More

    ಬಡತನ, ದಾರಿದ್ರ್ಯ, ಅನಕ್ಷರತೆ ನೀಗಿಸಿದರೆ ಉತ್ತಮ ಆರೋಗ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ

    ಬೆಂಗಳೂರು: ಬಡತನ, ದಾರಿದ್ರ್ಯ, ಅನಕ್ಷರತೆ ಹೋಗಲಾಡಿಸದೆ ಎಲ್ಲರಿಗೂ ಉತ್ತಮ ಆರೋಗ್ಯ ಸಾಧ್ಯವಿಲ್ಲ. ಈ ಮೂರು ಪಿಡುಗುಗಳಿಗೆ ಚಿಕಿತ್ಸೆ ನೀಡುವುದು ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಮನೆ ಬಾಗಿಲಿಗೇ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಬಡತನದಿಂದ ಒಳ್ಳೆಯ ಆಹಾರ ಕೊಂಡು ತಿನ್ನಲು ಸಾಧ್ಯವಿಲ್ಲ. ಅನಕ್ಷರತೆಯಿಂದ ಪೌಷ್ಟಿಕ ಆಹಾರ ಸೇವಿಸುವ ಬಗ್ಗೆ ತಿಳಿವಳಿಕೆ ಇಲ್ಲ. ಹಾಗಾಗಿ ಮೊದಲು ಇವುಗಳಿಗೆ ಚಿಕಿತ್ಸೆ ನೀಡಿ ಜನರನ್ನು ಆರ್ಥಿಕವಾಗಿ ಸಬಲಗೊಳಿಸಿದರೆ ಅವರೇ ಪೌಷ್ಟಿಕ ಆಹಾರ ಕೊಂಡು ತಿನ್ನಲು ಸಾಧ್ಯವಾಗುತ್ತದೆ ಎಂದರು.

    185.74 ಕೋಟಿ ರೂ. ಮೀಸಲು: ರೋಗಗಳು ಎರಡು ರೀತಿಯಲ್ಲಿ ಬರುತ್ತವೆ. ಒಂದು ಸಾಂಕ್ರಾಮಿಕವಾಗಿ ಹರಡಿದರೆ, ಇನ್ನೂ ಕೆಲವು ಜೀವನಶೈಲಿ ಹಾಗೂ ಆಹಾರ ಕ್ರಮದಿಂದ ಬರುತ್ತವೆ. ಇವುಗಳ ಬಗ್ಗೆ ಜನರಲ್ಲಿ ಎಚ್ಚರಿಕೆ ಹಾಗೂ ಅರಿವು ಮೂಡಿಸುವ ಅಗತ್ಯವಿದೆ. ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಉತ್ತಮ ಪೌಷ್ಟಿಕ ಆಹಾರ ಸೇವಿಸಬೇಕು. ವ್ಯಾಯಾಮ ಮಾಡಬೇಕು. ಆ ರೀತಿಯ ವಾತಾವರಣ ಸೃಷ್ಟಿಯಾದರೆ ಎಲ್ಲರೂ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

    ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದು, ಇದಕ್ಕಾಗಿ ಬಜೆಟ್‌ನಲ್ಲಿ 185.74 ಕೋಟಿ ರೂ. ಮೀಸಲಿಟ್ಟಿದೆ. ಶಾಲಾಮಕ್ಕಳಿಗೆ 10ನೇ ತರಗತಿವರೆಗೂ ವಾರದಲ್ಲಿ ಎರಡು ದಿನ ಮೊಟ್ಟೆ ಹಾಗೂ ಅದು ಬೇಡದವರಿಗೆ ಬಾಳೆ ಹಣ್ಣು ಮತ್ತು ಚಿಕ್ಕಿ ಕೊಡಲು ಸೂಚಿಸಲಾಗಿದೆ. ದೇಹದಲ್ಲಿ ಕಬ್ಬಿಣ ಅಂಶದ ಕೊರತೆಯಿಂದ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗುತ್ತಿದೆ. ಇದು ರಕ್ತಹೀನತೆಗೆ ಕಾರಣವಾಗುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.

    ಪ್ರಾಮಾಣಿಕ ಪ್ರಯತ್ನ ಮಾಡಿ: ಅನೀಮಿಯಾಮುಕ್ತ ಪೌಷ್ಟಿಕ ಕರ್ನಾಟಕ ಹೆಸರಿಗಾಗಿ ಮಾಡುವ ಕಾರ್ಯಕ್ರಮವಲ್ಲ. ಮುಂದಿನ ದಿನಗಳಲ್ಲಿ ರಾಜ್ಯ ಅನೀಮಿಯಾಮುಕ್ತವಾಗಲು ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಕ್ಷಣ ಇಲಾಖೆ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಕಾರ್ಯಕ್ರಮದ ಯಶಸ್ಸಿಗಾಗಿ ಈ ಇಲಾಖೆಗಳ ಸಚಿವರಾದಿಯಾಗಿ ಅಧಿಕಾರಿಗಳು ಹಾಗೂ ನೌಕರ ವರ್ಗ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

    ಗುಜರಾತ್‌ನ ಸೂಚ್ಯಂಕ ಏರಿಕೆ: ಅಪೌಷ್ಟಿಕತೆ ಸೂಚ್ಯಂಕದಲ್ಲಿ ಗುಜರಾತ್ ರಾಜ್ಯ ಮತ್ತು ಭಾರತದ ಸೂಚ್ಯಂಕ ಏರಿಕೆ ಆಗುತ್ತಲೇ ಇದ್ದು, ಇದಕ್ಕೆ ಕಾರಣ ಏನು ಎಂಬುದನ್ನು ತಮ್ಮನ್ನು ವಿಶ್ವಗುರು ಎಂದು ಕರೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರೇ ಉತ್ತರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದರು. ಗುಜರಾತ್ ಮಾದರಿ ಎನ್ನುವವರು ಮೇಲಕ್ಕೇರುತ್ತಿರುವ ಗುಜರಾತ್ ಪೌಷ್ಟಿಕತೆ ಸೂಚ್ಯಂಕಕ್ಕೆ ಕಾರಣ ತಿಳಿಸಬೇಕು ಎಂದ ಅವರು, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ- 4 ಮತ್ತು 5 (ಎನ್‌ಎಫ್ಎಚ್‌ಎಸ್) ಅಂಕಿಅಂಶಗಳನ್ನು ತುಲನೆ ಮಾಡಿ ಈ ಸ್ಥಿತಿಯಲ್ಲಿ ಗುಜರಾತ್ ಮಾದರಿ ರಾಜ್ಯ ಆಗಲು ಸಾಧ್ಯವೇ ಎಂದು ಜರಿದರು.

    ಅನೀಮಿಯಾಮುಕ್ತ ರಾಜ್ಯ ಸಂಕಲ್ಪ: ರಕ್ತಹೀನತೆ ಸಮಸ್ಯೆಯನ್ನು ರಾಜ್ಯ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಜನಗಾಗೃತಿ ಮೂಡಿಸಲಾಗುವುದು. ರಾಜ್ಯದಲ್ಲಿ ಐದು ವರ್ಷದೊಳಗಿನ ಶೇ. 65 ಮಕ್ಕಳು ಅನೀಮಿಯಾಗೆ ಒಳಗಾಗಿದ್ದಾರೆ. 15-49 ವರ್ಷ ವಯಸ್ಸಿನ ಮಹಿಳೆಯರು ಶೇ. 47.8 ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ 2025ರೊಳಗೆ ಅನೀಮಿಯಾಮುಕ್ತ ಪೌಷ್ಟಿಕ ಕರ್ನಾಟಕ ನಿರ್ಮಾಣದ ಸಂಕಲ್ಪ ಮಾಡಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

    ಡಿಸೆಂಬರ್ ತಿಂಗಳಲ್ಲಿ ಶಾಲಾ ಮಕ್ಕಳಿಗೆ ಉಚಿತ ಅನೀಮಿಯಾ ತಪಾಸಣೆ ಆರಂಭಿಸಲಾಗುವುದು. ಏಪ್ರಿಲ್ ಒಳಗೆ ಐದು ವರ್ಷದೊಳಗಿನ ಮಕ್ಕಳ ತಪಾಸಣೆ ಪೂರ್ಣಗೊಳಿಸಲಾಗುವುದು. 6-59 ತಿಂಗಳ 52 ಲಕ್ಷ ಮಕ್ಕಳು, 5-9 ವರ್ಷದೊಳಗಿನ 58 ಲಕ್ಷ ಮಕ್ಕಳು, 10-19 ವರ್ಷದ 127 ಲಕ್ಷ ಹದಿಹರೆಯದವರು, 12 ಲಕ್ಷ ಗರ್ಭಿಣಿಯರು ಹಾಗೂ 11 ಲಕ್ಷ ಬಾಣಂತಿಯರು, ಸಂತಾನೋತ್ಪತ್ತಿ ವಯಸ್ಸಿನ 133 ಲಕ್ಷ ಮಹಿಳೆಯರು ಸೇರಿ ಆರು ಹಂತಗಳಲ್ಲಿ ತಪಾಸಣೆ ನಡೆಸಲು ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

    ಪೌಷ್ಟಿಕ ಆಹಾರಗಳ ಪ್ರದರ್ಶನ ಹಾಗೂ ಆರೋಗ್ಯ ಕಾರ್ಯಕ್ರಮಗಳ ಲಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts