More

    ನೀರು, ಆಹಾರಕ್ಕಾಗಿ ಪ್ರಾಣಿಗಳ ಅಲೆದಾಟ

    ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
    ದಿನದಿಂದ ದಿನಕ್ಕೆ ಬಿಸಿಲ ಬೇಗೆ ಹೆಚ್ಚುತ್ತಿದೆ. ಹಳ್ಳ- ಕೊಳ್ಳ, ಕೃಷಿ ಹೊಂಡಗಳು ಬತ್ತುತ್ತಿವೆ. ಹಸಿರು ಕ್ರಮೇಣ ಮಾಯವಾಗುತ್ತಿದೆ. ಅಡವಿಯಲ್ಲಿನ ಪ್ರಾಣಿ ಪಕ್ಷಿಗಳು ಬಿಸಿಲಿನ ಝುಳಕ್ಕೆ ನೀರು, ಆಹಾರಕ್ಕಾಗಿ ಪರಿತಪಿಸುವಂತಾಗಿದೆ. ಊರು ಬಿಟ್ಟು ಅಡವಿಗಳಲ್ಲಿಯೇ ಬೀಡುಬಿಡುವ ಕುರಿಗಾಹಿಗಳ ಬದುಕು ಸಂಕಷ್ಟಕ್ಕೀಡಾಗಿದೆ.
    ನರೇಗಲ್ಲ ಹೋಬಳಿಯ ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ದ್ಯಾಂಪೂರ, ಮಲ್ಲಾಪೂರ, ಬೂದಿಹಾಳ, ಜಕ್ಕಲಿ, ಮಾರನಬಸರಿ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪೂರ, ಹೊಸಳ್ಳಿ, ಅಬ್ಬಿಗೇರಿ, ಕುರಡಗಿ, ಯರೇಬೇಲೇರಿ, ಡ.ಸ. ಹಡಗಲಿ, ನಾಗರಾಳ, ಸೇರಿ ಸುತ್ತಲಿನ ಗ್ರಾಮಗಳ ಕುರಿಗಾರರು ಮೈಲುಗಟ್ಟಲೆ ಕ್ರಮಿಸಿದರೂ ಕುರಿಗಳ ಹೊಟ್ಟೆಗೆ ಸಾಕಷ್ಟು ಆಹಾರ ಮತ್ತು ನೀರು ಸಿಗುತ್ತಿಲ್ಲ. ಇದರಿಂದಾಗಿ ಕುರಿಗಾರರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕುರಿಗಳು ಹಸಿರು ಮೇವಿಲ್ಲದೆ ಒಣ ಮುಳ್ಳುಕಂಟಿಗಳನ್ನು ತಿಂದು ಬದುಕುವಂತಾಗಿದೆ.

    ಕೈಹಿಡಿಯದ ಕೃಷಿ ಹೊಂಡಗಳು: ಈ ಹಿಂದೆ ಬೇಸಿಗೆಯ ಸಮಯದಲ್ಲಿ ಕುರಿಗಳು ಮತ್ತು ಅಡವಿಯಲ್ಲಿನ ಪ್ರಾಣಿ ಪಕ್ಷಿಗಳಿಗೆ ಆಶ್ರಯವಾಗಿದ್ದ ಕೃಷಿ ಹೊಂಡಗಳು ಬಹುತೇಕ ಹೂಳು ತುಂಬಿಕೊಂಡು ಮುಚ್ಚಿ ಹೋಗುವ ಹಂತ ತಲುಪಿವೆ. ಅಡವಿಯಲ್ಲಿನ ಪ್ರಮುಖ ಜಲಮೂಲಗಳು ಬಿಸಿಲಿನ ತಾಪಕ್ಕೆ ಸಂಪೂರ್ಣ ಬತ್ತಿವೆ. ಸ್ಥಗಿತಗೊಂಡಿರುವ ಕೃಷಿ ಹೊಂಡ ಯೋಜನೆಯನ್ನು ಮರು ಪ್ರಾರಂಭಿಸಬೇಕು ಹಾಗೂ ಹೂಳು ತುಂಬಿರುವ ಕೃಷಿ ಹೊಂಡಗಳ ಅಭಿವೃದ್ಧಿಗೆ ಕೃಷಿ ಇಲಾಖೆ ಮುಂದಾಗಬೇಕು ಎಂದು ರೈತರು ಹಾಗೂ ಕುರಿಗಾರರು ಆಗ್ರಹಿಸಿದ್ದಾರೆ.


    ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಕುರಿಗಳಲ್ಲಿ ಕುರಿ ಮೈಲಿ, ಕರಳು ಬೇನೆಯಂತಹ ರೋಗಗಳು ಹೆಚ್ಚಾಗಿ ಕಾಣಿಸುತ್ತವೆ. ನರೇಗಲ್ಲನ ಪಶು ಆಸ್ಪತ್ರೆಯಲ್ಲಿ ಎರಡೂ ರೋಗಗಳ ಚುಚ್ಚುಮದ್ದು ದಾಸ್ತಾನಿದೆ. ಮುಂಜಾಗ್ರತಾ ಕ್ರಮವಾಗಿ ಕುರಿಗಾರರು ಕುರಿಗಳಿಗೆ ಲಸಿಕೆ ಹಾಕಿಸಬೇಕು. | ಡಾ. ಲಿಂಗಯ್ಯ ಗೌರಿ ಪಶು ವೈದ್ಯಾಧಿಕಾರಿಗಳು ನರೇಗಲ್ಲ


    ಅಡವಿಯಲ್ಲಿ ನೀರಿನ ಕೊರತೆ ಸಾಕಷ್ಟಿದೆ. ನೀರು ಮತ್ತು ಆಹಾರಕ್ಕಾಗಿ ನಿತ್ಯ ಅಲೆದಾಟ ಅನಿವಾರ್ಯವಾಗಿದೆ. ಕೃಷಿ ಹೊಂಡಗಳು ಸಾಕಷ್ಟು ಸಹಾಯಕವಾಗಿದ್ದವು. ಅವುಗಳು ಬಹುತೇಕ ಮುಚ್ಚುವ ಹಂತ ತಲುಪಿವೆ. ಹೀಗಾಗಿ ಕುರಿಗಳಿಗೆ ನೀರು ಮತ್ತು ಆಹಾರದ ಕೊರತೆ ಎದುರಾಗಿದೆ. ಮಳೆಯಾಗುವ ತನಕ ಇದೇ ಪರಿಸ್ಥಿತಿ ಇರಲಿದೆ. ಆದ್ದರಿಂದ, ಸರ್ಕಾರ ಕೃಷಿ ಹೊಂಡಗಳ ನಿರ್ವಣಕ್ಕೆ ಮುಂದಾಗಬೇಕು. | ಶರಣಪ್ಪ ಜೋಗಿ, ಕಳಕಪ್ಪ ಅಬ್ಬಿಗೇರಿ ಕುರಿಗಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts