More

    ಕಾಂಗ್ರೆಸ್‌ನಿಂದ ಜನವಿರೋಧಿ ಆಡಳಿತ

    ಸೊರಬ: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಏಳು ತಿಂಗಳು ಕಳೆದರೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ನೆಪದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮರೆತು ಜನ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ಜೆಡಿಎಸ್ ಹಿರಿಯ ಮುಖಂಡ ಕೆ.ಅಜ್ಜಪ್ಪ ಆರೋಪಿಸಿದರು.

    ಶುಕ್ರವಾರ ಪಟ್ಟಣದಲ್ಲಿ ಆಪ್ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿ, ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಅಧಿಕಾರದ ಆಸೆಗಾಗಿ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳು ಸಂಪೂರ್ಣ ಹಳ್ಳ ಹಿಡಿದಿವೆ ಎಂದು ದೂರಿದರು.
    ತಾಲೂಕಿನ ತಾಳಗುಪ್ಪ ಗ್ರಾಮದ ಬಗರ್‌ಹುಕುಂ ರೈತರನ್ನು ತೆರವುಗೊಳಿಸಿದ ವಿಚಾರ ಮುಂದಿಟ್ಟುಕೊಂಡು ಸಚಿವ ಮಧು ಬಂಗಾರಪ್ಪ ಗೆದ್ದಿದ್ದಾರೆ. ಆದರೆ ತೆರವುಗೊಳಿಸಿದ ರೈತರ ಭೂಮಿಯಲ್ಲಿ ಅಡಕೆ ಗಿಡ ನೆಟ್ಟು ಅವರ ರಕ್ಷಣೆಗೆ ಏಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ತಾಲೂಕಿನ ಮೂಡಿ, ಮೂಗೂರು ಏತ ನೀರಾವರಿ ಯೋಜನೆಗೆ 400 ಕೋಟಿ ರೂ. ಅನುದಾನ ನೀಡಿದ್ದು, ಯೋಜನೆ ಯಶಸ್ವಿಗೊಂಡಿದೆ. ಆ ನಂತರ ಯಾವುದೇ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳದಿರುವುದು ಸಚಿವರಿಗೆ ರೈತರ ಮೇಲಿರುವ ಕಾಳಜಿ ಏನು ಎನ್ನುವುದನ್ನು ತೋರಿಸುತ್ತಿದೆ ಎಂದರು.
    ಸಚಿವರು ಖಾಸಗಿ ಕಾರ್ಯಕ್ರಮಗಳಿಗೆ ಮಾತ್ರ ಆದ್ಯತೆ ನೀಡುತ್ತಿದ್ದು, ಅಭಿವೃದ್ಧಿ ಕಾರ್ಯಗಳನ್ನು ಮರೆತಿದ್ದಾರೆ ಎನ್ನುವ ದೂರು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಗುಂಡಿ ಬಿದ್ದಿರುವ ರಸ್ತೆಗೆ ಕಾಮಗಾರಿ ದುರಸ್ತಿ ಮಾಡಬೇಕು. ಇಲ್ಲದಿದ್ದರೆ ಸರ್ಕಾರದ ವೈಫಲ್ಯ ಖಂಡಿಸಿ ಜೆಡಿಎಸ್ ವತಿಯಿಂದ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
    ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಹುಚ್ಚಪ್ಪ ಚಿಮಣೂರು ಮಾತನಾಡಿ, ಕಳೆದ 50 ವರ್ಷಗಳಿಂದ ತಾಲೂಕಿನಲ್ಲಿ ಒಂದೇ ಕುಟುಂಬಕ್ಕೆ ಸೀಮಿತವಾಗಿ ಜನರು ಬೆಂಬಲ ನೀಡಿದ್ದರಿಂದ ಕ್ಷೇತ್ರದಲ್ಲಿ ಸಮಸ್ಯೆಗಳು ಇನ್ನೂ ಜ್ವಲಂತವಾಗಿ ಉಳಿದಿವೆ. ಬಂಗಾರಪ್ಪ ಅವರು ರೈತರ ಹಿತ ಗಮನದಲ್ಲಿಟ್ಟುಕೊಂಡು ಸಮಗ್ರ ನೀರಾವರಿ ವ್ಯವಸ್ಥೆ ಕಲ್ಪಿಸಬೇಕಿತ್ತು. ರೈತರಿಗೆ ಅರಣ್ಯ ಕಡಿದು ಸಾಗುವಳಿ ಮಾಡಲು ಪ್ರೇರಣೆ ನೀಡಿದರೆ ಹೊರತು ಭೂ ಹಕ್ಕು ಕೊಡಿಸದ ಪರಿಣಾಮವಾಗಿ ಇಂದು ರೈತರು ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ ಎಂದು ಗಂಭೀರ ಆರೋಪ ಮಾಡಿದರು.
    ಅನುಕೂಲಸಿಂಧು ರಾಜಕಾರಣ ಮಾಡುತ್ತಿರುವ ಸಹೋದರರು ವ್ಯೆಯಕ್ತಿಕ ಅಭಿವೃದ್ಧಿಗೆ ಮಾತ್ರ ಗಮನ ನೀಡುತ್ತಿದ್ದಾರೆ. ಅವರ ಒಳಸಂಚಿನ ರಾಜಕಾರಣಕ್ಕೆ ರೈತಾಪಿ ವರ್ಗ ಬಲಿಯಾಗಿ ಇಂದು ಬಗರ್ ಹುಕುಂ ಜಮೀನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ ಎಂದರು.
    ಆಮ್ ಆದ್ಮಿ ಪಕ್ಷದ ತಾಲೂಕು ಘಟಕದ ಮಾಜಿ ಅಧ್ಯಕ್ಷ ಓಂಪಿಕಲ್ ಗಣೇಶ್ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಸೇರಿದರು.
    ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸುಮಾ ಗಜಾನನ, ನಗರ ಘಟಕದ ಅಧ್ಯಕ್ಷ ಶ್ರೀಧರ್ ಶೇಟ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಜೀಜ್, ಗಣೇಶ್, ವಿಷ್ಣು ಬಿಳವಾಣಿ, ಪುಂಡಲೀಕಪ್ಪ, ದಯಾನಂದ ಯಕ್ಷಿ, ಬಸವರಾಜ, ಲೋಕೇಶ್ ಬಾಡದಬೈಲು, ಮಾರುತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts