More

    ಕ್ಷೇತ್ರದತ್ತ ಮುಖ ಮಾಡದ ಅನಿತಾ ಕುಮಾರಸ್ವಾಮಿ

    ರಾಮನಗರ: ರಾಜ್ಯ ಚುನಾವಣೆ ಇತಿಹಾಸದಲ್ಲಿಯೇ ದಾಖಲೆ ಅಂತರದಲ್ಲಿ ಗೆಲುವು ಸಾಧಿಸಿದ ಶಾಸಕಿ ಎಂಬ ಹೆಗ್ಗಳಿಗೆ ಹೊಂದಿರುವ ಅನಿತಾ ಕುಮಾರಸ್ವಾಮಿ ಕ್ಷೇತ್ರದಿಂದ ದೂರಾಗಿ ತಿಂಗಳುಗಳೇ ಕಳೆದಿವೆ. ಆದರೆ, ಶಾಸಕಿ ಮತ್ತು ಜನರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿ ಸಬೇಕಾದ ಅವರ ಕಚೇರಿಯೂ ಬಾಗಿಲು ಮುಚ್ಚಿದೆ.

    ಹೌದು, ರಾಮನಗರ ಶಾಸಕಿ ಅನಿತಾ ಅವರು ಕಾರ್ಯನಿರ್ವಹಿಸಬೇಕಿದ್ದ ಅಧಿಕೃತ ಕಚೇರಿಯಲ್ಲಿ ಜನರಿಗೆ ಶಾಸಕಿಯೂ ಸಿಗುತ್ತಿಲ್ಲ, ಇತ್ತ ಅವರ ಕಚೇರಿ ಸಿಬ್ಬಂದಿಯೂ ಲಭ್ಯವಿಲ್ಲದಂತಾಗಿದೆ.

    ಶಾಸಕರು ಕ್ಷೇತ್ರದ ಜನರಿಗೆ ಲಭ್ಯವಾಗಬೇಕು ಎನ್ನುವ ಕಾರಣಕ್ಕೆ ಕಚೇರಿ ತೆರೆಯಲಾಗಿದೆ. ಆದರೆ, ಈ ಕಚೇರಿಗೆ ಈಗ ಬೀಗ ಜಡಿದಿದ್ದು, ಸ್ಥಳೀಯ ಮುಖಂಡರೂ ಇತ್ತ ಸುಳಿಯದಂತಾಗಿದೆ. ಇದರಿಂದಾಗಿ ಕಚೇರಿ ಆವರಣದಲ್ಲಿ ಕಸ ಬಿದ್ದಿದ್ದು, ಕಾಲಿಡಲು ಸಾಧ್ಯವಾಗದ ಸ್ಥಿತಿ ತಲುಪಿದೆ. ಇನ್ನು ಕಚೇರಿ ಕಾಂಪೌಂಡ್ ಹೊರಭಾಗದಲ್ಲಿ ಮರಗಳ ನೆರಳು ಬೀಳುವುದರಿಂದ ದಾರಿಹೋಕರು ವಿಶ್ರಾಂತಿ ಪಡೆದು ಹೋಗುತ್ತಿದ್ದಾರೆ.

    ಕಚೇರಿಗೆ ಸಿಬ್ಬಂದಿ ಇಲ್ಲ: ಶಾಸಕರಿಗೆ ಸರ್ಕಾರವೇ ಒಬ್ಬ ಆಪ್ತ ಕಾರ್ಯದರ್ಶಿ ಒದಗಿಸುತ್ತದೆ. ಈತ ಸ್ಥಳೀಯರು ನೀಡುವ ಅಹವಾಲುಗಳನ್ನು ಶಾಸಕರ ಗಮನಕ್ಕೆ ತಂದು, ಕೆಲಸ ಮಾಡಿಸಿಕೊಡುವ ಕಾರ್ಯ ಮಾಡಬೇಕು. ಆದರೆ ಇತ್ತೀಚಿನವರೆಗೂ ಆತ ಯಾರು ಎನ್ನುವ ಮಾಹಿತಿ ಇಲ್ಲ. ವಿಪರ್ಯಾಸವೆಂದರೆ ಶಾಸಕರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ದೀಪಕ್ ಎಂಬುವವರನ್ನು ಸೇವೆಯಿಂದ ಬಿಡುಗಡೆ ಮಾಡಿ, ಮಾತೃ ಇಲಾಖೆಗೆ ಕಳುಹಿಸಿದ್ದು, ಶಾಸಕರ ಕಚೇರಿ ಇದ್ದೂ ಇಲ್ಲದಂತಾಗಿದೆ.

    ಹಬ್ಬಗಳಿಗೆ ಬಾಗಿಲು ಓಪನ್: ರಾಷ್ಟ್ರೀಯ ಹಬ್ಬಗಳಲ್ಲಿ ಮಾತ್ರ ಸ್ಥಳೀಯ ಮುಖಂಡರು ಕಚೇರಿ ತೆರೆದು ಸ್ವಚ್ಛಗೊಳಿಸಿ ಹೋದರೆ ಮತ್ತೆ ತಲೆ ಹಾಕುವುದು ಮತ್ತೊಂದು ರಾಷ್ಟ್ರೀಯ ಹಬ್ಬ, ಇಲ್ಲವೇ ಸುದ್ದಿಗೋಷ್ಠಿಗಳಿಗೆ. ಇದರಿಂದಾಗಿ ಶಾಸಕರ ಕಚೇರಿ ಕೇವಲ ಹಬ್ಬ ಆಚರಣೆಗಳಿಗೆ ಸೀಮಿತವಾಗಿದೆ.

    ಸಿಬ್ಬಂದಿ ಬದಲು: ಇತ್ತೀಚೆಗೆ ಕೇತಗಾನಹಳ್ಳಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕಿ ಅವರ ಗನ್​ವ್ಯಾನ್ ಮತ್ತು ಆಪ್ತ ಕಾರ್ಯದರ್ಶಿ ಇಬ್ಬರನ್ನೂ ಕೆಲಸದಿಂದ ಬಿಡುಗಡೆ ಮಾಡಿ, ಮಾತೃ ಇಲಾಖೆಗೆ ಕಳುಹಿಸಿಕೊಡಲಾಗಿದೆ. ಅನಿತಾ ಅನುಪಸ್ಥಿತಿಯಲ್ಲಿ ಈ ಇಬ್ಬರೂ ಆ ಸಭೆಗೆ ಹೋದ ಕಾರಣದಿಂದಬೇಸರಗೊಂಡ ಅನಿತಾ, ಇಬ್ಬರನ್ನೂ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದರು ಎನ್ನಲಾಗಿದ್ದು, ಹೊಸ ಸಿಬ್ಬಂದಿ ನೇಮಕವಾಗಬೇಕಿದೆ.

    ಜನರಿಗೆ ಹತ್ತಿರವಾಗಲಿ: ಜೆಡಿಎಸ್ ಮುಖಂಡರೇ ಹೇಳುವಂತೆ, ಮುಖಂಡರೇ ಶಾಸಕರನ್ನು ಭೇಟಿ ಮಾಡುವುದು ಕಷ್ಟ, ಇನ್ನು ಸಾಮಾನ್ಯ ಜನ ಅಲ್ಲಿಗೆ ಹೋಗುವುದು ಕನಸಿನ ಮಾತು. ಆದರೆ ಬಾಗಿಲು ಹಾಕಿರುವ ಕಚೇರಿ ಬಾಗಿಲನ್ನು ತೆರೆಸಿ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಶಾಸಕಿ ಮಾಡಬೇಕಿದೆ.

    ಎಚ್​ಡಿಕೆ ಅವಧಿಯಲ್ಲಿ ಜನ ಜಂಗುಳಿ

    ರಾಮನಗರದ ಶಾಸಕರ ಕಚೇರಿ ಎಚ್​ಡಿಕೆ ಮತ್ತು ಕೆ.ರಾಜು ಅವಧಿಯಲ್ಲಿ ತುಂಬಿರುತ್ತಿತ್ತು. ಶಾಸಕರ ಆಪ್ತ ಕಾರ್ಯದರ್ಶಿ ಸೋಮಶೇಖರ್ ಜನರ ಅಹವಾಲು ಸ್ವೀಕಾರ ಮಾಡಿ, ಎಚ್​ಡಿಕೆ ಗಮನಕ್ಕೆ ತರುವ ಮೂಲಕ ಸಮಸ್ಯೆ ಬಗೆಹರಿಸಲು ಸಮಪರ್ಕವಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇದೀಗ ಈ ಕಚೇರಿ ಪಾಳು ಬಂಗಲೆಯಂತಾಗಿದೆ.

    ಸಿಬ್ಬಂದಿ ಇದ್ದಾರೆ. ಹಬ್ಬದ ಕಾರಣಕ್ಕೆ ಅವರು ತಿರುಪತಿಗೆ ಹೋಗಿದ್ದು, ಒಂದೆರಡು ದಿನಗಳಲ್ಲಿ ಕಚೇರಿ ತೆರೆಯಲಿದೆ.

    | ರಾಜಶೇಖರ್ ತಾ.ಜೆಡಿಎಸ್ ಅಧ್ಯಕ್ಷ, ರಾಮನಗರ

    ಕ್ಷೇತ್ರದ ಜನತೆ ಆ ಕುಟುಂಬಕ್ಕೆ ಎಲ್ಲ ರೀತಿಯ ಅಧಿಕಾರವನ್ನು ನೀಡಿದ್ದಾರೆ. ಅವರ ನೋವಿಗೆ ಸ್ಪಂದಿಸಬೇಕಾದ್ದು ಅವರ ಜವಾಬ್ದಾರಿ. ಆದರೆ ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಜನತೆ ಅರ್ಥ ಮಾಡಿಕೊಳ್ಳಬೇಕು.

    | ಇಕ್ಬಾಲ್ ಹುಸೇನ್ ಕಾಂಗ್ರೆಸ್ ಮುಖಂಡ

    ಗಂಗಾಧರ್ ಬೈರಾಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts