More

    ಹಾವು ಕಡಿತಕ್ಕೆ ‘ಆ್ಯಂಟಿ ಸ್ನೇಕ್ ವೆನಮ್’

    ಬೆಂಗಳೂರು: ಹಾವು ಕಡಿತ ಪ್ರಕರಣ ಮತ್ತು ಮರಣವನ್ನು ಅಧಿಸೂಚಿತ ರೋಗವೆಂದು ಘೋಷಿಸಿರುವ ಸರ್ಕಾರ, ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಆಸ್ಪತ್ರೆಗಳು ಹಾಗೂ ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳನ್ನಾಗಿ ಗುರುತಿಸಿ ಚಿಕಿತ್ಸೆಗಾಗಿ ಮಾರ್ಗಸೂಚಿ ಪ್ರಕಟಿಸಿದೆ.

    ಹಾವಿನ ನಂಜು ಲಕ್ಷಣ ಕಂಡುಬಂದಲ್ಲಿ ತಕ್ಷಣ ರೋಗಿ ಅಥವಾ ಸಂಬಂಧಿಕರ ಒಪ್ಪಿಗೆ ಪತ್ರ ಪಡೆದು, ಕಡ್ಡಾಯವಾಗಿ ‘ಆ್ಯಂಟಿ ಸ್ನೇಕ್ ವೆನಮ್’ಅನ್ನು ಉಚಿತವಾಗಿ ನೀಡುವಂತೆ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

    ಹಾವು ಕಡಿತ ಪ್ರಕರಣ ಕಂಡುಬಂದಲ್ಲಿ ಆಶಾ ಕಾರ್ಯಕರ್ತೆಯರು ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲೂಕು ಆಸ್ಪತ್ರೆಗೆ ಕರೆದೊಯ್ಯಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಅಗತ್ಯವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ರವಾನಿಸಲು ಉಚಿತವಾಗಿ ಆಂಬುಲೆನ್ಸ್ ಸೇವೆ ಒದಗಿಸಬೇಕು ಎಂದು ತಿಳಿಸಲಾಗಿದೆ.

    ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯಲ್ಲಿ ‘ಆ್ಯಂಟಿ ಸ್ನೇಕ್ ವೆನಮ್’ ನೀಡಿದ ನಂತರ ವ್ಯತಿರಿಕ್ತ ಪ್ರತಿಕ್ರಿಯೆ ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ ಒದಗಿಸಬೇಕು. ಹಾವು ಕಡಿತದ ಪ್ರಕರಣ ಹಾಗೂ ಮರಣವನ್ನು ಐಎಚ್‌ಐಪಿ ಪೋರ್ಟಲ್‌ನಲ್ಲಿ ವರದಿ ಮಾಡಬೇಕು. ಚಿಕಿತ್ಸೆ ಅಗತ್ಯವಾದ ‘ಆ್ಯಂಟಿ ಸ್ನೇಕ್ ವೆನಮ್’ ಔಷಧವನ್ನು ದಾಸ್ತಾನು ಹೊಂದಿದ್ದು, ಆರೋಗ್ಯ ಕೇಂದ್ರಗಳಲ್ಲಿ ಸಮೀಪದ ಹಾವು ಕಡಿತ ಚಿಕಿತ್ಸಾ ಕೇಂದ್ರಗಳ ಪಟ್ಟಿ ಹಾಗೂ ದೂರವಾಣಿ ಸಂಖ್ಯೆ ಸಹಿತ ಸೂಚನಾ ಫಲಕ ಮತ್ತು ಹಾವು ಕಡಿತ ನಿಯಂತ್ರಣ ಹಾಗೂ ಹಾವು ಕಡಿತ ಚಿಕಿತ್ಸೆಯ ಬಗ್ಗೆ ಪೋಸ್ಟರ್‌ಗಳನ್ನು ಹಾಕಬೇಕು ಎಂದು ಹೇಳಲಾಗಿದೆ.

    ಒಂದು ವೇಳೆ ಹಾವು ಕಡಿತದಿಂದ ವ್ಯಕ್ತಿ ಮರಣ ಹೊಂದಿದಲ್ಲಿ ಡೆತ್ ಆಡಿಟ್ ಮಾಡಿ, ಶೀಘ್ರವೇ ವಿವರವಾದ ವರದಿ ಸಲ್ಲಿಸಬೇಕು. ಮಕ್ಕಳು ಹಾಗೂ ಗರ್ಭಿಣಿಯರಲ್ಲಿ ಹಾವು ಕಡಿತ ಪ್ರಕರಣಗಳು ವರದಿಯಾದಲ್ಲಿ ಅವರಿಗೂ ತಪ್ಪದೆ ‘ಆ್ಯಂಟಿ ಸ್ನೇಕ್ ವೆನಮ್’ ನೀಡಬೇಕು. ಹಾವು ಕಡಿತದ ಎಲ್ಲ ಪ್ರಕರಣಗಳನ್ನೂ 24 ಗಂಟೆಗಳ ಕಾಲ ಒಳರೋಗಿಯಾಗಿ ಭರ್ತಿ ಮಾಡಿ ನಿಗಾ ವಹಿಸಬೇಕು ಎಂದು ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts