More

    ಕೇರಳ ಮಾದರಿ ತರಕಾರಿ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ

    ವಿಜಯಪುರ : ಕೇರಳ ಮಾದರಿಯಲ್ಲಿ ತರಕಾರಿ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ವಿಜಯ ಪೂಜಾರ ಸರ್ಕಾರಕ್ಕೆ ಒತ್ತಾಯಿಸಿದರು.

    ದೇಶದ ಬೆನ್ನೆಲುಬು ಎಂದು ರೈತರನ್ನು ಚುನಾವಣೆ ವೇಳೆ ಮಾತ್ರ ಕರೆಯುತ್ತಾರೆ. ನಂತರ ರೈತರ ಬೆನ್ನುಮೂಳೆ ಮುರಿಯುತ್ತಾರೆ. ಯಾವ ಸರ್ಕಾರ ರೈತರನ್ನು ನಿರ್ಲಕ್ಷಿೃಸುತ್ತದೆಯೋ ಆ ಸರ್ಕಾರಕ್ಕೆ ಉಳಿಗಾಲ ಇಲ್ಲ ಎಂದು ಶುಕ್ರವಾರ ವಿಜಯಪುರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಇಂದಿನ ದಿನಗಳಲ್ಲಿ ರೈತರು ಅನೇಕ ಸಂಕಷ್ಟಕ್ಕೀಡಾಗಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ರೈತರ ಕೈಗೆ ಸಿಗದೆ ನಷ್ಟವನ್ನು ಅನುಭವಿಸುವಂತಾಗಿದೆ. ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರೈತರಿಗೆ ಬೇಕಾದ ಸೌಲಭ್ಯ, ಸೌಕರ್ಯವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

    ರಾಜ್ಯದಲ್ಲಿ ಕಬ್ಬು ಬೆಳೆದ ರೈತರ ಸಮಸ್ಯೆ ಹೇಳತೀರದಾಗಿದೆ. ಸಕ್ಕರೆ ಕಾರ್ಖಾನೆ ಮಾಲೀಕರು ಎಫ್‌ಆರ್‌ಪಿ ದರ ನಿಗದಿ ಪಡಿಸದೆ ರೈತರಿಗೆ ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

    ಸಾಲ ನೀಡಿದ ಬ್ಯಾಂಕ್‌ಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ರೈತರ ಜೀವ ಹಿಂಡುತ್ತಿವೆ. ಸಾಲಮನ್ನಾ ಮಾಡುವ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಒತ್ತಾಯಿಸಿದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸುವರ್ಣಸೌಧ ಮುತ್ತಿಗೆಗೆ ನಿರ್ಧಾರ
    ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ. ಆದರೆ ರಾಜ್ಯ ಸರ್ಕಾರ ಮೊಂಡುತನವನ್ನು ಪ್ರದರ್ಶಿಸುತ್ತಿದೆ. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಇನ್ನು ವಿದ್ಯುತ್ ಖಾಸಗೀಕರಣದ ಬಿಲ್ ಹಿಂಪಡೆಯಬೇಕು. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಯೋಜನೆಯನ್ನು ಸರ್ಕಾರ ಕೈ ಬಿಡಬೇಕು. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಬೇಕು. ಆಲಮಟ್ಟಿ ಜಲಾಶಯದ ಆಣೆಕಟ್ಟು ಎತ್ತರಿಸಬೇಕು. ಅದಕ್ಕೆ ಅಧಿವೇಶನದಲ್ಲಿ 10 ಸಾವಿರ ಕೋಟಿ ರೂ. ಮೀಸಲಿಡಬೇಕು. ರೈತರ ಬೆಳೆ ವಿಮೆ, ಬೆಳೆ ಪರಿಹಾರವನ್ನು ಕೂಡಲೇ ನೀಡಬೇಕು. ಪಿಕೆಪಿಎಸ್ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

    ಬೆಳೆ ಪರಿಹಾರದಲ್ಲಿ ತಾರತಮ್ಯ ಸಲ್ಲ
    ರಾಜ್ಯಾದ್ಯಂತ ಕಳೆದ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆ ಬೆಳೆ ಸಂಪೂರ್ಣ ನೆಲಕಚ್ಚಿದ್ದು, ಅದಕ್ಕೆ ಈಗಾಗಲೇ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅದರಂತೆ ಹೆಕ್ಟೇರ್‌ಗೆ 35 ಸಾವಿರ ರೂ. ಪರಿಹಾರವನ್ನು ಘೋಷಣೆ ಮಾಡಬೇಕು ಎಂದು ಒತ್ತಾಯಿಸಲಾಗಿತ್ತು. ಆದರೆ ಸರ್ಕಾರ 13 ಸಾವಿರ ರೂ. ಪ್ರತಿ ಹೆಕ್ಟೇರ್‌ಗೆ ನೀಡುತ್ತಿದೆ. ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

    ರೈತ ಮುಖಂಡರಾದ ಶ್ಯಾಮಲಾ ನಂದೇವಾಡೆ, ಈರಪ್ಪ ನಂದಳ್ಳಿ, ಪೀರೂ ಕೆರೂರು, ಅಮೊಘಸಿದ್ಧ ಯಂಕಂಚಿ, ಸಿದ್ದು ಯಂಕಂಚಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts