More

    ಬರದಿಂದ ತತ್ತರಿಸಿದ ಅನ್ನದಾತ

    ಹಾಸನ: ಎರಡು ವರ್ಷಗಳಿಂದ ಸುರಿದ ನಿರಂತರ ಮಳೆಯಿಂದ ಬೆಳೆ ಹಾನಿಯಾಗಿ ನಷ್ಟ ಅನುಭವಿಸಿದ್ದ ರೈತರು ಈಗ ತೀವ್ರ ಬರದಿಂದಾಗಿ ತತ್ತರಿಸಿದ್ದಾರೆ.

    ಹೊಲ, ಗದ್ದೆಗಳೆಲ್ಲ ಜಲಾವೃತವಾಗಿ ಮಳೆರಾಯನಿಗೆ ಶಾಪ ಹಾಕಿದ ಅನ್ನದಾತರು ಇಂದು ಹನಿ ನೀರಿಗೂ ಪರದಾಡುವಂತಾಗಿದೆ. ಕಷ್ಟಪಟ್ಟು ಬೆಳೆದ ಅಲ್ವಸ್ವಲ್ಪ ಬೆಳೆ ರಣ ಬಿಸಿಲಿನಿಂದ ಬಾಡುತ್ತಿದ್ದು ರೈತರ ಸ್ಥಿತಿ ಶೋಚನೀಯವಾಗಿದೆ. ಗಂಗಾ ಕಲ್ಯಾಣ, ಕೃಷಿ ಹೊಂಡ ಹೀಗೆ ಅನೇಕ ಯೋಜನೆಗಳು ಜಾರಿಯಾದರೂ ಅರ್ಹ ಫಲಾನುಭವಿಗೆ ಅದು ತಲುಪದೆ ನೀರಾವರಿ ವ್ಯವಸ್ಥೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿಲ್ಲ. ಹೀಗಾಗಿ ಭೀಕರ ಬರದ ಮುನ್ಸೂಚನೆ ಈಗಲೇ ಎದುರಾಗಿದೆ.

    6,62,602 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿರುವ ಹಾಸನ ಜಿಲ್ಲೆಯಲ್ಲಿ 2574 ಹಳ್ಳಿಗಳಿವೆ. ವಾರ್ಷಿಕ 1075.7 ಮಿ.ಮೀ. ಸರಾಸರಿ ಮಳೆಯಾಗುತ್ತಿದೆ. 3,67,943 ಹೆಕ್ಟೇರ್ ಕೃಷಿ ಭೂಮಿಯನ್ನು ಜಿಲ್ಲೆ ಹೊಂದಿದೆ. ಜಿಲ್ಲೆಯಲ್ಲಿ ಹೇಮಾವತಿ, ಯಗಚಿ, ವಾಟೆಹೊಳೆ ಜಲಾಶಯಗಳಿದ್ದರೂ ಸ್ಥಳೀಯರಿಗೆ ಆ ನೀರು ಲಭ್ಯವಾಗದೆ ಸಮಸ್ಯೆ ತಂದೊಡ್ಡಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ ಮಟ್ಟದಲ್ಲಿ ಜಲಾಶಯಗಳು ಭರ್ತಿಯಾಗಿದ್ದರೂ ಕಾಲುವೆಗಳಿಗೆ ನೀರು ಹರಿಸುತ್ತಿಲ್ಲ.

    ಹೇಮಾವತಿ ಜಲಾಶಯದಿಂದ 1000 ಕ್ಯೂಸೆಕ್ ನೀರು ನದಿಗೆ ಹೋಗುತ್ತಿದೆ. ಸಕಾಲಕ್ಕೆ ಮಳೆಯಾಗದಿದ್ದರೆ ಕುಡಿಯುವ ನೀರಿಗೂ ತತ್ವಾರ ಎದುರಾಗುವ ಸಾಧ್ಯತೆಯಿದೆ. ಚನ್ನರಾಯಪಟ್ಟಣ, ಅರಸೀಕೆರೆ ಭಾಗದ ಕೆರೆಗಳು ಬರಿದಾಗಿದ್ದು ಜಾನುವಾರುಗಳು ಕುಡಿಯಲು ನೀರಿಲ್ಲದೆ ನರಳುತ್ತಿವೆ. ಇನ್ನು ತೋಟಗಾರಿಕೆ ಬೆಳೆಗಳಿಗೂ ನೀರಿನ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಳ್ಳಬೆಕಿರುವ ಕ್ರಮ ಹಾಗೂ ರೈತರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ’ಲೌಡ್ ಸ್ಪೀಕರ್’ನಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

    ಕೊಳವೆ ಬಾವಿಗಳಲ್ಲಿ ನೀರಿಲ್ಲ
    ಅರಸೀಕೆರೆ ಭಾಗದಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಎತ್ತಿನಹೊಳೆ ಯೋಜನೆ ಮೂಲಕ ತಾಲೂಕಿನ ಕೆರೆಕಟ್ಟೆಗಳಿಗೆ ನೀರು ಹರಿಸುವ ಯೋಜನೆ ಇದ್ದರೂ ಅದು ಅನುಷ್ಠಾನಗೊಳ್ಳುವುದು ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ. ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಬಸವರಾಜ್ ಬೆಂಡೆಕೆರೆ, ಅರಸೀಕೆರೆ ತಾಲೂಕು

    ಒಂದೇ ಪರಿಹಾರ ಕೊಡಿ
    ಎತ್ತಿನಹೊಳೆ ಯೋಜನೆ ಮೂಲಕ ಜಮೀನಿಗೆ ನೀರು ಹರಿಸುವ ಬದಲು ಭೂಮಿ ನೀಡಿದವರಿಗೆ ಸರಿಯಾದ ಪರಿಹಾರ ಕೊಟ್ಟರೆ ಸಾಕು. ಬಯಲು ಸೀಮೆ ಜಿಲ್ಲೆಯ ಜನರಿಗಾಗಿ ನಮ್ಮ ಭೂಮಿ ನೀಡಿದ್ದೇವೆ. ಆದರೆ ಬೆಳೆ ಪರಿಹಾರ ಬಿಟ್ಟು ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ. ಸಕಲೇಶಪುರ, ಬೇಲೂರು ಹಾಗೂ ಅರಸೀಕೆರೆ ತಾಲೂಕಿನ ಎಲ್ಲ ಭೂ ಸಂತ್ರಸ್ತರಿಗೆ ಒಂದೇ ಪರಿಹಾರ ನೀಡಬೇಕು.

    ಸ್ವಾಮಿ ಸಂಕೋಡ್ನಹಳ್ಳಿ, ಅರಸೀಕೆರೆ ತಾಲೂಕು

    ರೈತರಿಗೆ ಅರಿವು
    ಜಿಲ್ಲೆಯಲ್ಲಿ ಯಾವುದೇ ಬೆಳೆ ನಷ್ಟ ಹೊಂದುವ ಪರಿಸ್ಥಿತಿ ಇಲ್ಲ. ಅನಾವೃಷ್ಟಿ ಮುಂದುವರಿದರೆ ಸ್ವಲ್ಪ ಕಷ್ಟವಾಗುತ್ತದೆ. ಹನಿ ನೀರಾವರಿ, ಅಂತರ ಬೆಳೆ ಬೇಸಾಯ ಪದ್ಧತಿ ಅಳವಡಿಸಿಕೊಳ್ಳುವಂತೆ ರೈತರಿಗೆ ಸೂಚಿಸಲಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ರೈತರಲ್ಲಿ ನೀರಿನ ಮಿತ ಬಳಕೆಯ ಅರಿವು ಮೂಡಿಸುತ್ತಿದ್ದಾರೆ. ಕೆ. ಮಧುಸೂದನ್, ಜಂಟಿ ಕೃಷಿ ನಿರ್ದೇಶಕ

    ಬರ ಎದುರಿಸಲು ಸಿದ್ಧರಾಗಲಿ
    ತಾಲೂಕು ಅಧಿಕಾರಿಗಳು ಬರ ಎದುರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ವಿವಿಧ ಇಲಾಖೆ ಅಧಿಕಾರಿಗಳ ಸಭೆ ಕರೆದು ಹೋಬಳಿವಾರು ಗ್ರಾಮ ಪಂಚಾಯಿತಿ ಮಟ್ಟದಿಂದ ಮಾಹಿತಿ ಸಂಗ್ರಹಿಸುವ ಮೂಲಕ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು.
    ಹೇಮಂತ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಲೂರು

    ಶಾಪವಾಗಿ ಪರಿಣಮಿಸಿದ ಬರ
    ಬರ ಚನ್ನರಾಯಪಟ್ಟಣಕ್ಕೆ ಶಾಪವಾಗಿ ಪರಿಣಮಿಸಿದೆ. ಬೇಸಿಗೆ ಪ್ರಾರಂಭವಾಯಿತೆಂದರೆ ಜನ-ಜಾನುವಾರುಗಳ ಕುಡಿಯುವ ನೀರಿಗೆ ಇನ್ನಿಲ್ಲದ ಹಾಹಾಕಾರ ಶುರುವಾಗಲಿದೆ. ತಾಲೂಕು ಆಡಳಿತವೂ ವಿಶೇಷ ತಂಡವನ್ನು ರಚಿಸಿ ಭೌಗೋಳಿಕ ಅಧ್ಯಯನ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ವರದಿ ಒಪ್ಪಿಸಬೇಕು. ತದನಂತರ ಜನಪ್ರತಿನಿಧಿಗಳು ಅಧಿಕಾರಿಗಳು ಸಿದ್ಧಪಡಿಸಿದ ವರದಿ ಹಿಡಿದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಅಗತ್ಯ ಸೌಲಭ್ಯವನ್ನು ತರುವಲ್ಲಿ ಮುಂದಾಗಬೇಕು. ಇದರಿಂದ ಶೀಘ್ರವೇ ಬರದ ಸಮಸ್ಯೆಗಳನ್ನು ಬಗೆಹರಿಸಬಹುದು.
    ಬಿ.ಸಿ. ಬೊಮ್ಮೇಗೌಡ, ಬೂಕ ಗ್ರಾಮಸ್ಥ ಚನ್ನರಾಯಪಟ್ಟಣ ತಾಲೂಕು

    ಕೆರೆ,ಕಲ್ಯಾಣಿಗಳ ಪುನಶ್ಚೇತನವಾಗಲಿ
    ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರಿ ಅಧಿಕಾರಿಗಳು ಕೆರೆಗಳ ಒತ್ತುವರಿ ತೆರವು ಹಾಗೂ ಕಲ್ಯಾಣಿಗಳ ಪುನಶ್ಚೇತನ ಕಾರ್ಯವನ್ನು ತ್ವರಿತಗತಿಯಲ್ಲಿ ಮಾಡಬೇಕಿದೆ. ಪ್ರತಿಭಟನೆ ಸಂದರ್ಭಗಳಲ್ಲಿ ಟೈರುಗಳಿಗೆ ಬೆಂಕಿ ಹಾಕಿ ಪ್ರಕೃತಿ ಮೇಲಿನ ದೌರ್ಜನ್ಯ ನಿಲ್ಲಿಸಲೇಬೇಕು. ಪ್ರಕೃತಿ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಎಲ್ಲರೂ ತೊಡಗಿದರೆ ನೆಮ್ಮದಿ ಸಾಧ್ಯ.
    ಮಾಯಣ್ಣ, ಮಾರಗೋಡನಹಳ್ಳಿ ಗ್ರಾಮ

    ಮಧ್ಯವರ್ತಿಗಳ ಹಾವಳಿ ತಪ್ಪಲಿ
    ರೈತರ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯದಲ್ಲಿ ಅಧಿಕ ಇಳುವರಿಯ ಹಾಗೂ ರೋಗ ನಿರೋಧಕ ಶಕ್ತಿ ಹೊಂದಿರುವ ಬಿತ್ತನೆ ಬೀಜಗಳ ಸಂಶೋಧನೆಗೆ ಸರ್ಕಾರ ಕಾಳಜಿ ತೋರಬೇಕಿದೆ. ಸರ್ಕಾರಿ ಸವಲತ್ತುಗಳನ್ನು ರೈತರಿಗೆ ನಿಸ್ವಾರ್ಥತೆಯಿಂದ ತಲುಪಿಸುವ ಕಾರ್ಯವಾಗಬೇಕು. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಯಾಗಬೇಕು. ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಿ ದೊರೆಯಬೇಕು. ಎಪಿಎಂಸಿ ಮಾರುಕಟ್ಟೆಯಲ್ಲಿ ಶಿಥಿಲ ಕೇಂದ್ರಗಳ ಸ್ಥಾಪನೆಯಾಗಬೇಕು.
    ಆರ್.ಡಿ. ರವೀಶ್, ವಕೀಲ ಹೊಳೆನರಸೀಪುರ

    ವಿಶೇಷ ಅನುದಾನ ಬಿಡುಗಡೆ ಮಾಡಲಿ
    ಸಕಲೇಶಪುರ ತಾಲೂಕು ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೇಸಿಗೆಯಲ್ಲಿ ಮಲೆನಾಡಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಆದ್ದರಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡ ಬೇಕು.
    ಕೋಮಾರಯ್ಯ, ನಿವೃತ್ತ ಪಿಡಿಒ

    ಜನಪ್ರತಿನಿಧಿಗಳು ಕಾಳಜಿ ಅಗತ್ಯ
    ವಾಡಿಕೆಯಂತೆ ಮಳೆಯಾಗದೆ ಬರ ಪರಿಸ್ಥಿತಿ ಎದುರಿಸುತ್ತಿರುವ ರೈತರ ಬೆಂಬಲಕ್ಕೆ ಬೆಂಗಾವಲಾಗಿ ಸರ್ಕಾರ ಹಾಗೂ ಅಧಿಕಾರಿ ವರ್ಗ ನಿಲ್ಲಬೇಕಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಗುರುತಿಸಿ ರಾಜ್ಯ ಸರ್ಕಾರದ ಗಮನಕ್ಕೆ ತರುವ ಕಾರ್ಯ ಮಾಡಬೇಕು.ಜನಪ್ರತಿನಿಧಿಗಳು ಕಾಳಜಿ ವಹಿಸಿದರೆ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ.
    ಸಿ.ವೈ. ಪ್ರವೀಣ್‌ಕುಮಾರ್, ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

    ಕುಡಿಯುವ ನೀರಿಗೂ ಸಂಕಷ್ಟ
    2019ರ ಆಗಸ್ಟ್‌ನಲ್ಲಿ ಸುರಿದ ನಿರಂತರ ಮಳೆ ತಾಲೂಕಿನಲ್ಲಿ ಸಾಕಷ್ಟು ಹಾನಿಯುಂಟು ಮಾಡಿತು. ಆದರೆ ಈಗ ಎಲ್ಲೆಡೆ ಅನಾವೃಷ್ಟಿ ತಲೆದೋರಿದೆ. ಹಳೇಬಿಡು ಹಾಗೂ ಮಾದಿಹಳ್ಳಿ ಹೋಬಳಿಗಳಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ತಾಲೂಕು ಆಡಳಿತ ಬರ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
    ಜಯರಾಮ್, ಚೀಕನಹಳ್ಳಿ ಗ್ರಾಮಸ್ಥ

    ನೀರಿನ ಬವಣೆ ತಪ್ಪಲಿ
    ಬೇಲೂರು ತಾಲೂಕಿನಲ್ಲಿ ಕಳೆದ ಬಾರಿ ಬಂದ ಮಳೆಯಿಂದ ತಾಲೂಕಿನಾದ್ಯಂತ ಮನೆಗಳು ಕುಸಿದು ಬಿದ್ದು ಹಾನಿಯಾಗಿದೆ. ಆದರೆ ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪ್ರಕೃತಿ ಮಾತ್ರವಲ್ಲದೆ ಸರ್ಕಾರಗಳು ಬಡಜನರ ಮೇಲೆ ಸವಾರಿ ಮಾಡುತ್ತಿವೆ. ಹೀಗಾದರೆ ರೈತ ಸಮುದಾಯ ಬದುಕುವುದು ಕಷ್ಟವಾಗುತ್ತದೆ. ಎತ್ತಿನಹೊಳೆ ಯೋಜನೆಯಾದರೂ ಬೇಗ ಪೂರ್ಣಗೊಂಡು ನೀರಿನ ಬವಣೆ ತಪ್ಪಿಸಲಿ.
    ಕಾಂತರಾಜ್, ಗ್ರಾಪಂ ಮಾಜಿ ಅಧ್ಯಕ್ಷ ಹಗರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts