More

    ಅಂತರಂಗ: ದೇವ ದಾನವರ ಉರುಬು

    ಅಂತರಂಗ: ದೇವ ದಾನವರ ಉರುಬುನಾವು ಬಾಲ್ಯದಿಂದ ರಾಮಾಯಣ ಮಹಾಭಾರತಾದಿಗಳನ್ನು ಕೇಳುತ್ತ ಬೆಳೆದಿದ್ದೇವೆ. ಇವುಗಳಲ್ಲಿ ದೇವತೆಗಳು ರಾಕ್ಷಸರ ಯುದ್ಧದ ವರ್ಣನೆ ಬಹಳ ಕಾಣುತ್ತದೆ. ಇದು ನಮ್ಮ ದೇಶಕ್ಕೆ ಸೀಮಿತವಾಗಿಲ್ಲ. ರಾಮಾಯಣ ಮಹಾಭಾರತದಲ್ಲಿ ಕಂಡುಬರುವ ದೇವತೆಗಳು ರಾಕ್ಷಸರ ಸ್ವಭಾವವುಳ್ಳ ಅನೇಕರ ಚಿತ್ರಣವನ್ನು ಗ್ರೀಕ್ ಸಂಪ್ರದಾಯದಲ್ಲಿ ಕಾಣುತ್ತೇವೆ. ನಾವು ಕುರುಕ್ಷೇತ್ರವನ್ನು ದೊಡ್ಡ ಯುದ್ಧವೆಂದು ಪರಿಗಣಿಸಿದರೆ, ಅವರು ಟ್ರೋಜಾನ್ ಯುದ್ಧವನ್ನು ಅತಿ ಭಯಂಕರ ಯುದ್ಧವೆಂದು ಪರಿಗಣಿಸುತ್ತಾರೆ. ಪ್ರಪಂಚದ ಎಲ್ಲ ಸಂಸ್ಕೃತಿಗಳಲ್ಲಿ ಈ ರೀತಿಯ ವಿವರಣೆಯನ್ನು ಕಾಣಬಹುದು. ಇವು ನಡೆದಿದ್ದವಾ ಕಲ್ಪನೆಯಾ ಎಂಬುದು ವ್ಯಕ್ತಿಯ ನಂಬಿಕೆಗೆ ಬಿಟ್ಟ ವಿಷಯ. ಕೆಲವು ತತ್ತ್ವಜ್ಞರು ಈ ಪಾತ್ರಗಳು ನಮ್ಮ ಮನಸ್ಸಿನ ಅನೇಕ ವೃತ್ತಿಗಳು ಎನ್ನುತ್ತಾರೆ. ದೇವತೆಗಳು ದಾನವರು ಉತ್ಸಾಹದಿಂದ ಮಂದರಪರ್ವತವನ್ನು ಕಡಗೋಲನ್ನಾಗಿ ಮಾಡಿ ಕಡಲನ್ನು ಕಡೆದರು. ಈ ವಿಚಾರವನ್ನು ಡಿ.ವಿ.ಜಿ. ಹೀಗೆನ್ನುತ್ತಾರೆ:

    ದೇವದಾನವರುರುಬುವೊಡಲ ಕಡಲಿನಲಿ 

    ಜೀವ ಮಂದರಗಿರಿಯ ಕಡೆಯ ಬಿರುಬಿನಲಿ

    ನಮ್ಮ ಅಂತಃಕರಣದಲ್ಲಿ ದೇವ ದಾನವರು ವಾಸವಾಗಿದ್ದಾರೆ. ನಾವು ಯಾರನ್ನು ಹೆಚ್ಚು ಪೋಷಿಸುತ್ತೇವೋ ಅವರ ರೂಪವೇ ಆಗುತ್ತೇವೆ. ದೇವ-ದಾನವರ ರಣರಂಗ ಮಾನವ ಹೃದಯವೆಂದು ಹಿರಿಯರು ಹೇಳಿದ್ದಾರೆ. ಕ್ರೂರಿ ರತ್ನಾಕರ, ವಾಲ್ಮೀಕಿಯಾದ ಕಥೆ ನಮ್ಮ ಶಾಸ್ತ್ರಗ್ರಂಥಗಳಲ್ಲಿ ಕಂಡುಬರುತ್ತದೆ. ಅದೇ ರೀತಿ ರಾವಣ, ಕುಂಭಕರ್ಣ, ಹಿರಣ್ಯಕಶಿಪು ಮೊದಲಾದ ರಾಕ್ಷಸ ಸ್ವಭಾವದವರು ಋಷಿಪುತ್ರರಾಗಿದ್ದೂ, ತಮ್ಮಲ್ಲಿ ಯಾವುದೇ ರೀತಿಯ ಸಾತ್ವಿಕತೆಯನ್ನು ಹೊಂದದವರಾಗಿದ್ದಾರೆ. ಕೈಕೇಯಿ ಸತ್ಯಭಾಮೆಯರ ಅಂಶ ಪ್ರತಿಯೊಬ್ಬ ಮಾನವನಲ್ಲೂ ಇದೆ. ಅದೇ ರೀತಿ ರಾಮ, ಕೃಷ್ಣ, ವಿಭೀಷಣ ಇವರ ಅಂಶವೂ ಪ್ರತಿಯೊಬ್ಬನಲ್ಲಿದೆ. ಸಾಧಕರಾದ ನಾವು ಸಾತ್ವಿಕ ವೃತ್ತಿಗಳಾದ ರಾಮ, ಕೃಷ್ಣ, ವಿಭೀಷಣ ಮುಂತಾದವುಗಳನ್ನು ಬಾಳಿನಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಧನ್ಯವಾಗುತ್ತದೆ. ಸಮುದ್ರಮಥನವೆಂದರೆ ನಮ್ಮ ಅಂತರಂಗದಲ್ಲಿ ನಡೆಯುವ ವೃತ್ತಿಗಳ ಕಲಹವೇ ಆಗಿದೆ. ಜೀವಿಗಳಾದ ನಾವು ಮನಸ್ಸಿನ ಶಾಂತಿಯೇ ಜೀವನದ ಧ್ಯೇಯವೆಂದು ನಂಬಿರುವುದಾದರೆ ಹೆಚ್ಚಾಗಿ ಸಾತ್ವಿಕ ವೃತ್ತಿಗಳನ್ನು ಬೆಳೆಸಿಕೊಳ್ಳಬೇಕು. ಹೀಗಾದರೆ ನಮ್ಮಲ್ಲಿ ದೈವೀಗುಣ ತಾನಾಗಿಯೇ ಪ್ರಕಟಗೊಳ್ಳುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts