ ಭವಿಷ್ಯಕ್ಕೆ ಮಾರಕವಾಗಿ ಬಾಲ್ಯವಿವಾಹ ಮಾಡಿದರೆ ತಂದೆ, ತಾಯಿ, ಮದುವೆ ಮಾಡಿಸಿದ ಪುರೋಹಿತ, ಮದುವೆಗೆ ಸ್ಥಳ ನೀಡಿದ ಕಲ್ಯಾಣ ಮಂಟಪದ ಮಾಲೀಕನಿಗೂ ಶಿಕ್ಷೆಯಾಗುತ್ತದೆ ಎಂದು ಎಚ್ಚರಿಸಿದರು.
    ಗಮನ ಸ್ವಸಹಾಯ ಸಂಘದ ಸದಸ್ಯೆ ಹಾಗೂ ಪ್ಯಾನಲ್ ಲೀಗಲ್ ವ್ಯಾಲೆಂಟಿಯರ್ ಲಕ್ಷಿ$್ಮ ಪೋಕ್ಸೋ ಕಾಯಿದೆ ಕುರಿತು ಮಕ್ಕಳಿಗೆ ಅರಿವು ನೀಡಿ, ಮಕ್ಕಳು ಸುರಕ್ಷಿತ ಸ್ಪರ್ಶ ಹಾಗೂ ಅಸುರಕ್ಷಿತ ಸ್ಪರ್ಶದ ಕುರಿತು ಅರಿವು ಪಡೆಯಿರಿ, ಯಾರೇ ಆಗಲಿ ನಿಮ್ಮನ್ನು ಸ್ಪರ್ಶಿಸುತ್ತಿರುವುದು ಅಸುರಕ್ಷಿತ ಸ್ಪರ್ಶ ಎಂಬ ಭಾವನೆ ಬಂದರೆ ನಿಮ್ಮ ತಂದೆ ತಾಯಿಗೆ, ನಿಮ್ಮ ಸ್ನೇಹಿತರಿಗೆ, ಶಿಕ್ಷಕರಿಗೆ ಮಾಹಿತಿ ನೀಡಿ ಎಂದರು.
    ಶಾಲೆಯ ಮುಖ್ಯಶಿಕ್ಷಕಿ ಸಿದ್ದೇಶ್ವರಿ, ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಸುಗುಣಾ, ಲೀಲಾ, ಫರೀದಾ, ರಮಾದೇವಿ, ಚಂದ್ರಶೇಖರ್, ಶ್ರೀನಿವಾಸಲು ವರಲಕ್ಷ್ಮೀ, ನವೀನಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts