More

    ರಾಜಕೀಯದಿಂದ ಕಲುಷಿತಗೊಳ್ಳುತ್ತಿದೆ ಬರಹ ಸಂಸ್ಕೃತಿ – ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಕಳವಳ

    ವಿದ್ಯಾರಣ್ಯ ವೇದಿಕೆ ಆನೆಗೊಂದಿ: ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶದಿಂದ ಬರಹ ಸಂಸ್ಕೃತಿ ಕಲುಷಿತಗೊಳ್ಳುತ್ತಿದ್ದು, ಪಕ್ಷಾಂತರ ಒಪ್ಪುವವರು, ಮತಾಂತರ ವಿರೋಧಿಸುತ್ತಿರುವುದು ದುರಂತ ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಪ್ರತಿಕ್ರಿಯೆಸಿದರು.

    ತಾಲೂಕಿನ ಆನೆಗೊಂದಿಯ ಸ.ಪ್ರಾ.ಶಾಲೆ ಶ್ರೀವಿದ್ಯಾರಣ್ಯ ವೇದಿಕೆಯಲ್ಲಿ ಆನೆಗೊಂದಿ ಉತ್ಸವ ನಿಮಿತ್ತ ಆಯೋಜಿಸಿದ್ದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಚಾರದ ಭರಾಟೆಯಲ್ಲಿ ಅವಸರದ ಸಾಹಿತ್ಯ ಸೃಷ್ಟಿಯಾಗುತ್ತಿದೆ. ಕೂಲಿಕಾರರೂ ಜಾತಿ ಬಗ್ಗೆ ಮಾತನಾಡುವ ್ಥತಿ ನಿರ್ಮಾಣವಾಗಿದ್ದು, ಬದಲಿಸುವಂತ ಸಾಹಿತ್ಯ ರಚಿಸಬೇಕಿದೆ. ವಾಸ್ತವಿಕತೆ ಬದುಕು ಕಟ್ಟಿಕೊಡುವ ಜವಾಬ್ದಾರಿ ಕವಿಗಳ ಮೇಲಿದ್ದು, ಇದರ ಅರಿವು ಕವಿಗಳಿರಬೇಕು ಎಂದರು.

    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ, ಕಾವ್ಯ ಕವಿಯನ್ನು ಮೀರಿ ಬೆಳೆಯಬೇಕಿದ್ದು, ಕವಿತೆಗಳು ಬೆಳೆದಂತೆ ಕವಿಯೂ ಬೆಳೆಯುತ್ತಾನೆ ಎಂದರು. ಗೋಷ್ಠಿಯುದ್ದಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧದ ಕಾವ್ಯಗಳು ಪ್ರತಿಧ್ವನಿಸಿದವು. ಪಕ್ಷಾಂತರ, ಮತಾಂತರ, ದುಗುಡ, ಪ್ರಜಾಪ್ರಭುತ್ವ, ಬಡತನ, ಒಂಟಿತನ, ಬೇಗುದಿ, ಪೌರತ್ವ ಕಾಯ್ದೆ, ಕಾರ್ಮಿಕ, ರೈತ, ಬೆಲೆ ಸಮಸ್ಯ ಸಾಮರಸ್ಯದ ಜತೆಗೆ ದಾರ್ಶನಿಕರ ತತ್ವಾದರ್ಶಗಳನ್ನು ಸಮಕಾಲೀನಕ್ಕೆ ಓರೆ ಹಚ್ಚಿದ ಕಾವ್ಯಗಳ ವಾಚನವಿತ್ತು. ಹೌದು ಹುಲಿಯಾ ಕಾವ್ಯ ಮತ್ತೊಮ್ಮೆ ಗಮನಸೆಳೆದಿದ್ದು, ಪ್ರಜಾತಂತ್ರ ವ್ಯವಸ್ಥೆ ಅಣಿಕಿಸುವಂತಿತ್ತು. ಹಿರಿಯ ಕವಿಗಳಾದ ಮುನಿಯಪ್ಪ ಹುಬ್ಬಳ್ಳಿ, ವೀರಣ್ಣ ನಿಂಗೋಜಿ, ಅಕ್ಬರ್ ಕಾಲಿಮಿರ್ಚಿ, ರಮೇಶ ಗಬ್ಬೂರು, ಡಾ.ಜಾಜಿ ದೇವೆಂದ್ರಪ್ಪ, ಮನೋಹರ ಬೋಂದಾಡೆ, ಡಾ.ಶಿವಕುಮಾರ ಮಾಲಿ ಪಾಟೀಲ್, ಡಾ.ನಾರಾಯಣ ಕಂದಗಲ್, ಅಲ್ಲಾಗಿರಿರಾಜ, ಶರಣಪ್ಪ ಮೆಟ್ರಿ ಸೇರಿ 30 ಕವಿಗಳು ಕವನ ವಾಚಿಸಿದರು.

     

    ಖುರ್ಚಿಗಳು ಖಾಲಿ, ಖಾಲಿ…
    ಕವಿಗೋಷ್ಠಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಉದ್ಘಾಟಿಸಿದರು. ಉದ್ಘಾಟನೆಗೆ ಶಾಸಕ ಪರಣ್ಣ ಮುನವಳ್ಳಿ ಸಾಥ್ ನೀಡಿದರು. ಕವಿಗಳು ಕಾವ್ಯ ವಾಚಿಸಲಿ, ನಾವೂ ಮಾತನಾಡುವುದು ಬೇಡ ಎಂದು ಇಬ್ಬರೂ ವೇದಿಕೆಯಿಂದ ನಿರ್ಗಮಿಸಿದರು. ಗೋಷ್ಠಿಯುದ್ದಕ್ಕೂ ಸರ್ಕಾರ ವಿರುದ್ಧ ಕಾವ್ಯಗಳು ಪ್ರತಿಧ್ವನಿಸಿದವು. ಕವಿಗಳ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಉಳಿದವರು ಬಂದಿರಲಿಲ್ಲ. ಖುರ್ಚಿಗಳು ಖಾಲಿಯಾಗಿದ್ದವು. ಗಂಗಾವತಿಯ ಮೂಲ ಮತ್ತು ಹಿರಿಯ ಕವಿಗಳನ್ನು ಅಲಕ್ಷಿಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಸಚಿವರು, ಶಾಸಕರೊಂದಿಗೆ ವೇದಿಕೆ ಹಂಚಿಕೊಳ್ಳಲು ಇಷ್ಟಪಡದ ಗೋಷ್ಠಿಯ ಕೆಲ ಕವಿಗಳು ವೇದಿಕೆಯತ್ತ ಸುಳಿಯಲಿಲ್ಲ. ಇಬ್ಬರೂ ವೇದಿಕೆಯಿಂದ ಹೊರ ಹೋಗುತ್ತಿದ್ದಂತೆ ಆಸನ ಅಲಂಕರಿಸಿದರು.

    ರಾಜಕೀಯದಿಂದ ಕಲುಷಿತಗೊಳ್ಳುತ್ತಿದೆ ಬರಹ ಸಂಸ್ಕೃತಿ - ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಕಳವಳ

    ಇತಿಹಾಸ ಮೇಲೆ ಸಂಕಿರಣದ ಬೆಳಕು
    ಉತ್ಸವದ ಮೊದಲ ದಿನ ಆನೆಗೊಂದಿ ಇತಿಹಾಸದ ಮೇಲೆ ವಿವಿಧ ವಿಷಯಗಳ ಮೇಲಿನ ವಿಚಾರ ಸಂಕಿರಣಗಳು ಬೆಳಕು ಚೆಲ್ಲಿದವು. ವಿಜಯನಗರ ಸ್ಥಾಪನೆಯಲ್ಲಿ ಆನಗೊಂದಿ ಪಾತ್ರದ ಕುರಿತು ಇತಿಹಾಸಕಾರ ಶರಣಬಸಪ್ಪ ಕೋಲ್ಕರ್ ವಿಚಾರ ಮಂಡಿಸಿ, ಅಂದಕ್ಕೆ ಆನೆಗೊಂದಿ, ಚೆಂದಕ್ಕೆ ವಿಜಯನಗರ ಎಂಬುದು ಈ ಭಾಗದ ನಾಣ್ಣುಡಿ. ಆನೆಗೊಂದಿಯ ನಿಸರ್ಗ ತಾಣದಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆ ಮಾನವನ ಚಟುವಟಿಕೆ ಆರಂಭವಾಗಿದೆ. ಕಡೇ ಬಾಗಿಲಿನಲ್ಲಿ ಉತ್ಖನನ ಮಾಡಿದಾಗ, ಕ್ರಿಪೂ 2ನೇ ಶತಮಾನದಲ್ಲಿ ಮಾನವನಿದ್ದ ಎಂಬುದು, ಆ ಕಾಲದಲ್ಲೇ ಭತ್ತ ಬೆಳೆದ ಬಗ್ಗೆ ತಿಳಿದು ಬಂದಿದೆ. ಹಂಪೆ ಹುಟ್ಟಿಗೆ ಆನೆಗೊಂದಿಯಲ್ಲೇ ಅಡಿಪಾಯ ಹಾಕಿದ್ದು ಎಂದರು.

    ನಂತರ ಗಂಡುಗಲಿ ಕುಮಾರ ರಾಮನ ಬಗ್ಗೆ ವಿಚಾರ ಮಂಡಿಸಿದ ಡಾ.ಅರುಣ ಜೋಳದ ಕೂಡ್ಲಿಗಿ, ಕುಮಾರ ರಾಮನ ನಂತರ ಬಂದ ಹಕ್ಕ ಬುಕ್ಕರು ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಬಗ್ಗೆ ವಿವರಿಸಿದರು. ಕೊಪ್ಪಳ ಜಿಲ್ಲೆಯ ರಂಗಭೂಮಿ ಬಗ್ಗೆ ಎಸ್.ವಿ.ಪಾಟೀಲ್ ಗುಂಡೂರು ವಿಚಾರ ಮಂಡಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಅಶೋಕ್ ರಾಯ್ಕರ್ ಉದ್ಘಾಟಿಸಿದರು. ಸಾಹಿತಿ ಎಚ್.ಎಸ್.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

    16ನೇ ಶತಮಾನದವರೆಗೂ ಭಾರತ ಶ್ರೀಮಂತ ರಾಷ್ಟ್ರ. ಇದಕ್ಕೆ ವಿಜಯ ನಗರ ಸಾಮ್ರಾಜ್ಯದ ಕೊಡುಗೆ ಅನನ್ಯ. ರಾಮಾಯಣದ ಅನೇಕ ಐತಿಹ್ಯಗಳು ಇಲ್ಲಿದ್ದು, ಐತಿಹಾಸಿಕವಾಗಿಯೂ ಸಿರಿವಂತಿಕೆ ಹೊಂದಿದೆ. ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಹುಟ್ಟಿ, ಹಂಪಿಯಲ್ಲಿ ಬೆಳೆಯಿತು.
    | ಅಶೋಕ್ ರಾಯ್ಕರ್ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts