More

    ಅಮ್ಮ ನನ್ನನ್ನು ಕಾಪಾಡಿ, ಸಾಯಲು ಇಷ್ಟವಿಲ್ಲ: ಹತ್ರಾಸ್ ಗ್ಯಾಂಗ್​ರೇಪ್​​ ಕಿಚ್ಚು ಆರುವ ಮುನ್ನವೇ ಮತ್ತೊಂದು ಹೀನ ಕೃತ್ಯ

    ಲಖನೌ: ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದ​ ಗ್ಯಾಂಗ್​ರೇಪ್​ ಪ್ರಕರಣದ ಕಿಚ್ಚು ಆರುವ ಮುನ್ನವೇ ಅದೇ ರೀತಿಯ ಮತ್ತೊಂದು ಘಟನೆ ರಾಜ್ಯದಲ್ಲಿ ನಡೆದಿದೆ. ಹತ್ರಾಸ್​ನಿಂದ ಸುಮಾರು 500 ಕಿ.ಮೀ ದೂರವಿರುವ ಗ್ರಾಮವೊಂದರಲ್ಲಿ 22 ವರ್ಷದ ದಲಿತ ಯುವತಿಯೊಬ್ಬಳು ಗ್ಯಾಂಗ್​ರೇಪ್​ ಹಾಗೂ ಹಲ್ಲೆಯಿಂದಾಗಿ ಬುಧವಾರ ಸಂಜೆ ಮೃತಪಟ್ಟಿರುವುದಾಗಿ ವರದಿಯಾಗಿದೆ.

    ಹತ್ರಾಸ್​ ಸಂತ್ರಸ್ತೆಯ ಮೃತದೇಹವನ್ನು ದೆಹಲಿಯ ಸಫ್ದಾರ್​ ಜಂಗ್​ ಆಸ್ಪತ್ರಯಿಂದ ಪೊಲೀಸರು ಬಲವಂತವಾಗಿ ಅಂತ್ಯಕ್ರಿಯೆಗೆ ತೆಗೆದುಕೊಂಡು ಹೋದ ಸಮಯದಲ್ಲೇ ಮತ್ತೊಂದು ಘಟನೆಯು ನಡೆದಿರುವುದು ನಾಗರಿಕ ಸಮಾಜದ ನಾಚಿಗೇಡಿನ ಸಂಗತಿಯಾಗಿದೆ.

    ಮೃತಪಟ್ಟ ಬರ್ಲಾಂಪುರ್​ ಗ್ರಾಮದ ಯುವತಿಯ ದೇಹವನ್ನು ಲಖನೌ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈ ವೇಳೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಗ್ಯಾಂಗ್​ರೇಪ್​ ಆಗಿರುವ ಬಗ್ಗೆ ಖಚಿತಪಡಿಸಿದ್ದಾರೆ. ಅಲ್ಲದೆ, ಅನೇಕ ಗಾಯಗಳಿಂದ ಬಳಲಿ ಸಾವಿಗೀಡಾಗಿರುವುದಾಗಿ ವೈದ್ಯರು ಹೇಳಿದ್ದಾರೆ.

    ಇದನ್ನೂ ಓದಿ: ‘ಯೋಗಿ ರಾಜ್ಯದಲ್ಲಿ ಯಾವುದೇ ವಾಹನ..ಯಾವ ಸಮಯದಲ್ಲಿ ಬೇಕಾದ್ರೂ ಉರುಳಬಹುದು’ ಎಂದ ಬಿಜೆಪಿ ಮುಖಂಡ

    ಇನ್ನು ಗ್ಯಾಂಗ್​ರೇಪ್​ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಅದರಲ್ಲಿ ಓರ್ವ ಅಪ್ರಾಪ್ತನೆಂದು ಸಂತ್ರಸ್ತೆಯ ಸಹೋದರ ಹೇಳಿಕೆ ನೀಡಿದ್ದಾರೆ. ಬುಧವಾರ ಬೆಳಗ್ಗೆ ಕೆಲಸಕ್ಕೆಂದು ತೆರಳಿದಾಗ ಆಕೆಯನ್ನು ಅಪಹರಿಸಿ ಕೃತ್ಯ ಎಸಗಲಾಗಿದೆ. ಕೆಲಸ ಮುಗಿಸಿ ಮನೆಗೆ ಮರಳದಿದ್ದಾಗ ಗಾಬರಿಗೊಂಡು ಪೊಲೀಸರಿಗೆ ಮನವಿ ಮಾಡಿದೆವು. ಅದೇ ದಿನ ರಾತ್ರಿ 7 ಗಂಟೆಗೆ ಮಗಳು ಮನೆಗೆ ಮರಳಿದಳು. ದುಷ್ಕರ್ಮಿಗಳು ಆಟೋವೊಂದರಲ್ಲಿ ಹಾಕಿ ನನ್ನ ಮಗಳನ್ನು ಮನೆಗೆ ಕಳುಹಿಸಿದರು ಎಂದು ಸಂತ್ರಸ್ತೆಯ ತಾಯಿ ಮಾಹಿತಿ ನೀಡಿದರು.

    ಯಾವುದೇ ದ್ರವ್ಯ ವಸ್ತುವನ್ನು ನೀಡಿ ಪ್ರಜ್ಞೆ ಕಳೆದುಕೊಂಡ ಬಳಿಕ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ, ಆಕೆಯ ಬೆನ್ನು ಮತ್ತು ಕೈಕಾಲುಗಳನ್ನು ಮುರಿದಿದ್ದರು. ಆಕೆ ಮನೆಗೆ ಮರಳಿದಾಗ ಆಕೆಯ ಕೈಯಲ್ಲಿ ನಿಲ್ಲಲು ಮತ್ತು ಮಾತನಾಡಲು ಸಾಧ್ಯವಾಗಲಿಲ್ಲ. ನನ್ನನ್ನು ಕಾಪಾಡಿ, ನನಗೆ ಸಾಯಲು ಇಷ್ಟವಿಲ್ಲ ಎಂದು ನನ್ನ ಮಗಳು ಅಳುತ್ತಿದ್ದಳು. ಅಲ್ಲದೆ, ಮನೆಗೆ ಬಂದ ತಕ್ಷಣವೇ ಹೊಟ್ಟೆಯಲ್ಲಿ ಉರಿಯುವ ನೋವಿನ ಅನುಭವ ಆಗುತ್ತಿದೆ ಎಂದಳು ಎಂದು ನೋವಿನಿಂದಲೇ ಸಂತ್ರಸ್ತೆಯ ತಾಯಿ ಎಲ್ಲವನ್ನು ವಿವರಿಸಿದರು.

    ತಕ್ಷಣ ಮಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಮಗಳ ಆರೋಗ್ಯ ಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯರು ಹೇಳಿದರು. ಅಲ್ಲದೆ, ಲಖನೌ ಕರೆದೊಯ್ಯಲು ಸಲಹೆ ನೀಡಿದರು. ಆದರೆ, ಬಲ್ರಾಂಪುರ್​ ಪಟ್ಟಣಕ್ಕೆ ತಲುಪುವ ಮುಂಚೆಯೇ ಆಕೆ ಮೃತಪಟ್ಟಳು ಎಂದು ತಾಯಿ ಹೇಳುವಾಗ ಆಕೆಯ ಕಣ್ಣಿನಲ್ಲಿ ನೀರು ತುಂಬಿದ್ದವು.

    ಇನ್ನು ಘಟನೆಯನ್ನು ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ ಖಂಡಿಸಿದ್ದು, ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಹತ್ರಾಸ್​ ಪ್ರಕರಣದಂತೆ ಇದನ್ನೂ ಸಹ ಮುಚ್ಚಿಡಲು ಪ್ರಯತ್ನಿಸಬಾರದು ಎಂದು ಒತ್ತಾಯಿಸಿದ್ದಾರೆ. ಹತ್ರಾಸ್​ ಪ್ರಕರಣ ನಂತರ ಮತ್ತೊಂದು ಗ್ಯಾಂಗ್​ರೇಪ್​ ಪ್ರಕರಣ ಬರ್ಲಾಂಪುರ್​ನಲ್ಲಿ ವರದಿಯಾಗಿದೆ. ಯುವತಿಗೆ ಕಿರುಕುಳ ನೀಡಿ ಕೊಲ್ಲಲಾಗಿದೆ. ಹತ್ರಾಸ್​ ಘಟನೆಯ ರೀತಿಯ ಇದನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡಬಾರದು. ಆರೋಪಿಗಳ ವಿರುದ್ಧ ತ್ವರಿತವಾಗಿ ಕ್ರಮ ಜರುಗಿಸಬೇಕೆಂದು ಟ್ವೀಟ್​ ಮೂಲಕ ಆಗ್ರಹಿಸಿದ್ದಾರೆ.

    ಇದನ್ನೂ ಓದಿ: ನಿರುದ್ಯೋಗ ಹೆಚ್ಚುತ್ತಿರುವುದೇ ಅತ್ಯಾಚಾರ ಜಾಸ್ತಿಯಾಗಲು ಕಾರಣ: ಸುಪ್ರೀಂ ಮಾಜಿ ನ್ಯಾಯಮೂರ್ತಿ

    ಹತ್ರಾಸ್​ ಘಟನೆ ಏನು?
    2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಗ್ಯಾಂಗ್​ರೇಪ್​ ಮಾದರಿಯಲ್ಲೇ ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ಕೃತ್ಯ ನಡೆದಿದೆ. ಸೆ. 14ರಂದು ಯುವತಿಯು ತಮ್ಮ ಜಮೀನಿನಲ್ಲಿ ತಾಯಿಯೊಂದಿಗೆ ಮೇವು ತರಲು ಹೋಗಿದ್ದಾಗ ನಾಲ್ವರು ಕಾಮುಕರು ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ. ಅಲ್ಲದೆ, ಆಕೆಯ ನಾಲಿಗೆಯನ್ನು ಕತ್ತರಿಸಿದ್ದಾರೆ. ಆಕೆಯ ಬೆನ್ನುಮೂಳೆ ಮತ್ತು ಕುತ್ತಿಗೆಗೆ ಹಾನಿ ಮಾಡಿದ್ದಾರೆ. ಗಂಭೀರ ಗಾಯಗಳಿಂದ ದೆಹಲಿಯ ಸಫ್ದಾರ್​ ಜಂಗ್​ ಆಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದಾರೆ. ಅಲ್ಲದೆ, ಆಕೆಯ ಮೃತದೇಹವನ್ನು ಮಂಗಳವಾರ ತಡರಾತ್ರಿ ಪೊಲೀಸರೇ ಬಲವಂತವಾಗಿ ತೆಗೆದುಕೊಂಡು ಹೋಗಿ ಕುಟುಂಬವನ್ನು ಹೊರಗಿಟ್ಟು ಅಂತ್ಯಸಂಸ್ಕಾರವನ್ನು ನೇರವೇರಿಸಿದ್ದು, ದೇಶಾದ್ಯಂತ ಪೊಲೀಸರ ಹಾಗೂ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇನ್ನು 20 ವರ್ಷದ ಯುವತಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದವರು ಮೇಲ್ಜಾತಿಗೆ ಸೇರಿದವರಾಗಿದ್ದು, ಸಂತ್ರಸ್ತೆ ಪರಿಶಿಷ್ಟ ಜಾತಿಗೆ ಸೇರಿದವಳಾಗಿದ್ದಳು. ಸದ್ಯ ನಾಲ್ವರು ಆರೋಪಿಗಳು ಜೈಲಿನಲ್ಲಿದ್ದು, ಅತ್ಯಾಚಾರದ ಜತೆಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. (ಏಜೆನ್ಸೀಸ್​)

    ಪಾಲಕರನ್ನು ಹೊರಗಿಟ್ಟು ಗ್ಯಾಂಗ್​ರೇಪ್​ ಸಂತ್ರಸ್ತೆಯ ಅಂತ್ಯಕ್ರಿಯೆ: ಯುಪಿ ಪೊಲೀಸರ ನಡೆಗೆ ತೀವ್ರ ಆಕ್ರೋಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts