More

    ಏ.23ರಂದು ಆನೆಗೊಂದಿಯಿಂದ ಅಂಜನಾದ್ರಿವರೆಗೆ ಪಾದಯಾತ್ರೆ

    ಕೊಪ್ಪಳ: ಹನುಮ ಜಯಂತಿ ಅಂಗವಾಗಿ ಏ.23ರಂದು ಗಂಗಾವತಿ ತಾಲೂಕಿನ ಆನೆಗೊಂದಿಯಿಂದ ಅಂಜನಾದ್ರಿವರೆಗೆ ವೀಣಾ ಕಾಶಪ್ಪನವರ್ ಅಭಿಮಾನಿ ಬಳಗದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ವಿನಯ ಪಟ್ಟಣಶೆಟ್ಟಿ ತಿಳಿಸಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಏ.16ರ ಹನುಮ ಜಯಂತಿಯಂದು ಕಾರ್ಯಕ್ರಮ ಆಯೋಜಿಸಬೇಕಿತ್ತು. ಕಾರಣಾಂತರಗಳಿಂದ ಆಗಿರಲಿಲ್ಲ. ಪಕ್ಷಾತೀತವಾದ ಪಾದಯಾತ್ರೆ. ಶನಿವಾರ ಬೆಳಗ್ಗೆ 8ಗಂಟೆಗೆ ಆರಂಭವಾಗಲಿದ್ದು, ಸಾವಿರಾರು ಜನರು ಭಾಗವಹಿಸಲಿದ್ದಾರೆ. ದೇವರ ದರ್ಶನ ಬಳಿಕ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ್ ಮಾತನಾಡಿ, ನಮ್ಮ ಧರ್ಮ, ಸಂಸ್ಕೃತಿ ಜಾಗೃತಿಗಾಗಿ ಅಭಿಮಾನಿಗಳು ಯಾತ್ರೆ ಆಯೋಜಿಸಿದ್ದಾರೆ. ಹನುಮ ಜನಿಸಿದ್ದು ಅಂಜನಾದ್ರಿಯಲ್ಲಿಯೇ ಎಂಬುದಕ್ಕೆ ಅನೇಕ ಕುರುಹುಗಳಿವೆ. ಆದರೆ, ತಿರುಪತಿ ತಿರುಮಲದ ಟ್ರಸ್ಟ್‌ನವರು ತಿರುಮಲದಲ್ಲಿ ಆಂಜನೇಯ ಜನಿಸಿದ್ದಾನೆಂದು ವಾದಿಸುತ್ತಿದ್ದಾರೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ನಾಡಿನಲ್ಲಿ ಜನಾಂಗೀಯ ಗಲಭೆಗಳು ನಿಲ್ಲಬೇಕು. ಸರ್ವರು ಸಹಬಾಳ್ವೆಯಿಂದ ಬಾಳಬೇಕು. ರಾಜಕೀಯ ಕಾರಣಕ್ಕಾಗಿ ಯಾತ್ರೆ ಹಮ್ಮಿಕೊಂಡಿಲ್ಲ. ನಾಡಿನಲ್ಲಿ ಶಾಂತಿ ನೆಲೆಸಲಿ ಎಂಬ ಆಶಯದೊಂದಿಗೆ ಪಕ್ಷಾತೀತವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲರೂ ಭಾಗಿಯಾಗಲಿದ್ದಾರೆಂದು ತಿಳಿಸಿದರು. ಅಭಿಮಾನಿ ಬಳಗದ ಯೂನಸ್ ಅಲಿ ನಮಾಜಿ, ಗೀತಾ ಪಾಟೀಲ್, ಹನುಮೇಶ ಬಂಡೆ ಇತರರಿದ್ದರು.

    ಸರ್ಕಾರ ನಡೆ ಸ್ಪಷ್ಟಪಡಿಸಲಿ
    ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು. ಅದು ಬಿಟ್ಟು ಕಾಲಹರಣ ಮಾಡುವುದು ಸರಿಯಲ್ಲ. ಕೊಡುತ್ತಾರೋ, ಇಲ್ಲವೆಂಬುದನ್ನು ಸ್ಪಷ್ಟವಾಗಿ ಹೇಳಬೇಕೆಂದು ವೀಣಾ ಕಾಶಪ್ಪನವರ್ ಆಗ್ರಹಿಸಿದರು. ಸಮುದಾಯದ ಬಡವರಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಬೇಕಿದೆ. ಹೀಗಾಗಿ ಕಳೆದೊಂದು ವರ್ಷದಿಂದ ಹೋರಾಟ ನಡೆಸಲಾಗುತ್ತಿದೆ. ಆದರೆ, ಸರ್ಕಾರ ಸಮಯ ಪಡೆಯುತ್ತಿದ್ದು, ನೀಡುವ ಮನಸ್ಸು ಮಾಡುತ್ತಿಲ್ಲ. ಸಮುದಾಯ ಸಚಿವರು, ಮೂರು ಪೀಠದ ಸ್ವಾಮೀಜಿಗಳು ಬೆಂಬಲ ನೀಡಿದ್ದಾರೆ. ಯಾರ ಪರ-ವಿರೋಧ ಎಂದಲ್ಲ. ಎಲ್ಲರಿಗೂ ಮೀಸಲಾತಿ ಬೇಕಿದೆ. ಸರ್ಕಾರ ತನ್ನ ನಿಲುವು ತಿಳಿಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts