More

  ‘ಅಂಗಡಿ’ ಇಲ್ಲದ ಮನೆಯಲ್ಲಿ ನೀರವ ಮೌನ..

  ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದಾಗಿ ಹುಟ್ಟೂರು ಕೆ.ಕೆ.ಕೊಪ್ಪ ಗ್ರಾಮ ಮತ್ತು ಬೆಳಗಾವಿ ವಿಶ್ವೇಶ್ವರಯ್ಯ ನಗರದ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ದಿ.ಸುರೇಶ ಅಂಗಡಿ ಅವರ ಸ್ವಗೃಹದಲ್ಲಿ ಕುಟುಂಬಸ್ಥರ ಉಪಸ್ಥಿತಿಯಲ್ಲಿ ಶುಕ್ರವಾರ ಮೂರನೇ ದಿನದ ಶಿವಗಣಾರಾಧನೆ ನಡೆಯಿತು.

  ದಿ.ಸುರೇಶ ಅಂಗಡಿ ತಾಯಿ ಸೋಮವ್ವ, ಪತ್ನಿ ಮಂಗಲಾ ಅಂಗಡಿ, ಪುತ್ರಿಯರಾದ ಸ್ಫೂರ್ತಿ, ಶ್ರದ್ಧಾ, ಮೊಮ್ಮಗಳು, ಅಳಿಯಂದಿರು, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮತ್ತು ಅವರ ಕುಟುಂಬ ಸದಸ್ಯರು, ಶಾಸಕ ಅನಿಲ ಬೆನಕೆ, ಜಿಪಂ, ತಾಪಂ ಸದಸ್ಯರು, ಪಾಲಿಕೆಯ ಮಾಜಿ ಸದಸ್ಯರು ಹಾಗೂ ವಿವಿಧ ಕಡೆಗಳಿಂದ ಆಗಮಿಸಿದ್ದ ಅಭಿಮಾನಿಗಳು, ರಾಜಕೀಯ ಮುಖಂಡರು, ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು ಸಚಿವ ಸುರೇಶ ಅವರ ಭಾವಚಿತ್ರಕ್ಕೆ ನಮಸ್ಕರಿಸಿ ಗೌರವ ಸಲ್ಲಿಸಿದರು.

  ಸ್ಮಾರಕ ಸ್ಥಾಪನೆಗೆ ಚರ್ಚಿಸಿ ನಿರ್ಧಾರ: ಈ ಸಂದರ್ಭದಲ್ಲಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸುರೇಶ ಅಂಗಡಿ ಅವರ ಸ್ಮಾರಕ ಸ್ಥಾಪನೆ ವಿಚಾರವಾಗಿ ಇಲ್ಲಿನ ಜನಪ್ರತಿನಿಧಿಗಳು, ಅಭಿಮಾನಿಗಳು ಹಾಗೂ ಕುಟುಂಬಸ್ಥರ ಜತೆಗೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗುವುದು. ಜನರ ಮನಸ್ಸಲ್ಲಿ ಹಾಗೂ ಎಲ್ಲ ಅಭಿಮಾನಿಗಳಲ್ಲೂ ಸುರೇಶ ಅಂಗಡಿ ಅವರ ಸ್ಮಾರಕ ಸ್ಥಾಪನೆ ಮಾಡಬೇಕೆಂಬ ಒಲವು ಇದೆ ಎಂದರು.

  ನಂಬಲಾಗುತ್ತಿಲ್ಲ: ಸುರೇಶ ಅವರ ಸರಳ, ಸಜ್ಜನಿಕೆ ಎಲ್ಲರಿಗೂ ಆದರ್ಶ ವಾಗಲಿ. ಅವರಂತೆ ಸನ್ಮಾರ್ಗದಲ್ಲಿ ನಡೆಯೋಣ. ಅದೇ ಅವರ ಆತ್ಮಕ್ಕೆ ಕೊಡುವ ಶ್ರದ್ಧಾಂಜಲಿ. ಅವರು ನಮ್ಮ ಮಧ್ಯೆ ಇಲ್ಲದಿರುವುದು ನಂಬಲೂ ಆಗುತ್ತಿಲ್ಲ. ತುಂಬಾ ಆಘಾತಕಾರಿ ಸಂಗತಿ. ಅವರು ಈ ಕರೊನಾ ವೈರಸ್‌ಗೆ ಬಲಿಯಾಗುತ್ತಾರೆ ಎಂದು ಊಹಿಸಲು ಸಾಧ್ಯವಿ ರಲಿಲ್ಲ. ಎಲ್ಲ ರೀತಿ ಪ್ರಯತ್ನ ನಡೆದರೂ ಸಹ ಅವರು ಆರೋಗ್ಯದಿಂದ ಮರಳಿ ಬರಲು ಆಗಲಿಲ್ಲ ಎಂದು ಶೆಟ್ಟರ್ ದುಃಖಿಸಿದರು.

  See also  ರಾಜ್ಯ ಸರ್ಕಾರ ನೇಕಾರರ ಬೇಡಿಕೆ ಈಡೇರಿಸಲಿ

  ನಾನು ಹಾಗೂ ಸುರೇಶ ಅವರು ಸಂಬಂಧಿಕರಾಗುವ ಮುನ್ನ ನಾನು ವಿರೋಧ ಪಕ್ಷದ ನಾಯಕನಾಗಿದ್ದೆ. ಆ ಸಂದರ್ಭದಲ್ಲಿ ಪಕ್ಷ ಸಂಘಟನೆಗೆ ಬೆಳಗಾವಿಗೆ ಬಂದಾಗ ಪ್ರತಿಯೊಂದು ಹಳ್ಳಿ ಹಳ್ಳಿಗೂ ನಾವಿಬ್ಬರು ಪ್ರವಾಸ ಮಾಡಿದ್ದೆವು. ತಾಪಂ, ಜಿಪಂ ಚುನಾವಣೆ, ಪಕ್ಷ ಸಂಘಟನೆಗೆ ನನ್ನ ಜತೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದರು. ಹೀಗಾಗಿಯೇ ಬೆಳಗಾವಿಯಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗೆಲ್ಲಿಸಿಕೊಡುವಲ್ಲಿ ಕಾರಣರಾಗಿದ್ದರು ಎಂದು ಅಂಗಡಿಯವರೊಂದಿಗಿನ ಒಡನಾಟವನ್ನು ಜಗದೀಶ ಶೆಟ್ಟರ್ ನೆನಪಿಸಿಕೊಂಡರು.

  ಯಜಮಾನ್ರು ಇಲ್ಲದೆ ಮನೆಗೆ ಹೇಗೆ ಹೋಗಲಿ..?

  ದೆಹಲಿಯ ದ್ವಾರಕಾ ಸೆಕ್ಟರ್‌ನ ವೀರಶೈವ- ಲಿಂಗಾಯತ ರುದ್ರಭೂಮಿಯಲ್ಲಿ ಗುರುವಾರ ಸುರೇಶ ಅಂಗಡಿ ಅವರ ಅಂತ್ಯಕ್ರಿಯೆ ನೆರವೇರಿಸಿದ ಬಳಿಕ ಕುಟುಂಬ ಸದಸ್ಯರು ಶುಕ್ರವಾರ ಬೆಳಗಾವಿಯಲ್ಲಿನ ವಿಶ್ವೇಶ್ವರಯ್ಯ ನಗರದ ನಿವಾಸಕ್ಕೆ ಬರುತ್ತಿದ್ದಂತೆ ಆಕ್ರಂದನ ಮುಗಿಲುಮುಟ್ಟಿತ್ತು. ‘ಯಜಮಾನ್ರು ಇಲ್ಲದೆ ಮನೆಯೊಳಗೆ ಹೇಗೆ ಹೋಗಲಿ..? ಅತ್ತೆಗೆ ಏನಂತ ಸಮಾಧಾನ ಪಡಿಸಲಿ..? ದೆಹಲಿಯಿಂದ ಬರಿಗೈಯ್ಯಲ್ಲಿ ಬಂದೆಯಾ ಅಂತ ಕೇಳಿದರೆ ಏನು ಹೇಳಲಿ..?’ ಎನ್ನುತ್ತ ದಿ.ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರು ಮನೆಯ ಬಾಗಿಲಲ್ಲಿ ನಿಂತು ಬಿಕ್ಕಿಬಿಕ್ಕಿ ಅಳುತ್ತಿದ್ದರು. ಇತ್ತ ವಿವಿಧ ಕಡೆಗಳಿಂದ ಬಂದಿದ್ದ ಸಂಬಂಧಿಕರು, ಕಚೇರಿ ಹಾಗೂ ಮನೆಯ ಸಿಬ್ಬಂದಿ, ವಾಹನ ಚಾಲಕರು ಅಂಗಡಿ ಅವರನ್ನು ನೆನೆದು ಅಳುತ್ತಿದ್ದರು.

  ದಿ.ಸುರೇಶ ಅಂಗಡಿ ಅವರೊಂದಿಗೆ ಒಡನಾಟ ತುಂಬಾ ಹಳೆಯದು. 2003ರಿಂದ ಇತ್ತೀಚಿನ ದಿನಗಳಲ್ಲಿ ತುಂಬಾ ಹತ್ತಿರವಾಗಿದ್ದರು. ಅತ್ಯಂತ ಸೌಜನ್ಯ ವ್ಯಕ್ತಿಯಾಗಿದ್ದ ಅವರನ್ನು ಕಳೆದುಕೊಂಡು ವೈಯಕ್ತಿಕವಾಗಿ ತುಂಬಾ ನೋವಾಗಿದೆ. ಪ್ರವಾಹ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯ ಜನರನ್ನು ಸ್ಥಳಾಂತರ ಮಾಡುವಾಗ ಅವರು ತುಂಬಾ ಸಹಾಯ ಮಾಡಿದ್ದರು.
  | ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts