More

    ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ

    ನಂಜನಗೂಡು: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕೇರಳಕ್ಕೆ ರಾಜ್ಯಕ್ಕೆ ಸಾಗಿಸುತ್ತಿದ್ದ ಲಾರಿಯನ್ನು ಕಪಿಲಾ ನದಿ ಸೇತುವೆ ಬಳಿಯ ಚೆಕ್‌ಪೋಸ್ಟ್‌ನಲ್ಲಿ ವಶಪಡಿಸಿಕೊಳ್ಳಲಾಗಿದೆ.
    50 ಕೆಜಿ ತೂಕದ 250 ಮೂಟೆಗಳನ್ನು ತುಂಬಿಕೊಂಡು ಕೇರಳ ರಾಜ್ಯದ ಕಡೆ ಸಾಗಿಸುತ್ತಿದ್ದ ಲಾರಿ(ಕೆಎಲ್ 29, ಎಲ್1614)ಯಲ್ಲಿ ಔಷಧ ಸಾಗಿಸುವ ಸ್ಟಿಕ್ಕರ್ ಅಂಟಿಸಿಕೊಂಡು ಚೆಕ್‌ಪೋಸ್ಟ್ ಬಳಿ ಬಂದಾಗ ಪೊಲೀಸರು ತಪಾಸಣೆ ನಡೆಸಿದರು. ಲಾರಿಯಲ್ಲಿ ಔಷಧ ಬದಲಾಗಿ ಅಕ್ಕಿ ಮೂಟೆಗಳನ್ನು ಕಂಡಾಗ ಅಕ್ರಮ ಬಯಲಾಗಿದೆ.
    ಲಾರಿ ಚಾಲಕ ಕೇರಳ ಮೂಲದ ನಿಸಾರ್ ಉದ್ದಾನ್ ಅಬ್ದುಲ್ಲಾ ಎಂಬುವನನ್ನು ವಶಕ್ಕೆ ಪಡೆದಿರುವ ಗ್ರಾಮಾಂತರ ಪೊಲೀಸರು ವಿಚಾರಣೆ ನಡೆಸಿದಾಗ, ಕಿರುಗಾವಲಿನ ಅಕ್ಕಿ ಗಿರಣಿಯಿಂದ ಕೇರಳಕ್ಕೆ ಸಾಗಿಸುತ್ತಿದ್ದಾಗಿ ಬಾಯ್ಬಿಟ್ಟಿದ್ದಾನೆ. ಇದು ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ವಿತರಿಸುವ ಅಕ್ಕಿ ಎನ್ನಲಾಗಿದೆ. ಗ್ರಾಮಾಂತರ ಠಾಣೆ ಪಿಎಸ್‌ಐ ಸತೀಶ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
    ಭೇರ್ಯ : ಕೆ.ಆರ್.ನಗರ ತಾಲೂಕಿನ ನರಚನಹಳ್ಳಿ ಗ್ರಾಮದಲ್ಲಿ ಬಡವರಿಗೆ ನೀಡಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಜೀಪ್‌ಗೆ ತುಂಬುವಾಗ ಗ್ರಾಮಸ್ಥರು ಹಿಡಿದು ಆಹಾರ ಶಿರಸ್ತೇದಾರ್‌ಗೆ ಒಪ್ಪಿಸಿದ್ದಾರೆ.
    ಗ್ರಾಮದ ದಕ್ಷಿಣಾಮೂರ್ತಿ ಎಂಬುವರ ನ್ಯಾಯಬೆಲೆ ಅಂಗಡಿಯಿಂದ ಬುಧವಾರ ಮಧ್ಯಾಹ್ನ 9 ಮೂಟೆ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಜೀಪ್‌ಗೆ ತುಂಬುವಾಗ ಗ್ರಾಮಸ್ಥರು, ಮಾಲೀಕನ ಸಹಾಯಕನನ್ನು ಹಿಡಿದು ಪ್ರಶ್ನಿಸಿದ್ದಾರೆ.
    ಕೂಡಲೇ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆಹಾರ ಶಿರಸ್ತೇದಾರ್ ಸದಾನಂದ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು. ಮಾಲೀಕನ ವಿರುದ್ಧ ಆಹಾರ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಆಹಾರ ಶಿರಸ್ತೇದಾರ್ ಸದಾನಂದ್ ಹೇಳಿದರು.
    ನ್ಯಾಯಬೆಲೆ ಅಂಗಡಿ ಮಾಲೀಕ ದಕ್ಷಿಣಮೂರ್ತಿ ಮೈಸೂರಿನಲ್ಲಿ ವಾಸವಿದ್ದು, ಇವರ ಸಹೋದರ ಮಹೇಶ್ ಪಡಿತರವನ್ನು ವಿತರಿಸುತ್ತಿದ್ದಾರೆ. ಅಲ್ಲದೆ ತೂಕದಲ್ಲಿ ವ್ಯತ್ಯಾಸ ಮಾಡುತ್ತಿರುವ ಬಗ್ಗೆ ಈಗಾಗಲೇ ದೂರು ನೀಡಲಾಗಿದೆ. ಹೀಗಾಗಿ ಪಡಿತರ ಅಕ್ಕಿ ಮಾರಾಟ ಮಾಡಲು ಸಾಗಣೆ ಮಾಡುವ ಸಂಬಂಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ತಹಸೀಲ್ದಾರ್ ಅವರನ್ನು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts