ಹಾವೇರಿ: ಹಾವೇರಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಶೀಘ್ರವೇ ದಿನಾಂಕ ಪ್ರಕಟಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ವತಿಯಿಂದ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭಾನುವಾರ ಹುಬ್ಬಳ್ಳಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಈ ಬಾರಿ ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂದು ಹಿಂದಿನ ಸಮ್ಮೇಳನದಲ್ಲಿ ಪ್ರಕಟಿಸಲಾಗಿದೆ. ಆದರೆ, ಕರೊನಾ ಹಿನ್ನೆಲೆಯಲ್ಲಿ ಸಮ್ಮೇಳನ ನಡೆಸುವ ಕುರಿತು ಈವರೆಗೂ ಯಾವುದೇ ದಿನಾಂಕ ಘೊಷಿಸಿಲ್ಲ. ಆದ್ದರಿಂದ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ತಾವು ಕೂಡಲೆ ಈ ಬಗ್ಗೆ ರ್ಚಚಿಸಿ, ಸಮ್ಮೇಳನ ದಿನಾಂಕ ಘೊಷಿಸಬೇಕು. ಇದರಿಂದ ಮುಂದಿನ ತಯಾರಿ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸ್ವೀಕರಿಸಿದ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವರ ನೇತೃತ್ವದಲ್ಲಿ ಶೀಘ್ರದಲ್ಲಿಯೇ ಸಭೆ ಕರೆದು ಸಮ್ಮೇಳನ ನಡೆಸುವ ಬಗ್ಗೆ ರ್ಚಚಿಸಲಾಗುವುದು. ನಂತರ ದಿನಾಂಕ ಪ್ರಕಟಿಸಲು ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಎಚ್.ಬಿ. ಲಿಂಗಯ್ಯ, ತಾಲೂಕು ಅಧ್ಯಕ್ಷ ವೈ.ಬಿ. ಆಲದಕಟ್ಟಿ, ಶಿಗ್ಗಾಂವಿ ತಾಲೂಕು ಅಧ್ಯಕ್ಷ ನಾಗರಾಜ ದ್ಯಾಮನಕೊಪ್ಪ, ಬ್ಯಾಡಗಿ ತಾಲೂಕು ಅಧ್ಯಕ್ಷ ಬಿ.ಎಂ. ಜಗಾಪೂರ, ಸವಣೂರ ಅಧ್ಯಕ್ಷ ಪ್ರಭು ಅರಗೋಳ, ಎಸ್.ಎಂ. ಜಿಗಳಿ ಮತ್ತಿತರರು ಉಪಸ್ಥಿತರಿದ್ದರು.