More

    ಯುಗಗಳಿಂದ ಇಲ್ಲದ ಆಂಜನೇಯ ಜನ್ಮಸ್ಥಳದ ವಿವಾದ ಈಗೇಕೆ?

    • ವಿಜಯವಾಣಿ ಸುದ್ದಿಜಾಲ ಸಿಂಧನೂರು (ರಾಯಚೂರು)

    ತಿರುಪತಿಯ ಅಂಜನಾದ್ರಿಯಲ್ಲಿ ಹನುಮಂತ ಜನಿಸಿದನೆಂದು ಟಿಟಿಡಿ ಟ್ರಸ್ಟ್ ಮಂಡಿಸಿರುವ ವಾದಕ್ಕೆ ಹಿರಿಯ ಸಾಹಿತಿ, ಸಂಶೋಧಕ ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ ಆಕ್ಷೇಪ ವ್ಯಕ್ತಪಡಿಸಿದ್ದು, ಯುಗಗಳಿಂದ ಇಲ್ಲದ ವಾದ ಈಗೇಕೆ ಎಂದು ಪ್ರಶ್ನಿಸಿದ್ದಾರೆ.

    ಈ ಕುರಿತು ಸುದೀರ್ಘ ಪತ್ರ ಬರೆದಿರುವ ಅವರು, ಟಿಟಿಡಿ ನೀಡಿದ ಸಾಕ್ಷಿ ಪುರಾವೆಗಳು ಮೂಲ ವಾಲ್ಮೀಕಿ ರಾಮಾಯಣವನ್ನು ಪ್ರಸ್ತಾಪಿಸಿಲ್ಲ. ವರಾಹ ಪುರಾಣ, ಭವಿಷ್ಯೋತ್ತರ ಪುರಾಣ, ಸ್ಕಂದ ಪುರಾಣ, ಶ್ರೀ ವೆಂಕಟೇಶ್ವರ ಮಹಾತ್ಮೆಗಳನ್ನು ಪ್ರಸ್ತಾಪಿಸಲಾಗಿದೆ. ಇವೆಲ್ಲವೂ ರಾಮಾಯಣ ಕಾಲದ ನಂತರ ರಚಿತವಾದವು. ಇತ್ತೀಚಿನ ಶಿಲಾ ಶಾಸನಗಳು, ಪುರಾವೆಗಳು ದುರ್ಬಲವಾಗಿವೆ ಎಂದು ವಿವರಿಸಿದ್ದಾರೆ.

    ತಿರುಪತಿ ಮತ್ತು ವೆಂಕಟರಮಣರ ಚರಿತ್ರೆ ವಿಷ್ಣು, ಪದ್ಮ, ಸ್ಕಂದ ಪುರಾಣ ಹಾಗೂ ಭಾಗವತ ಪುರಾಣಗಳಲ್ಲಿ ಪ್ರಸ್ತಾಪವಾಗಿರಬೇಕು. ಸತ್ಯವತಿ ಸುತ ವೇದವ್ಯಾಸರು ರಚಿಸಿದ ಭಾಗವತಾದಿ ಹದಿನೆಂಟು ಪುರಾಣಗಳ ಕಾಲ ವಾಲ್ಮೀಕಿ ರಾಮಾಯಣ ಕಾವ್ಯ ರಚನೆಯ ನಂತರ ಕಾಲದ್ದು ಎಂಬುದು ನಿರ್ವಿವಾದ. ವ್ಯಾಸರ ಪುರಾಣಗಳಲ್ಲಿ ಉಕ್ತವಾಗಿರುವ ಅದೆಷ್ಟೊ ಪುರಾಣ ಪ್ರಸಂಗಗಳು ರಾಮಾಯಣ ಕಾವ್ಯದಲ್ಲಿ ಪ್ರಸ್ತಾಪವಾಗಿವೆ. ಇದಕ್ಕಿಂತ ಮಹತ್ವದ್ದೆಂದರೆ ರಾಮಭಕ್ತ, ಚಿರಂಜೀವಿ, ಮುಂದಿನ ಬ್ರಹ್ಮ ಪದವಿ ಪಡೆಯುವವ ಮತ್ತು ಹನುಮ-ಭೀಮ-ಮಧ್ವಮುನಿ ಮೂರೂ ಅವತಾರಿಯಾಗಿ ಯುಗಯುಗಗಳಿಂದಲೂ ಆರಾಧನೆಗೊಳ್ಳತ್ತಲೇ ಬಂದು ಇಂದಿಗೂ ಪ್ರಾಣದೇವ ಎಂದೇ ಪೂಜೆಗೊಳ್ಳುವ ಆಂಜನೇಯನನ್ನು ಉಲ್ಲೇಖಿಸಿದ ರಾಮಾಯಣ ಕಾವ್ಯ ಮತ್ತು ವಾಲ್ಮೀಕಿ ಮಹರ್ಷಿ ಪೂಜನೀಯರು. ಹಿಂದೆ ಇಲ್ಲದ ಈ ವಾದ ಇಂದು ತಲೆದೋರಿರುವುದರ ಹಿಂದೆ ಹುನ್ನಾರ ಇರಬೇಕು ಎಂಬ ಸಂಶಯ ಮೂಡುತ್ತದೆ ಎಂದಿದ್ದಾರೆ.

    ತಿರುಮಲೈ ಸ್ಥಳನಾಮ ದ್ರಾವಿಡ ಭಾಷೆಯದ್ದು. ಮಲೈ ಎಂದರೆ ಬೆಟ್ಟ. ತಿರುಮಲೈ ಎಂಬುದು ತಿರುಮಲ ಎಂದು ರೂಪುಗೊಳ್ಳುತ್ತವೆ. ಈ ದ್ರಾವಿಡ ಸ್ಥಳನಾಮಕ್ಕೆ ಗಾಂಭೀರ್ಯ ತರಲು ವೆಂಕಟಾದ್ರಿ, ತಿರುಪತಿ ಎಂದು ಸಂಸ್ಕೃತೀಕರಣಗೊಳಿಸಲಾಗಿದೆ. ವೆಂಕಟೇಶ್ವರ ಮಹಾತ್ಮೆಯು ಸ್ಥಳ ಪುರಾಣವಾಗಿದೆ. ಇದರಲ್ಲಿನ ಮಾಹಿತಿಗಳನ್ನು ಸತ್ಯವೆಂದು ಭಾವಿಸಿದರೆ ರಾಮಾಯಣದಲ್ಲಿ ಉಲ್ಲೇಖಗಳು ಮಿಥ್ಯವೆನಿಸುತ್ತವೆ. ಇದರಿಂದ ಮಹರ್ಷಿ ವಾಲ್ಮೀಕಿ ಮತ್ತು ರಾಮಾಯಣ ಕಾವ್ಯಕ್ಕೆ ಅಗೌರವ ತೋರಿಸಿದಂತಾಗುತ್ತದೆ. ತಿರುಪತಿಯನ್ನು ಭೂವೈಕುಂಠವನ್ನಾಗಿ ರೂಪಿಸಲು ಟಿಟಿಡಿ ಪಂಡಿತರು ಸ್ಥಳಪುರಾಣವನ್ನು ರಚಿಸುವ ಮೂಲಕ ಕ್ಷೇತ್ರಕ್ಕೆ ದಿವ್ಯತ್ವವನ್ನು ತಂದುಕೊಡಲಿ. ಆದರೆ, ತಿರುಪತಿಯ ಅಂಜನಾದ್ರಿಯಲ್ಲಿ ಆಂಜನೇಯನು ಜನಿಸಿದನು ಎಂದು ಹೇಳಿ ಪುರಾಣ ತಿರುಚುವ ಕೆಲಸ ಮಾಡಿ, ಅನಗತ್ಯ ವಿವಾದಗಳಿಗೆ ಎಡೆಮಾಡಿಕೊಡುವುದು ಶೋಭೆತರುವಂಥದಲ್ಲ ಎಂದಿದ್ದಾರೆ.

    ಕೋಟ್

    ರಾಮಾಯಣ ರಚನೆಯ ಕಾಲದಲ್ಲಿ ತಿರುಪತಿ ಇತ್ತೇ ಎಂದು ಹುಡುಕಿದರೆ ಉತ್ತರ ದೊರೆಯುತ್ತದೆ. ಉತ್ತರಭಾರತದಿಂದ ದಕ್ಷಿಣಭಾರತದವರೆಗೆ ರಾಮಾಯಣದಲ್ಲಿ ಉಕ್ತವಾಗಿರುವ ಭೌಗೋಳಿಕ ಸ್ಥಳಗಳ ವರ್ಣನೆ ಇಂದಿಗೂ ನಿತ್ಯ ಸತ್ಯ. ದಕ್ಷಿಣ ಭಾರತ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಕಿಷ್ಕಿಂಧಾ, ಪಂಪಾಸರೋವರ, ಶಬರಿ ಆಶ್ರಮ, ಅಂಜನಾದ್ರಿ, ವಾಲಿ-ಸುಗ್ರೀವರ ಪ್ರದೇಶಗಳು ರಾಮಾಯಣದಲ್ಲಿ ಉಲ್ಲೇಖವಾಗಿವೆ. ತಿರುಪತಿಯ ಹೆಸರು ಎಲ್ಲೂ ಪ್ರಸ್ತಾಪವಾಗಿಲ್ಲ.

    | ಪೊ›.ಶಾಶ್ವತಸ್ವಾಮಿ ಮುಕ್ಕುಂದಿಮಠ ಹಿರಿಯ ಸಾಹಿತಿ, ಸಂಶೋಧಕ, ಸಿಂಧನೂರು

    ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಶ್ರೀರಾಮ ರ್ಸಟ್ ಯೋಜನೆ ಮೂಲಕ ತಾಲೂಕಿನ ಕಿಷ್ಕಿಂಧಾದ ಅಂಜನಾದ್ರಿ ಬೆಟ್ಟವನ್ನು ಹನುಮ ಉದಯಿಸಿದ ನಾಡು ಎಂದು ಒಪ್ಪಿಕೊಂಡಿದೆ. ಟಿಟಿಡಿಯವರ ಆಧಾರರಹಿತ ಹೇಳಿಕೆಗಳಿಗೆ ಮಾನ್ಯತೆ ನೀಡುವ ಅಗತ್ಯವಿಲ್ಲ. ಭಕ್ತರ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಟಿಟಿಡಿ ಆಧಾರರಹಿತ ಹೇಳಿಕೆ ನೀಡುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರದೊಂದಿಗೆ ರ್ಚಚಿಸಿ, ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲಾಗುತ್ತಿದೆ. ಪ್ರಾಚ್ಯವಸ್ತು ಇಲಾಖೆಯಲ್ಲಿ ಕಿಷ್ಕಿಂಧಾ ಕ್ಷೇತ್ರ ಉಲ್ಲೇಖವಾಗುವಂತೆ ಒತ್ತಾಯಿಸಲಾಗುವುದು.

    | ಪರಣ್ಣ ಮುನವಳ್ಳಿ ಗಂಗಾವತಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts