More

    ಅಂಜನಾದ್ರಿ ಬೆಟ್ಟದಲ್ಲಿ ಮಾಲೆ ವಿಸರ್ಜಿಸಿದ ಹನುಮ ಭಕ್ತರು: ಉತ್ತರ ಭಾರತದ ಸಂತರದಿಂದ ವಿಶೇಷ ಪೂಜೆ

    ಗಂಗಾವತಿ: ಹನುಮ ಜಯಂತಿ ನಿಮಿತ್ತ ಅಂಜನಾದ್ರಿ ಬೆಟ್ಟದಲ್ಲಿ ಶನಿವಾರ ಶ್ರದ್ಧೆ, ಭಕ್ತಿಯಿಂದ ಹನುಮ ಮಾಲೆ ವಿಸರ್ಜನೆ ನಡೆಯಿತು. ಕಠಿಣ ವ್ರತ ಕೈಗೊಂಡಿದ್ದ ಹನುಮ ಮಾಲಾಧಾರಿಗಳು ಬೆಟ್ಟ ಹತ್ತಿ, ಶ್ರೀರಾಮ, ಹನುಮ ಸಂಕಿರ್ತನೆ ನಡೆಸಿದರು. ಆಯೋಧ್ಯೆ, ಮಥುರಾ, ಚಿತ್ರಕೂಟ, ಕಾಶಿ ಸೇರಿ ಉತ್ತರ ಭಾರತದಿಂದ ಬಂದಿದ್ದ ಸಂತರು ವಿಶೇಷ ಪೂಜೆ ಸಲ್ಲಿಸಿದರು.

    ಆಂಜನೇಯ ಮೂರ್ತಿಗೆ ಪಂಚಾಮೃತಾಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ, ಸಾಮೂಹಿಕ ಹನುಮಾನ ಚಾಲೀಸ್ ಪಾರಾಯಣ ಮತ್ತು ಪವಮಾನ ಹೋಮ ಹಮ್ಮಿಕೊಳ್ಳಲಾಗಿತ್ತು. ವ್ರತ ಕೈಗೊಂಡಿದ್ದ ಶಾಸಕ ಬಸವರಾಜ ದಢೇಸೂಗೂರು, ಮಾಜಿ ಸಚಿವ ಶಿವರಾಜ ತಂಗಡಗಿ ಸೇರಿ ವಿವಿಧ ಜಿಲ್ಲೆಗಳಿಂದ ಬಂದಿದ್ದ ಮಾಲಾಧಾರಿಗಳು ಸಂಪ್ರದಾಯಬದ್ಧವಾಗಿ ಮಾಲೆ ವಿಸರ್ಜಿಸಿದರು. ಏಕಮುಖ ಸಂಚಾರ ಹಿನ್ನೆಲೆಯಲ್ಲಿ ಪ್ರವೇಶ ದ್ವಾರದಿಂದ ಬೆಟ್ಟ ಹತ್ತಿದ್ದ ಭಕ್ತರು, ಚಿಕ್ಕರಾಂಪುರ ಭಾಗದಿಂದ ಕೆಳಗಿಳಿದರು.

    ಸಂಸ್ಕೃತ ಪಾಠಶಾಲೆಯಲ್ಲಿ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಟ್ಟದ ಎರಡು ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಸಿಸಿ ಕ್ಯಾಮರಾ, ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ್, ಕೆಪಿಸಿಸಿ ಪದಾಧಿಕಾರಿಗಳಾದ ಬಸವರಾಜ ಸ್ವಾಮಿ ಮಳೀಮಠ, ರಾಜುನಾಯಕ ಇತರರು ಭಾಗವಹಿಸಿದ್ದರು.

    ಯೋಗ ಉತ್ಸವ: ಅಂಜನಾದ್ರಿ ಬೆಟ್ಟದಲ್ಲಿ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಯೋಗ ಉತ್ಸವ ನಡೆಯಿತು. ಉತ್ಸವದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಭಗವಂತ ಖೂಬಾರನ್ನು ಶಾಸಕ ಪರಣ್ಣ ಮುನವಳ್ಳಿ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಸನ್ಮಾನಿಸಿದರು. ಮುಖಂಡರಾದ ಸಂತೋಷ ಕೆಲೋಜಿ, ಕಳಕನಗೌಡ ಕಲ್ಲೂರು, ನವೀನ್ ಮಾಲಿ ಪಾಟೀಲ್, ಚನ್ನವೀರನಗೌಡ, ರಾಜೇಶ ಪಾಟೀಲ್, ಕಂದಾಯ ನಿರೀಕ್ಷಕರಾದ ಹನುಮಂತಪ್ಪ, ಮಂಜುನಾಥ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts