More

    ಅಂತರಂಗ: ಯಶಸ್ಸು ನೆರಳು ಇದ್ದಂತೆ…

    ಅಂತರಂಗ: ಯಶಸ್ಸು ನೆರಳು ಇದ್ದಂತೆ...ಉತ್ತಮ ಚಿಂತನೆ, ಸಕಾರಾತ್ಮಕ ಮನೋಭಾವ ಇದ್ದಲ್ಲಿ ಎಂಥ ಕಷ್ಟವೂ ನಮ್ಮನ್ನು ಸೋಲಿಸಲಾರದು. ಸಂಬಂಧಗಳ ನಡುವೆ ಅಡ್ಡಗೋಡೆ ನಿರ್ವಿುಸುವ ಮತ್ಸರ ಮತ್ತು ಅಹಂಕಾರದ ಜಾಗದಲ್ಲಿ ಹೃದಯಗಳನ್ನು ಜೋಡಿಸುವ ವಿನಯವನ್ನು ಅಳವಡಿಸಿಕೊಂಡಾಗ ಬದುಕು ಸುಂದರವಾಗುತ್ತದೆ. ನಿಜವಾದ ಮತ್ತು ಪರಿಶುದ್ಧವಾದ ಸ್ನೇಹವು ಸದೃಢ ಆರೋಗ್ಯದಂತೆ. ಜೊತೆಯಲ್ಲಿರುವವರೆಗೂ ಅದರ ಬೆಲೆ ಅರಿಯದವರು ಕೈ ಬಿಟ್ಟು ಹೋದ ನಂತರ ಪರಿತಪಿಸುತ್ತಾರೆ. ಮಾಡುವ ಕೆಲಸವನ್ನು ಶ್ರದ್ಧೆ, ಪ್ರಾಮಾಣಿಕತೆಗಳಿಂದ ಮಾಡಬೇಕು. ಉತ್ತಮ ಅವಕಾಶ ಎಂಬುದು ಅಡೆತಡೆಗಳ ಕೋಟೆಯೊಳಗೆ ಅಡಗಿರುವ ಅಮೂಲ್ಯ ವಸ್ತು. ಅಡೆತಡೆಗೆ ಹೆದರಿದರೆ ಯಶಸ್ಸು ಕಾಣಲು ಸಾಧ್ಯವಿಲ್ಲ. ಉನ್ನತ ಗುರಿ ಸಾಧಿಸಲು ಭಿನ್ನ ಆಲೋಚನೆ ಹೊಂದಿರುವ ವ್ಯಕ್ತಿ ಸದಾ ಮುಂಚೂಣಿಯಲ್ಲಿರುತ್ತಾನೆ. ಒಂದು ಸತ್ಯ ನಿಮ್ಮನ್ನು ಸ್ವಲ್ಪ ಹೊತ್ತು ಬಾಧಿಸಬಹುದು. ಆದರೆ ಒಂದು ಸುಳ್ಳು ಜೀವನವಿಡಿ ಬಾಧಿಸುತ್ತದೆ. ನಮ್ಮ ಜೊತೆಗೆ ಯಾರಿದ್ದಾರೆ ಅನ್ನುವುದೇ ನಮ್ಮ ಸೌಖ್ಯಕ್ಕೆ ಮುಖ್ಯವಾಗುತ್ತದೆ. ಯಶಸ್ಸು ನೆರಳು ಇದ್ದಂತೆ. ಅದನ್ನು ಹಿಡಿಯಲು ಪ್ರಯತ್ನಿಸಬಾರದು. ಬದಲಿಗೆ ಬೆಳಕಿನೆಡೆಗೆ ಸಾಗುತ್ತಿರಬೇಕು. ಆಗ ನೆರಳು ನಮ್ಮನ್ನು ಹಿಂಬಾಲಿಸುತ್ತದೆ.

    ಬದುಕಿನಲ್ಲಿ ನೋವು ನಲಿವು ಸಹಜ. ಆದರೆ ಸಂಸಾರದ ಕೆಸರನ್ನು ಮೈಗೆ ಅಂಟಿಸಿಕೊಳ್ಳಬಾರದು. ನೀರು ಕುಡಿಯಲು ಎಮ್ಮೆ ಮತ್ತು ಆಡು ಹೋಗುತ್ತವೆ. ಎಮ್ಮೆ ನೀರಲ್ಲಿ ಇಳಿದು ಹೊರಳಾಡಿ ರಾಡಿ ಮಾಡಿ ಅದನ್ನೇ ಕುಡಿಯುತ್ತದೆ. ಆದರೆ ಆಡು ದಂಡೆಯಲ್ಲಿ ನಿಂತು ತಿಳಿಯಾದ ನೀರನ್ನು ಕುಡಿಯುತ್ತದೆ. ಅದೇ ರೀತಿ ಮನುಷ್ಯ ಈ ಪ್ರಪಂಚದಲ್ಲಿ ಇದ್ದು ಆನಂದಿಸಬೇಕು. ವಿಷಯ ವ್ಯಾಮೋಹದ ಕೆಸರನ್ನು ಅಂಟಿಸಿಕೊಳ್ಳಬಾರದು. ಈ ಸಂಸಾರ ಎಷ್ಟೇ ಸೊಗಸಾಗಿದ್ದರೂ ಅದನ್ನು ತಲೆಯ ಹೊರಗಿಟ್ಟು ನಿಶ್ಚಿಂತ, ನಿರ್ಲಿಪ್ತರಾಗಿ ಬದುಕಬೇಕು. ಮಾನವನ ಮನಸ್ಸು ಮೇಘದಂತೆ ಮೃದುವಾಗಬೇಕು. ಆಸೆ ಆಮಿಷಗಳ ಧೂಳು ಕಳೆದುಕೊಂಡು ನಿರ್ಮಲ, ಕೋಮಲ ಕುಸುಮವಾಗಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts