More

    ತಿರುಪತಿಯಲ್ಲಿ ನಡೆಯಿತಾ ದೇವರ ಪವಾಡ?: ಯೆಸ್​​​ ಬ್ಯಾಂಕ್​ನಲ್ಲಿದ್ದ 1300 ಕೋಟಿ ರೂ. ವಿತ್​ಡ್ರಾ ಆಗಿದ್ದು ಹೇಗೆ?

    ತಿರುಮಲ: ಸುಸ್ಥಿ ಸಾಲದ ಸುಳಿಗೆ ಸಿಲುಕಿ ಸದ್ಯ ಯೆಸ್​ ಬ್ಯಾಂಕ್ ದಿವಾಳಿಯಾಗಿದೆ. ಗ್ರಾಹಕರು ತಮ್ಮ ಹಣ ಹಿಂಪಡೆಯಲು ಹೋರಾಟ ಮಾಡುತ್ತಿರುವ ಸಮಯದಲ್ಲಿ ದೇಶ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ಆಂಧ್ರ ಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಪವಾಡವೇ ನಡೆದಿದೆ. ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಮಂಡಳಿಯ ದೂರದೃಷ್ಟಿ ನಿರ್ಧಾರ ಇಂದು ಎದುರಿಸಬೇಕಿದ್ದ ಸಂಕಷ್ಟದಿಂದ ಪಾರು ಮಾಡಿದೆ.

    ಟಿಟಿಡಿ ಅಧಿಕಾರಿಗಳ ಪ್ರಕಾರ ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಬಂದಿದ್ದ ಹಣದಲ್ಲಿ 1,300 ಕೋಟಿ ರೂ. ಅನ್ನು ಯೆಸ್ ಬ್ಯಾಂಕ್​ನಲ್ಲಿ ಠೇವಣಿ ಇಡಲಾಗಿತ್ತು. ಆದರೆ, ಕೆಲ ತಿಂಗಳ ಹಿಂದೆಯೇ ಮಂಡಳಿಯ ನಿರ್ಧಾರದಿಂದ ಹಿಂತೆಗೆದುಕೊಳ್ಳಲಾಯಿತು ಎಂದು ತಿಳಿಸಿದ್ದಾರೆ.​

    ಎಂದಿನಂತೆ ದೇವಸ್ಥಾನದ ಕಾಣಿಕೆಯ ಹಣವನ್ನು ನಿರ್ವಹಿಸಲು ಯೆಸ್​ ಬ್ಯಾಂಕ್​ ಸೇರಿದಂತೆ ವಿವಿಧ ಬ್ಯಾಂಕ್​ಗಳಲ್ಲಿ ಠೇವಣಿ ಇಡಲಾಗಿತ್ತು. ಕಳೆದ ಅಕ್ಟೋಬರ್​ನಲ್ಲಿ ಟಿಟಿಡಿ ಮಂಡಳಿ ಸಭೆಯನ್ನು ನಡೆಸಿ, ಬೇರೆ ಕಡೆ ಬಂಡವಾಳ ಹೂಡಲು ಹಣವನ್ನು ವಿತ್​ಡ್ರಾ ಮಾಡಿಕೊಳ್ಳೋಣ ಎಂದು ಚರ್ಚಿಸಲಾಯಿತು. ಅದರಂತೆ ಹಣ ವಾಪಸ್​ ಪಡೆದೆವು ಎಂದು ಟಿಟಿಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದೀಗ ನೋಡಿದರೆ, ಯೆಸ್​ ಬ್ಯಾಂಕ್​ ಆರ್ಥಿಕವಾಗಿ ದಿವಾಳಿ ಆಗಿದೆ. ಬ್ಯಾಂಕ್​ ಅನ್ನು ಭಾರತೀಯ ರಿಸರ್ವ್​ ಬ್ಯಾಂಕ್​(ಆರ್​ಬಿಐ) ತನ್ನ ಸುಪರ್ದಿಗೆ ತೆಗೆದುಕೊಂಡು, ಬ್ಯಾಂಕ್​ ಆಡಳಿತ ಮಂಡಳಿಯನ್ನು ಸೂಪರ್​ ಸೀಡ್​ ಆಗಿ ಮಾಡಿದೆ. ನಗದು ವಿತ್​ಡ್ರಾ ಮಿತಿಯನ್ನು 50 ಸಾವಿರಕ್ಕೆ ನಿಗದಿಗೊಳಿಸಲಾಗಿದ್ದು, ಸಾವಿರಾರು ಗ್ರಾಹಕರು ಹಣ ತೆಗದುಕೊಳ್ಳಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

    ಆದರೆ, ಟಿಟಿಡಿ ಮಂಡಳಿಯ ನಿರ್ಧಾರ ಮುಂದೆ ಎದುರಿಸಬೇಕಾಗಿದ್ದ ಸಂಕಷ್ಟದಿಂದ ಪಾರು ಮಾಡಿದ್ದು, ಟಿಟಿಡಿ ಹಾಗೂ ಅದರ ಮುಖ್ಯಸ್ಥ ವೈ.ವಿ. ಸುಬ್ಬ ರೆಡ್ಡಿಯವರ ದೂರದೃಷ್ಟಿ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿವೆ. ಅಲ್ಲದೆ, ಇದು ದೇವರ ಪವಾಡವೂ ಇರಬಹುದೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ಟ್ವೀಟ್​ ಮಾಡಿರುವ ಆಂಧ್ರಪ್ರದೇಶ ಸರ್ಕಾರದ ಆಡಳಿತ ಸಲಹೆಗಾರ ಎಸ್​. ರಾಜೀವ್​ ಕೃಷ್ಣ , ಯೆಸ್​ ಬ್ಯಾಂಕ್​ ದಿವಾಳಿಯಾಗಿರುವುದು ದುಃಖಕರವಾಗಿದ್ದು, ಬೆವರು ಸುರಿಸಿ ಸಂಪಾದಿಸಿದ ಲಕ್ಷಾಂತರ ಮಂದಿಯ ಹಣವನ್ನು ಸವೆಸಿದೆ. ಆದರೆ, ಟಿಟಿಡಿ ಮುಖ್ಯಸ್ಥ ವೈ.ವಿ. ಸುಬ್ಬರಾವ್​ ದೂರದೃಷ್ಟಿಯಿಂದಾಗಿ ಟಿಟಿಡಿ ತನ್ನ ಠೇವಣಿ ಹಣವನ್ನು ವಿತ್​ಡ್ರಾ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts