More

    ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿ ; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕಾಂಗ್ರೆಸ್ ನಿಯೋಗದಿಂದ ಮನವಿ

    ತುಮಕೂರು: ಕರೊನಾ ಸಂಕಷ್ಟದಲ್ಲಿ ಉದ್ಯೋಗ ಕಳೆದುಕೊಂಡ ಯುವಜನತೆ ಇಸ್ಪೀಟ್, ಮಟ್ಕಾ ದಂಧೆ, ಡ್ರಗ್ಸ್ ಸೇರಿ ಹಲವು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವುದು ಆತಂಕಕಾರಿ ಎನಿಸಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸೂಕ್ತಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ನಿಯೋಗವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದೆ.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಎಸ್ಪಿ ರಾಹುಲ್‌ಕುಮಾರ್ ಶಹಾಪೂರವಾಡ್ ಅವರನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಮುರಳೀಧರ ಹಾಲಪ್ಪ ನೇತೃತ್ವದ ನಿಯೋಗವು ಭೇಟಿ ಮಾಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿತು.

    ಪಟ್ಟಣಗಳಲ್ಲಿ ದುಡಿಯುತ್ತಿದ್ದ ಯುವಕರು ಕರೊನಾ ಸಂದರ್ಭದಲ್ಲಿ ಕೆಲಸ ಕಳೆದುಕೊಂಡು ಹಳ್ಳಿಗಳಿಗೆ ಹಿಂದಿರುಗಿದ್ದು ಕೆಲ ಯುವಕರು ದುಶ್ಚಟಗಳಿಗೆ ದಾಸರಾಗಿದ್ದಾರೆ. ಇಸ್ಪೀಟ್, ಮಟ್ಕಾ , ಗಾಂಜಾ, ಅಕ್ರಮ ಮದ್ಯ ದಂಧೆ ಸೇರಿ ಹಲವು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಅಕ್ರಮ ಚಟುವಟಿಕೆಗಳಲ್ಲಿ ಕಡಿವಾಣ ಹಾಕುವಂತೆ ಮುರಳೀಧರ ಹಾಲಪ್ಪ ಗ್ರಹಿಸಿದರು.

    ಜಿಲ್ಲೆಯಲ್ಲಿ ಬಹುತೇಕ ಕಡೆ ಹಳೆಯ ಠಾಣೆಗಳಿದ್ದು ಅವುಗಳನ್ನು ನವೀಕರಣಗೊಳಿಸಬೇಕು. ಪ್ರತಿ 25 ಕಿ.ಮೀ.,ಗೆ ಠಾಣೆ ಅಥವಾ ಉಪಠಾಣೆಗಳನ್ನು ಮಾಡುವುದರಿಂದ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕಲು ಸಹಕಾರಿಯಾಗಿರುತ್ತದೆ. ಜಿಲ್ಲೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದರ ಜತೆಗೆ ಪೊಲೀಸರಿಗೆ ಕೆಲಸದ ಒತ್ತಡ ಹೇರದಂತೆ ಅವರ ಆರೋಗ್ಯ, ಮಕ್ಕಳ ವಿದ್ಯಾಭ್ಯಾಸ, ವಾಹನ ಸೌಲಭ್ಯ, ವಸತಿ ಸೌಲಭ್ಯಗಳ ಬಗ್ಗೆ ಗಮನ ನೀಡಬೇಕು ಎಂದರು.

    ಟ್ರಾಫಿಕ್ ಸಮಸ್ಯೆ: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗಳಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಜನತೆ ಹೈರಾಣಾಗಿದ್ದಾರೆ. ಜನರಿಗೆ ದಂಡ ವಿಧಿಸುವ ಬದಲು ಸೂಕ್ತ ಸಂಚಾರ ವ್ಯವಸ್ಥೆಗೆ ಕ್ರಮವಹಿಸದೆ ಕಾಮಗಾರಿ ನಿರ್ವಹಿಸುತ್ತಿರುವ ಸ್ಮಾರ್ಟ್‌ಸಿಟಿ ಗುತ್ತಿಗೆದಾರರಿಗೆ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಟಿ.ಎಸ್.ನಿರಂಜನ್ ಒತ್ತಾಯಿಸಿದರು. ದಿಬ್ಬೂರಿನಲ್ಲಿ 1200 ಮನೆಗಳಿದ್ದು, ಅಲ್ಲಿ ಪೊಲೀಸ್ ಹೊರಠಾಣೆ ನಿರ್ಮಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಸಲಹೆ ನೀಡಿದರು.

    ಜಿಲ್ಲಾ ಕಾಂಗ್ರೆಸ್ ಮುಖಂಡರಾದ ರೇವಣ ಸಿದ್ಧಪ್ಪ, ಚೌದ್ರಿರಂಗಪ್ಪ, ಟೂಡಾ ಮಾಜಿ ಅಧ್ಯಕ್ಷ ಸಿದ್ಧಲಿಂಗೇಗೌಡ, ಮರಿಚನ್ನಮ್ಮ, ಸಂಜೀವ್‌ಕುಮಾರ್, ವೈ.ಎನ್.ನಾಗರಾಜ್, ಎನ್.ಮಂಜುನಾಥ್, ಪ್ರಕಾಶ್, ಎಸ್.ವಿ.ಗೀತ, ಮಂಜುಳಾ ಆರಾಧ್ಯ, ಗೀತಮ್ಮ, ಗುರುಪ್ರಸಾದ್, ಶಿವಪ್ರಸಾದ್, ಶಿವರಾಜ್, ನರಸಿಂಹಮೂರ್ತಿ, ಸೈಯದ್ ಬುರಾನ್, ಇಲಾಹಿ ಇದ್ದರು.

    ಪ್ರತಿ ತಾಲ್ಲೂಕಿನಲ್ಲಿ ತಿಂಗಳಿಗೊಮ್ಮೆ ಜನ ಸಂಪರ್ಕ ಕಾರ್ಯಕ್ರಮ ಆಯೋಜಿಸುವ ಮೂಲಕ ಜನರಲ್ಲಿ ಆತ್ಮವಿಶ್ವಾಸ ತುಂಬಬೇಕು. ಇದರ ಜತೆಗೆ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಲು ಪ್ರಯತ್ನ ಮಾಡಬೇಕು. ಕಲ್ಲು ಮತ್ತು ಮರಳು ಗಣಿಗಾರಿಕೆ ಹಾಗೂ ಇಸ್ಪೀಟ್ ಅಡ್ಡೆಗಳನ್ನು ಹತೋಟಿಗೆ ತರಬೇಕು.
    ಮುರಳೀಧರಹಾಲಪ್ಪ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ

    ಜಿಲ್ಲೆಯಲ್ಲಿ ಗಾಂಜಾ, ಅಫೀಮು ಸೇರಿ ಯಾವುದೇ ಅಕ್ರಮ ಚಟುವಟಿಕೆಗಳು ಕಂಡು ಬಂದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರ ಸಹಕಾರದೊಂದಿಗೆ ಜನಸಂಪರ್ಕ ಸಭೆಯನ್ನು ನಡೆಸಲಾಗುವುದು. ದಿಬ್ಬೂರಿನಲ್ಲಿ ಪೊಲೀಸ್ ಔಟ್‌ಪೋಸ್ಟ್ ಸ್ಥಾಪನೆಗೆ ಮೇಲಧಿಕಾರಿಗಳ ಅನುಮತಿ ಪಡೆದು ಕ್ರಮ ಕೈಗೊಳ್ಳಲಾಗುವುದು.
    ರಾಹುಲ್‌ಕುಮಾರ್ ಶಹಾಪೂರವಾಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts