More

    ಏ.10ರವರೆಗೆ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆ ಬಂದ್

    ತುಮಕೂರು: ಅಂತರಸನಹಳ್ಳಿ ಹೂವು, ಹಣ್ಣು ಹಾಗೂ ತರಕಾರಿ ಮಾರುಕಟ್ಟೆಯಲ್ಲಿ ಏ.2 ರಿಂದ 10ರವರೆಗೆ ವ್ಯಾಪಾರ ಸ್ಥಗಿತಗೊಳಿಸಲು ವರ್ತಕರು ನಿರ್ಧರಿಸಿದ್ದಾರೆ.

    ಕೃಷಿ ಮತ್ತು ಮಾರುಕಟ್ಟೆ ಸಮಿತಿಯ ಅಂತರಸನಹಳ್ಳಿ ಮಾರುಕಟ್ಟೆ ಪ್ರಾಂಗಣದಲ್ಲಿ ಕರೊನಾ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧಗಳನ್ನು ಹೇರಿರುವುದರಿಂದ ತೀವ್ರ ಕಿರಿಕಿರಿ ಅನುಭವಿಸುತ್ತಿರುವ ತರಕಾರಿ ಮಾರುವ ವರ್ತಕರು ತರಕಾರಿ ಮಾರಾಟ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ. ವರ್ತಕರ ಈ ನಿರ್ಧಾರವು ಲಾಕ್‌ಡೌನ್‌ನಿಂದ ಪರಿತಪಿಸುತ್ತಿರುವ ಸಾರ್ವಜನಿಕರ ಮೇಲೆ ಇನ್ನಷ್ಟು ಬರೆ ಎಳೆಯಲಿದೆ.

    ಮಾರುಕಟ್ಟೆಯಲ್ಲಿ ಬೆಳಗ್ಗೆ 5 ರಿಂದ 7ರವರೆಗೆ ಜನದಟ್ಟಣೆ ಉಂಟಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೆಲವು ಮಾರ್ಗೋಪಾಯಗಳನ್ನು ಅನುಸರಿಸಲು ಕ್ರಮಕೈಗೊಳ್ಳಲಾಯಿತು. ಮೊದಲ ಅಂಗಡಿ ತೆರೆದರೆ 2ನೇ ಅಂಗಡಿ ತೆರೆಯುವಂತಿರಲಿಲ್ಲ. 3, 5, 7 ಹೀಗೆ ಅಂಗಡಿ ತೆರೆಯುವುಂತೆ ಸೂಚನೆ ನೀಡಲಾಗಿತ್ತು. ಇದನ್ನು ವಿರೋಧಿಸಿದ್ದಕ್ಕೆ ಹಣ್ಣಿನ ಅಂಗಡಿಗಳಿದ್ದ ಸ್ಥಳದಲ್ಲಿ ಬೇಕಾದರೆ ವ್ಯಾಪಾರ ಮಾಡುವಂತೆ ಕಠಿಣವಾಗಿ ಹೇಳಲಾಗಿತ್ತು.

    ಮಾಸ್ಕ್ ಕಡ್ಡಾಯ: ಜತೆಗೆ ವರ್ತಕರು ಮಾಸ್ಕ್ ಕಡ್ಡಾಯ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕ್‌ಗಳನ್ನು ಹಾಕಬೇಕು. ಜತೆಗೆ ಸ್ಯಾನಿಟೈಸರ್ ಸಹ ಬಳಸುವಂತೆ ಕೆಲವು ಕಠಿಣ ಕ್ರಮಗಳನ್ನು ಹೇರಲಾಗಿತ್ತು. ಈ ಎಲ್ಲ ಸೂಚನೆಗಳಿಂದ ರೋಸಿಹೋದ ವರ್ತಕರು ಅನಿವಾರ್ಯವಾಗಿ ವ್ಯಾಪಾರವನ್ನೇ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಕರೊನಾ ವಿರುದ್ಧ ಸಮರ ಸಾರಿರುವ ಜಿಲ್ಲಾಡಳಿತಕ್ಕೆ ಈಗ ಹೊಸ ತಲೆನೋವು ಆರಂಭವಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಮನೆ, ಮನೆಗೆ ತರಕಾರಿ ತಲುಪಿಸುವ ತೀರ್ಮಾನಕ್ಕೂ ಹಿನ್ನಡೆಯಾಗಲಿದೆ.

    100 ರೂಪಾಯಿಗೆ ತರಕಾರಿ ಕಿಟ್ !: ವಿವಿಧ ತರಕಾರಿಗಳುಳ್ಳ ಒಂದು ಕಿಟ್ ಇನ್ನೂ 100 ರೂ., ಗೆ ಜನರ ಮನೆಬಾಗಿಲಿಗೆ ತಲುಪಿಸುವ ಯೋಜನೆಯನ್ನು ಜಾರಿಗೆ ತರಲು ಮಹಾನಗರ ಪಾಲಿಕೆ ಮುಂದಾಗಿದೆ. ಲಾಕ್‌ಡೌನ್ ಜಾರಿ ಹಿನ್ನೆಲೆಯಲ್ಲಿ ಮನೆಬಿಟ್ಟು ಜನ ಹೊರಬರದಂತೆ ಇನ್ನಷ್ಟು ಕ್ರಮಕೈಗೊಳ್ಳಲು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಹೊಸ ಯೋಜನೆ ಜಾರಿ ತರಲು ಮುಂದಾಗಿದ್ದಾರೆ. ಟೊಮ್ಯಾಟೊ, ಆಲೂಗಡ್ಡೆ, ಹುರುಳಿಕಾಯಿ, ಬೆಂಡೆಕಾಯಿ, ಬದನೆಕಾಯಿ, ಹಸಿಮೆಣಸಿನಕಾಯಿ, ಯಾವುದಾದರೊಂದು ಸೊಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವಿನಸೊಪ್ಪು ಹಾಗೂ ಒಂದು ನಿಂಬೆಹಣ್ಣು ಸೇರಿದ 1 ಕಿಟ್‌ನಲ್ಲಿ ಇರಲಿದೆ. ಇವೆಲ್ಲ ಸೇರಿ ಸುಮಾರು ಮೂರು ಕೆ.ಜಿ.ತೂಕ ಇರಬೇಕು. ಸಣ್ಣ ಕುಟುಂಬವೊಂದಕ್ಕೆ ಕನಿಷ್ಟ 3ದಿನಗಳಿಗೆ ಆಗುವಂತಿರಬೇಕು. ಇದನ್ನು ಗ್ರಾಹಕರ ಮನೆ ಬಾಗಿಲಿಗೇ ಒಯ್ದು ನೀಡಬೇಕೆಂಬುದು
    ಭೂಬಾಲನ್ ಯೋಜನೆಯಾಗಿದೆ.

    ಕುಸಿದ ತರಕಾರಿ ಬೆಲೆ: ರೈತರು ಬೆಳೆದ ತರಕಾರಿ ತಂದು ನಗರದ ವಿವಿಧ ಬಡಾವಣೆಗಳಲ್ಲಿ ಮಾರಾಟ ಮಾಡಲು ಬುಧವಾರ ರಿಯಾಯಿತಿ ನೀಡಿದ ಹಿನ್ನೆಲೆಯಲ್ಲಿ ಗಗನಕ್ಕೇರಿದ್ದ ತರಕಾರಿ ಬೆಲೆ ಪಾತಾಳಕ್ಕೆ ಕುಸಿದಿದ್ದವು. 50-60 ರೂ., ಏರಿದ್ದ ತರಕಾರಿ ಬೆಲೆ 20-30 ರೂ., ಗೆ ಇಳಿದಿದ್ದವು. ಸೊಪ್ಪಿನ ಬೆಲೆ 10 ರೂ., ಗೆ ಇಳಿದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts