More

    600 ಕ್ವಿಂಟಾಲ್ ಅನ್ನಭಾಗ್ಯ ಅಕ್ರಮ ದಾಸ್ತಾನು, ಡಿಸಿ ಜಗದೀಶ್ ನೇತೃತ್ವದಲ್ಲಿ ದಾಳಿ

    ಉಡುಪಿ: ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಅನ್ನಭಾಗ್ಯ ಅಕ್ಕಿಯನ್ನು ರೈಸ್‌ಮಿಲ್‌ನಿಂದ ವಶಪಡಿಸಿಕೊಂಡಿರುವ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ಅಧಿಕಾರಿಗಳ ತಂಡ ನಾಲ್ವರನ್ನು ಬಂಧಿಸಿದೆ. ಆದರೆ, ರೈಸ್ ಮಿಲ್ ಮಾಲೀಕ ಮತ್ತು ವ್ಯವಸ್ಥಾಪಕ ತಪ್ಪಿಸಿಕೊಂಡಿದ್ದಾರೆ.
    ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸುವ ವೇಳೆ ಲಭಿಸಿದ ಸುಳಿವಿನಂತೆ ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಮರ್ಗಿ ಎಂಬಲ್ಲಿ ರೈಸ್‌ಮಿಲ್ ಮೇಲೆ ಸೋಮವಾರ ಮಧ್ಯಾಹ್ನ ದಾಳಿ ನಡೆಸಲಾಗಿದೆ.

    ಈ ವೇಳೆ ಅಂದಾಜು 16.5 ಲಕ್ಷ ರೂ. ಮೌಲ್ಯದ 600 ಕ್ವಿಂಟಾಲ್‌ಗೂ ಅಧಿಕ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಮೂವರು ಲಾರಿ ಚಾಲಕರು ಮತ್ತು ಕ್ಲೀನರ್‌ನನ್ನು ಬಂಧಿಸಲಾಗಿದೆ. 6 ಲಾರಿ, ಎರಡು 407, ಒಂದು ಟಾಟಾ 909 ಹಾಗೂ ಮಾರುತಿ ಇಕೋ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

    ಅನ್ನ ಕದಿಯುವ ಜಾಲಕ್ಕೆ ಬ್ರೇಕ್: ಜಿಲ್ಲೆಯಲ್ಲಿ ಪಡಿತರವನ್ನು ಅಕ್ರಮವಾಗಿ ದಾಸ್ತಾನು ಮಾರಾಟ ಮಾಡುವ ಜಾಲ ಸಕ್ರಿಯವಾಗಿದ್ದು, ಕಳೆದ ತಿಂಗಳು ಕುಂದಾಪುರ ತಾಲೂಕಿನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇಂತಹ ಜಾಲಗಳನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಸಕಲ ಪ್ರಯತ್ನ ಮಾಡುತ್ತಿದೆ. ಸಾರ್ವಜನಿಕರು ಪಡಿತರ ಅಕ್ಕಿಯ ಅಕ್ರಮ ದಾಸ್ತಾನು, ಸಾಗಾಟ ಕುರಿತು ಮಾಹಿತಿ ಇದ್ದಲ್ಲಿ ತಿಳಿಸಬಹುದು. ಪಡಿತರ ಅಕ್ಕಿಯನ್ನು ಮಾರಾಟ ಮಾಡದೆ ಅನ್ನಭಾಗ್ಯ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.
    ಆಹಾರ ಇಲಾಖೆಯ ಉಪ ನಿರ್ದೇಶಕ ಗಜೇಂದ್ರ, ಆಹಾರ ನಿರೀಕ್ಷಕರಾದ ಪಾರ್ವತಿ, ಸುರೇಶ್ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    ಮನೆಗಳಿಂದ ನೇರ ಖರೀದಿ: ಕರಾವಳಿ ಭಾಗದಲ್ಲಿ ಬೆಳ್ತಿಗೆ ಅಕ್ಕಿ ಬಳಕೆ ಕಡಿಮೆ, ಸರ್ಕಾರ ಹೀಗೆ ಧಾರಾಳವಾಗಿ ನೀಡುವ ಉಚಿತ ಅಕ್ಕಿಯನ್ನು ಮಾರಾಟ ಮಾಡುವವರೇ ಅಧಿಕ. ಅದರ ಖರೀದಿಗೆಂದೇ ವ್ಯವಸ್ಥಿತ ಜಾಲ ಜಿಲ್ಲೆಯಲ್ಲಿದೆ. ಪ್ರತಿ ಕೆ.ಜಿ.ಗೆ 10 ರೂಪಾಯಿಯಂತೆ ಮನೆಮನೆಗಳಿಂದಲೇ ಖರೀದಿಸಲು ಏಜೆಂಟರ ರೀತಿಯ ವ್ಯವಸ್ಥೆ ಮಾಡಿರುವುದು ಪತ್ತೆಯಾಗಿದೆ.

    ಹೊರ ರಾಜ್ಯಗಳಿಗೆ ಬ್ರಾಂಡೆಡ್ ಅಕ್ಕಿ: ಮನೆಮನೆಗಳಿಂದ ಖರೀದಿಸಿದ ಅನ್ನಭಾಗ್ಯ ಅಕ್ಕಿಯನ್ನು ರೈಸ್‌ಮಿಲ್‌ನಲ್ಲಿ ಪಾಲಿಶ್ ಮಾಡಿ, ಪ್ರತ್ಯೇಕ ಬ್ರಾಂಡಿಂಗ್‌ನೊಂದಿಗೆ ಬೇರೆ ಬ್ಯಾಗ್‌ಗಳಲ್ಲಿ ತುಂಬಿ ಹೊರರಾಜ್ಯಕ್ಕೆ ಸಾಗಿಸಲಾಗುತ್ತಿತ್ತು. ಅದೇ ರೀತಿ ಸಾಗಿಸಲು 10 ವಾಹನಗಳಲ್ಲಿ ತುಂಬಿಸಿಟ್ಟಿರುವ ಸಂದರ್ಭ ಜಿಲ್ಲಾಧಿಕಾರಿ ನೇತೃತ್ವದ ತಂಡ ದಾಳಿ ನಡೆಸಿದೆ.

    ರೈಸ್‌ಮಿಲ್‌ಗೆ ಬೀಗ: ಅಕ್ರಮ ಪತ್ತೆಯಾಗಿರುವ ರೈಸ್‌ಮಿಲ್‌ಗೆ ಬೀಗ ಜಡಿಯಲಾಗಿದ್ದು, ಜಪ್ತಿ ಮಾಡಲಾಗಿದೆ. ಮಿಲ್‌ನಲ್ಲಿ ಭಾರಿ ಪ್ರಮಾಣದ ಅಕ್ಕಿ ದಾಸ್ತಾನು ಇದೆ. ಆದರೆ ಅದು ಅನ್ನಭಾಗ್ಯದ ಅಕ್ಕಿಯೇ ಅಥವಾ ರೈತರಿಂದ ಭತ್ತ ಖರೀದಿಸಿ ಮಾಡಿರುವ ಅಕ್ಕಿಯೇ ಎಂಬುದನ್ನು ಪರಿಶೀಲಿಸಬೇಕಿದೆ. ಮಂಗಳವಾರ ಈ ಕುರಿತ ದಾಖಲೆಗಳನ್ನು ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts