More

    ಜ್ಞಾನದ ಸಂಕೇತಗಳಿಗೆ ಆಂಜನೇಯ ಅಧಿದೇವ

    ಆಲೂರು: ಶ್ರೀರಾಮಚಂದ್ರನ ಪರಮಭಕ್ತನಾಗಿರುವ ಹನುಮಂತನು ಅವತಾರ ತಾಳಿದ ದಿನವನ್ನು ಹನುಮ ಜಯಂತಿ ಎಂದು ಆಚರಿಸಲಾಗುತ್ತದೆ. ಜ್ಞಾನದ ಸಂಕೇತಗಳಿಗೆ ಆಂಜನೇಯ ಅಧಿದೇವನಾಗಿದ್ದಾನೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.

    ತಾಲೂಕಿನ ಪಾಳ್ಯ ಹೋಬಳಿಯ ತಾಳೂರು ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀಹನುಮಂತರಾಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ 19ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮದ ಅವರು ಆಶೀರ್ವಚನ ನೀಡಿದರು.

    ಚೈತ್ರ ಮಾಸದಲ್ಲಿ ಬರುವ ಈ ಹನುಮ ಜಯಂತಿಯನ್ನು ಭಾರತದಲ್ಲಿ ವಿಶಿಷ್ಟ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಹನುಮನು ಹಿಂದು ಧರ್ಮಗ್ರಂಥಗಳಲ್ಲಿ ಪೂಜಿಸುವ ದೈವವಾಗಿದ್ದು, ಭಾರತದ ಮಹಾಕಾವ್ಯ ಎಂದೇ ಹೇಳಲಾಗುವ ರಾಮಾಯಣದಲ್ಲಿ ಪ್ರಮುಖ ಪಾತ್ರಗಳಲ್ಲೊಬ್ಬನಾಗಿದ್ದಾನೆ ಎಂದರು.

    ಗಣಪತಿ, ಆಂಜನೇಯ, ಶನಿಮಹಾತ್ಮ ಹಾಗೂ ಶರಣಂ ಅಯ್ಯಪ್ಪ ಇವರೆಲ್ಲರೂ ಬ್ರಹ್ಮಚಾರಿಯಾಗಿ ಜೀವನವನ್ನು ಸಾರ್ಥಕ ಮಾಡಿಕೊಂಡು ಜಗತ್ತಿಗೆ ಒಂದಲ್ಲ ಒಂದು ರೀತಿಯಲ್ಲಿ ಒಳಿತನ್ನು ಮಾಡುವ ಸಂದೇಶಗಳನ್ನು ಸಾರಿದ್ದಾರೆ. ನಾವೆಲ್ಲ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲ ಜಾಗತಿಕ ಧರ್ಮಗಳು ಧ್ಯಾನವೆಂಬ ಆಧ್ಯಾತ್ಮಿಕ ಕೇಂದ್ರದಲ್ಲಿ ಸಮ್ಮಿಲನಗೊಂಡಾಗ ಜಗತ್ತಿನಾದ್ಯಂತ ಧರ್ಮಸಾಮರಸ್ಯ ಮತ್ತು ಶಾಂತಿಯನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

    ಶಾಸಕ ಸಿಮೆಂಟ್ ಮಂಜು ಮಾತನಾಡಿ, ಸೇವೆ ಎಂದರೆ ಹನುಮ. ಹನುಮ ಎಂದರೆ ಸೇವೆ ಎಂಬ ಮಾತಿನಂತೆ ನಮ್ಮಲ್ಲಿ ಜನಸೇವಾ ಮನೋಧರ್ಮ ಇರಬೇಕು. ತ್ಯಾಗ ಮತ್ತು ಸೇವೆಗೆ ನಾವು ಶ್ರೀ ಹನುಮಾನ್ ದೇವರನ್ನು ಮೊದಲಾಗಿ ಸ್ಮರಿಸುತ್ತೇವೆ. ಧೈರ್ಯ, ಸಾಹಸದಿಂದ ಯಾವುದೇ ಕಾರ್ಯ ಸಾಧನೆ ಸಾಧ್ಯ. ಜೀವನದಲ್ಲಿ ನಾವು ನಮ್ಮಿಂದಾಗುವ ಸೇವಾ ಕಾರ್ಯಗಳನ್ನು ಮಾಡುವಂತಹ ಪರಂಪರೆಯನ್ನು ರೂಢಿಸಿಕೊಳ್ಳಬೇಕು. ಸಮಾಜ ಸೇವೆಯಿಂದ ಆತ್ಮತೃಪ್ತಿ ದೊರಕುತ್ತದೆ ಎಂದು ತಿಳಿಸಿದರು.

    ಬೇಲೂರು ಕ್ಷೇತ್ರದ ಶಾಸಕ ಹಾಗೂ ಶ್ರೀ ಹನುಮಂತರಾಯಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎಚ್.ಕೆ.ಸುರೇಶ್ ಮಾತನಾಡಿ, ಯಾವುದೇ ಒಂದು ಕಾರ್ಯಕ್ರಮ ಆಗಬೇಕೆಂದರೆ ಧರ್ಮಗುರುಗಳ ಆಶೀರ್ವಾದ ಇರಬೇಕಾಗುತ್ತದೆ. ಆ ಕಾರಣದಿಂದಲೇ ನಾನು ಈ ಸಮಾರಂಭಕ್ಕೆ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರನ್ನು ಆಹ್ವಾನಿಸಿದೆ. ಇಷ್ಟೊಂದು ದೊಡ್ಡ ಆಂಜನೇಯ ಮೂರ್ತಿಯನ್ನು ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ. ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದರು.

    ಕಾರ್ಯಕ್ರಮದಲ್ಲಿ ದೇವಸ್ಥಾನ ಟ್ರಸ್ಟ್ ಗೌರವಾಧ್ಯಕ್ಷ ಚಿಕ್ಕೇಗೌಡ, ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್.ಮಂಜೇಗೌಡ, ತಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್, ಉಪಾಧ್ಯಕ್ಷೆ ಉಷಾರಾಣಿ, ಸದಸ್ಯರಾದ ಗೌಡೇಗೌಡ, ಶ್ರೀನಿವಾಸ್, ಕಟ್ಟಡ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ಆನಂದ್, ಮುಖಂಡರಾದ ಮೋಹನ್‌ಕುಮಾರ್, ಜಿ.ಕೆ.ವೆಂಕಟೇಶ್, ಹರೀಶ್, ಧರ್ಮ ಮಂಜುನಾಥ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts