More

    ಹಸನಾಗಿಸುವ ಹಾದಿಯಲ್ಲಿ ಮುಳ್ಳು ಚೆಲ್ಲುವುದೇಕೆ?; ಬಿ.ವೈ.ವಿಜಯೇಂದ್ರರ ಲೇಖನ

    ಹಸನಾಗಿಸುವ ಹಾದಿಯಲ್ಲಿ ಮುಳ್ಳು ಚೆಲ್ಲುವುದೇಕೆ?; ಬಿ.ವೈ.ವಿಜಯೇಂದ್ರರ ಲೇಖನ

    ಕೃಷಿ ನೀತಿಯನ್ನು ವಿರೋಧಿಸಿ ರಾಜಧಾನಿ ದೆಹಲಿ ಸೇರಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಈಗಾಗಲೇ ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೆಸ್ ರೈತರನ್ನು ಎತ್ತಿಕಟ್ಟಲು ಈ ರೈತಪರ ಕಾನೂನನ್ನೇ ಅಸ್ತ್ರವನ್ನಾಗಿಸಿಕೊಂಡು ರೈತಸಮೂಹವನ್ನು ದಿಕ್ಕುತಪ್ಪಿಸುತ್ತಿರುವುದು ದುರ್ದೈವದ ಸಂಗತಿ. ‘ರೈತ ಈ ದೇಶದ ಬೆನ್ನೆಲುಬು’ ಎಂದರು ಗಾಂಧೀಜಿ, ಹಸಿರು ಕ್ರಾಂತಿಯ ಹರಿಕಾರ ಚೌಧರಿ ಚರಣ್ ಸಿಂಗ್ ‘ಕೃಷಿ ಈ ದೇಶದ ಉಸಿರು’ ಎಂದರು. ಆದರೆ ಈ ದೇಶವನ್ನು ಆರು ದಶಕಗಳಿಗೂ ಹೆಚ್ಚಿನ ಅವಧಿ ಆಳಿದ ಕಾಂಗ್ರೆಸ್ ರೈತನ ಬೆನ್ನಲುಬನ್ನು ಇನ್ನಷ್ಟು ಬಾಗಿಸಿತೇ ಹೊರತು ರೈತ ತಲೆ ಎತ್ತಿ ನಿಲ್ಲುವಂತೆ ಮಾಡಲು ಎಂದಿಗೂ ಪ್ರಾಮಾಣಿಕ ಪ್ರಯತ್ನ ಮಾಡಲೇ ಇಲ್ಲ. ಕೃಷಿಯ ಹಸಿರು ಪಸರಿಸಿ ಹಸನಾದ ಭಾರತ ನಿರ್ವಣದ ಕ್ರಾಂತಿ ಸ್ವರೂಪದ ಯಾವ ಯೋಜನೆಯನ್ನೂ ರೂಪಿಸಲಿಲ್ಲ.

    ಸದಾ ಕೃಷಿಕವರ್ಗದ ಪರ ಚಿಂತಿಸುತ್ತಿದ್ದ ದಿ. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ರೈತಪರ ನೀತಿಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಮತ್ತು ಭಾರತ ಜಗತ್ತಿನ ಮುಂದೆ ತಲೆ ಎತ್ತಿ ನಿಲ್ಲಬೇಕಾದರೆ ರೈತ ಕೃಷಿಉದ್ಯಮಿ ಎಂದು ಕರೆಸಿಕೊಳ್ಳಬೇಕೆಂಬ ಅಚಲ ನಿರ್ಧಾರದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಹೊಸ ಕೃಷಿ ಕಾನೂನುಗಳನ್ನು ತಂದಿದೆ. ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಟ್ಟದ ಬೆಲೆ ದೊರಕಿಸಿಕೊಡಬೇಕೆಂಬ ಪ್ರಾಮಾಣಿಕ ಪ್ರಯತ್ನದಿಂದ ಕೃಷಿಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತರುವ ದೃಢ ನಿರ್ಧಾರ ಕೈಗೊಂಡು ಅದನ್ನು ಅನುಷ್ಠಾನಗೊಳಿಸಿದೆ.

    ‘ಕೃಷಿ ಕ್ಷೇತ್ರಕ್ಕೆ ಸಂಬಂಧಿತ ನೂತನ ತಿದ್ದುಪಡಿ ಕಾಯ್ದೆ ವ್ಯಕ್ತಿಗತ ಪ್ರತಿಷ್ಠೆಯದಲ್ಲ, ಈ ನೆಲದ ಮಣ್ಣಿನ ಮಕ್ಕಳ ಹಿತಕಾಯುವ ಪ್ರಾಮಾಣಿಕ ಕಾಳಜಿ ಅದರಲ್ಲಿ ಅಡಗಿದೆ’ ಎಂಬುದನ್ನು ಪ್ರಧಾನಿಗಳೇ ವಿವರಿಸಿ ಹೇಳಿದ್ದಾರೆ. ‘ಈ ದೇಶದ ರೈತನ ಭವಿಷ್ಯ ಉಜ್ವಲವಾದರೆ ಮಾತ್ರ ಭಾರತ ಪ್ರಜ್ವಲಿಸಲಿದೆ ಎಂಬ ಸತ್ಯದ ಅರಿವಿನ ಹಿನ್ನೆಲೆಯಲ್ಲಿ ಕೃಷಿ ನೀತಿ ರೂಪಿಸಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮನವರಿಕೆ ಮಾಡುತ್ತಲೇ ಇದ್ದಾರೆ. ಇದನ್ನು ನಿಷ್ಪಲಗೊಳಿಸಬೇಕೆಂಬ ಹುನ್ನಾರದ ರಾಜಕಾರಣ ಮುಗ್ಧ ರೈತರನ್ನು ಗೊಂದಲಕ್ಕೆ ಸಿಲುಕಿಸುವುದಕ್ಕೆ ಯತ್ನಿಸುತ್ತಲೇ ಇದೆ.

    ಆಧುನಿಕತೆ, ನಮ್ಮ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ನುಂಗಿ ಹಾಕುತ್ತಿದೆ, ಇಂಥ ಸಂದರ್ಭದಲ್ಲಿ ತಾಂತ್ರಿಕತೆಯನ್ನು ಬಳಸಿಕೊಂಡು ಕೃಷಿ ಕ್ಷೇತ್ರಕ್ಕೆ ಹೊಸ ಆಯಾಮ ನೀಡಬೇಕು, ಅಂತೆಯೇ ಕೆಲವು ತುಕ್ಕು ಹಿಡಿದ ಕಾನೂನು ಹಾಗೂ ನಿಯಮಾವಳಿಗಳಿಗೆ ಸಂವಿಧಾನದ ಆಶಯಕ್ಕೆ ಚ್ಯುತಿ ಬಾರದಂತೆ ಪುನರ್ ತಿದ್ದುಪಡಿ ತರುವ ಮೂಲಕ ಈ ದೇಶವನ್ನು ಕಟ್ಟಲೇಬೇಕಾದ ಅನಿವಾರ್ಯತೆಯಿದೆ, ಇದನ್ನೇ ಪ್ರಧಾನಿ ಪ್ರತಿಪಾದಿಸುತ್ತಿದ್ದಾರೆ.

    ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ನವೀನರೀತಿಯ ಕೃಷಿಪದ್ಧತಿಯನ್ನು ಅಳವಡಿಸಿಕೊಳ್ಳಲು ಯಾವ ಕ್ರಾಂತಿಕಾರಿ ಯೋಜನೆ ರೂಪಿಸಿಕೊಟ್ಟಿತು ಎಂಬುದನ್ನು ಜನರಿಗೆ ಹೇಳಬೇಕಿದೆ. ಇವತ್ತಿಗೂ ಪಂಜಾಬ್​ನಂಥ ರಾಜ್ಯದಲ್ಲಿ ಭತ್ತದ ಬೆಳೆ ಎಷ್ಟು ಹಾಳಾಗುತ್ತಿದೆ, ಅಂತೆಯೇ ವೈಜ್ಞಾನಿಕ ಮಾರ್ಗದರ್ಶನವಿಲ್ಲದೆ ರೈತ ಬೆಳೆದ ಬೆಳೆ ರಸ್ತೆಗೆ ಬಿಸಾಡಿದ ದೃಶ್ಯಗಳು ಸರ್ವೇಸಾಮಾನ್ಯವೆನಿಸಿವೆ. ಕೃಷಿ ಉತ್ಪನ್ನಗಳನ್ನು ಶೇಖರಿಸುವ ದಾಸ್ತಾನು ಕೇಂದ್ರಗಳು ಕಾಂಗ್ರೆಸಿಗರ ಆಡಳಿತದಲ್ಲಿ ಎಷ್ಟೆಷ್ಟು, ಎಲ್ಲೆಲ್ಲಿ ಸ್ಥಾಪಿಸಲ್ಪಟ್ಟಿವೆ ಎಂಬ ಅಂಕಿ-ಅಂಶ ಜನರ ಮುಂದಿಡಲಿ. ರೈತರನ್ನು ಇಂದಿಗೂ ಸರ್ಕಾರದ ಮುಂದೆ ಅಂಗಲಾಚುವ ಪರಿಸ್ಥಿತಿಯಲ್ಲೇ ಇರಿಸಬೇಕು ಎಂಬುದು ಕಾಂಗ್ರೆಸಿಗರ ಹೆಬ್ಬಯಕೆಯಂತೆ ಕಾಣುತ್ತಿದೆ.

    ರಫ್ತುಕ್ಷೇತ್ರದಲ್ಲಿ ‘ಕೃಷಿ’ ತನ್ನ ವ್ಯಾಪ್ತಿಯನ್ನು ಜಾಗತಿಕವಾಗಿ ವಿಸ್ತರಿಸಿಕೊಳ್ಳಲು ವಿಪುಲ ಅವಕಾಶಗಳಿತ್ತು, ಈ ನಿಟ್ಟಿನಲ್ಲಿ ಪ್ರಾಮಾಣಿಕವಾದ ಪ್ರಯತ್ನ ನಡೆದಿದ್ದರೆ ಭಾರತದ ರೈತರು ವಿಶ್ವಮಟ್ಟದಲ್ಲಿ ತಲೆಯೆತ್ತಿ ನಿಲ್ಲುವಂತಾಗುತ್ತಿತ್ತು. ಆದರೆ ಇಂಥ ಯಾವ ಪ್ರಯತ್ನವನ್ನೂ ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಮಾಡಲೇ ಇಲ್ಲ. ಬೆಂಬಲ ಬೆಲೆ, ಸಬ್ಸಿಡಿ, ಬಡ್ಡಿ, ಸಾಲಮನ್ನಾ ಸದಾ ರೈತನ ಹೆಸರಿನೊಂದಿಗೆ ತಗುಲಿಕೊಂಡೇ ಇರಬೇಕು, ಆ ಮೂಲಕ ಮತಬ್ಯಾಂಕ್ ಅಸ್ಥಿರಗೊಳ್ಳದಂತೆ ಎಚ್ಚರವಹಿಸಬೇಕೆಂಬುದೇ ರಾಜಕೀಯ ವಿರೋಧಿಗಳ ಪಿತೂರಿಯಾಗಿದೆ.

    ಹಸನಾಗಿಸುವ ಹಾದಿಯಲ್ಲಿ ಮುಳ್ಳು ಚೆಲ್ಲುವುದೇಕೆ?; ಬಿ.ವೈ.ವಿಜಯೇಂದ್ರರ ಲೇಖನ

    ಬಂಡವಾಳಶಾಹಿಗಳ ಏಜೆಂಟರಂತೆ, ಮಧ್ಯವರ್ತಿ, ದಲ್ಲಾಳಿಗಳ ರಕ್ಷಕರಂತೆ ಕಾಂಗ್ರೆಸ್ ನಡೆದುಕೊಂಡು ಬಂದಿದೆಯೇ ಹೊರತು ಅದು ಎಂದಿಗೂ ರೈತಪರ, ಬಡವರ ಪರ, ಶೋಷಿತರಪರ ಸುಧಾರಿತ ಯೋಜನೆಗಳ ಕಡೆ ಗಮನ ಹರಿಸಲೇ ಇಲ್ಲ. ಇದಕ್ಕೆ ಕಾರಣವೇ ಮತಬ್ಯಾಂಕ್ ರಾಜಕಾರಣ ಎಂಬುದು ದೇಶದ ಜನತೆಗೆ ತಿಳಿದೇ ಇದೆ. ಈ ಕಾರಣಕ್ಕಾಗಿಯೇ ಇಂದು ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿಗೆ ತಲುಪಿದೆ. ಇಷ್ಟಾದರೂ ಅದು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸಿಗರ ದ್ವಂದ್ವ ನಿಲುವು ಹೇಗಿದೆ ನೊಡಿ. ಇತ್ತೀಚೆಗೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವ ಭರದಲ್ಲಿ, ಈ ಹಿಂದೆ ಅವರು ಅಧಿಕಾರದಲ್ಲಿದ್ದಾಗ ಸಹಕಾರ ಇಲಾಖೆ ಕಾರ್ಯದರ್ಶಿಗೆ ಬರೆದಿದ್ದ ಪತ್ರದಲ್ಲಿ, ‘ತರಕಾರಿ, ಹಣ್ಣು ಪದಾರ್ಥಗಳನ್ನು ಮಾರಾಟ ಮಾಡುವ ಹಕ್ಕು ರೈತನದಾಗಬೇಕು, ಎಪಿಎಂಸಿ ಬಿಗಿಮುಷ್ಠಿಯಿಂದ ಇದಕ್ಕೆ ಬಿಡುಗಡೆ ಮಾಡಬೇಕು’ ಎಂಬ ಅಂಶ ಬಯಲಾಗಿ ವಿಚಲಿತಗೊಂಡ ಪರಿಸ್ಥಿತಿ ಅವರ ಇಬ್ಬಂದಿ ನೀತಿಗೆ ಕನ್ನಡಿ ಹಿಡಿದಂತಾಗಿತ್ತು.

    ಕಾಂಗ್ರೆಸ್ 2019ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆಯನ್ನು ರದ್ದುಗೊಳಿಸುವುದಾಗಿ ಘೊಷಿಸಿದ್ದನ್ನು, ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ರೈತರಿಗೆ ಮುಕ್ತ ಮಾರುಕಟ್ಟೆ ಕಲ್ಪಿಸಬೇಕೆಂದು ಹೇಳಿದ್ದನ್ನು ಮರೆತಂತೆ ವರ್ತಿಸುತ್ತಿದೆ. ಆದರೆ ಜನ ಇದನ್ನು ಮರೆತಿಲ್ಲ ಎಂಬುದು ಕಾಂಗ್ರೆಸಿಗರಿಗೆ ತಿಳಿದಿರಲಿ. ರೈತನಾಯಕನೆಂದು ಕರೆಸಿಕೊಂಡವರೊಬ್ಬರು ಈ ರಾಜ್ಯದ ಮುಖ್ಯಮಂತ್ರಿಯಾದ ಉದಾಹರಣೆ ಇದ್ದರೆ ಅದು ಯಡಿಯೂರಪ್ಪನವರು ಮಾತ್ರ. ಕೃಷಿ ಬಜೆಟ್ ಮಂಡಿಸುವ ಮೂಲಕ ‘ಸರ್ಕಾರದ ಮೊದಲ ಆದ್ಯತೆ ಕೃಷಿ ಹಾಗೂ ರೈತರು’ ಎಂದು ದೇಶದ ಕೃಷಿವಲಯಕ್ಕೆ ಉತ್ತೇಜಿತ ಸಂದೇಶ ರವಾನಿಸಿದರು. ನೀರಾವರಿ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್ ಪೂರೈಸುವ ಉದಾರತೆ ಪ್ರದರ್ಶಿಸಿದರು. ಹಾಗೆಯೇ ಬೆಳೆದ ಬೆಳೆಗಳಿಗೆ ಬೆಲೆದಕ್ಕದ ಸಮಯದಲ್ಲಿ ರೈತ ಸಂತೃಪ್ತಿ ಹೊಂದುವಷ್ಟು ಬೆಂಬಲಬೆಲೆ ಘೊಷಿಸಿದ್ದು ಸಹ ಯಡಿಯೂರಪ್ಪನವರೇ, ಇಂಥ ರೈತಪರ ಕಾಳಜಿ ಪ್ರದರ್ಶಿಸಿದ ಉದಾರಣೆಯನ್ನು ಕಾಂಗ್ರೆಸಿಗರು ಉಲ್ಲೇಖಿಸಿ ಹೇಳಬಲ್ಲರೇ?

    ವಾಜಪೇಯಿ ಕಾಲದಲ್ಲಿ ಗ್ರಾಮೀಣ ಪ್ರದೇಶ ಗಳಲ್ಲಿ ನಗರಪ್ರದೇಶಗಳನ್ನು ನಾಚಿಸುವಂತೆ ಸುಧಾರಣೆ ಗಳಾದವು, ‘ನಮ್ಮ ಹಳ್ಳಿ ನಮ್ಮ ಹೆಮ್ಮೆ’ ಎಂದು ಗ್ರಾಮೀಣ ಜನರು ಬೀಗುವಂತಾಯಿತು. ಇದೇ ಸಂಕಲ್ಪದೊಂದಿಗೆ ಮುನ್ನಡೆದಿರುವ ಈಗಿನ ಪ್ರಧಾನಿ ಗ್ರಾಮೀಣ ಪ್ರದೇಶದ ಜನರ ಬೆವರಹನಿ ನಿರರ್ಥಕವಾಗಬಾರದು, ಅದು ಸಾಫಲ್ಯ ಸಾಧನೆಯಾಗಬೇಕೆಂದು ಸಂಕಲ್ಪ ತೊಟ್ಟಿದ್ದಾರೆ. ಅನ್ನದಾತನ ಶ್ರಮದ ಕೃಷಿ, ಉತ್ಪನ್ನದ ಘನತೆ ಕುಗ್ಗಬಾರದು, ರೈತ ಬೆವರಿನಿಂದ ಬಂದ ಬಂಗಾರದ ಮನುಷ್ಯನಾಗಿ ಹೊರಹೊಮ್ಮಬೇಕು. ದೇಶೀಯ ಮಾರುಕಟ್ಟೆಯಲ್ಲಿ ಕೃಷಿಕನೂ ಬದುಕಬೇಕು, ಗ್ರಾಹಕನೂ ಉಸಿರಾಡಬೇಕು. ಬೆವರ ಬೆಲೆ ತಿಳಿಯದ ಮಧ್ಯವರ್ತಿಗಳ ಕೈಗೆ ಇವರಿಬ್ಬರ ಹಿತಾಸಕ್ತಿಯ ಅಸ್ತ್ರ ಸಿಲುಕಬಾರದು. ಅಂತೆಯೇ ಜಾಗತಿಕ ಮಾರುಕಟ್ಟೆಯಲ್ಲಿ ‘ಭಾರತದ ಬೆಳೆಗಳಿಗೆ ಬಂಗಾರದ ಬೆಲೆ’ ದೊರಕುವ ರಫ್ತುನೀತಿ ರೂಪಿಸಬೇಕೆಂಬುದೇ ನೂತನ ಕೃಷಿಕಾಯ್ದೆಯ ಮೂಲ ಉದ್ದೇಶ ಮತ್ತು ಗುರಿಯಾಗಿದೆ. ಪಂಜಾಬ್, ಹರ್ಯಾಣದಲ್ಲಿನ ಮಧ್ಯವರ್ತಿಗಳ ಕುಮ್ಮಕ್ಕಿನಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಚಳವಳಿಯ ಹಿಂದೆ ಅಪಪ್ರಚಾರದ ಪ್ರಚೋದನೆ ಮೂಲಕ ವಿರೋಧ ಪಕ್ಷಗಳು ಬೆನ್ನಲುಬಾಗಿ ನಿಂತಿರುವುದು ಬಹಿರಂಗ ಗುಟ್ಟಾಗಿದೆ. ರೈತರಲ್ಲಿ ಅನುಮಾನ ಹುಟ್ಟುಹಾಕಿರುವ ಪ್ರಶ್ನೆಗಳನ್ನು ಪರಿಹರಿಸಲು ಸ್ವತಃ ಗೃಹಮಂತ್ರಿ ಅಮಿತ್ ಷಾ ಅವರೇ ಮುಂದಾಗಿದ್ದಾರೆ. ಅವಶ್ಯವಿರುವ ತಿದ್ದುಪಡಿಗಳಿಗೂ ಕೇಂದ್ರದ ಒಪ್ಪಿಗೆ ಸೂಚಿಸಿದ್ದಾರೆ, ಆದಾಗ್ಯೂ ಕೆಲವು ಆಸಕ್ತ ಹಿತಾಸಕ್ತಿಗಳು ರೈತರಲ್ಲಿನ ಕಳವಳ ದೂರವಾಗದಂತೆ ತಡೆಯುತ್ತಿದ್ದಾರೆ.

    ಹಿಂದೊಮ್ಮೆ ಕಾಳಸಂತೆಕೋರರ ಲಾಬಿಗೆ ಸಿಲುಕಿದ ಈರುಳ್ಳಿ, ದೆಹಲಿಯಲ್ಲಿ ಗ್ರಾಹಕರಿಗೆ ಕಣ್ಣೀರು ತರಿಸಿದರೆ, ಈರುಳ್ಳಿ ಬೆಳೆಯ ನಿಜ ಹಕ್ಕುದಾರ ರೈತ ಶೋಷಣೆಯ ಕಬಂಧಬಾಹುವಿಗೆ ಸಿಲುಕುವಂತಾಯಿತು. ಜನಪರ ಆಡಳಿತ ನಡೆಸುತ್ತಿದ್ದ ಸುಷ್ಮಾ ಸ್ವರಾಜ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಳ್ಳುವಂತಾಯಿತು. ಆದರೆ ಸರ್ಕಾರಗಳ ಅಸ್ತಿತ್ವಕ್ಕಿಂತ ಈ ದೇಶ, ಜನ, ರೈತರು, ಬಡವರು, ಕೂಲಿಕಾರ್ವಿುಕರು, ಶೋಷಿತರ ಹಿತವೇ ತನ್ನ ಪರಮ ಆದ್ಯತೆ ಎಂದು ಭಾವಿಸಿರುವ ಬಿಜೆಪಿ, ದೇಶದ ಒಟ್ಟಾರೆ ಹಿತಾಸಕ್ತಿಯೊಂದಿಗೆ ಎಂದೂ ರಾಜಿ ಮಾಡಿಕೊಂಡಿಲ್ಲ. ಭಾರತದ ಸಾರ್ವಭೌಮತೆಯ ಘನತೆ ಕುಗ್ಗಲು ಅವಕಾಶ ಮಾಡಿಕೊಟ್ಟಿಲ್ಲ. ಆ ಕಾರಣಕ್ಕಾಗಿಯೇ ನರೇಂದ್ರ ಮೋದಿ ಭಾರತೀಯರ ನೆಚ್ಚಿನ ಪ್ರಧಾನಿಯಾಗಿದ್ದಾರೆ. ಚೀನಾ ಸೇರಿ ಇತರ ರಾಷ್ಟ್ರಗಳ ಉತ್ಪನ್ನಗಳ ಆಕ್ರಮಣವನ್ನು ಹಿಮ್ಮೆಟ್ಟಿಸಿ ಈ ನೆಲದ ಪ್ರತಿಯೊಬ್ಬರ ಶ್ರಮ ಸಾರ್ಥಕಗೊಳಿಸಿ ಬಲಿಷ್ಠ ರಾಷ್ಟ್ರ ಕಟ್ಟುವ ನಿಟ್ಟಿನ ಸ್ವಾವಲಂಬಿ ಭಾರತ ನಿರ್ವಣಕ್ಕಾಗಿ ಸಂಕಲ್ಪ ತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅವರೊಂದಿಗೆ ಹೆಜ್ಜೆಯಿಡಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಕೃಷಿ ಹಾಗೂ ಭೂಸುಧಾರಣಾ ತಿದ್ದುಪಡಿ ಕಾಯ್ದೆಗಳಿಗೆ ರಾಜ್ಯದ ಉಭಯ ಸದನಗಳಲ್ಲೂ ಅಂಗೀಕಾರದ ಮುದ್ರೆ ದೊರಕಿಸಿಕೊಡುವುದರೊಂದಿಗೆ ರೈತಪರ ದನಿಯಾಗುವ ‘ಭೂವಿಜಯ’ ಸಾಧಿಸಿ ಪ್ರಧಾನಿಗೆ ಬಳುವಳಿ ಸಮರ್ಪಿಸಿದ್ದಾರೆ.

    (ಲೇಖಕರು ರಾಜ್ಯ ಬಿಜೆಪಿ ಉಪಾಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts