More

    ಮಾನವ ಕಳ್ಳಸಾಗಣೆಗೆ ಬೀಳಲಿದೆ ಅಂಕುಶ

    ಹುಬ್ಬಳ್ಳಿ: ಮಹಿಳೆಯರು, ಮಕ್ಕಳು ಹಾಗೂ ಯುವಜನರನ್ನು ಅಪಹರಿಸಿ ಮಾನವ ಕಳ್ಳಸಾಗಣೆ ಮಾಡುವ ಪ್ರಕರಣಗಳಿಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಹುಬ್ಬಳ್ಳಿ – ಧಾರವಾಡ ಕಮಿಷನರೇಟ್ ಹೊಸ ಹೆಜ್ಜೆ ಇಟ್ಟಿದೆ. ಹು-ಧಾ ಮಹಿಳಾ ಪೊಲೀಸ್ ಠಾಣೆ ಇನ್​ಸ್ಪೆಕ್ಟರ್ ನೇತೃತ್ವದಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ಘಟಕ (ಆಂಟಿ ಹ್ಯೂಮನ್ ಟ್ರಾಫಿಕಿಂಗ್ ಯೂನಿಟ್) ಆರಂಭಿಸಲಾಗಿದೆ.

    ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ನಿರ್ಭಯ ಯೋಜನೆಯಡಿ ಅವಳಿ ನಗರ ವ್ಯಾಪ್ತಿಯಲ್ಲಿ ವಿಶೇಷ ಘಟಕ ಆರಂಭಿಸಿದೆ. ಮಹಿಳಾ ಠಾಣೆ ಇನ್​ಸ್ಪೆಕ್ಟರ್ ಅಶೋಕ ಚವ್ಹಾಣ ನೇತೃತ್ವದ ತಂಡ ರಚಿಸಲಾಗಿದೆ. ಮಹಿಳಾ ಪಿಎಸ್​ಐ, ಮೂವರು ಪುರುಷ ಸಿಬ್ಬಂದಿ ಹಾಗೂ ಮೂವರು ಮಹಿಳಾ ಸಿಬ್ಬಂದಿ ತಂಡದಲ್ಲಿ ಇದ್ದಾರೆ. ಇದರ ಉಪಯೋಗಕ್ಕಾಗಿ ಪ್ರತ್ಯೇಕ ವಾಹನಗಳನ್ನು ನೀಡಲಾಗಿದೆ.

    ಉಪನಗರ ಪೊಲೀಸ್ ಠಾಣೆ ಕಟ್ಟಡದ ಮೊದಲ ಮಹಡಿಯಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ಘಟಕದ ಹೊಸ ಕಚೇರಿ ಆರಂಭಿಸಲಾಗುತ್ತಿದೆ. ನಿರ್ಭಯಾ ನಿಧಿಯಲ್ಲಿ ಕಚೇರಿ ನವೀಕರಣ ಕಾರ್ಯ ಭರದಿಂದ ಸಾಗಿದೆ. ಒಂದೆರಡು ವಾರಗಳಲ್ಲಿ ಕಚೇರಿ ಉದ್ಘಾಟನೆಯಾಗಲಿದೆ.

    ಈ ಮೊದಲು ನವನಗರದ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಶಾಖೆ ಕಾರ್ಯ ನಿರ್ವಹಿಸುತ್ತಿತ್ತು. ಆದರೆ, ಪ್ರತ್ಯೇಕ ತಂಡ ಇರಲಿಲ್ಲ. ಹೊಸ ತಂಡ 24/7 (ನಿರಂತರವಾಗಿ) ಕೆಲಸ ನಿರ್ವಹಿಸಲಿದೆ. ಮಹಿಳೆಯರು, ಮಕ್ಕಳ ಕುರಿತು ವಿಶೇಷ ಮುತುವರ್ಜಿ ವಹಿಸುವ ಮೂಲಕ ಮಾನವ ಕಳ್ಳಸಾಗಣೆಗೆ ಅಂಕುಶ ಹಾಕಬೇಕಿದೆ.

    ಹಲವು ಬಗೆಯ ವಂಚನೆ

    ಮಕ್ಕಳು, ಹೆಣ್ಣು ಮಕ್ಕಳನ್ನು ಪುಸಲಾಯಿಸಿ ದೊಡ್ಡ ದೊಡ್ಡ ನಗರಗಳಿಗೆ ಕರೆದುಕೊಂಡು ಹೋಗುತ್ತಾರೆ. ಬಡ ಹೆಣ್ಣು ಮಕ್ಕಳಿಗೆ ಹಣ, ಐಷಾರಾಮಿ ಬದುಕಿನ ಆಮಿಷ ತೋರಿಸಿ ಮಾರಾಟ ಮಾಡುತ್ತಾರೆ. ವೇಶ್ಯಾವಾಟಿಕೆಗೆ ತಳ್ಳುತ್ತಾರೆ. ಬಡ ಮಕ್ಕಳನ್ನು ಅಪಹರಿಸಿ ಭಿಕ್ಷಾಟನೆಗೆ ಹಚ್ಚುತ್ತಾರೆ. ಕಾರ್ವಿುಕರಾಗಿ ದುಡಿಸಿಕೊಳ್ಳುತ್ತಾರೆ. ಇಂತಹ ದುಷ್ಕರ್ವಿುಗಳ ಮೇಲೆ ಖಾಕಿ ಪಡೆ ಹದ್ದಿನ ಕಣ್ಣು ಇಡಲಿದೆ.

    ಜನನಿಬಿಡ ಪ್ರದೇಶಗಳಲ್ಲಿ ಜನಜಾಗೃತಿ

    ಮಾನವ ಕಳ್ಳಸಾಗಣೆ ಮತ್ತು ಅದರ ಶಿಕ್ಷೆ ಕುರಿತು ಮಾನವ ಕಳ್ಳಸಾಗಣೆ ವಿರೋಧಿ ಘಟಕ ಕಳೆದ ವಾರದಿಂದ ಜಾಗೃತಿ ಕೆಲಸ ಶುರು ಮಾಡಿದೆ. ಬಸ್ ನಿಲ್ದಾಣ, ರೈಲು ನಿಲ್ದಾಣ, ತಾಲೂಕು ಕಚೇರಿ ಸೇರಿ ವಿವಿಧೆಡೆ ಪೋಸ್ಟರ್ ಅಂಟಿಸುವ, ಕರಪತ್ರ ಹಂಚಿಕೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುತ್ತಿದೆ.

    ಮಸಾಜ್ ಪಾರ್ಲರ್ ಮೇಲೆ ಕಣ್ಣು

    ಅವಳಿ ನಗರದಲ್ಲಿ ತಲೆ ಎತ್ತಿರುವ ಮಸಾಜ್ ಪಾರ್ಲರ್​ಗಳ ಮೇಲೆ ಈ ತಂಡ ಈಗಾಗಲೇ ಕಣ್ಣು ಇಟ್ಟಿದೆ. ಇಲ್ಲಿ ಕೆಲಸ ಮಾಡುವ ಯುವತಿಯರು ಕಳ್ಳಸಾಗಣಿಕೆಗೆ ಒಳಪಟ್ಟಿದ್ದಾರೆಯೇ ಅಥವಾ ಸ್ವಯಂ ಪ್ರೇರಣೆಯಿಂದ ಕೆಲಸಕ್ಕೆ ಬಂದಿರುವವರೇ ಎಂಬ ಕುರಿತು ಮಾಹಿತಿ ಕಲೆ ಹಾಕುತ್ತಿದೆ.

    ಸಹಾಯಕ್ಕೆ ಕರೆ ಮಾಡಿ

    ಕೆಲಸ ಮಾಡುವಂತೆ ಯಾರಾದರೂ ಒತ್ತಡ ಹೇರುತ್ತಿದ್ದರೆ, ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದರೆ, ನಿಮ್ಮನ್ನು ನಿಯಂತ್ರಿಸಲು ಯತ್ನಿಸು ತ್ತಿದ್ದರೆ ಅಥವಾ ಮಾನವ ಕಳ್ಳ ಸಾಗಣೆ ಕುರಿತು ಸಾರ್ವಜನಿಕರಿಗೆ ಮಾಹಿತಿ ಇದ್ದರೆ 0836- 2233514 ಅಥವಾ 112ಗೆ ಕರೆ ಮಾಡಬಹುದು. ಕರೆ ಮಾಡಲು ಸಾಧ್ಯವಿಲ್ಲ ಎನ್ನುವವರು ‘ಹೆಲ್ಪ್’ ಎಂದು ಟೈಪ್ ಮಾಡಿ ಮೊ.ಸಂ. 94808 02031ಗೆ ಸಂದೇಶ ರವಾನಿಸಿದರೆ ಸಹಾಯ ದೊರೆಯಲಿದೆ.

    ಮಾನವ ಕಳ್ಳಸಾಗಣೆ ತಡೆಗಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ವಿಶೇಷ ಘಟಕ ಆರಂಭಿಸಲಾಗುತ್ತಿದೆ. ಇನ್​ಸ್ಪೆಕ್ಟರ್, ಪಿಎಸ್​ಐ ಸೇರಿ 8 ಜನರ ತಂಡ ರಚಿಸಲಾಗಿದೆ. ಈ ಘಟಕ ಮಾನವ ಕಳ್ಳಸಾಗಣೆ ಕುರಿತು ವಿಶೇಷ ನಿಗಾ ಇಡಲಿದ್ದು, ತುರ್ತು ಸೇವೆ ಒದಗಿಸಲಿದೆ.

    | ಲಾಬುರಾಮ ಹು-ಧಾ ಪೊಲೀಸ್ ಆಯುಕ್ತ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts