More

    ಐಫೋನ್ ಬಳಕೆದಾರರಿಗೆ ಆತಂಕ; ಎಚ್ಚರಿಕೆ ಸಂದೇಶ ರವಾನಿಸಿದ ಆಪಲ್ ಕಂಪನಿ

    ನವದೆಹಲಿ: ತಂತ್ರಜ್ಞಾನ ಜಗತ್ತಿನ ದಿಗ್ಗಜ ಕಂಪನಿ ಆಗಿರುವ ಆಪಲ್ ತನ್ನ ಐ-ಫೋನ್ ಬಳಕೆದಾರರಿಗೆ ಮರ್ಸೆನರಿ ಸ್ಪೈವೇರ್ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಬಳಕೆದಾರರು ಆತಂಕ ಎದುರಿಸುವಂತಾಗಿದೆ. ಜಗತ್ತಿನ 92 ದೇಶಗಳಲ್ಲಿನ ಬಳಕೆದಾರರಿಗೆ ಬುಧವಾರ ರಾತ್ರಿಯೇ ಈ ಸಂದೇಶ ರವಾನೆಯಾಗಿದ್ದು, ಆ ಪೈಕಿ ಭಾರತವೂ ಒಂದಾಗಿದೆ.

    ಮರ್ಸೆನರಿ ಸ್ಪೈವೇರ್ ದಾಳಿಗೆ ಒಳಗಾದವರಿಗೆ ‘ಅವರು ಯಾರು, ಏನು ಮಾಡುತ್ತಾರೆ’ ಎಂಬ ಕುರಿತು ಮಾಹಿತಿ ನೀಡಲು ಹಾಗೂ ಅಗತ್ಯ ನೆರವು ನೀಡುವಂತೆ ಈ ನೋಟಿಫಿಕೇಷನ್ ವಿನ್ಯಾಸ ಮಾಡಲಾಗಿದೆ ಎಂದು ಆಪಲ್ ತಿಳಿಸಿದೆ. ಈ ಸ್ಪೈವೇರ್ ದಾಳಿಕೋರರು ಬಹಳ ಕಡಿಮೆ ಸಂಖ್ಯೆಯ ನಿರ್ದಿಷ್ಟ ವ್ಯಕ್ತಿಗಳು ಮತ್ತು ಅವರ ಸಾಧನಗಳನ್ನು ಗುರಿಯಾಗಿಸಲು ಅಸಾಧಾರಣ ಸಂಪನ್ಮೂಲಗಳನ್ನು ಅನ್ವಯಿಸುವುದರಿಂದ ಸಾಮಾನ್ಯ ಸೈಬರ್ ಕ್ರಿಮಿನಲ್ ಚಟುವಟಿಕೆ ಮತ್ತು ಗ್ರಾಹಕ ಮಾಲ್​ವೇರ್​ಗಿಂತ ಇಂತಹ ದಾಳಿಗಳು ಹೆಚ್ಚು ಸಂಕೀರ್ಣವಾಗಿರುತ್ತವೆ. ಈ ದಾಳಿಗಳಿಗೆ ಮಿಲಿಯನ್​ಗಟ್ಟಲೆ ಡಾಲರ್​ಗಳ ವೆಚ್ಚ ಮಾಡುವುದರಿಂದ ಮತ್ತು ಸಾಮಾನ್ಯವಾಗಿ ಕಡಿಮೆ ಅವಧಿ ಹೊಂದಿರುವುದರಿಂದ ಇವುಗಳನ್ನು ಪತ್ತೆ ಹಚ್ಚುವುದು ಮತ್ತು ತಡೆಯುವುದು ಕೂಡ ಹೆಚ್ಚು ಕಷ್ಟ. ಅದಾಗ್ಯೂ ಬಹುಪಾಲು ಬಳಕೆದಾರರು ಇಂತಹ ದಾಳಿಗಳಿಗೆ ಗುರಿಯಾಗುವುದಿಲ್ಲ ಎಂದು ಆಪಲ್ ತನ್ನ ಸೂಚನೆಯಲ್ಲಿ ತಿಳಿಸಿದೆ.

    ಯಾರಿಗೆಲ್ಲ ತೊಂದರೆ ಸಾಧ್ಯತೆ?: ಈ ಹಿಂದಿನ ಪೆಗಾಸಸ್ ದಾಳಿ ಉಲ್ಲೇಖಿಸಿರುವ ಆಪಲ್, ಇಂಥ ದಾಳಿಗಳು ಗಣ್ಯ ವ್ಯಕ್ತಿಗಳನ್ನು ಗುರಿಯಾಗಿಸಿ ನಡೆಯುವುದರಿಂದ ಜಗತ್ತಿನ ಕೆಲವು ಪತ್ರಕರ್ತರು, ಕಾರ್ಯಕರ್ತರು, ರಾಜಕಾರಣಿಗಳು, ರಾಜತಾಂತ್ರಿಕರು ಈ ದಾಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ ಎಂದು ನೋಟಿಸ್ ತಿಳಿಸಿದೆ. 2021ರಿಂದ ಈಚೆಗೆ ವರ್ಷದಲ್ಲಿ ಹಲವು ಸಲ ಇಂಥ ದಾಳಿಗಳನ್ನು ಪತ್ತೆ ಹಚ್ಚಲಾಗಿದ್ದು, ಇದುವರೆಗೆ 150 ದೇಶಗಳಲ್ಲಿನ ನಮ್ಮ ಬಳಕೆದಾರರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ಆಪಲ್ ಹೇಳಿದೆ.

    ಸಂದೇಶ ರವಾನೆ ಯಾವ ರೀತಿ?: ಬಳಕೆದಾರರು appleid.apple.com ತಾಣಕ್ಕೆ ಲಾಗಿನ್ ಆದಾಗ ಪೇಜ್​ನ ಮೇಲ್ಭಾಗದಲ್ಲಿ ನೋಟಿಫಿಕೇಷನ್ ಕಾಣಿಸುತ್ತದೆ. ಅಲ್ಲದೆ ಬಳಕೆದಾರರ ಆಪಲ್ ಐಡಿಗೆ ಲಿಂಕ್ ಮಾಡಲಾದ ಫೋನ್ ನಂಬರ್, ಇ-ಮೇಲ್ ವಿಳಾಸಕ್ಕೆ ಸಂದೇಶ ರವಾನೆ ಆಗಿರುತ್ತದೆ.

    ಏನು ಮಾಡಬೇಕು?: ಎಚ್ಚರಿಕೆ ಸಂದೇಶ ಸ್ವೀಕರಿಸಿದ ಬಳಕೆದಾರರು ಮೊದಲಿಗೆ ಐಫೋನ್​ನಲ್ಲಿ ಲಾಕ್​ಡೌನ್ ಮೋಡ್ ಎನೇಬಲ್ ಮಾಡಿಕೊಳ್ಳಬೇಕು. ಸೆಟ್ಟಿಂಗ್ಸ್ ನಲ್ಲಿ ಪ್ರೖೆವೆಸಿ ಆಂಡ್ ಸೆಕ್ಯುರಿಟಿಗೆ ಹೋಗಿ ನಂತರ ಅಲ್ಲಿ ಲಾಕ್​ಡೌನ್ ಮೋಡ್ ಆನ್ ಮಾಡಿಕೊಳ್ಳಬಹುದು. ದಾಳಿಗೊಳಗಾದ ಬಳಕೆದಾರರಿಗೆ ಇದರಿಂದ ಹೆಚ್ಚಿನ ಡಿಜಿಟಲ್ ಭದ್ರತೆ ಲಭಿಸುತ್ತದೆ. ಅಲ್ಲದೆ, ಬಳಕೆದಾರರು ಐಫೋನ್​ನ ಇತ್ತೀಚಿನ ಆವೃತ್ತಿಗೆ ಅಪ್​ಡೇಟ್ ಮಾಡಿಕೊಳ್ಳುವಂತೆಯೂ ಆಪಲ್ ಶಿಫಾರಸು ಮಾಡಿದೆ. ಐಫೋನ್ ಮಾತ್ರವಲ್ಲದೆ ಮ್ಯಾಕ್ ಇಲ್ಲವೇ ಐಪ್ಯಾಡ್ ಬಳಕೆದಾರರೂ ಈ ಕ್ರಮಗಳನ್ನು ಅನುಸರಿಸಬೇಕು. ಬಳಕೆದಾರರು ಅಗತ್ಯವಾದರೆ ಡಿಜಿಟಲ್ ಸೆಕ್ಯುರಿಟಿ ಹೆಲ್ಪ್ ಲೈನ್​ನಲ್ಲಿ ಪರಿಣತರ ಸಹಾಯವನ್ನೂ ಪಡೆಯಬಹುದು. ಸ್ಪೈವೇರ್ ಕುರಿತು ಎಚ್ಚರಿಕೆ ಸಂದೇಶ ಸ್ವೀಕರಿಸಿರದ ಬಳಕೆದಾರರು ಕೂಡ ದಾಳಿಗೆ ಒಳಗಾಗುವ ಸಾಧ್ಯತೆ ಇರಬಹುದಾದ್ದರಿಂದ ಅಂಥವರು ಯಾವುದಕ್ಕೂ ಒಮ್ಮೆ ಲಾಕ್​ಡೌನ್ ಮೋಡ್ ಆನ್ ಮಾಡಿಕೊಂಡು ಹೆಚ್ಚಿನ ಸುರಕ್ಷತೆಗೆ ಒಳಗಾಗಬಹುದು ಎಂದೂ ಆಪಲ್ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts